Kargil ವಿಕ್ರಮಕ್ಕೆ 25 ವರ್ಷ; 2 ತಿಂಗಳು 3 ವಾರ 2 ದಿನಗಳ ಕಾಲದ ಹೋರಾಟದ ರೋಚಕ ಕ್ಷಣಗಳು…
25 ಅಂಶಗಳಲ್ಲಿ ಅಂದಿನ ಹೋರಾಟದ ರೋಚಕ ಕ್ಷಣಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದೇವೆ.
Team Udayavani, Jul 26, 2024, 12:19 PM IST
ಶಾಂತಿ ಸಂದೇಶದೊಂದಿಗೆ ಲಾಹೋರ್ ಬಸ್ ಯಾತ್ರೆ ಕೈಗೊಂಡಿದ್ದ ಅಂದಿನ ಪ್ರಧಾನಿ ವಾಜಪೇಯಿಗೆ ಪಾಕಿಸ್ಥಾನವು “ಕಾರ್ಗಿಲ್ ಯುದ್ಧ’ದ ಮೂಲಕ ಬೆನ್ನಿಗೆ ಚೂರಿ ಹಾಕಿತು. ಆದರೆ ದೃಢ ನಾಯಕತ್ವ ಹಾಗೂ ಸೇನೆಯ ಅಸಾಧಾರಣ ಸಾಹಸದಿಂದಾಗಿ ಕಾರ್ಗಿಲ್ ಯುದ್ಧ ಗೆದ್ದ ಭಾರತ, ಪ್ರಪಂಚದ ಎದುರು ತನ್ನ ಸಾಮರ್ಥ್ಯ ಮತ್ತೆ ಸಾಬೀತುಪಡಿಸಿತು. ಕಾರ್ಗಿಲ್ ಗೆಲುವಿಗೀಗ 25
ವರ್ಷ. 25 ಅಂಶಗಳಲ್ಲಿ ಅಂದಿನ ಹೋರಾಟದ ರೋಚಕ ಕ್ಷಣಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದೇವೆ.
1)ಕುರಿಗಾಹಿ ನೀಡಿದ ಮಾಹಿತಿ
1999ರ ಮೇ 3ರಂದು ಕುರಿಗಾಹಿ ತಾಶಿ ನಾಂಜಿಯಾಲ್ ತನ್ನ ಯಾಕ್ ಹುಡುಕಿಕೊಂಡು ಜುಬ್ಟಾರ್ ಕಾರ್ಗಿಲ್‌ನ ಲಾಂಗ್ಪಾ ತೊರೆಗುಂಟ ಹೋಗಿದ್ದರು. ಆಗ ಪಾಕ್ ಸೈನಿಕರು ಕಂಡಿದ್ದಾರೆ. ಅಲ್ಲಿಂದ ಹಿಂದಿರುಗಿದ ತಾಶಿ, ಸೇನೆಗೆ ಮಾಹಿತಿ ನೀಡಿದ. ಇದು ಕಾರ್ಗಿಲ್ ಯುದ್ಧಕ್ಕೆ ಮುನ್ನುಡಿಯಾಯ್ತು.
2)ಆರಂಭದಲ್ಲಿ 5 ಯೋಧ ಹುತಾತ್ಮ
ಸ್ಥಳೀಯ ಸೇನಾ ತಂಡವೊಂದನ್ನು ಮೇ 5ರಂದು ಪಾಕ್ ಸೈನಿಕರು ಅಡಗಿದ್ದ ಸ್ಥಳಕ್ಕೆ ಕಳುಹಿಸಲಾಯಿತು. ಆದರೆ ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧರಾಗಿದ್ದ ಪಾಕ್ ಯೋಧರು ನಮ್ಮ ಸೈನಿಕರ ಮೇಲೆ ಗುಂಡಿನ ಮಳೆಗೈದರು ಮತ್ತು ಈ ಕಾದಾಟದಲ್ಲಿ ಐವರು ಯೋಧರು ಹುತಾತ್ಮರಾದರು.
