Krishna Janmashtami:ಬದುಕಿನ ದೀಪ ಭಗವದ್ಗೀತೆ: ಯುದ್ಧ- ಶಾಂತಿ ಎರಡೂ ಹಗಲು ಇರುಳಿನಂತೆ
ಅಂತರಂಗದಲ್ಲಿ ಅದರ ಅಗತ್ಯ ಮತ್ತು ಅದರ ಧರ್ಮ ಕುರಿತ ಎಚ್ಚರಿಕೆ ಬೇಕೇಬೇಕು.
Team Udayavani, Aug 24, 2024, 2:56 PM IST
ಮನಸ್ಸು ಚಂಚಲ, ಚಲಿಸುತ್ತಲೇ ಇರುತ್ತದೆ. ಈ ಮನಸ್ಸು ಎಲ್ಲಿ ಯಾತ್ರೆ ಮಾಡಬೇಕು, ಯಾವ ಸ್ಥಳದಲ್ಲಿ ಉಳಿಯಬೇಕು ಇದನ್ನು ನಿರ್ಧರಿಸುವುದು ನಾನು. ಮನಸ್ಸೊಂದು ಪವಿತ್ರ ಸ್ಥಾನ ಆಗಬೇಕಾದರೆ ಅದು ತೀರ್ಥಸ್ಥಳಗಳಲ್ಲೇ ಉಳಿಯಬೇಕು. ಬೇರೆಕಡೆ ಸಂಚಾರ ಹೊರಟರೂ ತತ್‌ಕ್ಷಣ ಹಿಂದಿರುಗಿ ತನ್ನ ಸ್ಥಾನಕ್ಕೆ ಮರಳಬೇಕು. ಹೀಗೆ ಮನಸ್ಸನ್ನು ಒಂದು ಕ್ಷೇತ್ರದಲ್ಲಿ ನಿಲ್ಲಿಸುವ ಕೆಲಸವೇ ಮನೋನಿಗ್ರಹ.
ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ…ಎಂದೇ ಆರಂಭಿಸುತ್ತಾರೆ ವ್ಯಾಸರು. ಕುರುಕ್ಷೇತ್ರ ಎಂಬ ಸ್ಥಳವೇ ಪಾವನವಾದ ಸ್ಥಳ. ಅಲ್ಲಿ ಕಾಲಿಟ್ಟರೆ ಬರುವುದೇ ಧರ್ಮ ವಿಚಾರಗಳು. ಇಂತಹ ಸ್ಥಳವನ್ನೇ ರಣಭೂಮಿ ಆಗಿಸಿದ ಯುದ್ಧ! ಹದಿನೆಂಟು ಅಧ್ಯಾಯಗಳ ಗೀತೆ ತಿಳಿಸುವ ಮುಖ್ಯ ವಿಚಾರ ಏನೆಂದರೆ, ಯುದ್ಧ ಎಂಬುದು ಮನುಷ್ಯನ ಬಾಹ್ಯ ಕಣ್ಣುಗಳ ಒಳಗೆ ಇಳಿಯುವ ಮೊದಲೇ ಅದರ ಅಗತ್ಯ ಕುರಿತು ಸಂಪೂರ್ಣ ಜ್ಞಾನ ಇರಬೇಕು. ಯುದ್ಧ ಎಂದರೆ ಹೋರಾಟ, ಹೊಡೆದಾಟ, ಸಾವು, ಶೋಕ. ಇದನ್ನು ಯಾರೂ ಕಲಿಸಬೇಕಿಲ್ಲ. ಅದರ ಅಂತಿಮ ಫಲ ಅದೇ ಆಗಿರುತ್ತದೆ. ಯುದ್ಧ ಯಾವ ಯಾವ ಹಂತಗಳಲ್ಲಿ ಮನಸ್ಸಿನೊಳಗೆ ಇಳಿಯುತ್ತದೆ ಎಂಬುದನ್ನು ಅರಿಯಬೇಕು. ಬಾಹ್ಯದಲ್ಲಿ ಯುದ್ಧ ಆರಂಭಿಸುವ ಮೊದಲು ಅಂತರಂಗದಲ್ಲಿ ಅದರ ಅಗತ್ಯ ಮತ್ತು ಅದರ ಧರ್ಮ ಕುರಿತ ಎಚ್ಚರಿಕೆ ಬೇಕೇಬೇಕು.
ಎಲ್ಲದಕ್ಕಿಂತ ಮೂಲಭೂತವಾಗಿ ತಿಳಿಯಬೇಕಾದ್ದು. ಈ ಭೂಮಿ ಯುದ್ಧ ಮತ್ತು ಶಾಂತಿ ಎರಡನ್ನೂ ಪ್ರತಿಪಾದಿಸುತ್ತದೆ. ಕೇವಲ ಶಾಂತಿಯಿಂದ ಸಮಸ್ತ ಭೂಮಿ ಯುಗಯುಗಗಳ ಕಾಲ ಇರಲು ಸಾಧ್ಯವಿಲ್ಲ. ಅಂತಹ ಚಿಂತನೆ ಇದ್ದರೆ ಅದು ನಮ್ಮ ಮೌಢ್ಯ. ಯುದ್ಧ ಮತ್ತು ಶಾಂತಿ ಎರಡೂ ಹಗಲು ಇರುಳಿನಂತೆ.
