ಕರ್ನಾಟಕ ನಾಯಕರಿಗೆ ಕೇಜ್ರಿವಾಲ್ ಗಾಳ; ಮೂರೂ ಪಕ್ಷಗಳಲ್ಲಿ ಆತಂಕ
ಕೇಜ್ರಿವಾಲ್ ಆಹ್ವಾನಕ್ಕೆ ಕೆಲವು ನಾಯಕರು ಸಮಯ ಕೇಳಿದ್ದು, ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವ ಭರವಸೆ
Team Udayavani, Apr 22, 2022, 12:12 PM IST
ಬೆಂಗಳೂರು: ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರಾಜಕೀಯ ಅಸ್ತಿತ್ವಕ್ಕೆ ಅಡಿಪಾಯ ಹಾಕಲು ಮುಂದಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರನ್ನು ಸಂಪರ್ಕ ಮಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಉತ್ತಮ ಹಿನ್ನೆಲೆ ಹಾಗೂ ಸಾರ್ವಜನಿಕವಾಗಿ ಒಳ್ಳೆಯ ವರ್ಚಸ್ಸು ಮತ್ತು ಹೆಸರು ಇಟ್ಟುಕೊಂಡಿರುವ 50 ರಿಂದ 75 ನಾಯಕರ ಪಟ್ಟಿ ಮಾಡಿಕೊಂಡಿರುವ ಕೇಜ್ರಿವಾಲ್ ಅವರ ಜತೆ ಸಂಪರ್ಕದಲ್ಲಿದ್ದಾರೆ.
ಬುಧವಾರ ರಾತ್ರಿ ದೂರವಾಣಿ ಮೂಲಕ ಕೆಲವು ನಾಯಕರ ಜತೆ ಸಮಾಲೋಚನೆ ಸಹ ನಡೆಸಿದ್ದು, ದೆಹಲಿ, ಪಂಜಾಬ್ ನಂತರ ಹರಿಯಾಣ ಮತ್ತು ಗುಜರಾತ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕರ್ನಾಟಕದಲ್ಲಿಯೂ ಪಕ್ಷ ಸಂಘ ಟಿಸಲು ನಿರ್ಧರಿಸಲಾಗಿದೆ. ಹೀಗಾಗಿ, ನಮ್ಮ ಜತೆ ಕೈಜೋಡಿಸಿ ಎಂದು ಆಹ್ವಾನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
2023ರ ವಿಧಾನಸಭೆ ಚುನಾವಣೆ ನಮ್ಮ ಪಾಲಿಗೆ ಟ್ರಯಲ್ ಆಗಬಹುದು. ಆದರೆ, 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಹೋರಾಟ ನಡೆಸುವ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ನಾಯಕರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ. ಕೇಜ್ರಿವಾಲ್ ಆಹ್ವಾನಕ್ಕೆ ಕೆಲವು ನಾಯಕರು ಸಮಯ ಕೇಳಿದ್ದು, ಮತ್ತೆ ಹಲವು ನಾಯಕರು ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಅಥವಾ ಅಧಿಕಾರ ಸಿಗಬಹುದು ಎಂಬ ಕಾರಣಕ್ಕೆ ಬರುವವರಿಗಿಂತ ಹೆಚ್ಚಾಗಿ ಜನಪರ ಹೋರಾಟ ಹಾಗೂ ದೀರ್ಘಕಾಲದ ಅನುಭವ ಮತ್ತು ಉತ್ತಮ ಹೆಸರು ಇರುವ ನಾಯಕರನ್ನು ಹುಡುಕಿ ಪಕ್ಷಕ್ಕೆ ಕರೆತರಲು ಪ್ರಯತ್ನಿಸಿ ಎಂದು ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ. ಈ ಮಧ್ಯೆ, ಕೇಜ್ರಿವಾಲ್ ಅವರನ್ನು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸಹ ಸಂಪರ್ಕಿಸಿ ಸ್ವಯಂ ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಮೊದಲು ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ನಾಯಕರು ಪಂಚರಾಜ್ಯಗಳ ಚುನಾವಣೆ ನಂತರ ಇದೀಗ ಆಮ್ ಆದ್ಮಿ ಪಕ್ಷದತ್ತ ಒಲವು ಹೊಂದಿದ್ದಾರೆಂದು ಹೇಳಲಾಗಿದ್ದು,ಈಗಾಗಲೇ ಕಾಂಗ್ರೆಸ್‌ನ ಎಸ್.ಆರ್ .ಪಾಟೀಲ್, ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಸೇರಿ ಹಲವು ನಾಯಕರ ಜತೆ ಆಪ್ ಮುಖಂಡರು ಮಾತನಾಡಿದ್ದು ಕೇಜ್ರಿವಾಲ್ ಸಹ ಅವರ ಜತೆ ಚರ್ಚಿಸಿದ್ದಾರೆಂದು ಹೇಳಲಾಗಿದೆ. ಕಾಂಗ್ರೆಸ್‌ನ ಬಿ.ಆರ್.ಪಾಟೀಲ್, ಜೆಡಿಎಸ್ ನ ವೈಎಸ್‌ವಿ ದತ್ತಾ, ಶಿವಲಿಂಗೇಗೌಡ. ಬಿಜೆಪಿಯ ಎಚ್ .ಸಿ.ವಿಜಯಶಂಕರ್ ಅವರನ್ನು ಸೆಳೆಯುವ ಬಗ್ಗೆಯೂ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಮೂರೂ ಪಕ್ಷಗಳಲ್ಲಿ ಆತಂಕ