3)ಯುದ್ಧ ಆರಂಭಿಸಿದ ಪಾಕ್
ಪಕ್ಕಾ ಯೋಜನೆಯೊಂದಿಗೆ ಬಂದಿದ್ದ ಪಾಕ್ ಯೋಧರು ಮೇ 9ರಂದು ಭಾರತದ ನೆಲದಲ್ಲಿ ಅಧಿಕೃತ ಯುದ್ಧ ಆರಂಭಿಸಿದರು ಎನ್ನಬಹುದು. ಕಾರ್ಗಿಲ್‌ನಲ್ಲಿದ್ದ ಸೇನೆಯ ಮದ್ದುಗುಂಡುಗಳ ಸಂಗ್ರಹ ಸ್ಥಳದ ಮೇಲೆ ಶೆಲ್ ದಾಳಿ ನಡೆಸಿ, ಎಲ್ಲವನ್ನೂ ನಾಶ ಮಾಡಿದರು.
4)ಒಳನುಸುಳಿದ ಪಾಕಿಗಳು
ಮೇ 10ರ ಹೊತ್ತಿಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯ ವಿವಿಧೆಡೆಯಿಂದ ಪಾಕ್ ಯೋಧರು ಭಾರತದೊಳಕ್ಕೆ ನುಸುಳಿರುವುದು ನಮ್ಮ ಸೇನೆಗೆ ಪಕ್ಕಾ ಆಯಿತು. ದ್ರಾಸ್, ಕಕ್ಸರಿ ಮತ್ತು ಮುಶು ಕೋಹ್ ವಲಯದಲ್ಲಿ 1,500ರಷ್ಟು ಪಾಕಿಗಳು ಒಳ ಬಂದಿದ್ದರು!
5)ಕಾಶೀರದಿಂದ ಕಾರ್ಗಿಲ್‌ಗೆ ಸೇನೆ
ಇಷ್ಟೊತ್ತಿಗಾಗಲೇ ಪಾಕ್ ಉದ್ದೇಶ ಸ್ಪಷ್ಟವಾಗಿತ್ತು. ಇದನ್ನರಿತ ಭಾರತೀಯ ಸೇನೆ ಕಾಶ್ಮೀರ ಕಣಿವೆಯಲ್ಲಿದ್ದ ಸೇನೆಯನ್ನು ಪಾಕ್ ಯೋಧರು ಒಳನುಗ್ಗಿದ್ದ ಕಾರ್ಗಿಲ್‌ನತ್ತ ಕಳುಹಿಸಿತು. ಭಾರತ ಕೂಡ ಯುದ್ಧಕೆ ಸನ್ನದ್ಧವಾಗಿ, ಆಪರೇಷನ್ ವಿಜಯ ಕಾರ್ಯಾಚರಣೆಯನ್ನು ಶುರು ಮಾಡಿತು.
6)ನಮ್ಮ ವಾಯುಪಡೆ ಪ್ರವೇಶ
ಕಾರ್ಗಿಲ್ ಜಿಲ್ಲೆಯ ಗಡಿ ರೇಖೆ ನಿಯಂತ್ರಣ (ಎಲ್‌ಒಸಿ) ವಿವಿಧ ಪ್ರಮುಖ ಸ್ಥಳಗಳಲ್ಲಿ ನುಸುಳಿದ ಪಾಕ್ ಸೈನಿಕರು ನಿಯಂತ್ರಣ ಸಾಧಿಸಿದ್ದರು. ಅವರನ್ನು ಮಟ್ಟ ಹಾಕಲು ಮೇ 26ರಿಂದ ಭಾರತೀಯ ವಾಯು ಪಡೆ ಕಾರ್ಯಾಚರಣೆಗಿಳಿಯಿತು.
7)ಪಾಕ್ ಸೇನೆಯಿಂದ ದಾಳಿ ಶುರು
ಪಾಕ್ ಸೇನೆ ವಾಯು ಪಡೆ ಘಟಕದಿಂದ ಪ್ರತಿ ದಾಳಿ. ಮೇ 27ರಂದು ನಮ್ಮ ಮಿಗ್-21 ಮತ್ತು ಮಿಗ್-27 ವಿಮಾನ ವನ್ನು ಪಾಕ್ ಹೊಡೆದುರುಳಿಸಿತು. ಈ ವೇಳೆ ಫ್ಲೈಟ್ ಲೆಫ್ಟಿನೆಂಟ್ ಕೆ.ನಚಿಕೇತ್ ರಾವ್‌ರನ್ನು ಪಾಕ್ ಸೇನೆ ಸೆರೆ ಹಿಡಿಯಿತು. ಆ ಮೇಲೆ ಬಿಡುಗಡೆ ಮಾಡಿತು.
