ಕಾಯಕ ತತ್ತ್ವದ ಛಲ, ಸ್ವಾವಲಂಬನೆಗೆ ಬಲ
Team Udayavani, Jul 27, 2020, 8:42 AM IST
ವಿಶ್ವ ಪ್ರವಾಸಿ ಭೂಪಟದಲ್ಲಿ ಅಗ್ರಸ್ಥಾನ ಪಡೆಯುವಷ್ಟು ಪ್ರವಾಸಿ ಶ್ರೀಮಂತಿಕೆ ನಮ್ಮಲ್ಲಿದೆ. ನಮ್ಮ ಪಾರಂಪರಿಕ ಉತ್ಪನ್ನಗಳು, ಸ್ಥಾನಿಕ ಕೈಗಾರಿಕೆಗಳು ನಾಡಿನ
ಕುಶಲತೆ ಮತ್ತು ಶ್ರೇಷ್ಠತೆಯನ್ನು ಎತ್ತಿ ಹಿಡಿದಿವೆ. ಇದಕ್ಕೆಲ್ಲ ಪೂರಕವೆನಿಸುವಷ್ಟು ಅತ್ಯುತ್ತಮ ಮಾನವ ಸಂಪನ್ಮೂಲ ನಮ್ಮಲ್ಲಿದೆ. ನಮ್ಮ ಸಂಪನ್ಮೂಲ ಹಾಗೂ ಹಿರಿಮೆಗಳನ್ನು ಒಟ್ಟುಗೂಡಿಸಿ ನಾಡು ಕಟ್ಟಿ ದೇಶ ಬಲಿಷ್ಠಗೊಳಿಸುವ ಕೈಂಕರ್ಯ ತೋರುವ ಯುವ ಸಮೂಹವನ್ನು ಉತ್ತೇಜಿಸಲು ನಮ್ಮಲ್ಲಿ ವಿಪುಲ ಅವಕಾಶಗಳಿವೆ.
ದೇಶ ಕಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ “ಆತ್ಮನಿರ್ಭರ ಭಾರತ’ದ ಕಲ್ಪನೆಗೆ ಕರ್ನಾಟಕವೇ ಮೂಲಪ್ರೇರಣೆ ಇರಬಹುದು ಎಂಬುದು ನನ್ನ ಅನಿಸಿಕೆ. 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ತತ್ವಾದರ್ಶಗಳು ಹಾಗೂ ಕಾಯಕತತ್ವ ಮೋದಿಯವರ ಮೇಲೆ ಗಾಢವಾಗಿ ಪರಿಣಾಮ ಬೀರಿರಬೇಕು. ಆ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಪ್ರಧಾನಿಗಳು ಮಹತ್ತರ ಸಂದರ್ಭಗಳಲ್ಲೆಲ್ಲಾ ಉಲ್ಲೇಖೀಸುತ್ತಲೇ ಇರುತ್ತಾರೆ.
