ಕಷ್ಟಗಳ ಸೈಕಲ್ ಹೊಡೆದು ಕಿರೀಟ ದಕ್ಕಿಸಿ ಕೊಂಡ!
Team Udayavani, May 29, 2022, 6:10 AM IST
“ಮೊದಲು ಪ್ರೈಮರಿ ಸ್ಕೂಲ್ ಟೀಚರ್ ಆಗಿದ್ದರಂತೆ. ಆಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಟ್ರ್ಯಾಕ್ಟರ್ ಆಫೀಸರ್ ಆದ್ರಂತೆ. ಮತ್ತೆ ಪರೀಕ್ಷೆ ಬರೆದು ತಹಶೀಲ್ದಾರ್ ಆದ್ರಂತೆ! ಮುಂದೆ ಮದುವೆಯಾಗಿ, ಮಕ್ಕಳಾದ ಮೇಲೆ. ಐಎಎಸ್ ಬರೆದು, ಮೊದಲ ಪ್ರಯತ್ನದಲ್ಲೇ 176ನೇ ರ್‍ಯಾಂಕ್ ಬಂದು ಪಾಸ್ ಆಗಿ ಡಿ.ಸಿ. ಆಗಿಬಿಟ್ರಂತೆ! ಅವರ ಹೆಸರು-ವಿಜಯ್ ಅಮೃತ್ ಕೌಲುನೆ. ಅವರೀಗ ಒಡಿಶಾದ ಗಂಜಾಮ್ ಜಿಲ್ಲೆಯ ಡಿ.ಸಿ ಅವರ ಜನಪರ ಆಡಳಿತ ಕುರಿತು ಕಥೆಗಳೇ ಇವೆ’-ಇಂಥ ಮಾತುಗಳು ಹಲವರಿಂದ ಕೇಳಿಬಂದಾಗ, ಈ ಅಧಿಕಾರಿಯೊಂದಿಗೆ ಮಾತಾಡಬೇಕು, ಅವರು ನಡೆದು ಬಂದ ಹಾದಿಯ ಕುರಿತು ತಿಳಿಯಬೇಕು ಅನ್ನಿಸಿತು. ಹೇಗೋ ಅವರ ಫೋನ್ ನಂಬರ್ ಸಂಗ್ರಹಿಸಿ, ಸ್ವಲ್ಪ ಮಾತಾಡಬಹುದಾ ಎಂದು ಮೆಸೇಜ್ ಕಳಿಸಿದಾಗ ತತ್‌ಕ್ಷಣವೇ ಸ್ಪಂದಿಸಿದ ವಿಜಯ…, ತಮ್ಮ ಬದುಕಿನ ಕಥೆ ಹೇಳಿಕೊಂಡರು…
***
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗಾವ್ ನನ್ನ ಹುಟ್ಟೂರು. ಅಪ್ಪ, ಅಮ್ಮ, ಅಕ್ಕ ಮತ್ತು ನಾನು-ಹೀಗೆ ನಾಲ್ಕು ಜನರಿದ್ದ ಚಿಕ್ಕ ಕುಟುಂಬ ನಮ್ಮದು. ಬಟ್ಟೆಯಂಗಡಿಯಲ್ಲಿ ಟೈಲರ್ ಆಗಿದ್ದ ಅಪ್ಪನಿಗೆ ದಿನಕ್ಕೆ 200 ರೂ. ಸಂಬಳವಿತ್ತು. ಅದರಿಂದ ಸಂಸಾರ ತೂಗಿ ಸುವುದು ಕಷ್ಟ ಅನಿಸಿದ್ದರಿಂದ ಅಮ್ಮ ಮನೆಕೆಲಸಕ್ಕೆ ಹೋಗುತ್ತಿದ್ದಳು. ಸ್ವಲ್ಪ ಜಮೀನಿದ್ದರೂ ಮಳೆ ಆಶ್ರಿತ ಭೂಮಿ ಆಗಿದ್ದರಿಂದ ಬೆಳೆ ಸಿಗುವ ಬಗ್ಗೆ ಯಾವುದೇ ಗ್ಯಾರಂಟಿ ಇರಲಿಲ್ಲ. ಮೂರು ಹೊತ್ತಿನ ಅನ್ನ ಸಂಪಾದನೆಯೇ ಕಷ್ಟ ಅನ್ನುವಂಥ ಪರಿಸ್ಥಿತಿ. ನಾವು