ಲಲಿತ ಪ್ರಬಂಧ: ಹೂವೇ ಹೂವೇ…
ಯಾವ ಯಾವ ಗಿಡ ನೆಡುವುದು ಎಂದೆಲ್ಲಾ ಯೋಚನೆ ಮಾಡ್ತಾ ಮನೆಗೆ ಬಂದೆ.
Team Udayavani, Jul 31, 2023, 1:34 PM IST
ಮಳೆಗಾಲ ಬಂತು ಅಂದ್ರೆ ಸುಮಾರಿಗೆ ಎಲ್ಲರ ಮನೆಯಲ್ಲೂ ಹೂವಿನ ಗಿಡ ನಾಟಿ ಮಾಡುವ ಕಾರ್ಯಕ್ರಮ ಇರುತ್ತದೆ. ಯಾರ ಕೈಯಲ್ಲಿ ನೋಡಿದ್ರೂ ದೊಡ್ಡ ದೊಡ್ಡ ಗಿಡದ ಹೆಣಿಕೆಗಳ ಹೊರೆ. ಬಸ್‌ನಲ್ಲಿ ಕಂಡಕ್ಟರ್ ಹತ್ತಿರ “ಎಂತದ್ರಿ ಇದು, ಸೊಪ್ಪಿನ ಹೊರೆನೇ ತಂದಿದೀರಿ! ಮುಖಕ್ಕೆಲ್ಲ ತಾಗತ್ತೆ, ಕೆಳಗಡೆ ಇಡ್ರಿ’ ಅಂತ ಹೇಳಿ ಬೈಸ್ಕೊಂಡ್ರೂ ಗಿಡ ಹೊರೋದನ್ನು ಬಿಡೋಲ್ಲ. ನನಗೂ ಸ್ವಲ್ಪ ಗಿಡದ ಹುಚ್ಚು. ಎಲ್ಲೋದ್ರೂ ಗಿಡ ತರ್ತೀನಿ.
ಅಪರೂಪಕ್ಕೆ ಒಂದ್ಸಲ ನಮ್ಮನೆಯವರು ಕೆಮ್ಮಣ್ಣುಗುಂಡಿಗೆ ಕರೆದು ಕೊಂಡು ಹೋಗಿದ್ರು. ಅಲ್ಲಿಯ ರಮಣೀಯ ದೃಶ್ಯಗಳು ತುಂಬಾ ಚೆನ್ನಾಗಿದ್ವು. ಆದ್ರೆ ನನ್ನ ಕಣ್ಣಿಗೆ ಅಲ್ಲಿನ ಸಸ್ಯರಾಶಿ, ಹೂಗಳು ಕಾಣ್ಸೇ ಇಲ್ಲ . “ರೀ ನೋಡ್ರಿ ಅಲ್ಲಿ, ಮಣ್ಣು ಎಷ್ಟು ಚೆನ್ನಾಗಿದೆ?’ ಅಂದೆ. ಅವರು ಸ್ವಲ್ಪ ಅಸಮಾಧಾನದಿಂದಲೇ “ಹೂಂ’ ಅಂದ್ರು. ಸ್ವಲ್ಪ ಮುಂದೆ ಹೋಗುವಾಗ ಗೊಬ್ಬರದ ರಾಶಿ ಕಂಡಿತು. “ರೀ.. ನೋಡ್ರಿ ಗೊಬ್ಬರ ಎಷ್ಟು ಚೆನ್ನಾಗಿದೆ’ ಅಂದೆ. ಆಗ ಅವರಿಗೆ ತಡೆದು ಕೊಳ್ಳಲು ಆಗ್ದೇ- “ಅಷ್ಟು ದೂರದಿಂದ ಬಂದು ನೀ ನೋಡ್ತಿರೋದು, ಮಣ್ಣು ಗೊಬ್ಬರನಾ? ಅಲ್ಲಿಂದ ಮೇಲೆ ಬಾ. ಅದು ಹಾಕಿದ್ರಿಂದ ಹೂ ಎಷ್ಟು ಚೆನ್ನಾಗಿ ಬಿಟ್ಟಿದೆ ನೋಡು! ತಲೆಯಲ್ಲಿ ಬರೀ ಸಗಣಿ, ಗೊಬ್ಬರನೇ ತುಂಬ್ಕೋ ಬೇಡ’ ಅಂತ ಬಯ್ದರು. ಅವರು ಹೇಳಿದ್ದೂ ಹೌದು ಅನ್ನಿಸಿ, ಅಲ್ಲಿ ಬೆಳೆದ ಹೂ ನೋಡಲು ಪ್ರಾರಂಭಿಸಿದೆ. ಅಲ್ಲಿಂದ ಕಾರಿಗೆ ಹಿಡಿವಷ್ಟು ಹೂವಿನ ಗಿಡ ತಂದೆ!