ಶ್ರೀಕೃಷ್ಣ ಹೇಳುತ್ತಾನೆ ಸರ್ವಧರ್ಮಾನ್ ಪರಿತ್ಯ ಜ್ಯ ಎಲ್ಲವನ್ನೂ ಬಿಡು. ನನಗೆ ಶರಣಾಗು. ನಿನ್ನನ್ನು ಚಿಂತೆಯಿಂದ ಬಿಡುಗಡೆ ಮಾಡುತ್ತೇನೆ ಅಂದ, ಹಾಗಾದರೆ ಎಲ್ಲವನ್ನೂ ಅವನಿಗೆ ಅರ್ಪಿಸಿ ಸುಮ್ಮನಾಗುವುದು ಎಷ್ಟು ಸುಲಭ ಅನ್ನಿಸುತ್ತದೆ. ಆದರೆ ಈ ಮಾತನ್ನು ಅವನು ಗೀತೆಯ ಹದಿನೇಳು ಅಧ್ಯಾಯಗಳನ್ನು ಮುಗಿಸಿ, ಹದಿನೆಂಟನೆಯ ಅಧ್ಯಾಯದ ಅರವತ್ತಾರನೇ ಶ್ಲೋಕದಲ್ಲಿ ತಿಳಿಸುತ್ತಾನೆ. ಶರಣಾಗತಿಗೂ ಮೊದಲು ಕರ್ಮಮಾಡು. ಅದು ಯೋಗ ಆಗಬೇಕು. ಕರ್ಮವನ್ನು ಯಾಂತ್ರಿಕ ಮಾಡಬೇಡ. ಜ್ಞಾನದಿಂದ ಮಾಡು. ಅದು ಜ್ಞಾನ ಯೋಗ ಆಗಬೇಕು. ಜ್ಞಾನದ ಕುರಿತು ಭಕ್ತಿ ಇರಲಿ. ಅದು ಭಕ್ತಿಯೋಗ ಆಗಬೇಕು. ಹೀಗೆ ನಿನ್ನ ಕರ್ಮಗಳನ್ನು ಜ್ಞಾನ, ಭಕ್ತಿಯಿಂದ ಶುದ್ಧ ಮಾಡುತ್ತ ಕರ್ಮಫಲ ಅಪೇಕ್ಷಿಸದೆ ನನಗೆ ಶರಣಾಗು.
ಎಲ್ಲದಕ್ಕಿಂತ ಮೊದಲು ನಾನು ಯಾರು? ಎಲ್ಲಿದ್ದೇನೆ? ಹೇಗೆ ಇದ್ದೇನೆ? ನನ್ನ ಗುರಿ ಏನು?ಎಷ್ಟು ಸಮಯ ಬೇಕು ಅದನ್ನು ತಲುಪಲು? ನನ್ನ ಗುರಿ ಮತ್ತು ಉದ್ದೇಶ ಸರಿಯಾಗಿದೆಯೇ? ಹೀಗೆ ಸ್ವಪರೀಕ್ಷೆ ಮುಖ್ಯ. ಐದನೆಯ ತರಗತಿಯ ಮಗುವಿಗೆ ಒಳ್ಳೆ ಅಂಕ ಪಡೆದು ಆರನೆಯ ತರಗತಿಗೆ ಹೋಗುವುದು ಮುಖ್ಯ. ಅದೇ ಪಿಯುಸಿ ಓದುವ ಮಗುವಿಗೆ ಬಿಇನೋ ಮೆಡಿಕಲ್ಲೋ ಎಂಬುದು ಮುಖ್ಯ. ಬಿಇ ಕೊನೆಯ ಹಂತದಲ್ಲಿರುವವನಿಗೆ ಯಾವ ಕಂಪೆನಿ ಉದ್ಯೋಗ ಎಂಬುದು ಮುಖ್ಯ. ಹೀಗೆ ಪ್ರತಿಯೊಬ್ಬರಿಗೂ ಅವರವರ ಗುರಿ, ಉದ್ದೇಶ, ಸಾಧ್ಯತೆ ಎಲ್ಲವನ್ನೂ ತಿಳಿಯುವ ಜ್ಞಾನ ಮುಖ್ಯ. ಬಸ್‌ಸ್ಟಾಂಡ್‌ನಲ್ಲಿ ನಿಂತವನು ತಾನು ಹೋಗಬೇಕಾದ ಊರಿನ ಬಸ್ ಹತ್ತಬೇಕು. ದಿಲ್ಲಿ ಬಸ್ಸು ನೋಡಲು ಚೆನ್ನಾಗಿದೆ ಎಂದು ಹತ್ತಿದರೆ….ದುಃಖವೇ ಉಂಟಾಗುವುದು.
