ನದಿಗಳ ಜೋಡಣೆಯಲ್ಲಿ ರಾಜ್ಯಕ್ಕೂ ಪ್ರಾತಿನಿಧ್ಯ ಸಿಗಲಿ


Team Udayavani, Feb 5, 2022, 6:05 AM IST

ನದಿಗಳ ಜೋಡಣೆಯಲ್ಲಿ ರಾಜ್ಯಕ್ಕೂ ಪ್ರಾತಿನಿಧ್ಯ ಸಿಗಲಿ

ಈ ಬಾರಿಯ ಬಜೆಟ್‌ನಲ್ಲಿ ಪೆನಿನ್ಸುಲಾರ್‌ ನದಿ ಜೋಡಣೆಗೆ ಮುಂದಾಗಿರುವ ಕೇಂದ್ರ ಸರಕಾರ, ರಾಷ್ಟ್ರೀಯ ನದಿ ಜೋಡಣೆ ಯೋಜನೆ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಗೋದಾವರಿ-ಕೃಷ್ಣಾ, ಪೆನ್ನಾರ್‌-ಕಾವೇರಿ, ದಮನ್‌ಗಂಗಾ- ಪಿನ್‌ಜಾಲ್‌, ಪರತಾಪಿ-ನರ್ಮದಾ ಸೇರಿ ರಾಷ್ಟ್ರದ 5 ಮಹತ್ವದ ನದಿ ಜೋಡಣೆ ಅನುಷ್ಠಾನಕ್ಕೆ ಡಿಪಿಆರ್‌ ಸಿದ್ಧವಾಗಿದ್ದು 44,605 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ.

ಭಾರತದ ನೀರಾವರಿ ವ್ಯವಸ್ಥೆಯಲ್ಲಿ ಹಿಮಾಲಯನ್‌ ನದಿಗಳು ಹಾಗೂ ಪೆನಿನ್ಸುಲಾರ್‌ ನದಿಗಳು ಎಂದು ಪ್ರಮುಖ ಎರಡು ಭಾಗ ಗಳಿವೆ. ರಾಷ್ಟ್ರೀಯ ನದಿ ಜೋಡಣೆ ಯೋಜನೆ ಪರಿಕಲ್ಪನೆಯಲ್ಲಿಯೂ ಹಿಮಾಲಯನ್‌ ರಿವರ್‌ ಲಿಂಕಿಂಗ್‌, ಪೆನಿನ್ಸುಲಾರ್‌ ರಿವರ್‌ ಲಿಂಕಿಂಗ್‌ ಹಾಗೂ ರಾಜ್ಯ ಮಟ್ಟಗಳಲ್ಲಿ ಸಣ್ಣ ಪುಟ್ಟ ನದಿ ಜೋಡಣೆಗಾಗಿ ಇಂಟ್ರಾ ರಿವರ್‌ ಲಿಂಕಿಂಗ್‌ ಎಂದು 3 ಹಂತದಲ್ಲಿ ಯೋಜನೆಗಳು ಕಾರ್ಯಗತಗೊಳ್ಳುತ್ತವೆ.

ಈ ಯೋಜನೆ ಇಂದು ನಿನ್ನೆಯದಲ್ಲ. ಸುಮಾರು 50 ವರ್ಷಗಳ ಹಿಂದೆ 1972ರಲ್ಲಿಯೇ ದೇಶದ ಶ್ರೇಷ್ಠ ನೀರಾವರಿ ತಜ್ಞ ಹಾಗೂ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವರಾದ ಕೆ. ಎಲ್‌. ರಾವ್‌ ಈ ಕುರಿತು ಚಿಂತನೆ ನಡೆಸಿದ್ದರು. 2016ರಲ್ಲಿಯೇ ಆಂಧ್ರಪ್ರದೇಶ ಸರಕಾರ “ಪಟ್ಟೆ ಸೀಮಾ ಲಿಫ್ಟ್ ಇರಿಗೇಶನ್‌ ಪ್ರೋಜೆಕ್ಟ್’ ಮೂಲಕ ಗೋದಾವರಿ-ಕೃಷ್ಣಾ ನದಿ ಜೋಡಣೆ ಮಾಡಿದೆ.