ಇನ್ನೊಂದು ಕಡೆ ಹೋಗಿದ್ವಿ. ಒಬ್ಬರು ನೆಂಟರ ಮನೆಯಲ್ಲಿ ವಿಶೇಷ ಇತ್ತು. ಅವರ ಮನೆ ಪಕ್ಕದ ಖಾಲಿ ಜಾಗದಲ್ಲಿ ಸಿಕ್ಕಾಪಟ್ಟೆ ಸಿಮೆಂಟ್ ಕುಂಡಗಳನ್ನು ಸೇಲ್‌ಗೆ ಇಟ್ಕೊಂಡಿದ್ರು. ನನಗೋ ನೆಂಟರ ಮನೆಯಲ್ಲಿ ಕೂರುವ ಆಸಕ್ತಿನೇ ಇಲ್ಲ. ಎಷ್ಟು ಹೊತ್ತಿಗೆ ಊಟ ಆಗುತ್ತೆ, ಆದ್ಮೇಲೆ ಕುಂಡಗಳನ್ನು ತೆಗೆದುಕೊಂಡು ಹೋಗ್ಬೇಕು ಹೇಳದೊಂದೇ ತಲೇಲ್ಲಿ. ಅಂತೂ ಊಟ ಆಯ್ತು. ಅದ್ಹೇಗೆ ಊಟ ಮುಗಿಸಿದ್ನೋ, ಕೈ ತೊಳೆದ ಮರುಕ್ಷಣವೇ ಎಲ್ಲರ ಹತ್ತಿರ ಗಡಿಬಿಡಿಯಲ್ಲಿ “ಹೋಗ್ಬರ್ತೀನಿ’ ಅಂತ ಹೇಳಿ, ಮನೆಯವರನ್ನು ಓಡಿಸಿಕೊಂಡು ಸೀದಾ ಸಿಮೆಂಟ್ ಕುಂಡ ಮಾರುವವರ ಮುಂದೆ ಹೋಗಿ ನಿಂತೆ. ಮನೆಯವರಿಗೆ ಇದೆಲ್ಲ ತಿಳಿದಿರಲಿಲ್ಲ. ಸತ್ಯದರ್ಶನವಾದಾಗ- “ಓಹೋ, ಇದಾ ವಿಚಾರ, ಯಾಕಿಷ್ಟು ಅರ್ಜಂಟ್ ಹೊರಟಿದ್ದಾಳಲ್ಲ ? ಅಂದ್ಕೊಂಡೆ’ ಅಂದ್ರು. ಅಷ್ಟರೊಳಗೆ 10 ಕುಂಡಗಳ ಖರೀದಿ ಆಗಿತ್ತು. ಎಲ್ಲವನ್ನೂ ಕಾರಿನಲ್ಲಿ ತುಂಬಿಕೊಂಡು ನಾಳೆ ಅದ್ರಲ್ಲಿ ಯಾವ ಯಾವ ಗಿಡ ನೆಡುವುದು ಎಂದೆಲ್ಲಾ ಯೋಚನೆ ಮಾಡ್ತಾ ಮನೆಗೆ ಬಂದೆ.
ಕಾರಿಂದ ಇಳಿದು ಡಿಕ್ಕಿಯಿಂದ ಕುಂಡಗಳನ್ನು ಇಳಿಸಲು ನೋಡಿದ್ರೆ ಏನಿದೆ ಅಲ್ಲಿ? ಸಿಮೆಂಟ್ ಕುಂಡಗಳ ಒಡೆದ ರಾಶಿ… ಎಲ್ಲವೂ ಒಡೆದಿತ್ತು. ಮನೆಯವರು ನಕ್ಕಿದ್ದೇ ನಕ್ಕಿದ್ದು. ನಾಳೆ ನೀನೇ ಇದನ್ನೆಲ್ಲ ಸೇರಿಸಿ ಕುಂಡ ರೆಡಿ ಮಾಡು ಅಂದ್ರು. “ರೀ, ಸಂಬಂಧಿಕರ ಮನೆಗೆ ಫೋನ್ ಮಾಡಿ ಕೇಳಿ. ಹಣನಾದ್ರೂ ವಾಪಸ್ ಕೊಡ್ತಾರೇನೋ’ ಅಂದೆ. ನನ್ನ ಕಿರಿಕಿರಿ ತಡೆಯಲು ಆಗದೇ ಫೋನ್ ಮಾಡಿದ್ರು. ಆದ್ರೆ ನಾವು ಮನೆಗೆ ತಲುಪೋದ್ರೊ ಳಗೆ ಪಾಟ್ ನವರು ಅಲ್ಲಿಂದ ನಾಪತ್ತೆ. ನನ್ನಂಥ ಬಕರಾಗಳಿಗೆ ಕಾಯ್ತಾ ಇದ್ದಿದ್ರು ಅನಿಸುತ್ತದೆ. ಮನೆಯವರು ನಂಗೆ ಬಯ್ತಾ ಹೊರಗೆ ಹೋದ್ರು. ಅವ್ರು ಕಾರ್ ಕ್ಲೀನ್ ಮಾಡಲು ಒಂದು ಗಂಟೆಗಿಂತ ಜಾಸ್ತಿ ಹೊತ್ತು ಹಿಡಿದಿತ್ತು.
