ಸಮನ್ವಯದ ಪಾಠ : ಬಿಎಸ್‌ವೈ, ನಳಿನ್ ಜತೆ ಅರುಣ್ ಸಿಂಗ್ ಮುಖಾಮುಖೀ
Team Udayavani, Dec 7, 2020, 6:45 AM IST
ಬೆಂಗಳೂರು: ಸರಕಾರ ಮತ್ತು ಪಕ್ಷದ ನಡುವೆ ಯಾವುದೇ ಭಿನ್ನಾಪ್ರಾಯ ಇಲ್ಲದೆ, ಸಮನ್ವಯದಿಂದ ಮುಂದೆ ಸಾಗಬೇಕು. ನಿಗಮ ಮಂಡಳಿಗಳಿಗೆ ನೇಮಕ ಸಹಿತ ಯಾವುದೇ ವಿಚಾರದಲ್ಲೂ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಬಿಜೆಪಿ ವರಿಷ್ಠರು ಸಿಎಂ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರವಿವಾರ ಸಿಎಂ ಯ ಡಿ ಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಜತೆ ಮುಖಾಮುಖೀ ಮಾತುಕತೆ ನಡೆಸಿ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಮುನ್ನ ಅಂದರೆ ರವಿವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಪ್ರಮುಖ ನಾಯಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಪಕ್ಷ ಮತ್ತು ಸರಕಾರದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು.
ಬಿಎಸ್‌ವೈ ಅವರಿಂದಲೇ ಸಂಪುಟ ತೀರ್ಮಾನ
ಅದಕ್ಕೆ ಮುನ್ನ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅರುಣ್ ಸಿಂಗ್, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಯಡಿಯೂರಪ್ಪ ಅವರೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದು ಮುಖ್ಯ ಮಂತ್ರಿಯವರ ಪರಮಾಧಿಕಾರ ಎಂದಿದ್ದಾರೆ. ಜತೆಗೆ ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಣೆ ಮಾಡುತ್ತಿದ್ದಾರೆ ಎಂದು ಶ್ಲಾ ಸುವ ಮೂಲಕ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಪರಾಹ್ನ ಸಿಎಂ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ಅರುಣ್ ಸಿಂಗ್ ಸಿಎಂ ಬಿಎಸ್‌ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಭೋಜನ ಕೂಟದಲ್ಲಿ ಭಾಗವಹಿಸಿದರು. ಈ ವೇಳೆ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರೊಂದಿಗೆ ಸುಮಾರು 15 ನಿಮಿಷಗಳ ಮಾತುಕತೆ ನಡೆಸಿದ್ದಾರೆ. ಯಾವುದೇ ಹುದ್ದೆಗೆ ನೇಮಕ ಸಂದರ್ಭದಲ್ಲಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದವರಿಗೆ, ಸೇವೆ ಸಲ್ಲಿಸುತ್ತಿರುವವರಿಗೆ ಮತ್ತು ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಏಕಪಕ್ಷಿಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಸಮಾಲೋಚನೆ ನಡೆಸಿಯೇ ನಿರ್ಧಾರಗಳನ್ನು ಪ್ರಕಟಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದಿಂದ ಸರಕಾರದ ಕಾರ್ಯಗಳಿಗೆ ಸಕಾರಾತ್ಮಕ ಸ್ಪಂದನೆ ಇರಬೇಕು, ಸರಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯಲ್ಲೂ ಭಿನ್ನಾಭಿಪ್ರಾಯ, ಗೊಂದಲ ಅಥವಾ ಅಸಮಾಧಾನ ಇರಬಾರದು, ಸಮನ್ವಯದಿಂದ ಸಾಗಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸರಕಾರ ಮತ್ತು ಪಕ್ಷದ ನಡುವೆ ನಿರ್ಮಾಣವಾಗಿರುವ ಕಂದಕ ಮುಚ್ಚುವ ಪ್ರಯತ್ನವನ್ನು ಮೊದಲ ಭೇಟಿಯಲ್ಲೇ ಅರುಣ್ ಸಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ದೂರುಗಳ ಸುರಿಮಳೆ
ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಸಹಿತ ವಿವಿಧ ವಿಚಾರಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯದ ಕುರಿತು ವಿವಿಧ ಸಚಿವರು ಮತ್ತು ಶಾಸಕರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ದೂರುಗಳೇನು?