ಗೋದಾವರಿ ಮತ್ತು ಮಹಾನದಿ ಪರಿಚಯ: ಗೋದಾವರಿ ದಕ್ಷಿಣ ಭಾರತದ ಅತೀ ದೊಡ್ಡ ಹಾಗೂ ಭಾರತದ 2ನೇ ಅತೀ ದೊಡ್ಡ ನದಿ ಯಾಗಿದೆ. ಮಹಾರಾಷ್ಟ್ರದ ನಾಸಿಕ್‌ ಬಳಿಯ ತ್ತೈಂಬಕೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 1465 ಕಿ.ಮೀ. ಉದ್ದ ಹರಿದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಯ ಯಾಣಂ ಹಾಗೂ ಅಂತರ್ವೇದಿ ಬಳಿ ಬಂಗಾಲಕೊಲ್ಲಿ ಸೇರುತ್ತದೆ. ಮಹಾರಾಷ್ಟ್ರ, ಛತ್ತೀಸಗಢ‌, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ 7 ರಾಜ್ಯಗಳಲ್ಲಿ ಜಲಾನಯನ ಪ್ರದೇಶವನ್ನು ಹೊಂದಿದೆ.

ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಗೋದಾವರಿ ಹಾಗೂ ಅದರ ಉಪನದಿಗಳಿಗೆ 350ಕ್ಕೂ ಅಧಿಕ ಆಣೆಕಟ್ಟು ಹಾಗೂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಮಹಾ ನದಿಯು ಛತ್ತೀಸಗಢ ರಾಜ್ಯದ ಉನ್ನತ ಪ್ರಾಂತ್ಯಕ್ಕೆ ಸೇರಿದ ರಾಯ್‌ಪುರ ಜಿಲ್ಲೆ ಯ ಸಿಂಹಾವ ಎಂಬಲ್ಲಿ ಹುಟ್ಟುತ್ತದೆ. ಮುಂದೆ ಒಡಿಶಾದಲ್ಲಿ ಹರಿದು ಬ್ರಾಹ್ಮಿಣಿ ನದಿಯೊಂದಿಗೆ ಸಂಗಮಿಸಿ ಬಂಗಾಲಕೊಲ್ಲಿ ಸೇರುತ್ತದೆ. ಛತ್ತೀಸಗಢ‌, ಮಹಾರಾಷ್ಟ್ರ, ಝಾರ್ಖಂಡ್‌, ಒಡಿಶಾ ರಾಜ್ಯಗಳಲ್ಲಿ ಜಲಾನಯನ ಪ್ರದೇಶವನ್ನು ಹೊಂದಿದೆ.

ಯೋಜನೆಯ ಅನುಷ್ಠಾನ ಹೇಗೆ?: ಎಲ್ಲ ಬಳಕೆಯ ಅನಂತರವೂ ಮಹಾ ನದಿಯಲ್ಲಿ ದೊರೆಯುವ 12,165 ಎಂ.ಸಿ.ಎಂ ನೀರನ್ನು ಮಹಾ ನದಿ-ಗೋದಾವರಿ ಲಿಂಕ್‌ ಕೆನಾಲ್‌ ಮೂಲಕ ಗೋದಾವರಿ ನದಿಗೆ ಸೇರಿಸುವುದು. ಅನಂತರ ಗೋದಾವರಿ ನದಿಯಿಂದ ದೊರೆಯುವ 26,122 ಎಂ.ಸಿ.ಎಂ. ನೀರನ್ನು ಇಚಂಪಲ್ಲಿ-ನಾಗಾರ್ಜುನ ಸಾಗರ, ಇಚಂ ಪಲ್ಲಿ-ಪುಲಿಚಿಂತಲಾ, ಪುಲವಾರಂ-ವಿಜಯವಾಡ ಮೂಲಕ 3 ಲಿಂಕ್‌ ಗಳ ಮೂಲಕ ಕೃಷ್ಣಾ ನದಿಗೆ ಸೇರಿಸುವುದು. ಯೋಜನೆಯ ಮೂಲಕ ಕೃಷ್ಣಾ ಕಣಿವೆಗೆ ದೊರೆತ 26,122 ಎಂ.ಸಿ.ಎಂ ನೀರಿನಲ್ಲಿ 14,080 ಎಂ.ಸಿ.ಎಂ. ನೀರನ್ನು ಆಲಮಟ್ಟಿ-ಪೆನ್ನಾರ್‌, ಶ್ರೀಶೈಲಂ- ಪೆನ್ನಾರ್‌, ನಾಗಾರ್ಜುನಸಾಗರ- ಸೋಮಸಿಲಾ ಮೂಲಕ 3 ಲಿಂಕ್‌ಗಳಲ್ಲಿ ಪೆನ್ನಾರ್‌ ಕಣಿವೆಗೆ ಸೇರಿಸುವುದು. ಅಲ್ಲಿಂದ 8,565 ಎಂ.ಸಿ.ಎಂ. ನೀರನ್ನು ಕಾವೇರಿ ಕಣಿವೆಗೆ ಸೇರಿಸುವ ಯೋಜನೆಯನ್ನು ಕೇಂದ್ರ ಸರಕಾರ ಸಿದ್ದಪಡಿಸಿದೆ.

ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ: 1980ರಲ್ಲಿ ಯೋಜನೆ ಅನುಷ್ಠಾನಕ್ಕೆ ಚಿಂತಿಸಿದಾಗ ಹಂಚಿಕೆಯಾದಂತೆ ಒಟ್ಟು 1,300 ಟಿ.ಎಂ.ಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ 283 ಟಿಎಂಸಿ ಅಡಿ ಹಂಚಿಕೆ ಮಾಡಿ ಅದರಲ್ಲಿ ಕೃಷ್ಣಾ ಕಣಿವೆಯಲ್ಲಿ 196 ಹಾಗೂ ಕಾವೇರಿ ಕಣಿವೆಯಲ್ಲಿ 87 ಟಿಎಂಸಿ ಅಡಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಸದರಿ ಯೋಜನೆಯ ನೀರು ಹಂಚಿಕೆಯನ್ನು 2000ದಲ್ಲಿ ಪುನರ್‌ ಪರಿ ಶೀಲಿಸಿ ಒಟ್ಟು ನೀರಿನ ಹಂಚಿಕೆಯನ್ನು 925 ಟಿಎಂಸಿ ಅಡಿಗೆ ಇಳಿಸಲಾಯಿತು. ಆಗ ಕರ್ನಾಟಕದ ಪಾಲನ್ನು 164 ಟಿಎಂಸಿ ಅಡಿಗೆ ಕಡಿತ ಗೊಳಿಸಿ ಕೃಷ್ಣಾ ಕಣಿವೆಗೆ 107 ಹಾಗೂ ಕಾವೇರಿ ಕಣಿವೆಗೆ 57 ಟಿಎಂಸಿ ಅಡಿ ನಿಗದಿಪಡಿಸಲಾಯಿತು. ಇದೇ ಯೋಜನೆ ಕುರಿತು 2010ರಲ್ಲಿ ಎನ್‌ಡಬ್ಲ್ಯುಡಿಎ ಮತ್ತೊಮ್ಮೆ ಪರಿಶೀಲಿಸಿ ಒಟ್ಟು ನೀರನ್ನು 718 ಟಿಎಂಸಿ ಅಡಿಗೆ ನಿಗದಿಪಡಿಸಿ ಈ ಬಾರಿ ಕರ್ನಾಟಕದ ಪಾಲನ್ನು ಸಂಪೂರ್ಣ ರದ್ದುಗೊಳಿಸಲಾಯಿತು. ಕರ್ನಾಟಕಕ್ಕೆ ಪ್ರಾರಂಭಿಕ ಹಂತದಲ್ಲಿ 283 ಟಿಎಂಸಿ ಅಡಿ ನೀರನ್ನು ಈ ಯೋಜನೆಯಡಿ ನಿಗದಿಪಡಿಸಲಾಗಿತ್ತು. ಆದರೆ ಕೊನೇ ಹಂತದಲ್ಲಿ ನೀರು ಹಂಚಿಕೆಯನ್ನು ಪೂರ್ಣ ರದ್ದು ಪಡಿಸಿದ್ದು ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಈಗ ಅನ್ಯಾಯವನ್ನು ಸರಿಪಡಿಸಿ ನ್ಯಾಯಯುತ ಪಾಲನ್ನು ಪಡೆಯುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿದೆ.