ಚೀನ ನಮಗೆ ಸದ್ಯದ ಮಟ್ಟಿಗಂತೂ ಶತ್ರು ರಾಷ್ಟ್ರವೇ ಸರಿ. ಒಂದು ಕಾಲದಲ್ಲಿ ನಮ್ಮ ಭಾರತಕ್ಕಿಂತಲೂ ಬಡತನ, ನಿರುದ್ಯೋಗ ಸಮಸ್ಯೆಗಳಿಂದ ನಲುಗುತ್ತಿದ್ದ ಅದು, ಇಂದು ಜಗತ್ತನೇ ತಲ್ಲಣಗೊಳಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದರೆ, ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಔದ್ಯೋಗಿಕ ಅವಕಾಶಗಳನ್ನೆಲ್ಲ ಕಬಳಿಸಿ ನಿಂತು ತನ್ನ ಉತ್ಪನ್ನ ಕ್ಷೇತ್ರವನ್ನು ಬಹುವಾಗಿ ವಿಸ್ತರಿಸಿಕೊಂಡಿದೆ. ಗೊತ್ತೋ ಗೊತ್ತಿ ಲ್ಲದೆಯೋ ಚೀನ “ಕಾಯಕ ತತ್ವ’ವನ್ನು ಪರಿಪಾಲಿ ಸಿದ್ದು, ಅದರ ಯಶಸ್ಸಿನ ಗುಟ್ಟು ಎಂದು ನಾವು ಒಪ್ಪಿಕೊಳ್ಳ ಲೇಬೇಕಿದೆ. ತನ್ನ ಬಹುದೊಡ್ಡ ಮಾನವ ಸಂಪನ್ಮೂಲ ವನ್ನೇ ಆ ರಾಷ್ಟ್ರದ ಸಂಪನ್ಮೂಲವಾಗಿ ಪರಿವರ್ತಿ ಸಿಕೊಂಡ ಚೀನ ಪ್ರತಿ ಕುಟುಂಬವನ್ನೂ ಕೈಗಾರಿಕಾ ಘಟಕ ವನ್ನಾಗಿ ಸಜ್ಜುಗೊಳಿಸಿತು. ಅಲ್ಲಿನ ಪ್ರತಿಯೊಬ್ಬ ಪ್ರಜೆಯನ್ನೂ ಸಂಪನ್ಮೂಲ ಶಕ್ತಿಯಾಗಿ ರೂಪುಗೊಳಿ ಸಿತು.
ಇದರ ಪರಿಣಾಮವೇ ಅದರೊಂದಿಗಿನ ಉದ್ಯಮ ಪೈಪೋಟಿಯಲ್ಲಿ ಅನೇಕ ರಾಷ್ಟ್ರಗಳು ಸೋತು ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು “ಆತ್ಮನಿರ್ಭರ ಭಾರತ’ಕ್ಕಾಗಿ ಕರ್ನಾಟಕದ ಕಾಯಕತತ್ವ ಅನುಸರಿಸು ವುದರ ಮಹತ್ವ ಸಾರಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಇರುವ ಸಂಪದ್ಭರಿತ ಸಂಪ ನ್ಮೂಲವನ್ನು ಬಳಸಿಕೊಂಡು ಮಹತ್ವದ ಕೊಡುಗೆ ನೀಡುವ ಅಪೂರ್ವ ಅವಕಾಶವನ್ನು ನಮ್ಮ ರಾಜ್ಯ ಹೊಂದಿದೆ. ಇದಕ್ಕೆ ಬೇಕಾಗಿರುವುದು ಇಚ್ಛಾಶಕ್ತಿ, ಸಮರ್ಪಣ ಮನೋಭಾವ ಮಾತ್ರ.
ಕರ್ನಾಟಕ ಭೌಗೋಳಿಕವಾಗಿ ಸಕಲ ಸಮೃದ್ಧಿ ಹೊಂದಿರುವ ರಾಜ್ಯ. ಜಲ ಸಂಪತ್ತು, ವನ ಸಂಪತ್ತು, ಸಸ್ಯ ಸಂಪತ್ತು, ಧಾನ್ಯ ಸಂಪತ್ತು, ಖನಿಜ ಸಂಪತ್ತು ನಮ್ಮ ನಾಡಿನ ಶ್ರೀಮಂತಿಕೆಯ ಪ್ರತೀಕವೆನಿಸಿದರೆ ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ರಾಜ್ಯದ ಹಿರಿಮೆಯ ಸಾಕ್ಷಿಗಳಾಗಿವೆ. ಇದರ ನಡುವೆ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ರಾಜ್ಯ ವಿಶ್ವವನ್ನೇ ತನ್ನತ್ತ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ವಿಶ್ವ ಪ್ರವಾಸಿ ಭೂಪಟದಲ್ಲಿ ಅಗ್ರಸ್ಥಾನ ಪಡೆಯುವಷ್ಟು ಪ್ರವಾಸಿ ಶ್ರೀಮಂತಿಕೆ ನಮ್ಮಲ್ಲಿದೆ. ನಮ್ಮ ಪಾರಂಪರಿಕ ಉತ್ಪನ್ನಗಳು, ಸ್ಥಾನಿಕ ಕೈಗಾರಿಕೆಗಳು ನಾಡಿನ ಕೌಶಲ್ಯತೆ ಮತ್ತು ಶ್ರೇಷ್ಠತೆಯನ್ನು ಎತ್ತಿ ಹಿಡಿದಿವೆ. ಇದಕ್ಕೆಲ್ಲಾ ಪೂರಕವೆನಿಸುವಷ್ಟು ಅತ್ಯುತ್ತಮ ಮಾನವ ಸಂಪನ್ಮೂಲ ನಮ್ಮಲ್ಲಿದೆ. ನಮ್ಮ ಸಂಪನ್ಮೂಲ ಹಾಗೂ ಹಿರಿಮೆಗಳನ್ನು ಒಟ್ಟುಗೂಡಿಸಿ ನಾಡು ಕಟ್ಟಿ ದೇಶ ಬಲಿಷ್ಠಗೊಳಿಸುವ ಕೈಂಕರ್ಯ ತೋರುವ ಯುವ ಸಮೂಹವನ್ನು ಉತ್ತೇಜಿಸಲು ನಮ್ಮಲ್ಲಿ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕೇಂದ್ರದ ಅನೇಕ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಮೂಲಕ ಕೌಶಲ್ಯ ಪೂರ್ಣ ಕರ್ನಾಟಕವನ್ನು ಕಟ್ಟಿ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಸಂಕಲ್ಪ ತೊಡಬೇಕಿದೆ.
ನಮ್ಮ ಪಾರಂಪರಿಕ ಬೆಳೆಗಳು ವಿಶ್ವದಲ್ಲೇ ಪ್ರಸಿದ್ಧಿ. ಅದು ನಂಜನಗೂಡಿನ ರಸಬಾಳೆಯಾಗಿರಬಹುದು, ದೇವನಹಳ್ಳಿಯ ಚಕ್ಕೋತಾ ಆಗಿರಬಹುದು, ಬ್ಯಾಡಗಿ ಮೆಣಸಿನಕಾಯಿಯೂ ಆಗಿರಬಹುದು ಅಥವಾ ಹೇರಳವಾಗಿ ಬೆಳೆಯುವ ಕಬ್ಬು, ಭತ್ತ, ರಾಗಿ, ಜೋಳ ಮುಂತಾದ ಸಾಂಪ್ರದಾಯಿಕ ಬೆಳೆಗಳೇ ಆಗಿರಬಹುದು.
ಇದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರಕಾರ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಭೂಮಿ ಕೊಳ್ಳುವ ವಿಧಾನ ಸರಳೀಕರಣ ಗೊಳಿಸಬೇಕೆಂಬ ನಿಟ್ಟಿನಲ್ಲಿ ಇತ್ತೀಚೆಗೆ ಭೂಸುಧಾರಣ ಕಾಯ್ದೆಗೆ ತಿದ್ದುಪಡಿ ತರುವ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ಅಂತೆಯೇ ರೈತ ಬೆಳೆದ ಬೆಳೆಗೆ ಪೈಪೋಟಿಯ ಬೆಲೆ ದೊರಕುವಂತಾಗಬೇಕು ಎಂಬ ಮಹದುದ್ದೇಶದಿಂದ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತರಲಾಗಿದೆ. ನಮ್ಮ ಯುವ ಜನರು ಕೃಷಿ ಕ್ಷೇತ್ರವನ್ನು ಒಂದು ಕೈಗಾರಿಕೆ ಎಂದೇ ಪರಿಗಣಿಸಿ ವ್ಯವಸಾಯ ವಲಯದತ್ತ ಆಸಕ್ತಿ ತೋರಿದರೆ ಒಂದು “ಬೃಹತ್ ಕೃಷಿ ಕ್ರಾಂತಿ’ಗೆ ಮುನ್ನುಡಿ ಬರೆಯಬಹುದಾಗಿದೆ. ಇದಕ್ಕೆ ಸರಕಾರ ಕೂಡ ಪೂರಕ ಬೆಂಬಲ ಹಾಗೂ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಲು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಬಹುದಾಗಿದೆ.
ಕೃಷಿ ಉತ್ಪನ್ನಗಳ ಜತೆ ಜತೆಗೇ ಕೃಷಿ ಹಾಗೂ ಅರಣ್ಯ ಉತ್ಪನ್ನಗಳ ಆಧಾರಿತ ಕೈಗಾರಿಕೆಗಳಿಗೂ ನಮ್ಮಲ್ಲಿ ವಿಶೇಷ ಅವಕಾಶಗಳಿವೆ. ನಮ್ಮ ಉತ್ಪನ್ನಗಳಿಗೆ ವಿಶ್ವವ್ಯಾಪಿ ಮಾರುಕಟ್ಟೆ ವಿಸ್ತರಿಸಲು ಅವಕಾಶವಿದೆ. ಕರ್ನಾಟಕದ ರೇಷ್ಮೆ ಉತ್ಪನ್ನಗಳಿಗೆ ಸಾಂಸ್ಕೃತಿಕ ಹೆಗ್ಗಳಿಕೆ ಹಾಗೂ ವಿಶ್ವ ಮಾನ್ಯತೆಯೂ ಇದೆ. ಅಂತೆಯೇ ನಮ್ಮ ನೆಲದಲ್ಲಿ ಬೆಳೆಯುವ ಹತ್ತಿ ಉತ್ಕೃಷ್ಟತೆಗೆ ಹೆಸರಾಗಿದೆ. ಉತ್ತರ ಕರ್ನಾಟಕದ ನೇಕಾರರಿಗೆ ವಿಶೇಷ ಒತ್ತು ನೀಡಿದರೆ, ಪ್ರವಾಸೋದ್ಯಮದಲ್ಲಿ ಬಹುದೊಡ್ಡ ಉತ್ಪನ್ನ ಕ್ರಾಂತಿಯನ್ನೇ ಸೃಷ್ಟಿಸುವ ಅವಕಾಶಗಳಿವೆ. ಇದರಿಂದ ಉತ್ತರ ಕರ್ನಾಟಕದ “ಗುಳೆ’ ಹೋಗುವ ಜನರನ್ನು ಹಿಡಿದಿಟ್ಟುಕೊಂಡು ಉದ್ಯೋಗಾವಕಾಶ ಕಲ್ಪಿಸಬಹುದಾಗಿದೆ. ಗ್ರಾಮೀಣ ಯುವ ಜನರನ್ನು ಸ್ವಾವಲಂಬಿ ಉದ್ಯಮಿಗಳನ್ನಾಗಿಯೂ ರೂಪಿಸಬಹು ದಾಗಿದೆ. “ಭಾರತದ ರಾಷ್ಟ್ರ ಧ್ವಜ’ ತಯಾರಿಸುವ ಅಧಿಕೃತ ಖಾದಿ ಕೇಂದ್ರಗಳು ನಮ್ಮ ಧಾರವಾಡದ ಗದಗ ಹಾಗೂ ಬೆಂಗೇರಿಗಳಲ್ಲಿರುವುದು ಕನ್ನಡಿಗರ ಹೆಮ್ಮೆ ಹಾಗೂ ಕರ್ನಾಟಕದ ವಿಶೇಷವಾಗಿದೆ. ಅಂತೆಯೇ ಅರಣ್ಯ ಉತ್ಪನ್ನಗಳನ್ನಾಧಾರಿತ ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ನಮ್ಮ ಸಾಂಪ್ರದಾಯಿಕ ಹಾಗೂ ಕುಲ ಕಸುಬು ಆಧಾರಿತ ಬಿದಿರು ಉತ್ಪನ್ನಗಳು, ಮಣ್ಣಿನ ಪದಾರ್ಥಗಳು, ಕಲಾಕೃತಿಗಳು, ಮರದ ವಸ್ತುಗಳು ಹಾಗೂ ಕೆತ್ತನೆಗಳು, ಶಿಲ್ಪಕಲೆಗಳು, ಕಲಾಕೃತಿಗಳು ನಮ್ಮ ರಾಜ್ಯದ ಸಾಂಸ್ಕೃತಿಕ ಹಾಗೂ ಔದ್ಯೋಗಿಕ ಅವಕಾಶಗಳನ್ನು ಕೈ ಬೀಸಿ ಕರೆಯುತ್ತಿವೆ. ಕೊಡಗು ಹಾಗೂ ಚಿಕ್ಕಮಗಳೂರು ಕಾಫಿ, ಕಿತ್ತಳೆ, ಮೆಣಸು ಇತ್ಯಾದಿಗಳು ರಫ್ತು ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿವೆ.