8)ಐಎಎಫ್ ನ 4 ಸಿಬಂದಿ ಹುತಾತ್ಮ
ಮೇ 27ರಂದು ಭಾರತದ ವಾಯುಪಡೆಯ ಮತ್ತೊಂದು ಯುದ್ಧವಿಮಾನ ಎಂಐ-17 ಅನ್ನು ಪಾಕಿಸ್ಥಾನ ಸೇನೆಯು ಹೊಡೆದಿರುಳಿಸಿತು. ಈ ದಾಳಿಯ ವೇಳೆ, ಭಾರತೀಯ ವಾಯುಪಡೆಯ ನಾಲ್ವರು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು.
9)ಕಾಶ್ಮೀರ ಹೆದ್ದಾರಿ ಮೇಲೆ ದಾಳಿ
ಐಎಎಫ್ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ಥಾನ ಜೂನ್ 1ರಂದು ಕಾಶ್ಮೀರ, ಲಡಾಖ್ ಪ್ರದೇಶದಲ್ಲಿರುವ ಎನ್‌ಎಚ್ 1ರ ಮೇಲೆ ಶೆಲ್ ದಾಳಿ ಶುರು ಮಾಡಿತು. ಪ್ರತಿಯಾಗಿ ನಮ್ಮ ಸೇನೆಯೂ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು.
10)ಪಾಕ್ ವಿರುದ್ಧ ದಾಖಲೆ ಬಿಡುಗಡೆ
ಕಾರ್ಗಿಲ್ ದಾಳಿಯನ್ನು ಪಾಕ್ ಸರಕಾರ ನಿರಾಕರಿಸುತ್ತಲೇ ಇತ್ತು. ಹಾಗಾಗಿ ಭಾರತದೊಳಕ್ಕೆ ನುಸುಳಿದ್ದ ಪಾಕ್ ಯೋಧರಿಂದ ವಶಪಡಿಸಿಕೊಂಡ ದಾಖಲೆಗಳನ್ನು ಭಾರತವು ಜೂನ್ 5ರಂದು ಬಿಡುಗಡೆ ಮಾಡಿ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿತು.
11)ಕಾರ್ಗಿಲ್ ಮರುವಶಕ್ಕೆ ಯತ್ನ
ಕಾರ್ಗಿಲ್ ಎಲ್‌ಒಸಿಗುಂಟ ಇದ್ದ ಪಾಕಿಸ್ಥಾನ ಯೋಧರನ್ನು ಹೊಡೆದುರುಳಿಸಿ, ಕಾರ್ಗಿಲ್‌ನ ಪ್ರಮುಖ ಪಾಯಿಂಟ್ ಗಳನ್ನು ವಶಪಡಿಸಿಕೊಳ್ಳುವ ಬೃಹತ್ ಕಾರ್ಯಾಚರ
ಣೆಯನ್ನು ಭಾರತೀಯ ಸೇನೆ ಜೂ.6ರಿಂದ ಆರಂಭಿಸಿತು. ಇಲ್ಲಿಂದ ಭಾರತಕ್ಕೆ ಯಶಸ್ಸು ದೊರೆಯಲಾರಂಭಿಸಿತು.
12)ಬಟಾಲಿಕ್ ಹೀರೋ ಕ್ಯಾ|ಪಾಂಡೆ
ಕ್ಯಾ| ಮನೋಜ್ ಕುಮಾರ್ ಪಾಂಡೆ ಸಾಹಸದಿಂದಾಗಿ ಸೇನೆ ಜೂ.9 ಬಟಾಲಿಕ್ ಸೇನಾ ವಲಯವನ್ನು ಮರು ವಶ ಪಡಿಸಿಕೊಂಡಿತು. ಜುಬರ್ ಟಾಪ್ ಮತ್ತು ಕುಕರ್ ತಾಂಗ್ ಗಳನ್ನು ವಶಪಡಿಸಿಕೊಂಡು, ಪಾಂಡೆ ಹುತಾತ್ಮರಾದರು. ಅವರಿಗೆ ಬಳಿಕ ಪರಮವೀರ ಚಕ್ರ ನೀಡಲಾಯಿತು.
13)ಮತ್ತಷ್ಟು ದಾಖಲೆ ಬಿಡುಗಡೆ
ಪಾಕ್‌ನಿಂದ ಕಾರ್ಗಿಲ್ ಯುದ್ಧ ಎಂಬುದನ್ನು ಸಾಬೀತು ಪಡಿಸಲು ಭಾರತವು ಪಾಕ್ ಸೇನಾ ಮುಖ್ಯಸ್ಥರಾಗಿದ್ದ ಜ| ಪರ್ವೇಜ್ ಮುಷರಫ್ ಮತ್ತು ಲೆ| ಜ| ಆಜಿಜ್ ಖಾನ್ ನಡುವಿನ ಸಂಭಾಷಣೆಯನ್ನು ಜೂ.9ರಂದು ಬಹಿರಂಗ ಮಾಡಿತು. ಮತ್ತೆ ಪಾಕ್ ಕುತಂತ್ರ ಬಯಲಾಯಿತು.
14)ಟೋಲೋಲಿಂಗ್ ಕದನ
ಪಾಕ್ ನುಸುಳುಕೋರರ ವಶದಲ್ಲಿದ್ದ ದ್ರಾಸ್‌ನ ಟೋಲೋಲಿಂಗ್ ಪೀಕ್ ವಶಪಡಿಸಿಕೊಳ್ಳಲು ಸೇನೆ ಮುಂದಾಯಿತು. ಮೇಜರ್ ರಾಜೇಶ್ ಅಧಿಕಾರಿ, ಮೇಜರ್ ವಿವೇಕ ಗುಪ್ತಾ, ಮೇಜರ್ ಪದ್ಮಪಾಣಿ ಆಚಾರ್ಯ ಸಾಹಸದಿಂದ ಟೋಲೋಲಿಂಗ್ ವಾಪಸ್ ಪಡೆಯಲಾಯಿತು.
15)ಪಾಕ್‌ಗೆ ಅಮೆರಿಕ ಎಚ್ಚರಿಕ
ಜೂ.15ರಂದು ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡಲೇ ಕಾರ್ಗಿಲ್‌ನಿಂದ ಪಾಕ್ ಸೇನೆ ಮತ್ತು ನುಸುಳುಕೋರರನ್ನು ವಾಪಸ್ ಕರೆಯಿಸುವಂತೆ ಪಾಕ್ ಪ್ರಧಾನಿಗೆ ತಾಕೀತು ಮಾಡಿದರು. ಅಂತಾರಾಷ್ಟ್ರೀಯ ಬೆಂಬಲ ಭಾರತಕ್ಕೆ ಭರಪೂರವಾಗಿ ದೊರೆಯಿತು.
16)ಯೇ ದಿಲ್ ಮಾಂಗೇ ಮೋರ್
ದ್ರಾಸ್‌ನಲ್ಲಿರುವ 2 ಪ್ರಮುಖ ಪೀಕ್‌ಗಳಾದ ಪಾಯಿಂಟ್ 5140 ವಶಪಡಿಸಿಕೊಳ್ಳುವಲ್ಲಿ ಕ್ಯಾ| ವಿಕ್ರಮ್ ಬಾತ್ರಾ ತಂಡ ಯಶಸ್ವಿಯಾಯಿತು. ಈ ಹೋರಾಟದಲ್ಲಿ ಬಾತ್ರಾ ಹುತಾತ್ಮರಾದರು. ಬಳಿಕ ಪರಮವೀರ ಚಕ್ರ ನೀಡಲಾಯಿತು.
17)ಕಾಲ್ಕಿತ್ತ ಪಾಕ್ ಸೇನೆ, ಸಂಗಡಿಗರು
ಟೈಗರ್ ಹಿಲ್ ಮರುವಶಕ್ಕೆ ಭಾರತೀಯ ಸೇನೆ ಕಾರ್ಯಾಚರಣೆ ಜೂ.29ರಂದು ಆರಂಭಿಸಿತು. ಅಮೆರಿಕ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪಾಕ್ ಸರಕಾರ ತನ್ನ ಸೇನೆಗೆ ಒತ್ತಡ ಹೇರಿತು. ಪರಿಣಾಮ ಪಾಕ್ ಸೇನೆ ಮತ್ತು ಬೆಂಬಲಿತ ಉಗ್ರರು ಕಾಶ್ಮೀರದಿಂದ ಹಿಂದೆಗೆಯಲಾರಂಭಿಸಿದರು.
