ಬಿಎಸ್‌ವೈಗೆ ಉಸ್ತುವರಿ : ಜಿಲ್ಲಾ ಉಸ್ತುವಾರಿ ಸ್ಥಾನಗಳಿಗಾಗಿ ಹೊಸ ಸಚಿವರ ಬೇಡಿಕೆ
Team Udayavani, Mar 1, 2020, 7:15 AM IST
ಬೆಂಗಳೂರು: ಮೂಲ ಬಿಜೆಪಿಗರ ಅಸಮಾಧಾನದ ನಡುವೆಯೂ ವಲಸಿಗರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಗ “ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ’ ಹಂಚಿಕೆ ತಲೆ ನೋವಾಗಿದೆ. ಇದು ಮೂಲ ಮತ್ತು ವಲಸಿಗರ ನಡುವಿನ ಆಂತರಿಕ ತಿಕ್ಕಾಟಕ್ಕೂ ಕಾರಣವಾಗಿದ್ದು, ಬಿಎಸ್‌ವೈ ಹೊಸ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ.
ಸಂಪುಟ ವಿಸ್ತರಣೆಯಾಗಿ ಈಗಾಗಲೇ ತಿಂಗಳಾಗುತ್ತಾ ಬರುತ್ತಿದೆ. ಆದರೆ ಹೊಸ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿಲ್ಲ. ವಲಸಿಗರಿಗಾಗಿ ಪ್ರಭಾವಿ ಸಚಿವರಿಂದ ಜಿಲ್ಲಾ ಉಸ್ತುವಾರಿ ಪಟ್ಟ ವಾಪಸ್ ಪಡೆಯುವುದು ಬಿಎಸ್‌ವೈ ಅವರಿಗೆ ಈಗ ಸಮಸ್ಯೆಯಾಗಿ ಪರಿಣಮಿಸಿದೆ.
ಬಿಎಸ್‌ವೈ ಸಂಪುಟದಲ್ಲಿ ಆರಂಭದಿಂದಲೂ ಇರುವ 17 ಮಂದಿ ಸಚಿವರಲ್ಲಿ 12 ಸಚಿವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಈ ಉಸ್ತುವಾರಿ ಹೊತ್ತಿರುವವರಲ್ಲಿ ಬಹುತೇಕರು ಹಿರಿಯ ಮತ್ತು ಪ್ರಭಾವಿಗಳಾಗಿದ್ದಾರೆ. ಇವರು ತವರು ಜಿಲ್ಲೆಯನ್ನು ಹೊರತುಪಡಿಸಿ ಮತ್ತೂಂದು ಜಿಲ್ಲೆಯನ್ನು ಬಿಟ್ಟುಕೊಡಲು ಸಿದ್ಧರಿದ್ದರೂ ಕೆಲವು ಹೊಸ ಸಚಿವರು ಇದೇ ಜಿಲ್ಲೆಯವರಾಗಿದ್ದು, ಜಿಲ್ಲಾ ಉಸ್ತುವಾರಿ ಪಟ್ಟಕ್ಕೆ ಬೇಡಿಕೆ ಮಂಡಿಸುತ್ತಿದ್ದಾರೆ.
ಯಾರಿಗೆ ಎರಡು ಜಿಲ್ಲೆ?
ಉಪ ಮುಖ್ಯಮಂತ್ರಿಗಳಾದ ಡಾ| ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಬಿ. ಶ್ರೀರಾಮುಲು ಹಾಗೂ ಪ್ರಭು ಚೌಹ್ವಾಣ ತಲಾ ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೊಂದಿದ್ದಾರೆ.
ಅಶೋಕ್, ಅಶ್ವತ್ಥನಾರಾಯಣರಿಗೆ ಆತಂಕ?
ಸದ್ಯ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಭಾರೀ ಬೇಡಿಕೆ ಇದೆ. ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿ ಹೊತ್ತಿದ್ದು, ಈ ಎರಡೂ ಜಿಲ್ಲೆಗಳ ಉಸ್ತುವಾರಿಗಾಗಿ ವಲಸಿಗರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೊಣೆ ಹೊತ್ತಿದ್ದಾರೆ. ಆದರೆ ಬೆಂಗಳೂರು ಗ್ರಾಮಾಂತರದ ಮೇಲೆ ಮೂವರು ಕಣ್ಣು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಮಂಡ್ಯ ಜಿಲ್ಲೆ ಬೇಕು ಎಂದು ಸ್ಥಳೀಯರೇ ಆಗಿರುವ ನಾರಾಯಣ ಗೌಡ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ವಲಸಿಗರ ಬೇಡಿಕೆಗೆ ಸಿಎಂ ಅಸ್ತು ಎಂದರೆ, ಅಶೋಕ್ ಮತ್ತು ಅಶ್ವತ್ಥನಾರಾಯಣ ಅವರು ಈಗಿರುವ ಜಿಲ್ಲೆಗಳ ಹೊಣೆಗಾರಿಕೆಯನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು.