ಬಡವರು ಅನ್ನಿಸಿದಾಗೆಲ್ಲ ನಾನು ಖನ್ನನಾಗುತ್ತಿದ್ದೆ. ಆಗೆಲ್ಲ ಅಪ್ಪ ಹೇಳುತ್ತಿದ್ದರು: “ಬಡತನ ಶಾಶ್ವತವಲ್ಲ. ಚೆನ್ನಾಗಿ ಓದಿದ್ರೆ ನಲಿದಾಟದ ಬದುಕು, ಓದದೇ ಉಳಿದರೆ ನರಳಾಟದ ಬದುಕು-ಈ ಎರಡರಲ್ಲಿ ಯಾವುದು ಬೇಕೋ ನೀವೇ ಆಯ್ಕೆ ಮಾಡಿಕೊಳ್ಳಿ…’
ಅಪ್ಪನ ಮಾತುಗಳು ಮನಸಲ್ಲಿ ಗಟ್ಟಿಯಾಗಿ ಉಳಿದು ಬಿಟ್ಟವು. ಚೆನ್ನಾಗಿ ಓದಿ ನೌಕರಿಗೆ ಸೇರಿ ಸಂಭ್ರಮದಿಂದ ಬದುಕುವುದೇ ನನ್ನ ಗುರಿ ಎಂದು ಸ್ವಗತದಲ್ಲಿ ಹೇಳಿಕೊಂಡೆ. ಶ್ರದ್ಧೆಯಿಂದ ಓದಿ ಎಸೆಸೆಲ್ಸಿ, ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆಯಾದೆ. ನನ್ನ ಮಾರ್ಕ್ಸ್ ನೋಡಿದವರು- “ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟ್ ಸಿಗುತ್ತೆ. ಡಾಕ್ಟರ್ ಆಗಬಹುದು’ ಎಂದರು.
ಬದುಕಿನ ರೀತಿ ಮಾತಾಡುವಷ್ಟು ಸುಲಭದಲ್ಲಿ ಇರುವುದಿಲ್ಲ ಅನಿ ಸಿದ್ದು ಆಗಲೇ. ಏಕೆಂದರೆ ಈ ವೇಳೆಗೆ ಅಕ್ಕನ ಮದುವೆಯ ತಯಾರಿ ನಡೆದಿತ್ತು. ಅದಕ್ಕಾಗಿ ಅಪ್ಪ ನಾಲ್ಕಾರು ಕಡೆಯಲ್ಲಿ ಸಾಲ ಕೇಳಿದ್ದರು. ಕೃಷಿ ಉದ್ದೇಶಕ್ಕೂ ಸ್ವಲ್ಪ ಸಾಲ ಮಾಡಿದ್ದರು. ಇಂಥ ಪರಿಸ್ಥಿತಿಯಲ್ಲಿ ನಾನು ಮೆಡಿಕಲ್‌ಗೆ ಸೇರಿದ್ದರೆ, ಅನಂತರದ ಐದಾರು ವರ್ಷ ವಿದ್ಯಾಭ್ಯಾಸದ ಖರ್ಚು ಹೊಂದಿಸಲು ಮತ್ತೆ ಸಾಲಕ್ಕೆ ಕೈ ಚಾಚಬೇಕಿತ್ತು. ಸಾಲ, ಅದಕ್ಕೆ ಬೀಳುವ ಬಡ್ಡಿ, ಅದನ್ನೆಲ್ಲ ತೀರಿಸುವ ದಾರಿ ಸ್ಪಷ್ಟ ವಿರಲಿಲ್ಲ. ಇದಿಷ್ಟೂ ಅರ್ಥವಾ ಗುತ್ತಿದ್ದಂತೆಯೇ ಡಾಕ್ಟರ್ ಆಗುವ ಆಸೆಯನ್ನು ಕೈಬಿಟ್ಟೆ. 2 ವರ್ಷದ ಡಿ.ಎಡ್ ಕೋರ್ಸ್ ಮಾಡಿದರೆ, ಪ್ರೈಮರಿ ಸ್ಕೂಲ್ ಟೀಚರ್ ಕೆಲಸ ಸಿಗುತ್ತದೆ ಎಂದು ತಿಳಿದಾಗ, ಆ ಕೋರ್ಸ್ ಮುಗಿಸಿ ಮೇಷ್ಟ್ರ ಕೆಲಸಕ್ಕೆ ಸೇರಿಕೊಂಡೆ. ಇದೇ ವೇಳೆಗೆ ಅಕ್ಕನ ಮದುವೆಯೂ ಆಯಿತು.