18)ಟೈಗರ್ ಹಿಲ್‌ಗಾಗಿ ಯುತ್ನ
ಟೈಗರ್ ಹಿಲ್ ವಾಪಸ್ ಪಡೆಯಲು ಕಾರ್ಯಾ ಚರಣೆ. 12ಗಂಟೆಗಳ ಹೋರಾಟದ ಬಳಿಕ ಜು.4ರಂದು ಟೈಗರ್ ಹಿಲ್ ಭಾರತದ ಮರುವಶ. ಗ್ರೆನೇಡಿಯರ್ಸ್‌ನ ಬಲ್ವಾನ್ ಸಿಂಗ್, ಯೋಗೇಂದ್ರ ಸಿಂಗ್ ಯಾದವ್ ಸಾಹಸ ಮೆರೆದರು. ಯೋಗೇಂದ್ರಗೆ 17 ಗುಂಡಿನ ಗಾಯಗಳಾಗಿದ್ದವು!
19)ದ್ರಾಸ್ ಮೇಲೆ ನಿಯಂತ್ರಣ
ನಮ್ಮ ಸೇನೆ ದ್ರಾಸ್ ಮೇಲೆ ಮತ್ತೆ ಸಂಪೂರ್ಣ ನಿಯಂತ್ರಣ ಸಾಧಿಸಿತು. ಅಂತಾರಾಷ್ಟ್ರೀಯವಾಗಿ ಹಿನ್ನಡೆ ಎದುರಿಸಿದ ಪಾಕ್ ರಣರಂಗದಿಂದ ವಾಪಸ್ ಆಗಬೇಕಾಯಿತು. ಈ ಬಗ್ಗೆ ಪಾಕ್ ಪ್ರಧಾನಿ ನವಾಜ್ ಶರೀಫ್ ಜು.5ರಂದು ಅಧಿಕೃತ ಘೋಷಣೆ ಮಾಡಿದರು.
20)ಜುಬಾರ್ ಹೈಟ್ಸ್‌ಗೆ ಹೋರಾಟ
ಬಟಾಲಿಕ್‌ನಲ್ಲಿರುವ ಜುಬಾರ್ ಹೈಟ್ಸ್ ವಾಪಸ್‌ಗೆ ಜು.7 ರಂದು ತನ್ನ ಕಾರ್ಯಾಚರಣೆ ನಡೆಸಿತು. ಟೈಗರ್ ಹಿಲ್ಸ್ ರೀತಿ ಜುಬಾರ್ ಹೈಟ್ಸ್ ಕೂಡ ಭಾರೀ ಮಹತ್ವದ ಪಾಯಿಂಟ್ ಆಗಿತ್ತು. ಅಲ್ಲಿದ್ದ ನುಸುಳುಕೋರನ್ನು ಹೊಡೆದೋಡಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು.
21)ಪಾಕ್‌ಗೆ ಸೋಲಿನ ರುಚಿ
ಬಟಾಲಿಕ್ ಸೇನಾ ವಲಯದಲ್ಲಿನ ಎಲ್ಲ ಮಹತ್ವದ ಪಾಯಿಂಟ್‌ಗಳನ್ನು ಭಾರತೀಯ ಸೇನೆ ತನ್ನ ವಶಕ್ಕೆ ಪಡಿಸಿಕೊಳ್ಳಲು ಯಶಸ್ವಿಯಾಯಿತು. ಇದೇ ವೇಳೆ ಸಾಕಷ್ಟು ಸೋಲಿನ ರುಚಿ ಕಂಡಿದ್ದ ಪಾಕ್ ಸೇನೆ ಮತ್ತು ನುಸುಳುಕೋರರು ವಾಪಸ್ ಹೊರಟು ನಿಂತರು.
