ಕೆಎಎಸ್ ಮುಖ್ಯ ಪರೀಕ್ಷೆ: ಐಚ್ಛಿಕಗಳ ಪದ್ಧತಿ ರದ್ದು
ಕನ್ನಡ ಭಾಷೆ, ಕನ್ನಡದಲ್ಲಿ ಪರೀಕ್ಷೆ ಬರೆಯುವವರಿಗೆ ಸಮಸ್ಯೆ ಇಲ್ಲ
Team Udayavani, Mar 16, 2020, 6:50 AM IST
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಗೆಜೆಟೆಡ್ ಪ್ರೊಬೆಷನರ್ ಎ ಮತ್ತು ಬಿ ಶ್ರೇಣಿ (ಕೆಎಎಸ್) ಹುದ್ದೆಗಳ ಅಂತಿಮ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ಸೇರಿದಂತೆ ಎಲ್ಲ 26 ಐಚ್ಛಿಕ ವಿಷಯಗಳನ್ನು ತೆಗೆದು ಹಾಕಲು ಸರಕಾರ ಮುಂದಾಗಿದೆ.
ಈ ಸಂಬಂಧ ಪ್ರಸ್ತಾವನೆಯನ್ನು ಕಳಿಸಿಕೊಡಲಾಗಿದ್ದು, ಸರಕಾರ ತೀರ್ಮಾನ ಮಾಡಬೇಕಿದೆ ಎಂದು ಕೆಪಿಎಸ್‌ಸಿ ಹೇಳಿದೆ. ಈ ಬಗ್ಗೆ ಸರಕಾರವು ಮಾರ್ಚ್ ಮೊದಲ ವಾರದಲ್ಲಿ ಕರಡು ನಿಯಮಗಳನ್ನು ಹೊರಡಿಸಿದ್ದು, ಸಾರ್ವಜನಿಕರ ಆಕ್ಷೇಪಣೆಗೆ 15 ದಿನಗಳ ಸಮಯ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ನಿರ್ಧಾರದಿಂದ ಕನ್ನಡ ಭಾಷೆಗೆ ಅನ್ಯಾಯವಾಗಲಿದೆ ಎಂಬ ಕೂಗಿದೆ. ಆದರೆ ಐಚ್ಛಿಕ ವಿಷಯ ತೆಗೆದುಹಾಕುವುದರಿಂದ ಪರೀಕ್ಷೆಯ ಪದ್ಧತಿಯಲ್ಲಿ ಬದಲಾವಣೆ ಆಗಲಿದೆಯೇ ವಿನಾ ಕನ್ನಡ ಭಾಷೆ ಅಥವಾ ಕನ್ನಡದಲ್ಲಿ ಪರೀಕ್ಷೆ ಬರೆಯುವವರಿಗೆ ಸಮಸ್ಯೆ ಆಗುವುದಿಲ್ಲ ಎಂಬುದು ಸರಕಾರದ ವಾದ.
ಅನ್ಯ ರಾಜ್ಯಗಳಲ್ಲೂ ಐಚ್ಛಿಕ ವಿಷಯಗಳಿಲ್ಲ
ಆಂಧ್ರಪ್ರದೇಶ, ತೆಲಂಗಾಣ, ತ.ನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯಗಳು ಇಲ್ಲ ಎನ್ನಲಾಗಿದೆ.
ಕನ್ನಡದಲ್ಲಿ ಬರೆಯಬಹುದು
ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅರ್ಜಿ ಹಾಕುವಾಗಲೇ ಕನ್ನಡ ಅಥವಾ ಇಂಗ್ಲಿಷ್ ಭಾಷೆ ಆಯ್ದುಕೊಳ್ಳುವ ಅವಕಾಶವಿದೆ. ಹಾಗಾಗಿ ಐಚ್ಛಿಕ ವಿಷಯಗಳನ್ನು ತೆಗೆದು ಹಾಕುವುದರಿಂದ ಕನ್ನಡ ಭಾಷೆಗೆ ಅಥವಾ ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೆ ಸಮಸ್ಯೆ ಇಲ್ಲ. ಅದೇ ರೀತಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅರ್ಹತಾ ಪರೀಕ್ಷೆ ಬರೆಯುವ ಅವಕಾಶವೂ ಹಾಗೆಯೇ ಇರಲಿದೆ. ಅರ್ಹತಾ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಖ್ಯ ಪರೀಕ್ಷೆಯ ಇತರ ಪೇಪರ್‌ಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವ ಪದ್ಧತಿಯೂ ಹಿಂದಿನಂತೆಯೇ ಇರಲಿದೆ.
ಸ್ಕೇಲಿಂಗ್ ಬದಲು ಈ ಕ್ರಮ
ಕೆಪಿಎಸ್‌ಸಿಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಅಗತ್ಯ ಶಿಫಾರಸುಗಳನ್ನು ನೀಡಲು ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 2013ರಲ್ಲಿ ವರದಿ ನೀಡಿದ ಸಮಿತಿಯು ಒಟ್ಟು 65 ಪ್ರಮುಖ ಶಿಫಾರಸುಗಳನ್ನು ಮಾಡಿತ್ತು. ಅದರಲ್ಲಿ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳಿಗೆ ಸ್ಕೇಲಿಂಗ್ ಪದ್ಧತಿ ಅಳವಡಿಕೆ ಮುಖ್ಯವಾದುದು. ಈ ಬಗ್ಗೆ 2017ರಲ್ಲೇ ರಾಜ್ಯ ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿತ್ತು. ಈಗ ಸ್ಕೇಲಿಂಗ್ ಪದ್ಧತಿ ಬದಲು ಐಚ್ಛಿಕ ವಿಷಯಗಳನ್ನೇ ತೆಗೆದು ಹಾಕಲು ಮುಂದಾಗಿದೆ.
ಹೊಸ ಪದ್ಧತಿ ಹೇಗಿರಲಿದೆ?
ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸುವ ನೇಮಕಾತಿಗೆ ಪೂರ್ವಭಾವಿ ಮತ್ತು ಅಂತಿಮ ಎಂಬ ಎರಡು ಪರೀಕ್ಷೆಗಳಿವೆ. ಸರಕಾರದ ನಿರ್ಧಾರ ಅಂತಿಮವಾದರೆ ಪೂರ್ವಭಾವಿ ಪರೀಕ್ಷೆಗಳು ಮೊದಲಿನಂತೆ ಇರಲಿವೆ. ಮುಖ್ಯ ಪರೀಕ್ಷೆಯಲ್ಲಿ ಹಿಂದೆ 4 ಸಾಮಾನ್ಯ ಅಧ್ಯಯನ ಪರೀಕ್ಷೆ, ಎರಡು ಐಚ್ಛಿಕ ವಿಷಯ ಮತ್ತು ಒಂದು ಪ್ರಬಂಧ ಪೇಪರ್ ಸೇರಿ ಒಟ್ಟು ಏಳು ಪೇಪರ್‌ಗಳ ಪರೀಕ್ಷೆ ಬರೆಯಬೇಕಾಗಿತ್ತು. ಈಗ ತಲಾ 250 ಅಂಕಗಳ ನಾಲ್ಕು ಸಾಮಾನ್ಯ ಅಧ್ಯಯನ ಪೇಪರ್, ಒಂದು ಪ್ರಬಂಧ ಪೇಪರ್ ಬರೆಯಬೇಕಾಗುತ್ತದೆ. ಐಚ್ಛಿಕ ವಿಷಯ ಇರುವುದಿಲ್ಲ.
ಕೆಎಎಸ್ ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಿಕೊಡಲಾಗಿದೆ. ಅದು ಸದ್ಯ ಸರಕಾರದ ಬಳಿ ಇದೆ. ಸ್ಕೇಲಿಂಗ್ ಪದ್ಧತಿ ಅಳವಡಿಸುವ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ
– ಎಸ್.ಪಿ. ಷಡಕ್ಷರಿ ಸ್ವಾಮಿ, ಕೆಪಿಎಸ್‌ಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.