ಬೊಮ್ಮಾಯಿಗೆ ತವರಿನ ಆತಂಕ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಡುಪಿ ಮತ್ತು ಹಾವೇರಿ ಜಿಲ್ಲೆಗಳ ಹೊಣೆ ಹೊತ್ತಿದ್ದಾರೆ. ಇದರಲ್ಲಿ ಹಾವೇರಿ ಬೊಮ್ಮಾಯಿ ಅವರ ತವರು ಜಿಲ್ಲೆ. ಆದರೆ ಈ ಜಿಲ್ಲೆಗೆ ಹೊಸ ಸಚಿವ ಬಿ.ಸಿ. ಪಾಟೀಲ್ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ ಬೊಮ್ಮಾಯಿ ಅವರು ತವರು ಜಿಲ್ಲೆಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ.
ಅತ್ತ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಉಳಿಯುವ ಸಾಧ್ಯತೆ ಇದ್ದು, ಬೆಳಗಾವಿ ಜಿಲ್ಲೆ ರಮೇಶ್ ಜಾರಕಿಹೊಳಿ ಅವರಿಗೆ ಸಿಗಬಹುದು ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಶಿವರಾಂ ಹೆಬ್ಟಾರ್ ಬೇಡಿಕೆ ಇಟ್ಟಿದ್ದು, ಶಶಿಕಲಾ ಜೊಲ್ಲೆ ಅವರು ಉಸ್ತುವಾರಿ ಹೊಣೆಯನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು ಎನ್ನಲಾಗುತ್ತಿದೆ.
ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕೊಪ್ಪಳ ಉಳಿಯುವ ಸಾಧ್ಯತೆ ಇದೆ. ಇವರ ಇನ್ನೊಂದು ಜಿಲ್ಲೆ ಬಳ್ಳಾರಿ ಬೇಕು ಎಂದು ಆನಂದ್ ಸಿಂಗ್ ಅವರು ಬೇಡಿಕೆ ಇಟ್ಟಿದ್ದಾರೆ. ಇದರ ಜತೆಗೆ ರಮೇಶ್ ಜಾರಕಿಹೊಳಿ ತಮ್ಮ ಆಪ್ತ ಶ್ರೀಮಂತ ಪಾಟೀಲರಿಗೆ ವಿಜಯಪುರ ಅಥವಾ ಯಾದಗಿರಿ ಜಿಲ್ಲಾ ಉಸ್ತುವಾರಿ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೋರ್ವ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಕಲಬುರಗಿ ಹಾಗೂ ಬಾಗಲಕೋಟೆ ಉಸ್ತುವಾರಿ ವಹಿಸಿಕೊಂಡಿದ್ದು, ಅವರು ಬಹುತೇಕ ಕಲಬುರಗಿ ಜಿಲ್ಲೆ ಬಿಟ್ಟುಕೊಡುವ ಸಾಧ್ಯತೆ ಇದೆ.
ವಸತಿ ಸಚಿವ ವಿ. ಸೋಮಣ್ಣ ಮೈಸೂರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿದ್ದು, ಅವರು ಕೊಡಗು ಜಿಲ್ಲೆ ಬಿಟ್ಟುಕೊಡುವ ಸಾಧ್ಯತೆ ಇದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹಾಸನ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿಯಾಗಿದ್ದು, ಹಾಸನ ಜಿಲ್ಲೆ ಕೈ ತಪ್ಪುವ ಸಾಧ್ಯತೆ ಇದೆ.
ಪಶು ಸಂಗೋಪನ ಸಚಿವ ಪ್ರಭು ಚೌವ್ಹಾಣ ಅವರಿಗೆ ಬೀದರ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಅವರಿಂದ ಯಾದಗಿರಿ ಜಿಲ್ಲಾ ಉಸ್ತುವಾರಿ ವಾಪಸ್ ಪಡೆಯುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಉಳಿಸಿಕೊಂಡು ದಾವಣಗೆರೆ ಜಿಲ್ಲೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಗಣಿ ಸಚಿವ ಸಿ.ಸಿ. ಪಾಟೀಲ್ ತವರು ಜಿಲ್ಲೆ ಗದಗ ಉಳಿಸಿಕೊಂಡು ವಿಜಯಪುರ ಜಿಲ್ಲೆ ಬಿಟ್ಟುಕೊಡುವ ಸಾಧ್ಯತೆ ಇದೆ.
ಬಜೆಟ್ ಮುಗಿಯುವವರೆಗೂ ಅನುಮಾನ ?
ಮಾರ್ಚ್ 2ರಿಂದ ಒಂದು ತಿಂಗಳು ಬಜೆಟ್ ಅಧಿವೇಶನ ನಡೆಯುವುದರಿಂದ ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರನ್ನು ಬದಲಾಯಿಸುವ ಪ್ರಯತ್ನಕ್ಕೆ ಕೈ ಹಾಕಿದರೆ, ಕೆಲವು ಸಚಿವರಿಗೆ ಅಸಮಾಧಾನ ಉಂಟಾಗಿ ಅಧಿವೇಶನದ ಸಂದರ್ಭದಲ್ಲಿ ಅದೇ ವಿಷಯ ವಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ಇರುವುದರಿಂದ ಅಧಿವೇಶನ ಮುಗಿಯುವವರೆಗೂ ಉಸ್ತುವಾರಿಗಳ ಬದಲಾವಣೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.