22)ಆಪರೇಷನ್ ವಿಜಯ ಯಶಸ್ವಿ
ಸೇನೆಯ ಭಾರೀ ಸಾಹಸ ಮತ್ತು ರಾಜಕೀಯ ನಾಯಕತ್ವದ ದೃಢ ನಿರ್ಧಾರದಿಂದಾಗಿ ಕಾರ್ಗಿಲ್ ಯುದ್ಧವನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾಯಿತು. ಜುಲೈ 11ರಂದು ಅಂದಿನ ಪ್ರಧಾನಿ ವಾಜಪೇಯಿ ಆಪರೇಷನ್ ವಿಜಯ ಯಶಸ್ವಿಯಾಗಿದೆ ಎಂದು ಘೋಷಿಸಿದರು.
23) 3 ವಾಯುಪಡೆ ಮಹತ್ವದ ಪಾತ್ರ
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಭೂ ಸೇನೆಯ ಕೊಡುಗೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಆದರೆ
ಕಾರ್ಗಿಲ್ ಹೋರಾಟದಲ್ಲಿ ಭಾರತೀಯ ವಾಯುಪಡೆ ಮಹತ್ವದ ಪಾತ್ರ ನಿರ್ವಹಿಸಿತು. ಯುದ್ಧವು ಭಾರತೀಯ ಸೇನೆಯ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿತು
24)ಯುದ್ಧ ಅಧಿಕೃತವಾಗಿ ಮುಕ್ತಾಯ
ಪಾಕ್ ಆರಂಭಿಸಿದ್ದ ಕಾರ್ಗಿಲ್ ಯುದ್ಧವನ್ನು ಭಾರತವು ಜು. 26ರಂದು ಅಧಿಕೃತವಾಗಿ ಮುಕ್ತಾಯಗೊಳಿಸಿತು. ಪಾಕ್‌ನ ಸೇನೆ ಹಾಗೂ ನುಸುಳುಕೋರರು ಸಂಪೂರ್ಣವಾಗಿ ಭಾರತದ ನೆಲದಿಂದ ಕಾಲ್ಕಿತ್ತಿದ್ದಾರೆಂದು ಭಾರತೀಯ ಸೇನೆ ಅಧಿಕೃತವಾಗಿ ಘೋಷಣೆ ಮಾಡಿತು.
25)ಕಾರ್ಗಿಲ್ ವಿಜಯ ದಿವಸ್
ಕಾರ್ಗಿಲ್ ಯುದ್ಧ ಮೂಲಕ ಪಾಕಿಸ್ಥಾನಕ್ಕೆ ಭಾರತವು ಮರೆಯಲಾರದ ಪಾಠ ಕಲಿಸಿತು. ಅದೇ ಕಾರಣಕ್ಕೆ ಕಾರ್ಗಿಲ್ ಗೆದ್ದ ಸ್ಮರಣೆಗಾಗಿ ಜು.26ರಂದು ಪ್ರತೀ ವರ್ಷ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.
ವಾಜಪೇಯಿ ದೃಢ ನಾಯಕತ್ವಕ್ಕೆ ಮನ್ನಣೆ
ಕಾರ್ಗಿಲ್ ಯುದ್ದದ ವೇಳೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಾಜತಾಂತ್ರಿಕ ನಡೆ ಬಹಳ ಮುಖ್ಯ ಪಾತ್ರ ವಹಿಸಿತ್ತು. ಯುದ್ಧ ಆರಂಭ ಮುಂಚೆ 1999ರ ಫೆಬ್ರವರಿಯಲ್ಲಿ ಲಾಹೋರ್‌ಗೆ ಬಸ್ ಯಾತ್ರೆ ಕೈಗೊಂಡಿದ್ದರು. ವಾಜಪೇಯಿ ಶಾಂತಿ ಸಂದೇಶಕ್ಕೆ ಪ್ರತಿಯಾಗಿ ಪಾಕಿಸ್ಥಾನವು ಯುದ್ಧ ಆರಂಭಿಸಿತ್ತು. ವಾಜಪೇಯಿ ತಮ್ಮ ದೃಢ ನಾಯಕತ್ವದಿಂದಾಗಿ ಕಾರ್ಗಿಲ್ ಯುದ್ಧ ಗೆಲ್ಲುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಪಡೆಯಲು ಯಶಸ್ವಿಯಾದರು. ಸದಾ ಪಾಕ್ ಪರ ಇರುತ್ತಿದ್ದ ಅಮೆರಿಕ ಭಾರತದ ಬೆಂಬಲಕ್ಕೆ ಬಂತು. ಇಸ್ರೇಲ್ ಸೇನಾ ನೆರವು ನೀಡಿತು. ಇದೆಲ್ಲವು ವಾಜಪೇಯಿ ನಾಯಕತ್ವಕ್ಕೆ ದೊರೆತ ಯಶಸ್ಸು.
