ತರಕಾರಿಗಳ ಬೆಲೆ ನಿಯಂತ್ರಣಕ್ಕೆ ಸರಕಾರಗಳು ಮುಂದಾಗಲಿ
Team Udayavani, Jul 13, 2023, 5:25 AM IST
ದೇಶಾದ್ಯಂತ ತರಕಾರಿ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದಕ್ಕೆ ಪೂರಕವೆಂಬಂತೆ ಜೂನ್ ತಿಂಗಳಲ್ಲಿ ಸಗಟು ಹಣದುಬ್ಬರವೂ ಹೆಚ್ಚಾಗಿದೆ. ಅಂದರೆ ಗ್ರಾಹಕ ದರ ಸೂಚ್ಯಂಕ(ಸಿಪಿಐ)ವು ಕಳೆದ ನಾಲ್ಕು ತಿಂಗಳುಗಳಿಂದಲೂ ಇಳಿಕೆಯ ಹಾದಿಯಲ್ಲಿತ್ತು. ಆದರೆ ಜೂನ್ ತಿಂಗಳಲ್ಲಿ ದಿಢೀರನೇ ಟೊಮೆಟೊ ಸಹಿತ ವಿವಿಧ ತರಕಾರಿಗಳು, ಬೇಳೆಕಾಳುಗಳು ಮತ್ತು ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು. ಹೀಗಾಗಿ ಸಗಟು ಹಣದುಬ್ಬರ ದರ ಶೇ.4.81ಕ್ಕೆ ಏರಿಕೆಯಾಯಿತು. ಮೇ ತಿಂಗಳಲ್ಲಿ ಇದು ಶೇ.4.31ರಷ್ಟಿತ್ತು.
ರಾಷ್ಟ್ರೀಯ ಸಾಂಖೀಕ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಆಹಾರ ವಸ್ತುಗಳ ಹಣದುಬ್ಬರವೇ ಶೇ.4.49ಕ್ಕೆ ಏರಿಕೆಯಾಗಿದೆ. ಇದು ಮೇ ತಿಂಗಳಲ್ಲಿ ಶೇ.2.96ರಷ್ಟಿತ್ತು. ಹಾಗೆಯೇ ಜುಲೈ ತಿಂಗಳಲ್ಲಿ ಆಹಾರ ವಸ್ತುಗಳ ಹಣದುಬ್ಬರ ಶೇ.5.3ರಿಂದ ಶೇ.5.5ರಷ್ಟಕ್ಕೆ ಏರಿಕೆಯಾಗಬಹುದು ಎಂದು ವಿತ್ತ ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಸರಕಾರಗಳು ತರಕಾರಿಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆಯೇ ಕೇಂದ್ರ ಸರಕಾರ ದಿಲ್ಲಿ ಸಹಿತ ದೇಶದ ವಿವಿಧ ನಗರಗಳಲ್ಲಿ ಟೊಮೇಟೊ ಬೆಲೆ ಇಳಿಕೆ ಮಾಡಲು ಕ್ರಮ ತೆಗೆದುಕೊಂಡಿದೆ. ನಾಫೇಡ್ ಮೂಲಕ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಟೊಮೇಟೊವನ್ನು ಖರೀದಿಸಿ, ದೇಶದ ಇತರ ನಗರಗಳಿಗೆ ಪೂರೈಕೆ ಮಾಡುವಂತೆ ನಾಫೇಡ್‌ಗೆ ಸೂಚನೆ ನೀಡಿದೆ.
ಸದ್ಯ ದಿಲ್ಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಟೊಮೇಟೊ ಬೆಲೆ ಪ್ರತೀ ಕೆ.ಜಿ.ಗೆ 200 ರೂ.ಗಿಂತ ಹೆಚ್ಚು ಇದೆ. ಟೊಮೇಟೊ ಖರೀದಿ ಮಾಡುವುದು ಮಧ್ಯಮ ವರ್ಗಕ್ಕೆ ದುಸ್ತರವೆನಿಸಿದೆ. ಇಂಥ ಹೊತ್ತಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವುದು ಸ್ವಾಗತಾರ್ಹವೇ ಹೌದು. ಅಲ್ಲದೆ ಟೊಮೇಟೊ ಹೆಚ್ಚು ಬೆಳೆಯುವ ರಾಜ್ಯಗಳಿಂದ ಖರೀದಿಸಿ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(ನಾಫೇಡ್), ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್)ಗಳ ಮೂಲಕ ಮಾರಾಟಕ್ಕೆ ಮುಂದಾಗಿದೆ. ಜತೆಗೆ ದಿಲ್ಲಿ-ಎನ್‌ಸಿಆರ್, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಲದಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಟೊಮೇಟೊ ಬೆಲೆ ಇಳಿಕೆಯಾಗುವವರೆಗೂ ಡಿಸ್ಕೌಂಟ್‌ನಲ್ಲೇ ಮಾರಾಟ ಮಾಡಲು ತೀರ್ಮಾನಿಸಿರುವುದರಿಂದ ಗ್ರಾಹಕರಿಗೆ ಕೊಂಚ ಮಟ್ಟಿನ ನಿರಾಳತೆ ಸಿಗಬಹುದು.
ಇನ್ನು ತಮಿಳುನಾಡಿನಲ್ಲಿಯೂ ಅಲ್ಲಿನ ರಾಜ್ಯ ಸರಕಾರ ರಿಯಾಯಿತಿ ಯಲ್ಲಿ ಟೊಮೇಟೊವನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ಬೆಲೆ ಏರಿಕೆಯ ಬಿಸಿಯನ್ನು ಕೊಂಚ ಮಟ್ಟಿಗಾದರೂ ಅದು ತಗ್ಗಿಸುತ್ತಿದೆ.
ಸದ್ಯ ಕರ್ನಾಟಕದಲ್ಲಿಯೂ ಟೊಮೇಟೊ ಬೆಲೆ ಪ್ರತೀ ಕೆ.ಜಿ.ಗೆ 95ರಿಂದ 118 ರೂ.ವರೆಗೆ ಇದೆ. ಹೊಟೇಲ್‌ಗಳಲ್ಲಿ ಟೊಮೇಟೊ ಬಳಕೆ ಮಾಡುವುದನ್ನೇ ಸ್ಥಗಿತ ಮಾಡುವಷ್ಟರ ಸ್ಥಿತಿ ಎದುರಾಗಿದೆ. ಮನೆಗಳಲ್ಲಂತೂ ಗೃಹಿಣಿಯರು ಟೊಮೇಟೊ ಖರೀದಿ ವಿಚಾರದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಇಂಥ ವೇಳೆಯಲ್ಲಿ ರಾಜ್ಯ ಸರಕಾರವು ತಮಿಳುನಾಡು ಮಾದರಿಯಲ್ಲೇ ರಿಯಾಯಿತಿ ರೂಪದಲ್ಲಿ ಟೊಮೇಟೊ ಸಹಿತ ತರಕಾರಿಗಳನ್ನು ಮಾರಾಟ ಮಾಡಿದರೆ ಶ್ರೀಸಾಮಾನ್ಯನ ಜೇಬಿಗೆ ಕೊಂಚವಾದರೂ ನೆಮ್ಮದಿ ಸಿಗುತ್ತದೆ. ಕೇಂದ್ರ ಸರಕಾರ ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!
Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.