ಈಗ ಪ್ರತೀ ತಿಂಗಳೂ ಸಣ್ಣ ಮೊತ್ತದ ಸಂಬಳ ಸಿಗುತ್ತಿದ್ದುದರಿಂದ ಕಷ್ಟಗಳನ್ನು ಎದುರಿಸುವ ಧೈರ್ಯ ಬಂದಿತ್ತು. ಬದುಕಿನಲ್ಲಿ ಏನಾದರೂ ಮಹತ್ವದ ಸಾಧನೆ ಮಾಡಬೇಕೆಂಬ ಹಂಬಲವೂ ಜತೆಯಾಯಿತು. ಜತೆಗಿದ್ದ ಗೆಳೆಯರಿಗೆ- ಹೆತ್ತವರಿಗೆ ನನ್ನಾಸೆ ಹೇಳಿಕೊಂಡೆ. ದೊಡ್ಡ ಹುದ್ದೆಗೇರಲು ಡಿಗ್ರಿ ಅಗತ್ಯ ಅನ್ನಿಸಿ ದಾಗ ದೂರಶಿಕ್ಷಣದಲ್ಲಿ ಪದವಿ ಪಡೆದೆ. ಇಲಾಖಾ ಪರೀಕ್ಷೆಗಳಿಗೆ ತಯಾರಾಗಲು ಸಿದ್ಧತೆ ನಡೆಸಿದೆ. ನಾನಿದ್ದ ಹಳ್ಳಿಯಲ್ಲಿ, ನಮ್ಮ ತಾಲೂಕಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿದ್ದ ಗೈಡ್, ಬುಕ್‌ಗಳು ಸಿಗುತ್ತಿರಲಿಲ್ಲ. ಒಂದು ದಿನ ರಜೆ ಹಾಕಿ ಗೈಡ್ ಖರೀದಿಗೆಂದು ಜಿಲ್ಲಾ ಕೇಂದ್ರಕ್ಕೆ ಹೋದೆ. ಅಲ್ಲಿ ಸಿಕ್ಕಿದ ನಮ್ಮ ಇಲಾಖೆಯ ಹಿರಿಯ ಅಧಿಕಾರಿ- “ಇದೆಲ್ಲ ಯಾಕ್ ಬೇಕ್ರಿ ನಿಮಗೆ? ಬ್ಯಾಗ್ ತುಂಬಾ ಬುಕ್ ತುಂಬಿ ಕೊಂಡ ಮಾತ್ರಕ್ಕೆ ಆಫೀಸರ್ ಆಗೋಕಾಗುತ್ತಾ? ತೆಪೆ ಪಾಠ ಮಾಡಿಕೊಂಡು ಇರಿ. ಅಷ್ಟೇ ನಿಮ್ಮ ಯೋಗ್ಯತೆ’ ಎಂದು ಹಂಗಿಸಿದರು.
