Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ
ಸ್ವಯಂಪ್ರೇರಿತ ದೂರು ಹೆಚ್ಚು ದಾಖಲಿಸಿ ಕಠಿನ ಕ್ರಮ ಕೈಗೊಳ್ಳಿ, ಹಣ ಕೊಟ್ಟು ವರ್ಗಾವಣೆಗೆ ಯತ್ನಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
Team Udayavani, Jul 6, 2024, 11:37 PM IST
ಬೆಂಗಳೂರು: ಇಂದು ಸಾಮಾಜಿಕ ಜಾಲತಾಣಗಳ ಹಾವಳಿಯಲ್ಲಿ ರಾಜ್ಯಾದ್ಯಂತ ಫೇಕ್ ನ್ಯೂಸ್‌ಗಳ (ಸುಳ್ಳು ಸುದ್ದಿ)ಗಳು ಮಿತಿ ಮೀರಿವೆ. ಅವುಗಳ ಪ್ರಸಾರವನ್ನು ತಡೆಗಟ್ಟಲೇ ಬೇಕು. ಇದಕ್ಕಾಗಿ ಕೃತಕ ಬುದ್ಧಿಮತ್ತೆ(ಎಐ)ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಅಂಥ ಸುದ್ದಿ ಹರಡುವವರ ಮೇಲೆ ಕಠಿನ ಕ್ರಮಗಳನ್ನು ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಸುಳ್ಳು ಸುದ್ದಿಗಳು ಸಮಾಜದ ನೆಮ್ಮದಿಗೆ ಕಂಟಕ. ಅವುಗಳ ತಡೆಗೆ ಫ್ಯಾಕ್ಟ್ ಚೆಕ್ ಘಟಕಗಳನ್ನು ಮಾಡಿದ್ದೇವೆ. ಆದರೂ ಹೆಚ್ಚುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದಾಖಲಿಸಿ ಮುಲಾಜಿಲ್ಲದೆ ಕಠಿನ ಕ್ರಮ ಕೈಗೊಳ್ಳಲೇಬೇಕು ಎಂದರು.
ಸಿಬಿಐ, ಸಿಐಡಿ ಕೂಡ ತನಿಖಾ ಸಂಸ್ಥೆಗಳೇ
ವಿಪಕ್ಷದವರು ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸುತ್ತಾರೆ. ಆದರೆ ಅಲ್ಲಿರುವವರೂ ನಮ್ಮ ಪೊಲೀಸರೇ. ಸಿಬಿಐ, ಸಿಐಡಿ ಕೂಡ ತನಿಖಾ ಸಂಸ್ಥೆಗಳೇ. ಅವರು ಅಧಿಕಾರದಲ್ಲಿದ್ದಾಗ “ಚೋರ್ ಬಚಾವೋ ಸಂಸ್ಥೆ’ ಎನ್ನುತ್ತಿದ್ದರು. ಕೇಂದ್ರ ಸರಕಾರ ಬೇರೆ ಬೇರೆ ರಾಜ್ಯಗಳಲ್ಲಿನ ಅಪರಾಧಗಳನ್ನು ತನಿಖೆ ಮಾಡಲು ಸ್ಥಾಪಿಸಿರುವ ಸಂಸ್ಥೆ ಸಿಬಿಐ. ರಾಜ್ಯ ಪೋಲೀಸರು ಕೂಡ ತನಿಖೆ ಮಾಡಲು ಸಮರ್ಥರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ವರ್ಗಾವಣೆಗೆ ಪ್ರಭಾವ ಬೀರುವವರ ವಿರುದ್ಧ, ಹಣ ಕೊಟ್ಟು ವರ್ಗಾವಣೆಗೆ ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನಿಮಗೆ ಸಮಸ್ಯೆಗಳಿದ್ದರೆ ಗೃಹ ಸಚಿವರಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿ ಸರಿಪಡಿಸಿಕೊಳ್ಳಿ. ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸರಕಾರ ಸಹಿಸುವುದಿಲ್ಲ. ಪೊಲೀಸರು ಹೆಚ್ಚೆಚ್ಚು ಜನಸಂಪರ್ಕ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದರು.
ಪೊಲೀಸರು ರಿಯಲ್ ಎಸ್ಟೇಟ್‌ಗಿಳಿದರೆ ಕ್ರಮ
ರಿಯಲ್ ಎಸ್ಟೇಟ್ ವ್ಯವಹಾರಗಳು ಎಲ್ಲಿ ನಡೆಯುತ್ತವೆ? ಯಾರು ನಡೆಸುತ್ತಿದ್ದಾರೆ ಎಂಬುದು ಪೊಲೀಸರು ಬಹಳ ಚೆನ್ನಾಗಿಯೇ ಗೊತ್ತಿರುತ್ತದೆ. ಒಂದು ವೇಳೆ ಅವರೊಂದಿಗೆ ಶಾಮೀಲಾದರೆ, ಪೊಲೀಸರೇ ಸ್ವತಃ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದರೆ ಕಠಿನ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಎಚ್ಚರಿಸಿದರು.
ಅಂಜಲಿ ಕೊಲೆಗೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ
ಈಚೆಗೆ ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಮತ್ತೂಂದು ಕೊಲೆಗಳು ನಡೆದವು. ನೇಹಾ ಕೊಲೆಯ ಅನಂತರ ಆದ ಮತ್ತೂಂದು ಕೊಲೆ ಪ್ರಕರಣದಲ್ಲಿ ಆರೋಪಿ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದಾಗಲೇ ಕ್ರಮ ಕೈಗೊಂಡಿದ್ದರೆ ಅಂಜಲಿಯ ಕೊಲೆ ತಡೆಯಲು ಸಾಧ್ಯವಾಗುತ್ತಿತ್ತು ಎಂದು ಸಿದ್ದರಾಮಯ್ಯ ಅವರು ಪೊಲೀಸ್ ವರ್ತನೆಗೆ ಕಿಡಿಕಾರಿದ್ದಾರೆ. ಇಂಟೆಲಿಜೆನ್ಸ್ ಪೊಲೀಸರು ಎಚ್ಚರ ಇದ್ದಿದ್ದರೆ ಹುಬ್ಬಳ್ಳಿಯಲ್ಲಿ ಎರಡನೇ ಕೊಲೆಯನ್ನು ತಪ್ಪಿಸಬಹುದಿತ್ತು. ಅದಕ್ಕೆ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಬೇಕಾಯಿತು. ಅವರ ನಿರ್ಲಕ್ಷ್ಯದಿಂದ ಕೊಲೆ ಆಗಿದೆ. ಪೊಲೀಸರ ಮಧ್ಯೆ ಸಮನ್ವಯದ ಕೊರತೆಯಿದೆ. ಒಂದು ಮಾಹಿತಿ ಬಂದರೆ ಅದನ್ನು ಹಿಂಬಾಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.