Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
ಸಿನಿಮಾ ಶೈಲಿಯ ಬಗ್ಗೆ ಅಪರಿಮಿತ ಹಿಡಿತವಿರುವ ಕೈ ಬೆರಳೆಣಿಕೆಯ ನಿರ್ದೇಶಕರುಗಳಲ್ಲಿ ಮುಖ್ಯರು
Team Udayavani, Mar 23, 2024, 6:14 PM IST
ಹೆಸರಾಂತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಜಾಗತಿಕ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಭಾರತೀಯ ಚಿತ್ರರಂಗದಲ್ಲೂ ತಮ್ಮ ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದವರು. ಅವಶೇಷ್ ನಿಂದ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ವರೆಗೆ ವೈವಿಧ್ಯಮಯವಾದ ಕಥಾವಸ್ತುಗಳನ್ನು ಕಥಿಸಿಕೊಂಡು ಚಿತ್ರಗಳನ್ನಾಗಿ ಅನಾವರಣಗೊಳಿಸಿದವರು. ಅವರ ಹೊಸ ಸಿನಿಮಾವಲ್ಲ, ಕೃತಿ ಬಿಡುಗಡೆಗೊಳ್ಳುತ್ತಿದೆ.
ತಮ್ಮ ಅಷ್ಟೂ ಸಿನಿಮಾಗಳ ಬಗೆಗಿನ ಒಟ್ಟೂ ನೋಟವನ್ನು ಸಾಂದ್ರವಾಗಿ ಸ್ವತಃ ಸಿನಿಮಾ ನಿರ್ದೇಶಕರೇ ಕಟ್ಟಿಕೊಟ್ಟ ಪ್ರಯೋಗಗಳು ತೀರಾ ಕಡಿಮೆ. ಜಾಗತಿಕ ಮಟ್ಟದಲ್ಲಿ ಕೆಲವು ಚಿತ್ರ ನಿರ್ದೇಶಕರು ಮಾಡಿರಬಹುದು. ಭಾರತದ ಮಟ್ಟದಲ್ಲಿ ಕಣ್ಣಿಗೆ ಕಂಡದ್ದು ಕಡಿಮೆ. ಬಿಡಿ ಬಿಡಿ ಲೇಖನಗಳಲ್ಲಿ, ಸಂದರ್ಶನಗಳಲ್ಲಿ ತಮ್ಮ ಚಿತ್ರಗಳ ಬಗ್ಗೆ ನೀಡಲಾದ ಅಭಿಪ್ರಾಯಗಳು ಬೇರೆ. ಆದರೆ ಇಲ್ಲಿ ಗಿರೀಶ್ ಕಾಸರವಳ್ಳಿಯವರು ತಮ್ಮ ಸ್ನೇಹಿತ ಸಾಹಿತಿ ಗೋಪಾಲಕೃಷ್ಣ ಪೈ ಅವರೊಂದಿಗೆ ಸೇರಿ ’ಬಿಂಬ ಬಿಂಬನ’ ಕೃತಿ ರೂಪಿಸಿದ್ದಾರೆ. ಇದು ವಿಶಿಷ್ಟ ಕೃತಿಯನ್ನು ವೀರಲೋಕ ಪ್ರಕಾಶನ ಪ್ರಕಟಿಸುತ್ತಿದೆ. ಮಾ. 24 ರವಿವಾರ] ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಟಿ ಜಯಮಾಲಾ ಈ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲಿ ಕೃತಿಯ ಕುರಿತು ಮತ್ತು ಸಿನಿಮಾದ ಬಗ್ಗೆ ಗಿರೀಶ ಕಾಸರವಳ್ಳಿಯವರೇ ಪ್ರವೇಶಿಕೆ ಮಾದರಿಯಲ್ಲಿ ಬರೆದ “ಸಂಕಥನದ ಮೊದಲು” ಶೀರ್ಷಿಕೆಯ ಲೇಖನದ ಕೆಲ ಅಂಶಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
*
ಸಂಕಥನದ ಮೊದಲು
ಗಿರೀಶ ಕಾಸರವಳ್ಳಿ
ಸಿನಿಮಾ ಎನ್ನುವುದು ಬಿಂಬಗಳ ಭಾಷೆ ಎನ್ನುವುದು ಸರ್ವ ವೇದ್ಯ. ನಾವು ನೋಡಿದ ಸಿನಿಮಾ ಅನುಭವವಾಗಿ ತಲುಪಿ ನಂತರ ಅರ್ಥವಾಗಿ ದಕ್ಕುವಲ್ಲಿ ಬಿಂಬಗಳು ನಿರ್ವಹಿಸುವ ಪಾತ್ರ ಮಹತ್ವದ್ದು. ಕೆಲವು ಸಿನಿಮಾ ವ್ಯಾಖ್ಯಾನಕಾರರು ಹಾಗೂ ಕೃತಿಕಾರರು ಪರಿಭಾವಿಸುವಂತೆ ಬಿಂಬ ಮೂಡುವುದು ತೆರೆಯ ಮೇಲಲ್ಲ, ನೋಡುಗರ ಮನದ ಪಟಲದ ಮೇಲೆ ಎಂಬ ಆ್ಯಂಡೂ ಟ್ರೂ$Âಡರ್‌ನ ಮಾತು ಎಷ್ಟು ಸಮಂಜಸ. ತೆರೆಯ ಮೇಲೆ ಕಾಣಿಸುವುದು ದೃಶ್ಯ ಬಿಂಬಗಳು. ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿ ಮಾಡುತ್ತಿರುತ್ತಾರೆ.
ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ. ಮೊದಲನೆಯ ಅಂಶಗಳು ಮೂರ್ತವಾಗಿ ತೆರೆಯ ಮೇಲಿನ ಪರಿಸರ ಕಟ್ಟಿಕೊಡುತ್ತಿದ್ದರೆ ಎರಡನೆಯ ಅಂಶಗಳು ಅಮೂರ್ತವಾಗಿ ಅದೇ ಕೆಲಸ ಮಾಡುತ್ತಿರುತ್ತವೆ. ಅವು ಕಟ್ಟಿ ಕೊಡುವ ಅನುಭವವು ಆನಂತರ ಸಹೃದಯರ ಮನದಾಳಕ್ಕಿಳಿದು ಅರ್ಥವಾಗಿ ಮೂಡಿ ಸಿನಿಮಾದ ರಾಜಕೀಯ, ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟುಗಳನ್ನು ಸಬಲಗೊಳಿಸುತ್ತವೆ.
ಕಥಾನಕವನ್ನು ನಿರಚನ ಮಾಡುವುದರ ಮೂಲಕ ಸಿನಿಮಾದ ದರ್ಶನವನ್ನು ಗ್ರಹಿಸುವುದು ಒಂದು ಪರಿಯಾದರೆ, ಕತೆಯನ್ನು ಕಟ್ಟಲು ಬಳಸುವ ಬಿಂಬಗಳ ನಿರಚನೆ ಮಾಡಿ ಆ ಮೂಲಕ ಸಿನಿಮಾ ಕಟ್ಟುವ ಕತೆಯ ಒಳಹೊರಗನ್ನೆಲ್ಲಾ ವಿಶ್ಲೇಷಿಸಿ, ಅದರ ದರ್ಶನವನ್ನು ಗ್ರಹಿಸುವುದು ಇನ್ನೊಂದು ಪರಿ. ಗುರಿ ಒಂದೇ ಆದರೂ ಮಾರ್ಗ ಭಿನ್ನ. 2013ರಲ್ಲಿ ಫಿಲ್ಮ್ ಡಿವಿಷನ್‌ನವರು ಭಾರತದ ಮುಖ್ಯ ನಿರ್ದೇಶಕರೊಲ್ಲೊಬ್ಬರಾದ ಅಡೂರ್ ಗೋಪಾಲಕೃಷ್ಣನ್ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡಲು ಉದ್ದೇಶಿಸಿ ಅಡೂರ್ ಅವರನ್ನು ಸಂಪರ್ಕಿಸಿದಾಗ, ಅಡೂರ ಅವರು ನನಗೆ ಫೋನ್ ಮಾಡಿ “ನೀನು ನಿರ್ದೇಶಿಸುತ್ತೀಯಾದರೆ ನಾನು ಒಪ್ಪಿಗೆ ಕೊಡುತ್ತೇನೆ” ಎಂದರು.