ಇಷ್ಟೆಲ್ಲ ಆದ್ರೂ ನನ್ನ ಹೂವಿನ ಗಿಡದ ಆಸೆ ಒಂಚೂರೂ ಕಡಿಮೆ ಆಗಿರಲಿಲ್ಲ. ನನ್ನ ಅತ್ತಿಗೆ ಮನೆಗೆ ಹೋಗುವಾಗ ಒಂದು ನರ್ಸರಿ ಸಿಗುತ್ತದೆ. ಅಲ್ಲಿ ಎಲ್ಲಾ ವೆರೈಟಿ ಗಿಡನೂ ಸಿಗತ್ತೆ. ಒಂದ್ಸಲ ಅಲ್ಲಿಂದ ಬರೋವಾಗ ಹಟ ಮಾಡಿ ಒಂದಿಷ್ಟು ಗಿಡ ತಗೊಂಡು ಬಂದೆ. “ಎಲ್ಲಾ ಬೇರೆ ಬೇರೆ ಕಲರ್ ದಾಸವಾಳ, ಒಂದಕ್ಕಿಂತ ಒಂದು ಚಂದದ ಕಲರ್ ರೀ..’ ಎಂದೆಲ್ಲಾ ಹೇಳಿ ಕೊಟ್ಟಿದ್ರು ನರ್ಸರಿಯಲ್ಲಿ. “ಒಂದಕ್ಕೆ 250 ರೂಪಾಯಿ. ಎಲ್ಲ ಹೈಬ್ರೀಡ್ ಜಾತಿ’ ಅಂದಿದ್ರು. ಗಿಡ ಖರೀದಿ ಮಾಡಿ, ಮನೆಯವರ ಹತ್ರ ಹಣ ಕೊಡಿಸಿ ಆಯ್ತು. ಮನೆಗೆ ತಂದು ಅದಕ್ಕೆ ಅಂತ ಡೊಡ್ಡ ಡ್ರಮ್ ಖರೀದಿ ಮಾಡಿ, ಮಣ್ಣು ತುಂಬಿಸಿ ಎಲ್ಲಾ ಗಿಡಗಳನ್ನು ನೆಟ್ವಿ. ಪೇಟೆಯಲ್ಲಿ ಸಿಗುವ ಗೊಬ್ಬರವನ್ನೂ ತಂದು ಹಾಕಿದೆ.
ಗಿಡ ಸೊಕ್ಕಿ ಬೆಳೀತು. ಮೊಗ್ಗು ಬಿಟ್ಟು ಹೂವಾಯ್ತು. ನೋಡಿದ್ರೆ 6 ಗಿಡದಲ್ಲೂ ಕಾಣಿಸಿಕೊಂಡಿದ್ದು ಒಂದೇ ಕಲರ್‌ನ ಹೂ.