ಕಾಫಿ ಹಾಗೂ ರಾಗಿ ಬೆಳೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕಬ್ಬು ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಂಬಾಕು ಬೆಳೆಯಲ್ಲೂ ಕರ್ನಾಟಕ ಗಮನ ಸೆಳೆದಿದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಸೇರಿದಂತೆ, ಸಮುದ್ರ ಉತ್ಪನ್ನಗಳನ್ನು ಆಧರಿಸಿದ ವಹಿವಾಟುಗಳಿಗೆ ವಿಶೇಷ ಗಮನ ನೀಡುವ ಪ್ರಯತ್ನ ಸಾಗಿದೆ.
ನಮ್ಮ ರಾಜ್ಯ ರಾಜ ಮಹಾರಾಜರುಗಳ ಕಾಲದಿಂದ ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ತಂತ್ರಜ್ಞಾನ ಹಾಗೂ ಕೈಗಾರಿಕೆಗೆ ಗಮನಾರ್ಹ ಉತ್ತೇಜನ ದೊರಕುತ್ತಿದೆ. ಈ ನಿಟ್ಟಿನಲ್ಲಿ ವಿಶ್ವವೇ ತನ್ನತ್ತ ಸೆಳೆದುಕೊಳ್ಳುವಷ್ಟು ನಮ್ಮ ತಂತ್ರಜ್ಞಾನ ಹಾಗೂ ಕೈಗಾರಿಕೆಗಳು ಹೆಸರು ಮಾಡಿವೆ. ಗ್ರಾಮೀಣ ಕೈಗಾರಿಕೆ, ಗುಡಿ ಕೈಗಾರಿಕೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲೂ ನಮ್ಮ ಸಾಧನೆ ಕಡಿಮೆಯೇನೂ ಅಲ್ಲ. ಆದರೆ ಸೂಕ್ತ ಉತ್ತೇಜನ, ಮಾರುಕಟ್ಟೆಯ ಕೊರತೆ ನಮ್ಮ ಹಿನ್ನಡೆಗೆ ಕಾರಣವಾಗಿ ರಬಹುದು. ಆದರೆ ಮೋದಿ ಅವರ ಸರಕಾರ ಈ ನಿಟ್ಟಿನಲ್ಲಿ “ಮೇಕ್ ಇನ್ ಇಂಡಿಯಾ, ಕೌಶಲ ಭಾರತ’ ಹಾಗೂ ಮುದ್ರಾ ಯೋಜನೆಗಳ ಮೂಲಕ ಆರ್ಥಿಕ ನೆರವಿನಿಂದ ಹಿಡಿದು ಮಾರುಕಟ್ಟೆ ವಿಸ್ತರಿಸಿ ಕೊಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿಕೊಡುತ್ತಿದೆ. ಪ್ರಧಾನಿಯವರು ಕೋವಿಡ್ ಸಂಕಷ್ಟದಲ್ಲಿ ಘೋಷಿಸಲಾದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್, ಉತ್ಪನ್ನ ಹಾಗೂ ಸೇವಾ ಕ್ಷೇತ್ರಗಳಿಗೆ ನಿರೀಕ್ಷೆ ಮೀರಿ ಬಲ ತಂದುಕೊಡಲು ಕಾರಣವಾಗಿದೆ. ಮೊನ್ನೆಯಷ್ಟೇ ಕರ್ನಾಟಕದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ. 70ರಷ್ಟು ಆದ್ಯತೆ ನೀಡಬೇಕೆಂಬ ನೀತಿ ರೂಪಿಸಲು ಸರಕಾರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. 20 ಲಕ್ಷ ಉದ್ಯೋಗ ಸೃಷ್ಟಿ ಹಾಗೂ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗಾಗಿ ವ್ಯವಸ್ಥಿತ ಗುರಿ ಹೊಂದಲಾಗಿದೆ. ಕಾರ್ಮಿಕ ಕಾಯ್ದೆಗೆ ಸುಧಾರಿತ ತಿದ್ದುಪಡಿ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ನಾಡಿನ ನೈಸರ್ಗಿಕ ಸಂಪತ್ತು ಹಾಗೂ ಇತರ ಸಂಪನ್ಮೂಲಗಳನ್ನು ಸಮನ್ವಯದಿಂದ ಕ್ರೋಡೀಕರಿಸಿ ಕೊಂಡು ಸ್ವಾಭಿಮಾನಿ ಹಾಗೂ ಸಮೃದ್ಧ ಕರ್ನಾಟಕ ಕಟ್ಟಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಸರಕಾರ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದೆ.