ಇದರ ಅರ್ಥ ಎರಡನೆಯ ಅಧ್ಯಾಯದಲ್ಲಿ ಸ್ಪಷ್ಟವಾಗಿ ದೊರಕುತ್ತದೆ. ಅದು ಸಾಂಖ್ಯ ಯೋಗ. ಬಹುತೇಕ ವಿದ್ವಾಂಸರು ಸಾಂಖ್ಯವನ್ನು ಅರಿತರೆ ಸಮಸ್ತ ಗೀತೆಯನ್ನು ಅರಿತಂತೆ ಅನ್ನುತ್ತಾರೆ. ಸಾಂಖ್ಯದ ಉದ್ದೇಶವೇ ಪುರುಷ ಮತ್ತು ಪ್ರಕೃತಿಯನ್ನು ವಿಭಜಿಸಿ ನೋಡುವುದು. ನಾನು ಎಂಬ ಪದಾರ್ಥ ಪುರುಷನೊಂದಿಗೆ ಸೇರುತ್ತದೆಯೋ ಪ್ರಕೃತಿಯೊಂದಿಗೆ ಸೇರುತ್ತದೆಯೋ ಈ ವಿವೇಚನೆ. ಪುರುಷ ಅಂದರೆ ಆತ್ಮ, ಪ್ರಜ್ಞೆ, ಸಾಕ್ಷಿರೂಪ ಎಂದು ತಿಳಿಯಬೇಕು. ಪ್ರಕೃತಿ ಅಂದರೆ ಪದಾರ್ಥದ ಮೂಲ ಸ್ವಭಾವ. ಪುರುಷ ಮತ್ತು ಪ್ರಕೃತಿ ಎರಡೂ ಪ್ರತಿಯೊಂದು ವಸ್ತುವಿನಲ್ಲೂ ಮಿಳಿತವಾಗಿರುತ್ತದೆ.
ಅವುಗಳನ್ನು ಪ್ರತಿಯೊಂದು ಸಂದರ್ಭದಲ್ಲೂ ಬೇರ್ಪಡಿಸಿ ತಿಳಿಯುವುದು ಧರ್ಮ ಆಗುತ್ತದೆ. ಹೂವಿನ ಮೃದುತ್ವ, ಬಣ್ಣ ಎಲ್ಲವೂ ಅದರ ಪ್ರಕೃತಿಯ ಭಾಗ ಆದರೆ ಅದರ ಹುಟ್ಟು, ಉದ್ದೇಶ, ಪ್ರಪಂಚ ಯಾನ ಎಲ್ಲವೂ ಆತ್ಮ ಅಥವ ಸಾಕ್ಷಿಯದ್ದಾಗಿರುತ್ತದೆ. ಈ ಸಾಕ್ಷೀ ಭಾವ ಪ್ರಕೃತಿಯ ಜತೆ ಮಿಳಿತವಾಗಿ. ನಾನೇಕೆ ಇಷ್ಟು ಮೃದು, ನನ್ನನ್ನು ಜನ ಹೀಗೇಕೆ ಕೊಯ್ಯುತ್ತಾರೆ ಎಂದೆಲ್ಲ ಚಿಂತಿಸುತ್ತ ಅಳುತ್ತಿದ್ದರೆ ಅದರ ಹುಟ್ಟಿನ ಉದ್ದೇಶದಿಂದ ದೂರವೇ ಉಳಿಯುತ್ತದೆ. ಆತ್ಮವು ಉದ್ದೇಶ ಈಡೇರುವವರೆಗೂ ಮತ್ತೆಮತ್ತೆ ಅದೇ ಸಂಕೋಲೆಗಳಲ್ಲಿ ಜನ್ಮ ತಾಳುತ್ತಿರುತ್ತದೆ. ಈ ನಾನು ಎಂಬ ಪದಾರ್ಥವನ್ನು ಮತ್ತೆ ಮತ್ತೆ ಶುದ್ಧಿಗೊಳಿಸುವ ಪಾಠ ಸಾಂಖ್ಯ ಯೋಗದ್ದು. ಹೀಗೆ ಗೀತೆ ಮನಸ್ಸನ್ನು ನಿಗ್ರಹಿಸಿ, ಮತಿಯನ್ನು ಸರಿಯಾದ ಕಡೆ ತಿರುಗಿಸುವ ವಿಶೇಷ ಚಿಂತನೆಗಳನ್ನು ಕೊಡುತ್ತದೆ ಮತ್ತು ಅದು ನಮ್ಮ ಜೀವನದ ಮಾರ್ಗವನ್ನು ಅದ್ಭುತ ಮಾಡುತ್ತದೆ. ನಾವು ನಾವೇ ಏಕಾಂತವಾಗಿ ಕುಳಿತು ಈ ಆನಂದ ಅನುಭವಿಸುವುದು ಎಷ್ಟು ಸೊಗಸಲ್ಲವೇ !
*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.