ಸಾಕ್ಷ್ಯ ಚಿತ್ರಗಳು ನನ್ನ ಕ್ಷೇತ್ರವಲ್ಲದಿದ್ದರೂ ಸಂತೋಷದಿಂದ ಒಪ್ಪಿಕೊಂಡೆ. ಆ ವೇಳೆಗೆ ಅಡೂರ್ ಅವರ ಜೀವನ ಯಾನದ ಬಗ್ಗೆ, ಅವರ ಚಿತ್ರಗಳ ಬಗ್ಗೆ, ಅವರ ಸಂದರ್ಶನಗಳನ್ನು ಆಧರಿಸಿ ಹತ್ತಾರು ಸಾಕ್ಷ್ಯಚಿತ್ರಗಳು ತಯಾರಾಗಿದ್ದವು. ಆ ಅಂಶಗಳು ಪುನರಾವರ್ತನೆಯಾಗದಂತೆ ಭಿನ್ನವಾದ ನಿರೂಪಣೆಗಾಗಿ ಯೋಚಿಸುತ್ತಿದ್ದಾಗ, ಅವರ ನುಡಿಗಟ್ಟುಗಳ ಮೀಮಾಂಸೆ ಮತ್ತು ಅವು ವ್ಯಕ್ತಪಡಿಸುವ ರಾಜಕೀಯ ಪ್ರಜ್ಞೆ ಕುರಿತು ಸಿನಿಮಾ ಮಾಡಿದರೆ ಹೇಗಿರಬಹುದು ಎನ್ನಿಸಿತು. ಏಕೆಂದರೆ ಭಾರತೀಯ ಸಿನಿಮಾ ನಿರ್ದೇಶಕರ ಪೈಕಿ ಸಿನಿಮಾ ಶೈಲಿಯ ಬಗ್ಗೆ ಅಪರಿಮಿತ ಹಿಡಿತವಿರುವ ಕೈ ಬೆರಳೆಣಿಕೆಯ ನಿರ್ದೇಶಕರುಗಳಲ್ಲಿ ಅವರು ಮುಖ್ಯರು. ಅವರ ಚಿತ್ರಗಳಲ್ಲಿ ತಂತ್ರ ಹಾಗೂ ನುಡಿಗಟ್ಟುಗಳೂ ಅವರ ದರ್ಶನದ ಭಾಗವಾಗಿರುತ್ತವೆ. ಆ ಬಿಂಬಗಳನ್ನು ವ್ಯಾಖ್ಯಾನಿಸುವ ಸಾಕ್ಷ್ಯ ಚಿತ್ರವೇ “ಇಮೇಜಸ್ And ರಿಫ್ಲೆಕ್ಷನ್ಸ್.” ಬಿಂಬ ಅವರದು, ಪ್ರತಿಸ್ಪಂದನೆ ನನ್ನದು.
ಆ ಚಿತ್ರಕ್ಕೆ ವಸ್ತು ವಿಷಯಗಳ ಸಂಶೋಧನೆಗೆ ನೆರವಾದವರು ಕನ್ನಡದ ಖ್ಯಾತ ಸಾಹಿತಿ ಹಾಗೂ ನನ್ನ “ಕನಸೆಂಬೋ ಕುದುರೆಯನೇರಿ’ ಚಿತ್ರದ ಸಹಚಿತ್ರ ಕಥಾ ಲೇಖಕರಾಗಿ ರಾಷ್ಟ್ರ ಪ್ರಶಸ್ತಿಯ ಮನ್ನಣೆಯನ್ನೂ ಪಡೆದ ಸಾಹಿತಿ ಗೋಪಾಲಕೃಷ್ಣ ಪೈ. ಕೇವಲ ಕತೆಯನ್ನು, ವ್ಯಕ್ತ ಮೇಲ್ಪದರವನ್ನು ಅವಲಂಬಿಸದೆ ಕೃತಿಯ ಸಂವಿಧಾನದ ಮೂಲಕ ಕರ್ತೃವಿನ ಮಿಡಿತಗಳನ್ನು, ವಿಶ್ವದೃಷ್ಟಿಯನ್ನು ಗ್ರಹಿಸುವ ಈ ಕ್ರಮ ಅವರಿಗೂ ಇಷ್ಟವಾಯಿತು. ಇದು ಜಾಗತಿಕ ಸಿನಿಮಾ ವಿಶ್ಲೇಷಣೆಯಲ್ಲಿ ಅನುಸರಿಸುವ ಒಂದು ಕ್ರಮ. ನಾನು ಪುಣೆಯ ಫಿಲ್ಮ್ ಮತ್ತು ಟಿವಿ ಸಂಸ್ಥೆಯಲ್ಲಿ ಓದುತ್ತಿರುವಾಗ ಅಲ್ಲಿನ ಗ್ರಂಥಾಲಯದಲ್ಲಿ ಸಿನಿಮಾ ಕುರಿತ ಸಾವಿರಾರು ಪುಸ್ತಕಗಳಿದ್ದವು. ಸಂಸ್ಥೆಯ ಪಕ್ಕದಲ್ಲೇ ಇದ್ದ ರಾಷ್ಟ್ರೀಯ ಚಲನಚಿತ್ರ ಭಂಡಾರದಲ್ಲಿ(Natioinal Film Archieve)ಯೂ ಸಾವಿರಾರು ಪುಸ್ತಕಗಳಿದ್ದವು. ಆ ಗ್ರಂಥಾಲಯಗಳಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು Film makers on, Film making, Directors on Directing ಎಂಬಿತ್ಯಾದಿ ಸಿನಿಮಾ ಸಾಹಿತ್ಯದ ಸರಣಿಗಳು.