ಕೇವಲ ಸರಕಾರದ ಪ್ರಯತ್ನ, ಆದರ್ಶಗಳಿಂದಷ್ಟೇ ನಾವು ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಇದಕ್ಕೆ ಜನರ ಇಚ್ಛಾಶಕ್ತಿಯ ಸಹಭಾಗಿತ್ವ ಬೇಕಾಗಿದೆ. ಅದರಲ್ಲೂ ಯುವ ಜನರು ಕೇವಲ ಅರ್ಜಿಗಳನ್ನಿಡಿದು ಉದ್ಯೋಗ ಅರಸುವುದನ್ನೇ ಉದ್ಯೋಗ ಮಾಡಿಕೊಳ್ಳದೆ ಉದ್ಯೋಗದಾತರೇ ನಾವಾಗ ಬಾರದೇಕೆ? ಎಂಬ ಕನಸು ಕಾಣಬೇಕಿದೆ.
ಆ ನಿಟ್ಟಿನಲ್ಲಿ ಕನಸು ನನಸಾಗಿಸಿಕೊಳ್ಳುವ ಅವಕಾಶಗಳ ಮಹಾಪೂರವೇ ತಮ್ಮ ಮುಂದಿರುವುದನ್ನು ತೆರೆದ ಮನಸ್ಸಿನಿಂದ ನೋಡಬೇಕಿದೆ. ಉದ್ಯೋಗದಾತ ಸಂಸ್ಥೆಗಳು ಉದ್ಯೋಗಸ್ಥರ ನೈಪುಣ್ಯತೆಯ ಮೇಲೆ ಅವಲಂಬಿತವಾಗುವಷ್ಟರ ಮಟ್ಟಿಗೆ ತಮ್ಮ ಕೌಶಲ್ಯತೆಯ ಜ್ಞಾನ ಹೆಚ್ಚಿಸಿಕೊಳ್ಳುವುದರತ್ತ ಯುವ ಸಮೂಹ ಗಮನ ಹರಿಸಬೇಕಿದೆ. ಸಾಧಿಸುವುದಕ್ಕೆ ಸಾಗರದಷ್ಟು ಅವಕಾಶಗಳಿವೆ. ಅವಕಾಶಗಳನ್ನು ಬಳಸಿಕೊಳ್ಳುವ ಅರ್ಪಣಾ ಮನೋಭಾವದ ಬದ್ಧತೆಯ ಕ್ರಿಯೆ ಆರಂಭವಾದರೆ ಮಾತ್ರ ನಾವು “ಸ್ವಾವಲಂಬಿ ಭಾರತದ ನಿರ್ಮಾಣ’ಕ್ಕೆ ಕೊಡುಗೆ ನೀಡುವ ನಾಡ ಕಣ್ಮಣಿಗಳಾಗಬಹುದು. ರಾಷ್ಟ್ರ ಭಕ್ತರೆಂದು ಹೆಮ್ಮೆಯಿಂದ ಬೀಗಬಹುದು.
ವಿಜಯೇಂದ್ರ ಯಡಿಯೂರಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.