ಒಂದೇ ಮನೆಯ 7 ಮಂದಿ ಕೋವಿಡ್ ಗೆದ್ದರು : ಮಾತ್ರೆ ತಿಂದೆವು, ಮನೆಮದ್ದು ಮರೆಯಲಿಲ್ಲ
Team Udayavani, May 20, 2021, 7:10 AM IST
ಬಂಟ್ವಾಳ: ಕೊರೊನಾ ಗೆಲ್ಲಲು ಮುಖ್ಯವಾಗಿ ಬೇಕಾಗಿರುವುದು ಮಾನಸಿಕ ಸ್ಥೈರ್ಯ, ವೈದ್ಯರ ಸಲಹೆಗಳನ್ನು ಅಚ್ಚು ಕಟ್ಟಾಗಿ ಅನುಸರಿಸುವ ವಿಧೇಯತೆ ಮತ್ತು ಮನೆಮದ್ದು ಗಳನ್ನು ಸೂಕ್ತವಾಗಿ ಬಳಸುವ ವಿವೇಚನೆ. ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಲ್ಲಮಜಲಿನ ಕುಟುಂಬ ವೊಂದು ಹೀಗೆ ಕೊರೊನಾ ಸೋಂಕನ್ನು ಗೆದ್ದಿದೆ.
“ನಮ್ಮ ಮನೆಯ ಎಲ್ಲ ರಿಗೂ ಪಾಸಿಟಿವ್ ಬಂದಿತ್ತು. ಆದರೆ ನಾವು ಆತಂಕ ಪಡಲಿಲ್ಲ. ಆರೋಗ್ಯ ಇಲಾಖೆಯವರು ನೀಡಿದ ಔಷಧ ಅನುಸರಿಸಿದೆವು, ಮನೆ ಮದ್ದಿಗೂ ಆದ್ಯತೆ ನೀಡಿ ಗೆದ್ದಿದ್ದೇವೆ’ ಇದು ಈ ಕುಟುಂಬದ ಸದಸ್ಯರೊಬ್ಬರು ಹಂಚಿಕೊಂಡ ಗೆಲುವಿನ ಸೂತ್ರ.
ಪಲ್ಲಮಜಲು ನಿವಾಸಿ ವೆಂಕಪ್ಪ ಪೂಜಾರಿಯವರ ಕುಟುಂಬವಿದು. ಇವರ ಸಂಬಂಧಿಯೊಬ್ಬರು ಬೆಂಗಳೂರಿಗೆ ಹೋಗಿ ಬಂದಿದ್ದರು. ಆ ಬಳಿಕ ಅವರಿಗೆ ಸೋಂಕು ದೃಢಪಟ್ಟಿತ್ತು. ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ವೆಂಕಪ್ಪ ಅವರ ಕುಟುಂಬವನ್ನು ಪರೀಕ್ಷೆಗೆ ಒಳಪಡಿಸಿದಾಗ ಎಲ್ಲರಿಗೂ ಪಾಸಿಟಿವ್ ಬಂತು.
ವೆಂಕಪ್ಪ ಅವರಿಗೆ 85 ವರ್ಷ. ಅವರ ಪತ್ನಿ ಹೇಮಾವತಿ 73 ವರ್ಷದವರು. ಪುತ್ರ ಶೇಖರ್ (42), ಸೊಸೆ ಸರಿತಾ (39), ಮತ್ತೋರ್ವ ಸೊಸೆ ಸುಧಾ (42), ಮೊಮ್ಮಕ್ಕಳಾದ ಲಿಖೀತ್ (18) ಮತ್ತು ಯಶ್ವಿತ್ (15) ಈ ಕುಟುಂಬದ ಸದಸ್ಯರು. ಎಲ್ಲರಿಗೂ ಕೊರೊನಾ ಲಕ್ಷಣಗಳು ಇರಲಿಲ್ಲ. ಎರಡು-ಮೂರು ಮಂದಿಗೆ ಮಾತ್ರ ಸ್ವಲ್ಪ ಜ್ವರ, ತಲೆನೋವು, ಘ್ರಾಣಶಕ್ತಿ ನಷ್ಟ ಇದ್ದವು. ಎ. 23ಕ್ಕೆ ಪರೀಕ್ಷೆ ನಡೆಸಿದ್ದು, ಎ. 29ಕ್ಕೆ ಪಾಸಿಟಿವ್ ವರದಿ ಬಂತು. ಮನೆಯನ್ನು ಮೇ 10ರ ವರೆಗೆ ಸೀಲ್‌ಡೌನ್ ಮಾಡಲಾಗಿತ್ತು.