ಈ ಸರಣಿಗಳಲ್ಲಿ ಚಿತ್ರ ಜಗತ್ತಿನ ಅನೇಕ ಮುಖ್ಯ ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಬಳಸಿದ ಬಿಂಬಗಳ ತಾತ್ವಿಕ ಮತ್ತು ತಾಂತ್ರಿಕ ಸ್ವರೂಪಗಳನ್ನು ನಿರಚನೆ ಮಾಡುತ್ತಾರೆ. ಅವು ನಿರ್ದೇಶಕರ ಉದ್ದೇಶ ಮತ್ತು ಪರಿಪ್ರೇಕ್ಷ್ಯವನ್ನು ಪರಿಚಯಿಸುತ್ತವೆ. ಆದರೆ ಚಿತ್ರಗಳಲ್ಲಿ ಅವು ಯಶಸ್ವಿಯಾಗಿ ಬಳಕೆ ಆಗಿದೆಯೋ ಅಥವಾ ಅಯಶಸ್ವಿಯೋ ಎಂದು ಮೌಲ್ಯ ನಿರ್ಣಯವನ್ನು ಸ್ವತಃ ಆ ನಿರ್ದೇಶಕರುಗಳು ಮಾಡುವ ಗೋಜಿಗೆ ಹೋಗುವುದಿಲ್ಲ. ಅದನ್ನು ಓದುಗರ ವಿವೇಚನೆಗೆ ಬಿಡುತ್ತಾರೆ. ಇಷ್ಟೇ ಪ್ರಭಾವ ಬೀರಿದ ಇನ್ನೊಂದು ಮಾದರಿಯ ಪುಸ್ತಕಗಳೆಂದರೆ ಸಿನಿಮಾ ಲೋಕದ ಖ್ಯಾತ ವಿಮರ್ಶಕರು ಮತ್ತು ಮೀಮಾಂಸಕಾರರು ಸಿನಿಮಾ ಕೃತಿಗಳನ್ನು ನಿರಚನೆ ಮಾಡಿ, ಅವುಗಳಲ್ಲಿ ಅರ್ಥ ಮತ್ತು ಅವುಗಳಲ್ಲಿ ಅಡಕವಾದ ರಾಜಕೀಯ ಒಳನೋಟಗಳನ್ನು ವಿಶ್ಲೇಷಿಸಿದ ಸಿನಿಮಾ ಸಾಹಿತ್ಯ ಸರಣಿ. ಸಿನಿಮಾ ತಂತ್ರಗಳು ಕೇವಲ ಕತೆ ಸಾದರ ಪಡಿಸುವ ಸಾಧನವಲ್ಲ, ಅವೇ ಒಂದು “ಹೇಳಿಕೆ” ಎಂದು ತೋರಿಸಿಕೊಟ್ಟ ಈ ಪುಸ್ತಕ ಸರಣಿಗಳು ನನ್ನ ಸಿನಿಮಾ ಅಭಿರುಚಿಯನ್ನು ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ.
ಯೂರೋಪ್, ಅಮೆರಿಕಾ, ಜಪಾನ್ ದೇಶದ ಚಿತ್ರಗಳನ್ನು, ಅಲ್ಲಿಯ ನಿರ್ದೇಶಕರುಗಳ ಶೈಲಿಯನ್ನು ಈ ನಿಟ್ಟಿನಲ್ಲಿ ವ್ಯಾಖ್ಯಾನಿಸುವ 13 ಬರಹಗಳು ಸಿನಿಮಾ ಸಾಹಿತ್ಯದಲ್ಲಿ ಹೇರಳವಾಗಿ ಲಭ್ಯವಿದ್ದರೂ ಭಾರತೀಯ ಸಿನಿಮಾ ಸಾಹಿತ್ಯದಲ್ಲಿ ಅವುಗಳ ಕೊರತೆ ಇದೆ. “ಇಮೇಜಸ್ And ರಿಫ್ಲೆಕ್ಷನ್ಸ್” ಅಂತಹ ಒಂದು ಪ್ರಯತ್ನ. ಇಂತಹ ಬರಹಗಳು, ಚಿತ್ರಗಳು ಉಳಿದ ಭಾರತೀಯ ನಿರ್ದೇಶಕರ ಸಿನಿಮಾ ಕೃಷಿಯ ಬಗ್ಗೆಯೂ ಬಂದಿದ್ದರೆ ನಮ್ಮ ಸಿನಿಮಾ ವ್ಯವಸಾಯಿಗಳಿಗೆ ಅನುಕೂಲವಾಗುತ್ತಿತ್ತು ಎನ್ನುವ ನನ್ನ ಹಂಬಲಕ್ಕೆ ನೀರೆರೆದು ಬೆಳೆಸಿದ ಪೈಗಳು ಈ ಕೃತಿಯ ಹಿಂದಿನ ಪ್ರೇರಣೆಯಾಗಿದ್ದಾರೆ. ನನ್ನ ಚಿತ್ರಗಳನ್ನು ಕುರಿತ ಇಂತಹ ಪುಸ್ತಕದ ಅಗತ್ಯವಿದೆ ಎಂಬ ಯೋಚನೆಯನ್ನು ಮುಂದಿಟ್ಟವರೂ ಅವರೇ. ಅದರ ಅಗತ್ಯ ಇದೆಯೇ ಎಂದು ಸುಮಾರು 2-3 ವರ್ಷಗಳ ಕಾಲ ಅನುಮಾನಿಸಿ, ನಂತರ ಬರೆಯಲು ಕೂತೆವು. ನನ್ನೆಲ್ಲಾ ಸಿನಿಮಾಗಳನ್ನೂ ಹಲವು ಬಾರಿ ಒಟ್ಟಿಗೇ ನೋಡಿ ಅದರ ದೃಶ್ಯಸಂವಿಧಾನ ಕುರಿತು ಮತ್ತೆ ಮತ್ತೆ ಚರ್ಚಿಸಿ ಬರಹದ ರೂಪಕ್ಕೆ ಇಳಿಸಲು ಸುಮಾರು 8 ತಿಂಗಳಷ್ಟು ಕಾಲವನ್ನು ನಾವು ವ್ಯಯ ಮಾಡಬೇಕಾಯಿತು.
ದಶಕಗಳ ಹಿಂದೆ ಡಾ. ವಿಜಯಾ ಅವರು ತಾವು ಸಂಪಾದಿಸುತ್ತಿದ್ದ “ಸಂಕುಲ” ಪತ್ರಿಕೆಯಲ್ಲಿ ಇಂತಹ ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಕಾರ್ಯೋನ್ಮುಖರಾಗಿದ್ದ ಕೆಲವು ಮುಖ್ಯ ಸಿನಿಮಾ ಛಾಯಾಗ್ರಾಹಕರನ್ನು ಸಂದರ್ಶಿಸಿ ಅವರ ತಂತ್ರಗಾರಿಕೆಯ ಹಿಂದಿನ ತಾತ್ವಿಕ ನಿಲುವನ್ನು ಅರಿಯುವ ಪ್ರಯತ್ನ ಅದಾಗಿತ್ತು. ಛಾಯಾಗ್ರಾಹಕ ರಾಮಚಂದ್ರ ಐತಾಳ್ ಹಾಗೂ ನಾನು ಆ ಪ್ರಯತ್ನಕ್ಕೆ ಕೈ ಜೋಡಿಸಿದ್ದೆವು. ಇದೇ ರೀತಿಯ ಪ್ರಯತ್ನ ಉಳಿದ ತಂತ್ರಜ್ಞರ ಬಗ್ಗೆಯೂ ಮಾಡುವ ಆಲೋಚನೆ ಅವರಿಗಿತ್ತು. ಹಾಗಾಗಿದ್ದಲ್ಲಿ ಸಿನಿಮಾದ ತಂತ್ರಗಾರಿಕೆಯನ್ನು ದರ್ಶನದ ಭಾಗವಾಗಿ ನೋಡುವ ಒಂದು ಪರಂಪರೆ ಕನ್ನಡ ಸಿನಿ ಪತ್ರಿಕೋದ್ಯಮದಲ್ಲಿ ಬೆಳೆಯುತ್ತಿತ್ತೇನೋ! ಆ ಪತ್ರಿಕೆ ನಿಂತು ಹೋಗಿದ್ದರಿಂದ ಅವರ ಆ ಪ್ರಯತ್ನಕ್ಕೆ ಕಡಿವಾಣ ಬಿತ್ತು.
ಕನ್ನಡದಲ್ಲಿ ಸಿನಿಮಾ ವ್ಯವಸಾಯಿಗಳ ಬಗ್ಗೆ ಅನೇಕ ಪುಸ್ತಕಗಳು ಬಂದಿದ್ದರೂ, ಸಿನಿಮಾ ಕಲೆಯ ಬಗ್ಗೆ, ಅದು ಕಟ್ಟಿಕೊಡುವ ಸಾಮಾಜಿಕ, ಸಾಂಸ್ಕೃತಿಕ ಒಳನೋಟಗಳ ಬಗ್ಗೆ ಬಂದ ಪುಸ್ತಕಗಳು ವಿರಳ. ಅದರಲ್ಲೂ ಸಿನಿಮಾ ವ್ಯಾಕರಣದ ಹಿಂದಿರುವ ತಾತ್ವಿಕತೆಯ ಬಗ್ಗೆ ಬಂದ ಪುಸ್ತಕಗಳು ಬೆರಳೆಣಿಕೆಯಷ್ಟು. ಈ ಕಾರಣದಿಂದ ಕನ್ನಡದಲ್ಲಿ ಸಿನಿಮಾ ಪಾರಿಭಾಷಿಕ ಶಬ್ದಕೋಶ ರೂಪುಗೊಂಡಿಲ್ಲ. ಈ ಪುಸ್ತಕ ಬರೆಯುವಾಗ ನಾವು ಎದುರಿಸಿದ ಮುಖ್ಯ ಸಮಸ್ಯೆ ಅದು. ಹಾಗಾಗಿ ಕೆಲವು ಶಬ್ದಗಳನ್ನು ನಾವೇ ಟಂಕಿಸಿದ್ದೇವೆ. ಉದಾಹರಣೆಗೆ ಬಿಂಬ ಸಂಶ್ಲೇಷಣೆ, ಚಿತ್ರ ಸಂವಿಧಾನ, ಕನಿಷ್ಠತಾ ಶೈಲಿ, ತಂತ್ರ ಸೌಷ್ಠವ. ಅಂತಹ ಶಬ್ದಗಳನ್ನು ಟಂಕಿಸ ಬೇಕಾದಾಗಲೆಲ್ಲಾ ಯಾವ ಅರ್ಥದಲ್ಲಿ ಅವನ್ನು ಬಳಸುತ್ತಿದ್ದೇವೆ ಎಂಬುದನ್ನೂ ಆಯಾ ಲೇಖನಗಳಲ್ಲೇ ವಿವರಿಸಿದ್ದೇವೆ. ಇಲ್ಲಿ ನಾವು ಬಳಸಿದ ಒಂದು ಶಬ್ದದ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖೀಸ ಬೇಕಾಗಿದೆ. ಅದೇ ರಾಜಕೀಯತೆ.
ರಾಜಕೀಯ ಎನ್ನುವುದು ಸೂಕ್ತವಾದ ಶಬ್ದವಾದರೂ ಇವತ್ತು ಆ ಶಬ್ದವನ್ನು ಬಲ ಪಂಥೀಯ, ಎಡಪಂಥೀಯ ಎನ್ನುವ ಸೀಮಿತ ಅರ್ಥದಲ್ಲೇ ಸ್ವೀಕರಿಸುವ ಅಪಾಯ ಉಂಟಾಗಿದೆ. ಆದರೆ ಸೈದ್ಧಾಂತಿಕ ರಾಜಕಾರಣದ ಆಚೆಗಿರುವ ಕ್ರಿಯೆಗಳಲ್ಲೂ ಹಲವು ರೀತಿಯ ಶಕ್ತಿ ರಾಜಕಾರಣದ ಸ್ವರೂಪ ವ್ಯಕ್ತವಾಗುತ್ತಿರುತ್ತದೆ. ನಮ್ಮ ಪ್ರತಿಯೊಂದು ಕ್ರಿಯೆಯಲ್ಲೂ-ಅದು ಕೂರುವ ಕ್ರಿಯೆ, ಕಾಫಿ ಕುಡಿಯುವ ಕ್ರಿಯೆ ಇತ್ಯಾದಿ ಸಹಜ ಎಂದು ಭಾವಿಸುವ ಕ್ರಿಯೆಗಳಲ್ಲೂ ಒಂದು ರಾಜಕೀಯ ಹೇಳಿಕೆ ಇರುತ್ತದೆ. ಅದರಲ್ಲೂ ಬಿಂಬಗಳೇ ಪ್ರಧಾನ ಪಾತ್ರವಹಿಸುವ ಸಿನಿಮಾದಲ್ಲಿ ಆ ಅಂಶಗಳು ಮುಖ್ಯವಾಗುತ್ತವೆ. ಕಾಫಿ ಕುಡಿಯುವಂತಹ ಸರ್ವೇ ಸಾಧಾರಣವಾದ ಕ್ರಿಯೆಯನ್ನು ತೋರಿಸುವಾಗ, ಬಳಸುವ ಲೋಟ, ಕುಡಿಯುವ ಕ್ರಮ ಎಲ್ಲವೂ ಸಮುದಾಯದಲ್ಲಿ ಅಂತರ್ಗತವಾಗಿ ಇರುವ ತರತಮ ಸಂಬಂಧವನ್ನು ಸೂಚಿಸುತ್ತಿರುತ್ತದೆ. ಹಾಗಾಗಿ ಆ ಕ್ರಿಯೆಗಳ ಹಿಂದಿನ ರಾಜಕೀಯ ಗುಣ ಒಂದು ಉಪ ಪಠ್ಯವನ್ನು ಹೇಳುತ್ತಿರುತ್ತವೆ. ಇದನ್ನು ಸೂಚಿಸಲು ಒಂದು ಸೂಕ್ತ ಪದ ಬೇಕಿತ್ತು. ಹಾಗಾಗಿ ರಾಜಕೀಯ ಎನ್ನುವ ಬದಲು ರಾಜಕೀಯತೆ ಎಂದೇ ಬಳಸಿದ್ದೇವೆ.