– ಕೆಲವು ಸಚಿವರು, ಮಾಜಿ ಸಚಿವರು, ಶಾಸಕರಿಂದ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ.
– ಪಕ್ಷದ ಸಿದ್ಧಾಂತ, ಶಿಸ್ತು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಅಗತ್ಯ.
– ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಕಡಿವಾಣ ಹಾಕಬೇಕು.
– ಸಂಪುಟ ವಿಸ್ತರಣೆ ಸಂಬಂಧ ಕೆಲವರು ನೀಡಿದ್ದ ಬಹಿರಂಗ ಹೇಳಿಕೆಯಿಂದ ಪಕ್ಷ ಸಂಘಟನೆ ಮೇಲೆ ನೇರ ಪರಿಣಾಮವಾಗಿದೆ.
“ನಿಗಮ’ದ ಬಗ್ಗೆ ಸುನೀಲ್ ಕುಮಾರ್ ಮಾಹಿತಿ
ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕರಾದ ವಿ. ಸುನಿಲ್ ಕುಮಾರ್ ಅವರು ನಿಗಮ ಮಂಡಳಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಆದ ಅನ್ಯಾಯದ ಬಗ್ಗೆ ಅರುಣ್ ಸಿಂಗ್ ಅವ ರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
– ನಿಗಮ ಮಂಡ ಳಿ ನೇಮಕಾತಿಯಲ್ಲಿ ಕಾರ್ಯಕರ್ತರಿಗೆ ಆದ್ಯತೆ ಸಿಗಬೇಕು.
– ಕಾರ್ಯಕರ್ತರ ಭಾವನೆಗೂ ಬೆಲೆ ಸಿಗುವಂತೆ ಮಾಡಬೇಕು. ಅಸಮಾಧಾನ ಸರಿಪಡಿಸಬೇಕು.
– ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಿರಿಯ ಶಾಸಕರಿಗೆ ಆದ್ಯತೆ ನೀಡಬೇಕು.
– ಚುನಾಯಿತ ಶಾಸಕರು ಇರುವಾಗ ವಿಧಾನ ಪರಿಷತ್ ಸದಸ್ಯರಿಗೆ ಹೆಚ್ಚಿನ ಪ್ರಾಮುಖ್ಯ ನೀಡುವುದು ಸರಿಯಲ್ಲ.
– ಸರಕಾರದ ದಿಢೀರ್ ಮತ್ತು ಏಕಾಏಕಿ ನಿರ್ಧಾರಗಳಿಂದ ಅನೇಕ ಶಾಸಕರಿಗೆ ನೋವಾಗಿದೆ.
ಸಮಾನ ನಾಗರಿಕ ಸಂಹಿತೆ ಜಾರಿ
ದೇಶದಲ್ಲಿ ಸಮಾನ ನಾಗರಿಕ ನೀತಿ ಸಂಹಿತೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ದೇಶದ ಸಂವಿಧಾನದ ಆಶಯದಂತೆ ಎಲ್ಲ ವಿಷಯಗಳಲ್ಲೂ ಸಮಾನತೆ ಬರಬೇಕು. ಸಮಾನತೆ ವಿಷಯದಲ್ಲಿ ತಾರತಮ್ಯ ಸರಿಯಲ್ಲ ಎನ್ನುವುದು ಸರಿಯಲ್ಲ ಎಂದು ಅವರು “ಉದಯವಾಣಿ’ಗೆ ತಿಳಿಸಿದರು.
ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ
ಅಧಿವೇಶನಕ್ಕೆ ಮೊದಲೇ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸಂಪುಟ ಸೇರಲು ತುದಿಗಾಲಿನಲ್ಲಿ ನಿಂತವರಿಗೆ ಸದ್ಯ ನಿರಾಸೆಯಾಗಿದೆ. ಇತ್ತೀಚೆಗಷ್ಟೇ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ, ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್. ಶಂಕರ್, ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಅಂದಾಜಿತ್ತು. ಆದರೆ ಕೇಂದ್ರದಿಂದ ಒಪ್ಪಿಗೆ ಸಿಗದ ಕಾರಣ ಕಸರತ್ತಿಗೆ ತಾತ್ಕಾಲಿಕ ತಡೆ ಬಿದ್ದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.