ಶಾಸಕರು, ಊರವರ ನೆರವು ಸ್ಮರಣೀಯ
ಇವರು ಮನೆಯ ಪಕ್ಕದಲ್ಲೇ ಪುಟ್ಟ ಅಂಗಡಿ ಇರಿಸಿಕೊಂಡಿದ್ದಾರೆ. ಎಲ್ಲರಿಗೂ ಪಾಸಿಟಿವ್ ಬಂದ ಕಾರಣ ಅಂಗಡಿ ತೆರೆಯುವಂತಿರಲಿಲ್ಲ. ಆಗ ಕಷ್ಟವನ್ನು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರಲ್ಲಿ ಹೇಳಿಕೊಂಡಾಗ ದಿನಸಿ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದರು. ಜತೆಗೆ ಏನು ತೊಂದರೆ ಇದ್ದರೂ ಸಂಪರ್ಕಿಸುವಂತೆ ತಿಳಿಸಿದ್ದರು.
ನೆರೆಮನೆಯ ಉದಯ ಮಲ್ಲಿ, ಊರಿನ ಮಂದಿರದವರು ಕೂಡ ನೆರವಾಗಿದ್ದರು. ಊರಿನ ಹಲವರು ಧೈರ್ಯ ತುಂಬಿದ್ದರು. ಇದೆಲ್ಲವೂ ಶೀಘ್ರ ಗುಣ ಹೊಂದಲು ಈ ಮನೆಮಂದಿಗೆ ಪ್ರೇರಣೆಯಾಗಿ ಕೆಲಸ ಮಾಡಿತು.
ಧೈರ್ಯದಿಂದ ಎದುರಿಸಿದೆವು
ಅಧಿಕಾರಿಗಳು ಪರೀಕ್ಷೆ ಕಡ್ಡಾಯ ಎಂದಾಗ ಒಪ್ಪಿಕೊಂಡೆವು. ಪಾಸಿಟಿವ್ ವರದಿ ಬಂದಾಗ ಧೈರ್ಯಗೆಡಲಿಲ್ಲ. ಮನೆಯ ಯಜಮಾನರು ವಯೋವೃದ್ಧರು ಎಂಬುದೊಂದೇ ನಮಗಿದ್ದ ಚಿಂತೆ. ಆರೋಗ್ಯ ಇಲಾಖೆಯವರು ನೀಡಿದ ಮಾತ್ರೆಗಳನ್ನು ಚಾಚೂತಪ್ಪದೆ ತೆಗೆದುಕೊಂಡೆವು. ಜತೆಗೆ ಗಿಡಮೂಲಿಕೆ ಕಷಾಯ ತಯಾರಿಸಿ ಕುಡಿದೆವು. ನಿಯಮಿತವಾಗಿ ಸ್ಟೀಮ್ ತೆಗೆದು ಕೊಂಡೆವು. ಬಿಸಿ ಬಿಸಿ ನೀರಿಗೆ ಲಿಂಬೆ ರಸ, ಉಪ್ಪು ಬೆರೆಸಿ ಬಾಯಿ, ಗಂಟಲು ಸ್ವತ್ಛಗೊಳಿಸಿಕೊಳ್ಳುತ್ತಿದ್ದೆವು. ಮಾತ್ರೆಗಳ ಜತೆಗೆ ಮನೆ ಮದ್ದಿಗೂ ಆದ್ಯತೆ ನೀಡಿದ ಪರಿಣಾಮ ಯಾವುದೇ ತೊಂದರೆ ಇಲ್ಲದೆ ಚೇತರಿಸಿ ಕೊಂಡಿದ್ದೇವೆ. ಈಗ ಎಲ್ಲರೂ ಆರೋಗ್ಯ ವಾಗಿದ್ದೇವೆ.
– ಇದು ಈ ಮನೆಮಂದಿಯ ಮಾತು
ನಾವು ಧೃತಿಗೆಡದೆ ವೈದ್ಯರು ಕೊಟ್ಟ ಮಾತ್ರೆಗಳ ಜತೆಗೆ ಮನೆಮದ್ದನ್ನೂ ಸೇವಿಸಿದ್ದೇವೆ. ಕೊರೊನಾ ಬಂತೆಂದು ಧೈರ್ಯ ಕಳೆದುಕೊಳ್ಳದೆ ಯಶಸ್ವಿಯಾಗಿ ಎದುರಿಸಿದರೆ ಯಾವುದೇ ತೊಂದರೆ ಆಗದು.
– ಸರಿತಾ, ಪಲ್ಲಮಜಲು ನಿವಾಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.