ಪ್ರೊ. ಸತೀಶ್ ಬಹಾದ್ದೂರ್ ಅವರು ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನಗೆ ಅಧ್ಯಾಪಕರಾಗಿದ್ದರು. ಅವರು ಕಲಿಸುತ್ತಿದ್ದ ವಿಷಯಕ್ಕೆ Film Appreciation ಎಂದು ಕರೆಯಲಾಗುತ್ತಿತ್ತಾದರೂ ಅದನ್ನು Film Analysis ಎಂದು ಕರೆಯುವುದೇ ಸೂಕ್ತವಾಗಿತ್ತು. ಜಾಗತಿಕ ಹಾಗೂ ಭಾರತೀಯ ಚಿತ್ರಗಳಲ್ಲಿ ಶ್ರೇಷ್ಠವಾದವುಗಳನ್ನು ಆಯ್ದು ಅವುಗಳ ಸಂರಚನೆಯನ್ನು ಬಿಡಿಸಿಟ್ಟು, ಅನುಭವ ಹೇಗೆ ದಟ್ಟೆçಸುತ್ತದೆ ಎಂದು ತಿಳಿಸಿ ಹೇಳುತ್ತಿದ್ದರವರು. ಜಪಾನ್ ದೇಶದ ಅಕಿರಾ ಕುರೋಸಾವಾನ “ರಾಶೋಮನ್’ ಚಿತ್ರದ ರಾಶೋಮನ್ ಗೇಟ್ ದೃಶ್ಯಗಳಲ್ಲಿ ತ್ರಿಕೋನ ಸಂಯೋಜನೆ ಹಾಗೂ ಮರ ಕಡಿಯುವವನ ನಿವೇದನೆಯಲ್ಲಿ ಚಲನೆ ಇವೇ ಮುಖ್ಯಧಾತುವಾಗಿ ಅನುಭವವನ್ನು ಹರಳುಗಟ್ಟಿಸುತ್ತದೆ ಎನ್ನುವುದನ್ನು ಸೋದಾಹರಣವಾಗಿ ಮೂರು ತಿಂಗಳ ಕಾಲ ಶಾಟ್ ಬೈ ಶಾಟ್ ವಿಶ್ಲೇಷಿಸಿ ನಮಗೆ ಪರಿಚಯಿಸಿದವರು ಅವರು. ತಂತ್ರವೂ ಅಭಿವ್ಯಕ್ತಿಯ ಮುಖ್ಯ ಸಾಧನ ಎಂದು ನನಗೆ ಸ್ಪಷ್ಟವಾಗಿದ್ದು ಅಂತಹ ವಿಶ್ಲೇಷಣೆಗಳ ಮೂಲಕ. ಕಥಾವಸ್ತುವನ್ನು ವಿಶ್ಲೇಷಿಸುವವರು ಹಲವಾರು ಜನ ನಮಗೆ ಸಿಗುತ್ತಾರೆ. ಆದರೆ ಈ ರೀತಿಯಲ್ಲಿ ಸಿನಿಮಾದ ನುಡಿಗಟ್ಟುಗಳನ್ನು ವಿಶ್ಲೇಷಿಸುವವರು ಅಪರೂಪ. ಸಿನಿಮಾ ಮಾಧ್ಯಮದಲ್ಲಿ ಕೆಲಸ ಮಾಡುವವರಿಗಂತೂ ಅವರು ರೂಪಿಸಿದ ಈ ಅಧ್ಯಾಪನದ ಮಾದರಿ ಬಹಳ ಉಪಯುಕ್ತ.