ನಮ್ಮ ಮನೆ ಇರೋದು ಪೇಟೆಯಲ್ಲಿ. ಸುತ್ತಲಿನ ಮಣ್ಣು ಸ್ವಲ್ಪ ಕೂಡ ಚೆನ್ನಾಗಿಲ್ಲ. ಹೂವಿನ ಗಿಡಕ್ಕಾಗಿ ಪ್ರತೀ ವರ್ಷವೂ ದುಡ್ಡು ಕೊಟ್ಟು ಹೊಸ ಮಣ್ಣು ತರಸ್ತೀನಿ. ಒಂದ್ಸಲ ಒಬ್ಬ- “ಅಮ್ಮ, ನಾ ಒಳ್ಳೇ ಮಣ್ಣು ತರ್ತೀನಿ, ನೀವು ಗೊಬ್ಬರ ಹಾಕದೂ ಬೇಡ’ ಅಂದ. ನನಗೆ ಖುಷಿ ಆಗೋಯ್ತು. ಗೊಬ್ಬರದ ಖರ್ಚು ಉಳಿಯುತ್ತೆ ಅಂತ. ಎರಡು ಲೋಡ್ ತರಲು ಹೇಳಿ ಬಿಟ್ಟೆ. ತಂದ, ಇಳಿಸ್ದ. ರಾಮಾ, ಗೋಡೆ ಕೆಡಗಿದ ಮಣ್ಣು. ನಾ ಕೇಳಿದ್ರೆ, “ಅಮ್ಮಾ ಘನಾಗೈತ್ರಿ, ಇದ್ರಲ್ಲಿ ತಲೆಕೆಳಗಾಗಿ ಗಿಡ ನೆಟ್ರೂ ಚೆನ್ನಾಗಿ ಆಗತೈತ್ರಿ’ ಅಂತ ಹೇಳಿ ನನಗೆ ರೈಲು ಹತ್ತಿಸ್ದ. ಮನೆಯವರು ಬ್ಯಾಂಕಿಂದ ಬರೋವರೆಗೂ ಕಾಯ್ತಾ ಕೂತೆ. ಅವರು ಬಂದು ನೋಡಿ, ಮಣ್ಣು ಹಾಕಿ ಹೋದವನಿಗೆ ಕಾಲ್ ಮಾಡಿ- “ಮೊದ್ಲು ಈ ಮಣ್ಣು ವಾಪಸ್ ತೆಗೆದುಕೊಂಡು ಹೋಗಿ’ ಅಂದ್ರು. “ಆಯ್ತು ಸರ್, ಮಣ್ಣು ತುಂಬ್ಕೊಂಡು ಹೋಗ್ತಿವಿ, ಆದ್ರೆ ಒಂದು ಲೋಡಿನ ದುಡ್ಡು ಕೊಡ್ಲೆಬೇಕು’ ಅಂತ ಹಠ ಹಿಡಿದ. ಅವರಿಗೆ ಸಿಟ್ಟು ಹತ್ತಿ ನನ್ನ ಕರೆದು, “ನೋಡು, ನಿನ್ನ ಗಿಡದ ಆಸೆಗೆ ನನ್ನ ಸ್ಥಿತಿ ನೋಡು’ ಅಂದ್ರು.. ನಾನು ಬೆಪ್ಪತಕ್ಕಡಿ ಹಾಂಗೆ ನಿಂತ್ಕೊಂಡೆ. ಅವರು ದುಡ್ಡು ಕೊಟ್ಟು ಮಣ್ಣು ವಾಪಸ್ ಕಳಿಸಿ, “ಮಾರಾಯ್ತಿ ನನಗೆ ನೋಟ್ ಬ್ಯಾನ್ ಆದಾಗ್ಲೂ ಇಷ್ಟು ಕಷ್ಟ ಆಗಿರ್ಲಿಲ್ಲ, ಆದ್ರೆ ನಿನ್ನ ಮಣ್ಣು, ಗಿಡದ ಕಾಲದಲ್ಲಿ ಸಾಕಾಗೋಯ್ತು’ ಅಂದ್ರು!
ಪ್ರತೀ ವರ್ಷ ಇನ್ನು ಗಿಡ ಮಾಡೋದು ಬೇಡ ಅಂತ ಭೀಷ್ಮ ಪ್ರತಿಜ್ಞೆ ಮಾಡ್ತಿನಿ. ಆದ್ರೆ ಗಿಡದ ಆಸೆ ಅಷ್ಟು ಸುಲಭವಾಗಿ ಹೋಗಲ್ಲ. ಮತ್ತೆ ಮಾಡ್ತೀನಿ, ಮೋಸ ಹೋಗ್ತಿನಿ. ಅದರ ಮಧ್ಯೆನೂ ಕೆಲವೊಂದು ಒಳ್ಳೆ ಗಿಡ ಮಾಡಿದೀನಿ. ಮನೆಯವರು ಯಾವಾಗ್ಲೂ ಹೇಳ್ತಾರೆ: “ದಿನಾ ದುಡ್ಡು ಕೊಟ್ಟು ಹೂ ಕೊಂಡ್ರೂ ಇಷ್ಟು ದುಬಾರಿ ಆಗ್ತಾ ಇರ್ಲಿಲ್ಲ. ನೀ, ಮಣ್ಣು, ಗೊಬ್ಬರಕ್ಕೆ ಖರ್ಚು ಮಾಡುವ ಹಣದ ಸರಾಸರಿ ಲೆಕ್ಕ ಮಾಡಿದ್ರೆ, ಒಂದು ಹೂವಿಗೆ 150 ರಿಂದ ಇನ್ನೂರು ರೂಪಾಯಿ ಬೀಳುತ್ತದೆ.ಇದಕ್ಕಿಂತ ದೇವರ ಪೂಜೆಗೆ ದುಡ್ಡು ಕೊಟ್ಟು ಹೂ ಕೊಳ್ಳೋದು ವಾಸಿ’ ಅಂತಾರೆ..
*ಶುಭಾ ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.