ಪ್ರತೀ ಹಂತದಲ್ಲೂ ಭಾಗೀದಾರ ಆದರೆ ಯೋಜನೆ ಪ್ರತಿಫ‌ಲದಲ್ಲಿ ಪಾಲಿಲ್ಲ:
ಮಹಾತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಯನ್ನು 9 ಹಂತಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಪ್ರತೀ ಹಂತದ ಯೋಜನೆ ಯಲ್ಲಿಯೂ ಕರ್ನಾಟಕದ ಭಾಗವಹಿಸುವಿಕೆ ಆವಶ್ಯಕ ವಾಗಿದೆ. ಪೆನಿನ್ಸುಲಾರ್‌ ನದಿ ಜೋಡಣೆ ಯೋಜನೆಯ ಮುಖ್ಯ ಉದ್ದೇಶವೇ ಕೊರತೆಯಾದ ಜಲಾನಯನ ಪ್ರದೇಶವನ್ನು ಸಮೃದ್ದಗೊಳಿಸುವುದು. ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿಯೇ ಅತೀ ಹೆಚ್ಚು ಬಯಲುಸೀಮೆ ಪ್ರದೇಶವಿದೆ. ಆಲಮಟ್ಟಿ ಆಣೆಕಟ್ಟಿಗೆ ಹೊಂದಿಕೊಂಡ ಸುತ್ತಲಿನ ಪ್ರದೇಶದಲ್ಲಿಯೇ ನೀರಾವರಿ ಕೊರತೆ ಇದೆ.

ಬಾಗಲಕೋಟ, ಬೆಳಗಾವಿ, ವಿಜಯಪುರ, ಕೊಪ್ಪಳ, ಯಾದಗಿರಿ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿಗೆ ಉತ್ತೇಜನ ನೀಡುವ ಸದಾವಕಾಶಗಳಿವೆ. ಕೃಷ್ಣೆಯ ಉಪನದಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ನಿರಂತರವಾಗಿ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. 22,000 ಕೋಟಿ ವೆಚ್ಚದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ದಶಕಗಳೇ ಕಳೆದರೂ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಯಡಿ ದೊರೆಯುವ ನೀರಿನಿಂದ ಈ ಗಂಭೀರ ಸಮಸ್ಯೆಗಳ ಪರಿಹಾರ ಸಾಧ್ಯವಿದೆ.

ಈಗಾಗಲೇ ಪಟ್ಟೆಸೀಮಾ ಯೋಜನೆಯಡಿ ಗೋದಾವರಿ ನೀರನ್ನು ಕೃಷ್ಣೆಗೆ ಹರಿಸಿ ಆಂದ್ರಪ್ರದೇಶ ನದಿ ಜೋಡಣೆ ಲಾಭ ಪಡೆದುಕೊಂಡಿದೆ. ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿಯೂ ಗೋದಾವರಿ-ಕೃಷ್ಣಾ ಜೋಡಣೆಯ 3 ಲಿಂಕ್‌ಗಳು ಆಂಧ್ರಪ್ರದೇಶಕ್ಕೆ ಲಾಭ ತಂದುಕೊಡುತ್ತವೆ. ಪಾಲಾರ್‌, ಪೆನ್ನಾರ, ಕಾವೇರಿಗೆ ಯೋಜನೆಯಡಿ ನೀರು ಹರಿಸುವ ಮೂಲಕ ಮೂಲಕ ತಮಿಳುನಾಡಿಗೆ ಅತೀ ದೊಡ್ಡ ಪ್ರಮಾಣದ ನೀರು ಹರಿಸುವ ಸ್ಪಷ್ಟ ಗುರಿ ಈ ಯೋಜನೆಯಡಿ ಕಾಣುತ್ತಿದೆ.