ಪಾಕ್ ಪ್ರಧಾನಿಗೇ ದಾಳಿ ಬಗ್ಗೆ ಗೊತ್ತಿರಲಿಲ್ಲ!
ಪಾಕಿಸ್ಥಾನ ಎಂಥ ಅರಾಜಕ ರಾಷ್ಟ್ರ ಎಂಬುದು ಕಾರ್ಗಿಲ್ ಯುದ್ಧದ ವೇಳೆ ಜಗಜ್ಜಾಹೀರಾಯಿತು. ಪ್ರಧಾನಿ ಶರೀಫ್ ಭಾರತದ ಜತೆ ಶಾಂತಿ ಮಾತುಕತೆ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರೆ, ಮತ್ತೊಂದೆಡೆ ಪಾಕ್ ಸೇನೆ ಭಾರತದ ಮೇಲೆ ದಾಳಿ ನಡೆಸಲು ತಯಾರಿ ನಡೆಸುತ್ತಿತ್ತು!. ಈ ವಿಷಯ ಸ್ವತಃ ಪ್ರಧಾನಿಗೆ ಗೊತ್ತಿರಲಿಲ್ಲ. ಲಾಹೋರ್ ಒಪ್ಪಂದದ 5 ವಾರಗಳ ಮೊದಲೇ ಕಾರ್ಯಾಚರಣೆ ಯೋಜನೆ ನಡೆದಿತ್ತು. ಕಾರ್ಯಾಚರಣೆ ಕುರಿತು ಆಗಿನ ಪ್ರಮುಖ ಅಧಿಕಾರಿಗಳು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಶರೀಫ್, “ಕಾರ್ಯಾಚರಣೆ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ವಾಜಪೇಯಿ ಅವರಿಂದ ಈ ವಿಷಯ ಗೊತ್ತಾಗಿದೆ’ ಎಂದು ವಾದಿಸಿದ್ದರು. ಆದರೆ ಶರೀಫ್ ವಾದವನ್ನು ಅಲ್ಲಗಳೆದ ಮುಷರಫ್, 1999, ಫೆ.5ರಂದು ಕಾರ್ಗಿಲ್‌ನ ದಕ್ಷಿಣದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದಾಗ, ಶರೀಫ್ ಅವರಿಗೆ ಯೋಜನೆ ಬಗ್ಗೆ ವಿವರಿಸಲಾಗಿತ್ತು ಎಂದು ತಿಳಿಸಿದ್ದರು. ಮಾಜಿ ಐಎಸ್‌ಐ ಮುಖ್ಯಸ್ಥ ಅಸದ್ ದುರ್ರಾನಿ ಪ್ರಕಾರ, ಶರೀಫ್ಗೆ ಕಾರ್ಯಾಚರಣೆಯ ಕೆಲವು ಮಾಹಿತಿ ತಿಳಿದಿತ್ತು. ಆದರೆ ಪೂರ್ತಿ ಗೊತ್ತಿರಲಿಲ್ಲ. ಒಟ್ಟಾರೆಯಾಗಿ ಕಾರ್ಗಿಲ್ ಯುದ್ಧ ಪಾಕಿಸ್ಥಾನದಲ್ಲಿ ಅಸ್ಥಿರತೆಗೆ ನಾಂದಿ ಹಾಡಿತು.
527 ಹುತಾತ್ಮರಾದ ನಮ್ಮ ಯೋಧರು
1363 ಗಾಯಗೊಂಡ ನಮ್ಮ ಯೋಧರು.
1200 ಹತ್ಯೆಗೀಡಾದ ಪಾಕ್ ಯೋಧರು
100ಕ್ಕೂ ಅಧಿಕ ಗಾಯಗೊಂಡ ಪಾಕ್ ಯೋಧರು
13 ಕಾರ್ಗಿಲ್ ಯುದ್ಧದಲ್ಲಿ ಮಡಿದ ಕರ್ನಾಟಕದ ಯೋಧರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.