ಆಮ್ ಆದ್ಮಿ ಪಕ್ಷದ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲೂ ಕುತೂಹಲವಿದ್ದು ರಾಜ್ಯದಲ್ಲಿ ಆ ಪಕ್ಷಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ದೊರೆಯಬಹುದು, ಅದರಿಂದ ನಮಗಾಗಬಹುದಾದ ಲಾಭ-ನಷ್ಟ ಏನು ಎಂಬ ಬಗ್ಗೆಯೂ ಮೂರೂ ಪಕ್ಷಗಳು ತಲೆಕೆಡಿಸಿಕೊಂಡಿವೆ. ರೈತ ಸಂಘಟನೆಗಳ ಜತೆಗೂಡಿ ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸುವುದಾಗಿ ಘೊಷಣೆ ಮಾಡಿರುವುದರಿಂದ ಸಹಜವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಆತಂಕ ಶುರುವಾಗಿದೆ.
ಆಪ್ ಸೇರಿದ ರೈತ ಮುಖಂಡರು
ಬೆಂಗಳೂರು: ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ನೂರಾರು ರೈತ ಮುಖಂಡರು ಗುರುವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, 1983ರಲ್ಲಿ ರೈತರನ್ನು ಗುಂಡುಹಾಕಿ ಕೊಂದರೆ, ಇಂದು ಆಳುತ್ತಿರುವ ಪಕ್ಷಗಳು ಗುಂಡುಹಾಕದೆ ರೈತರನ್ನು ಕೊಲ್ಲುತ್ತಿವೆ. ಇತಿಹಾಸ ಮರುಕಳಿಸುವ ಕಾಲ ಸನ್ನಿಹಿತವಾಗಿದ್ದು, 2023ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ರೈತರು ಕರ್ನಾಟಕ ವಿಧಾನಸಭೆ ಪ್ರವೇಶಿಸಲಿದ್ದಾರೆ’ ಎಂದು ತಿಳಿಸಿದರು.
ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, ಅಧಿಕಾರಿಗಳನ್ನು ಭ್ರಷ್ಟಾಚಾರ ಮತ್ತು ದುಷ್ಟರನ್ನು ಮಾಡಿದ್ದೇ ರಾಜಕೀಯ ಪಕ್ಷಗಳು. ನಾಯಕರ
ಶಿಷ್ಯರನ್ನೂ ಡಕಾಯಿತರನ್ನಾಗಿ ಮಾಡಿವೆ. ಸರ್ಕಾರದಲ್ಲಿ ಹಣ ತುಂಬಿ ತುಳುಕುತ್ತಿದೆ. ಆದರೆ, ಭ್ರಷ್ಟಾಚಾರದಿಂದ ಅದು ಕೆಲವರಿಗಷ್ಟೇ ಸೀಮಿತವಾಗುತ್ತಿದೆ. ದೆಹಲಿಯಲ್ಲಿ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ.
ಆದಾಗ್ಯೂ ನಯಾಪೈಸೆ ಸಾಲ ಮಾಡಿಲ್ಲ. ನಮ್ಮಲ್ಲಿ ಏನೂ ಉಚಿತವಾಗಿ ಕೊಡುತ್ತಿಲ್ಲವಾದರೂ ಏಳೂವರೆ ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಇದು ಭ್ರಷ್ಟ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಇರುವ ವ್ಯತ್ಯಾಸ ಎಂದರು. ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮರಡಿ ಮಾತನಾಡಿದರು. ಆಪ್ ರಾಜ್ಯ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಮೋಹನ್ ದಾಸರಿ ಮತ್ತಿತರರು ಉಪಸ್ಥಿತರಿದ್ದರು.
*ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.