ಮಧ್ಯ ಹಾಗೂ ದಕ್ಷಿಣ ಭಾರತದ ಮಹಾನದಿ, ಗೋದಾವರಿ ನದಿಗಳ ಹೇರಳವಾದ ಜಲಸಂಪನ್ಮೂಲವನ್ನು ಕೃಷ್ಣಾ, ಕಾವೇರಿ ಮೂಲಕ ದಕ್ಷಿಣ ಭಾರತ ದಾದ್ಯಂತ ವಿಸ್ತರಿಸಿ ಸದುಪಯೋಗಪಡಿಸಿಕೊಳ್ಳುವ ಮಹಾತ್ವಾ ಕಾಂಕ್ಷೆ ಈ ಯೋಜನೆಯಲ್ಲಿರುವುದರಿಂದ ಕೃಷ್ಣಾ ಮತ್ತು ಕಾವೇರಿ ಕಣಿವೆ ಯ ಭಾಗೀಧಾರ ಎಲ್ಲ ರಾಜ್ಯಗಳ ಹಿತ ಕಾಯ್ದರೆ ಮಾತ್ರ ಯೋಜನೆಯ ಪೂರ್ಣ ಫ‌ಲ ಪಡೆಯಬಹುದು.

ಯೋಜನೆಗೆ ಭೂಮಿ, ಸೌಕರ್ಯ ನಮ್ಮದು, ನೀರು ಮಾತ್ರ ಆಂಧ್ರ-ತಮಿಳುನಾಡಿಗೆ!:
ಹಂತ-1ರಲ್ಲಿ ಮಹಾನದಿಯಿಂದ ಗೋದಾವರಿ ನದಿಗೆ ನೀರು ಹರಿಸಲು ಒಡಿಶಾ ರಾಜ್ಯದಲ್ಲಿ ಮಹಾನದಿಗೆ ಅಡ್ಡಲಾಗಿ ಮಣಿಭದ್ರಾ ಬಳಿ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದರಿಂದ 59,400 ಹೆಕ್ಟೇರ್‌ ಭೂಪ್ರದೇಶ ಮುಳುಗಡೆಯಾಗುತ್ತದೆ ಎಂದು ಕಳವಳಗೊಂಡ ಒಡಿಶಾ ಸರಕಾರ ಯೋಜನೆ ವಿರೋಧಿಸಿತ್ತು. ಅನಂತರ ಬರಮುಲ್‌ ಬಳಿ ಕಡಿಮೆ ಭೂಮಿಯನ್ನು ಉಪಯೋಗಿಸಿಕೊಂಡು ಯೋಜನೆ ಅನುಷ್ಠಾನ ಗೊಳಿಸಲು ಒಪ್ಪಿಗೆ ಸೂಚಿಸಿತು. ಆದರೆ ನಮ್ಮ ರಾಜ್ಯದಲ್ಲಿ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ದೃಷ್ಟಿಯಿಂದ ಜಗತ್ತಿನಲ್ಲಿಯೇ ಅತೀ ದೊಡ್ಡ ಯೋಜನೆಯನ್ನಾಗಿಸಿ ಕಟ್ಟಿದ ಆಲಮಟ್ಟಿ ಆಣೆಕಟ್ಟು ಈ ಯೋಜನೆಯಡಿ ಪೆನ್ನಾರ್‌ ಕಣಿವೆ ಪ್ರದೇಶಕ್ಕೆ ನೀರು ಸಾಗಿಸಲು ಉಪಯೋಗವಾಗುತ್ತದೆ. ಆಲಮಟ್ಟಿ ಆಣೆಕಟ್ಟು ಉಪಯೋ ಗಿಸಿ ಕೊಂಡು ಯೋಜನೆ ಅನುಷ್ಠಾನಗೊಳಿಸುತ್ತಿರುವುದರಿಂದ ಆಲಮಟ್ಟಿ ಆಣೆಕಟ್ಟು ಪ್ರದೇಶ ವ್ಯಾಪ್ತಿಯ ಘಟಪ್ರಭಾ-ಮಲಪ್ರಭಾ ಕಾಡಾ ಮತ್ತು ನಾರಾಯಣಪೂರ ಕಾಡಾ ವ್ಯಾಪ್ತಿಯ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಅವಕಾಶ ಕಲ್ಪಿಸಬೇಕು.