1984ರಲ್ಲಿ “ಮಾಯಾ ಮಿರಿಗ’ ಎನ್ನುವ ಒರಿಯಾ ಸಿನಿಮಾದ ಮೂಲಕ ಸಿನಿಮಾ ಜಗತ್ತಿನ ಗಮನ ಸೆಳೆದ ನಿರ್ದೇಶಕ ನೀರದ ಮಹಾಪಾತ್ರಾ ಅವರು ನಮಗೆ ಸಿನಿಮಾ ಮೀಮಾಂಸೆಯ ಪಾಠ ಮಾಡುತ್ತಿದ್ದವರು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲೇ ತರಬೇತು ಪಡೆದು, ನಂತರ ಅಲ್ಲೇ ಅತಿಥಿ ಉಪನ್ಯಾಸಕರಾಗಿ ಸೇರಿಕೊಂಡ ಅವರು ಕಲಿಸಿದ ಸಿನಿಮಾ ಥಿಯರಿಗಳು ನಮಗಿದ್ದ ಸಿನಿಮಾದ ಕಲ್ಪನೆಗೆ ತಾತ್ವಿಕ ನೆಲೆಗಟ್ಟನ್ನು ಕಟ್ಟಿಕೊಟ್ಟವು. ಸಿನಿಮಾ ಕುರಿತ ಅವರ ಆಳವಾದ ಜ್ಞಾನ ಎಲ್ಲರ ಮೆಚ್ಚಿಗೆ ಗಳಿಸಿತ್ತು. ವಿಷಯ ಯಾವುದೇ ಇರಲಿ, ಅದರ ಪೂರ್ವಾಪರವನ್ನು ತಿಳಿಸಿ ವಿಷಯವನ್ನು ಏಟlಜಿsಠಿಜಿc ಆಗಿ ನೋಡಲು ಹಚ್ಚುತ್ತಿದ್ದ ಅವರ ಬೋಧನಕ್ರಮ ನನ್ನ ಅರಿವನ್ನು ವಿಸ್ತಾರಗೊಳಿಸಿದ್ದನ್ನು ಅಲ್ಲಗಳೆಯುವಂತಿಲ್ಲ.
ಎಸ್.ರಾಮಚಂದ್ರ ಐತಾಳ್ ನನ್ನ 8 ಕಥಾ ಚಿತ್ರ ಹಾಗೂ ಕೆಲವು ಸಾಕ್ಷ್ಯಚಿತ್ರಗಳ ಛಾಯಾಗ್ರಾಹಕರು. ದೃಶ್ಯಸೌಂದರ್ಯ, ಸೌಷ್ಠವಕ್ಕಿಂತ ಸತ್ಯಕ್ಕೇ ಹೆಚ್ಚು ಮಹತ್ವ ಕೊಡುತ್ತಿದ್ದ ಅವರ ವಿಷುಯಲ್ ಫಿಲಾಸಫಿಯನ್ನು ನಾನು ಬಹಳವಾಗಿ ಮೆಚ್ಚುತ್ತಿದ್ದೆ. ಅವರು ಸೆರೆ ಹಿಡಿಯುತ್ತಿದ್ದ ಯಾವುದೇ ಅಲಂಕಾರವಿಲ್ಲದ ನಿರಾಭರಣ ಬಿಂಬಗಳಲ್ಲಿರುತ್ತಿದ್ದ ಜೀವಂತಿಕೆ ಸ್ತುತ್ಯರ್ಹ. ಅವರ ಛಾಯಾಗ್ರಹಣವಿರುತ್ತಿದ್ದ ಚಿತ್ರಗಳು ಆತ್ಮೀಯ, ಸಂಭವನೀಯ ಎನ್ನಿಸಲು ಅವರು ಬಿಂಬಗಳಿಗೆ ತರುತ್ತಿದ್ದ ಪಾರದರ್ಶಕ ಗುಣವೂ ಕಾರಣವಾಗಿತ್ತು. ಸಿನಿಮಾ ತಂತ್ರಗಳನ್ನು ಮಣಿಸಿ, ಅನುಭವದ ವಾಹಕವಾಗುವಂತೆ ಮಾಡಬಲ್ಲ ವಿಶೇಷ ಗುಣ ಅವರಲ್ಲಿತ್ತು. ನಮ್ಮಿಬ್ಬರ ನಡುವಿನ ವಿಷಯಗಳ ವಿನಿಮಯ ನಮ್ಮಿಬ್ಬರ ಸಿನಿಮಾ ಕಾರ್ಯ ಕೌಶಲ್ಯವನ್ನೂ ಬೆಳೆಸಿತು.
ಈ ಪುಸ್ತಕವನ್ನು ನನ್ನ ಚಿತ್ರಯಾನದಲ್ಲಿ ಮಹತ್ತರ ಪ್ರಭಾವ ಬೀರಿದ ಈ ಮೂವರಿಗೆ ಅರ್ಪಿಸಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.