ಡಿಸಿಎಂ ಒಂದು ಅಸಮಾಧಾನ ಐದು: ಕೆಎಚ್‌ಎಂ, ಪರಂ, ಎಂಬಿಪಿ, ಸತೀಶ್, ಜಮೀರ್ ಬೇಗುದಿ
Team Udayavani, May 19, 2023, 7:07 AM IST
ಬೆಂಗಳೂರು: ಡಿಕೆಶಿ ಒಬ್ಬರೇ ಡಿಸಿಎಂ ಎಂಬ ಘೋಷಣೆ ಬೆನ್ನಲ್ಲೇ ಆ ಹುದ್ದೆಯ ಕನಸು ಕಾಣುತ್ತಿದ್ದ ನಾಯಕರು ಅಸಮಾಧಾನಗೊಂಡಿದ್ದಾರೆ. ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದ ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಜಮೀರ್ ಅಹಮದ್ ಪ್ರತ್ಯೇಕ ಸಭೆ ನಡೆಸಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಡಾ| ಪರಮೇಶ್ವರ್, ಸತೀಶ್ ಜಾರಕಿಹೊಳಿ ಕೂಡ ಬೇಸರಗೊಂಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಲಿಂಗಾಯತ, ದಲಿತ ಹಾಗೂ ಮುಸ್ಲಿಂ ಸಮುದಾಯ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿದ್ದು ಕಾರಣ. ಹೀಗಾಗಿ ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಲು ಡಿಸಿಎಂ ಸ್ಥಾನ ನೀಡಬೇಕು ಎಂದು ಬೆಂಬಲಿಗರ ಸಭೆಯಲ್ಲಿ ಆಕಾಂಕ್ಷಿಗಳು ಪ್ರತಿಪಾದಿಸಿದರು. ಈ ಬಗ್ಗೆ ನಿಯೋಗ ಕೊಂಡೊಯ್ಯಲು ತೀರ್ಮಾನಿಸಿದರು.
ಮತ್ತೂಂದೆಡೆ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಪ್ರತಿಕ್ರಿಯಿಸಿದ ಡಾ| ಪರಮೇಶ್ವರ್, ನಾನು ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದೆ, ಡಿಸಿಎಂ ಸ್ಥಾನ ಕೊಡಬೇಕು ಎಂದರು. ಹಿಂದೆಯೂ ನಾನು ಉಪ ಮುಖ್ಯಮಂತ್ರಿ ಆಗಿದ್ದೆ. ಈ ಬಾರಿಯೂ ಸಿಗುವ ವಿಶ್ವಾಸ ಇದೆ. ಮುಖಂಡರ ಜತೆ ಮಾತನಾಡುತ್ತೇನೆ. ಪಕ್ಷವನ್ನು ಕೈ ಹಿಡಿದ ದಲಿತರನ್ನು ಕಡೆಗಣಿಸಬಾರದು ಎಂದರು.
ಸತೀಶ್ ಜಾರಕಿಹೊಳಿ ಕೂಡ ಡಿಸಿಎಂ ಹುದ್ದೆಯ ನಿರೀಕ್ಷೆ ಯಲ್ಲಿದ್ದು, ಬೇಸರ ಗೊಂಡಿದ್ದಾರೆ. ಅವರ ಆಪ್ತ ಬೆಂಬಲಿಗರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಯಾರಿಗೆಲ್ಲ ಸಚಿವ ಸ್ಥಾನ?
ಸಿಎಂ ಮತ್ತು ಡಿಸಿಎಂ ಯಾರು ಎಂಬುದು ಈಗ ಖಚಿತವಾಗಿದೆ. ಆದರೆ ಸಚಿವ ಸಂಪುಟ ರಚನೆಯೂ ಹೈಕಮಾಂಡ್‌ಗೆ ಸವಾಲಾಗುವ ಸಾಧ್ಯತೆಗಳು ಕಾಣಿಸಿವೆ. ರಾಜ್ಯದ ಸಂಪುಟ ಗಾತ್ರ 34 ಆಗಿದ್ದು, ಈಗಾಗಲೇ ಸಿದ್ದು ಮತ್ತು ಡಿಕೆಶಿ ಬಗ್ಗೆ ತೀರ್ಮಾನವಾಗಿದೆ. ಉಳಿದಿರುವುದು 32. ಹಿರಿಯರಾದ ದೇಶಪಾಂಡೆ, ಮುನಿಯಪ್ಪ, ಪರಮೇಶ್ವರ್, ಮಹದೇವಪ್ಪ, ಹರಿಪ್ರಸಾದ್, ಎಂ.ಬಿ. ಪಾಟೀಲ್ ಸೇರಿದಂತೆ ಪಟ್ಟಿ ದೊಡ್ಡದಿದೆ. ಶುಕ್ರವಾರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮತ್ತೆ ದಿಲ್ಲಿಗೆ ತೆರಳಲಿದ್ದು, ರಾತ್ರಿ ವೇಳೆಗೆ ಸಚಿವ ಸಂಪುಟ ಸದಸ್ಯರ ಹೆಸರನ್ನು ಅಂತಿಮಗೊಳಿಸಿಕೊಂಡು ಹಿಂದಿರುಗಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.