ರಾಷ್ಟ್ರೀಯ ನದಿ ಜೋಡಣೆಯ ಪೆನಿನ್ಸುಲಾರ್‌ ನದಿ ಜೋಡಣೆ ಯೋಜನೆಯಲ್ಲಿ ಅನುಷ್ಠಾನವಾಗಬೇಕಿದ್ದ ವರದಾ-ಬೇಡ್ತಿ ನದಿ ಜೋಡಣೆ ಸ್ಥಳೀಯರ ವಿರೋಧದಿಂದಾಗಿ ಸಾಧ್ಯತಾ ವರದಿ ಸಿದ್ದಪಡಿ ಸಲು ಸಾಧ್ಯವಾಗಲಿಲ್ಲ. ಮತ್ತೊಂದು ಯೋಜನೆ ಹೇಮಾವತಿ- ನೇತ್ರಾ ವತಿ ನದಿ ಜೋಡಣೆ ಯೋಜನೆಯನ್ನು ಕರ್ನಾಟಕ ಸರಕಾರ ನೇತ್ರಾವತಿ ನದಿ ನೀರನ್ನು ಎತ್ತಿನಹೊಳೆ ಯೋಜನೆಯಡಿ ಬಳಕೆ ಮಾಡಿಕೊಳ್ಳುತ್ತಿ ರುವುದರಿಂದ ಪ್ರಸ್ತಾವನೆ ನಿಂತು ಹೋಯಿತು. ಹೀಗಾಗಿ ಗೋದಾ ವರಿ- ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಡಿ ಮಾತ್ರ ಕರ್ನಾಟಕ ರಾಷ್ಟ್ರೀಯ ನದಿ ಜೋಡಣೆ ಯೋಜನೆಯಡಿಪಾಲು ಪಡೆಯಲು ಸಾಧ್ಯವಿದೆ. ಹೀಗಾಗಿ ಸರಕಾರ ಈ ವಿಷಯದಲ್ಲಿ ಜಾಗೃತವಾಗಬೇಕಿದೆ.

ಪಕ್ಕದ ರಾಜ್ಯಗಳಿಗೆ ನೀರು ಸಾಗಿಸಲು ಕೇವಲ ಕಾರಿಡಾರ್‌ ರೂಪದಲ್ಲಿ ನಮ್ಮ ರಾಜ್ಯದ ನೀರಾವರಿ ವ್ಯವಸ್ಥೆ ಬಳಕೆ ಮಾಡಿಕೊಳ್ಳುವುದು ಆರೋಗ್ಯಕರ ಸಂಗತಿಯಲ್ಲ. ಗೋದಾವರಿ, ಕೃಷ್ಣಾ , ಕಾವೇರಿ ಮೂರು ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಹಕ್ಕುದಾರ ರಾಜ್ಯವಾಗಿದೆ. ಕೃಷ್ಣಾ ಮತ್ತು ಕಾವೇರಿ ನಮ್ಮ ರಾಜ್ಯದ ಪ್ರಮುಖ ನದಿ ಕಣಿವೆಗಳು ಹೀಗಾಗಿ ನಮಗೆ ನ್ಯಾಯಯುತ ಪಾಲು ನೀಡದೇ ಈ ಯೋಜನೆ ಅನುಷ್ಠಾನಗೊಳಿಸುವುದು ಸರಿಯಲ್ಲ.

ಕಳೆದ 6 ದಶಕಗಳಿಂದ ಕೃಷ್ಣೆಯ ಪೂರ್ಣಪ್ರಮಾಣದ ಬಳಕೆ ಸಾಧ್ಯ ವಾಗುತ್ತಿಲ್ಲ. ಹೀಗಾಗಿ ನಮ್ಮ 130 ಟಿ.ಎಂ.ಸಿ. ಅಡಿ ನೀರು ಪ್ರತೀ ವರ್ಷ ಆಂಧ್ರ-ತೆಲಂಗಾಣ ಸೇರುತ್ತಿದೆ. ವಿಪರ್ಯಾಸ ಎಂದರೆ ತಮಿಳು ನಾಡಿನ ನೀರಿನ ಬವಣೆ ನೀಗಿಸಲು 4 ರಾಜ್ಯಗಳು ಹಾಗೂ 5 ನದಿಗಳನ್ನು ದಾಟಿ ನೀರು ಸಾಗಿಸುತ್ತಿದ್ದಾರೆ. ಇಚ್ಚಾಶಕ್ತಿಯ ಕೊರತೆ ನಮ್ಮ ಹಿಂದುಳಿ ಯುವಿಕೆಗೆ ಕಾರಣವಾಗಿದೆ.

ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೊದಲು ಕಾರ್ಯಸಾಧುವಾಗಬಲ್ಲ ಸಣ್ಣ-ಸಣ್ಣ ನದಿಗಳನ್ನು ಜೋಡಿಸುವ ಕಾರ್ಯ ಪ್ರಾರಂಭವಾಗಬೇಕು. ಅನಂತರ ದೊಡ್ಡ ಯೋಜನೆಗಳನ್ನು ಕೈಗೆತ್ತಿ ಕೊಂಡರೆ ರಾಷ್ಟ್ರೀಯ ನದಿ ಜೋಡಣೆ ಯೋಜನೆ ಪರಿಕಲ್ಪನೆ ಸಾಕಾ ರವಾಗುತ್ತದೆ. ನಮ್ಮ ಪಶ್ಚಿಮ ಘಟ್ಟದ ನದಿಗಳ ನೀರು ಸದ್ಬಳಕೆಯಾಗಲು ಕಾಳಿ ನದಿ ನೀರನ್ನು ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೆ ಹರಿಸಲು ಸಾಧ್ಯವಿದೆ. ಕಳಸಾ-ಬಂಡೂರಿ, ಮಹಾದಾಯಿ ಯೋಜನೆಗಳು ಅಡೆತಡೆಗಳಿಂದ ಮುಕ್ತಿಹೊಂದಿ ತ್ವರಿತ ಅನು ಷ್ಠಾನವಾಗಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಯನ್ನಾಗಿ ಘೋಷಿಸುವ ಮೂಲಕ ಅನುಷ್ಠಾನಗೊಳಿಸಿ ಉತ್ತರ ಕರ್ನಾಟಕದ ಹಿತ ಕಾಯುವ ಕೆಲಸವಾಗಬೇಕು. ಗೋದಾವರಿ -ಕೃಷ್ಣಾ- ಕಾವೇರಿ ನದಿ ಯೋಜನೆಯಲ್ಲಿಯೂ ಉತ್ತರ ಕರ್ನಾಟಕದ ಕೃಷ್ಣಾ ಕಣಿವೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯದೇ ಕೃಷ್ಣಾ ಕಣಿವೆ ಮತ್ತೆ ಅನಾಥವಾದರೆ ಹೇಗೆ?

ನೀರು ಅಮೂಲ್ಯ ಸಂಪನ್ಮೂಲ. ಒದಗುವ ಸಂಪನ್ಮೂಲವನ್ನು ವೃಥಾ ಬಿಟ್ಟುಕೊಟ್ಟು ಅನಂತರ ಮರುಕಪಡುವ ಸಂದಿಗ್ಧತೆ ನಮಗೆ ಬಾರ ದಿರಲಿ. ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನವಾಗಿ ದಕ್ಷಿಣದ ಗಂಗೆ ಗೋದಾವರಿ ಕರ್ನಾಟಕದ ರೈತರ ಬದುಕನ್ನು ಬೆಳಗಲಿ ಎಂಬುದು ಕನ್ನಡಿಗರ ಆಶಯವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ವಿರುವುದರಿಂದ ರಾಜ್ಯ ಸರಕಾರ ಹೇಗೆ ಈ ಅವಕಾಶವನ್ನು ಬಳಸಿ ಕೊಳ್ಳುತ್ತದೆ ಹಾಗೂ ಕೇಂದ್ರ ಸರಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡೋಣ.

-ಸಂಗಮೇಶ ಆರ್‌. ನಿರಾಣಿ
ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.