ಏಕಾಗ್ರತೆ ಕಾಪಾಡಿಕೊಳ್ಳುವ ಕಾರಣಕ್ಕೆ ನಾನು ಕುಟುಂಬದ ಕಾರ್ಯಕ್ರಮಗಳಿಗೂ ಹೋಗುತ್ತಿರಲಿಲ್ಲ. ಮೊದಲ ಮೂರು ಪ್ರಯತ್ನದಲ್ಲಿ ಮಹಾರಾಷ್ಟ್ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟೆ. ಈ ವಿಷಯ ತಿಳಿದ ನಮ್ಮ ಸಂಬಂಧಿಗಳು-“ಆ ಪಂಡಿತ ಡುಮ್ಕಿ ಹೊಡೆದನಂತೆ! ದಿನವೆಲ್ಲ ಪುಸ್ತಕ ಹಿಡ್ಕೊಂಡು ಕೂತು ಅದೇನು ದಬ್ಟಾಕಲು ಸಾಧ್ಯ ಆಯ್ತು?’ ಎಂದು ವ್ಯಂಗ್ಯ ವಾಡುತ್ತಿದ್ದರು. ಇಂಥ ಸಂದರ್ಭದಲ್ಲೆಲ್ಲ ಸಂಕಟ ವಾಗುತ್ತಿತ್ತು. ಆಗ ಅಪ್ಪ-“ಪರೀಕ್ಷೆಗೆ ಓದುವುದರಿಂದ ತಿಳಿವಳಿಕೆ ಹೆಚ್ಚುತ್ತೆ. ಜಾಸ್ತಿ ಓದಿದರೆ ಪಂಡಿತರೇ ಆಗಬಹುದು. ಒಳ್ಳೆಯ ಲೆಕ್ಚರರ್ ಅನ್ನಿಸಿಕೊಳ್ಳಬಹುದು. ಜನ ಸಾವಿರ ಮಾತಾಡ್ತಾರೆ. ಅದಕ್ಕೆಲ್ಲ ತಲೆ ಕೆಡಿಸ್ಕೊಬೇಡ. ಮಾತಿನ ಮೂಲಕ ಅಲ್ಲ, ಸಾಧನೆಯ ಮೂಲಕ ಅವರಿಗೆ ಉತ್ತರ ಕೊಡು’ ಎಂದರು!
ಅಪ್ಪನ ಈ ಮಾತಿನಿಂದ ಬೇಸರ ಕಳೆಯಿತು. ಮತ್ತೆ ಪರೀಕ್ಷೆ ಬರೆದೆ. ಈ ಬಾರಿ ಗೆಲುವು ನನ್ನದಾಯಿತು. ಸೇಲ್ಸ್ ಟ್ಯಾಕ್ಸ್ ಆಫೀಸರ್ ಹುದ್ದೆ ಸಿಕ್ಕಿತು. ಅದರ ಮುಂದಿನ ವರ್ಷ ಮತ್ತೂಮ್ಮೆ ಪರೀಕ್ಷೆ ಬರೆದು ಎರಡನೇ ರ್‍ಯಾಂಕ್ ಪಡೆದೆ. ಪರಿಣಾಮ; ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾದೆ. ಹೀಗಿರುವಾಗಲೇ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಅಗರ್‌ವಾಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು. ಅದೊಮ್ಮೆ ನನ್ನ ಬಾಳಕಥೆಯನ್ನು ಆಲಿಸಿದ ಅವರು- “ನಿಮಗೆ ಐಎಎಸ್ ಮಾಡುವ ಕೆಪ್ಯಾಸಿಟಿ ಇದೆ. ಪ್ರಯತ್ನ ಮಾಡಿ’ ಎಂದರು! ಈ ಪ್ರೋತ್ಸಾಹದ ಮಾತಿನಿಂದ ನನ್ನ ಹುಮ್ಮಸ್ಸು ಹೆಚ್ಚಿತು. ತಹಶೀಲ್ದಾರ್ ಕೆಲಸ ಮಾಡುತ್ತಲೇ ಬಿಡುವಿನ ಸಮಯದಲ್ಲಿ ಐಎಎಸ್‌ಗೆ ಓದಿಕೊಂಡೆ. ಇಂಗ್ಲಿಷ್‌ನಲ್ಲಿ ಪ್ರಾವೀಣ್ಯ ಸಾಲದು ಅನ್ನಿಸಿ ದಾಗ ಮಾತೃಭಾಷೆ ಮರಾಠಿಯಲ್ಲಿ ಪರೀಕ್ಷೆ ಬರೆದು, ಮೊದಲ ಪ್ರಯತ್ನದಲ್ಲಿಯೇ 176 ನೇ ರ್‍ಯಾಂಕ್ ಬಂದೆ. ಆ ಮೂಲಕ, ದಿನಗೂಲಿ ನೌಕರನ ಮಗ ಐಎಎಸ್ ಮಾಡಿದ ಎಂಬ ಸುದ್ದಿಗೆ ಕಾರಣನಾದೆ! ನಾನು ಜಿಲ್ಲಾಧಿಕಾರಿಯಾದೆನಲ್ಲ; ಆಗ ಅಪ್ಪ ಒಂದು ಮಾತು ಹೇಳಿ ದರು: ದೊಡ್ಡ ಹುದ್ದೆ ಸಿಕ್ಕಿದೆ. ಜನರಿಗೆ ಅನುಕೂಲ ಆಗುವಂಥ ಕೆಲಸ ಮಾಡು. ಅಧಿಕಾರ ಇವತ್ತು ಬರುತ್ತೆ, ನಾಳೆ ಹೋಗುತ್ತೆ. ಆದ್ರೆ ಪ್ರೀತಿ- ವಿಶ್ವಾಸ ಕೊನೆಯವರೆಗೂ ಇರ್ತದೆ. ಜನರ ವಿಶ್ವಾಸ ಉಳಿಸ್ಕೊ…’
***
ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ನಾನೀಗ ಡಿ.ಸಿ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸ್ವಕ್ಷೇತ್ರ ಇದು. ನಿಜ ಹೇಳಬೇಕು ಅಂದ್ರೆ ನನಗೆ ಐಎಎಸ್ ಅಧಿಕಾರಿ ಆಗಬೇಕು ಅನ್ನುವ ಐಡಿಯಾನೇ ಇರಲಿಲ್ಲ. ಆದ್ರೆ ನಮ್ಮ ಸೀನಿಯರ್ ಆಗಿದ್ದ ಸಂಜೀವ್ ಕುಮಾರ್ ಅವರನ್ನು ನೋಡಿದ ಅನಂತರ- ಡಿ.ಸಿ.ಗೆ ಹೆಚ್ಚು ಅಧಿಕಾರ ಇರುತ್ತೆ. ಜನಪರ ಯೋಜನೆ ಹಮ್ಮಿಕೊಳ್ಳುವ, ಅದನ್ನು ಜಾರಿಗೆ ತರುವ ಅವಕಾಶ ಇರುತ್ತೆ. ಹೆಚ್ಚಿನ ಗೌರವವೂ ಸಿಗುತ್ತೆ. ಹಾಗಾಗಿ ನಾನೂ ಡಿ.ಸಿ. ಆಗಬೇಕು ಅನ್ನಿಸಿಬಿಡು.
“ಅಧಿಕಾರಿಯಾದವನು ಕಚೇರಿಯಲ್ಲೇ ಕಳೆದು ಹೋಗಬಾರದು. ಜನರ ಜತೆ ಬೆರೆಯಬೇಕು. ಅವರ ಬದುಕು, ಕಷ್ಟ, ಕೆಲಸದ ಬಗ್ಗೆ ತಿಳಿಯಬೇಕು. ಸರಕಾರದ ಕಡೆಯಿಂದ ಸಿಗುವ ಸೌಲಭ್ಯ ಒದಗಿ ಸಬೇಕು’-ಇದು ನನ್ನ ನಿಲುವು. ಇದನ್ನೇ ಕಿರಿಯ ಅಧಿಕಾರಿಗಳಿಗೂ ಹೇಳಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಕೆಲಸ ಆರಂಭಿಸಿದೆ. ಪ್ರತೀ ಹಳ್ಳಿಗಳ ಹಿರಿಯರ ನಂಬರ್ ದಾಖಲಿಸಿಕೊಂಡೆ. ವಾರಕ್ಕೊಮ್ಮೆ ಅವರಿಗೆ ಕರೆ ಮಾಡಿ, ಊರಲ್ಲಿ ಏನಾದರೂ ಸಮಸ್ಯೆ ಇದೆಯಾ? ಇದ್ದರೆ ಸಂಕೋಚವಿಲ್ಲದೆ ಹೇಳಿ ಎಂದು ವಿನಂತಿಸಿದೆ. ಪರಿಣಾಮ; ಈ ಅಧಿಕಾರಿ ನಮ್ಮವನು ಅನ್ನುವ ಫೀಲ್ ಹಳ್ಳಿಗಳ ಜನರಿಗೆ ಬಂದು ಬಿಡ್ತು. ಕೋವಿಡ್ ಮೊದಲ ಅಲೆ ಬಂತಲ್ಲ; ಆಗ ಎಷ್ಟು ವ್ಯವಸ್ಥಿತವಾಗಿ ಕೆಲಸ ಮಾಡಿದ್ವಿ ಅಂದರೆ- ನಾನಿದ್ದ ಜಿಲ್ಲೆಯಲ್ಲಿ ಒಂದೂ ಕೇಸ್ ಇರಲಿಲ್ಲ! ಆದರೆ ಕೆಲವೇ ದಿನಗಳಲ್ಲಿ ಮುಂಬಯಿ, ಸೂರತ್ ಮತ್ತು ಇತರೆ ಜಿಲ್ಲೆಗಳಿಂದ ಜನ ನುಗ್ಗಿ ಬಂದರು. ಒಂದೇ ತಿಂಗಳಲ್ಲಿ ಕೋವಿಡ್ ಪಾಸಿಟಿವ್ ಹೊಂದಿದವರ ಸಂಖ್ಯೆ ವಿಪರೀತ ಹೆಚ್ಚಿತು. ನಾವೀಗ ಧೈರ್ಯ ಕಳೆದುಕೊಳ್ಳಬಾರದು ಅಂದುಕೊಂಡೇ ಹಳ್ಳಿಗಳ ಮುಖಂಡರು, ಅಧಿಕಾರಿಗಳ ಮೀಟಿಂಗ್ ಕರೆದೆ. ಕೋವಿಡ್‌ನಿಂದ ಪಾರಾಗಲು ವಹಿಸಬೇಕಿರುವ ಎಚ್ಚರಿಕೆ ಕುರಿತು ವಿವರಿಸಿದೆ.ಜನರಿಗೆ ನಮ್ಮ ಬಗ್ಗೆ ಎಂಥಾ ನಂಬಿಕೆ ಬಂದಿತ್ತು ಅಂದರೆ- ಜನ ಎಲ್ಲ ನಿಯಮಗಳನ್ನೂ ಚಾಚೂ ತಪ್ಪದೆ ಪಾಲಿಸಿದರು. ಕೋವಿಡ್ ಗೆದ್ದರು!
ಹಾಗಂತ ಸವಾಲುಗಳು ಇರಲಿಲ್ಲವೆಂದಲ್ಲ. ನಾನು ತಹಶೀಲ್ದಾರ್ ಆಗಿದ್ದಾಗ ಮರಳು ಕಳ್ಳಸಾಗಣೆಯ ದೂರು ಬಂತು. ಪೊಲೀಸರನ್ನು ಜತೆಗಿಟ್ಟುಕೊಂಡೇ ನಡುರಾತ್ರಿಯಲ್ಲಿ ಮರಳು ಮಾಫಿಯಾ ಅಡ್ಡೆಗೆ ನುಗ್ಗಿ ಹೋದೆವು. ಅಲ್ಲಿದ್ದ ರೌಡಿಗಳು ನಮ್ಮ ಮೇಲೆ ಕಲ್ಲು ತೂರಿದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಅಲ್ಲಿಂದ ತಪ್ಪಿಸ್ಕೊಂಡು ಬಂದೆವು. ಮರುದಿನ ಮತ್ತೆ ಹೋಗಿ, ಹಲ್ಲೆ ನಡೆಸಿದ್ದ ರೌಡಿಗಳನ್ನು ಗುರುತಿಸಿ ಅವರನ್ನು ಬಂಧಿಸಿದ್ದು ಮಾತ್ರವಲ್ಲ; ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡೆ. ಈ ಆಫೀಸರ್ ನಮಗೆ ಬಗ್ಗೊದಿಲ್ಲ ಎಂದು ಅರ್ಥವಾದಾಗ ರೌಡಿಗಳು ಊರು ಬಿಟ್ಟರು.
ಬಾಲ್ಯವಿವಾಹ ತಡೆಯುವಲ್ಲಿ ಯಶ ಕಂಡಿದ್ದನ್ನೂ ಇಲ್ಲಿ ಹೇಳಬೇಕು. ಬಡತನದ ಕಾರಣಕ್ಕೆ, ಹೆಣ್ಣುಮಕ್ಕಳಿಗೆ ಚಿಕ್ಕಂದಿನಲ್ಲೇ ಮದುವೆ ಮಾಡಲಾಗುತ್ತಿತ್ತು. ಇದನ್ನು ತಡೆಯಲು ಒಂದು ಉಪಾಯ ಮಾಡಿದೆ. ಬಾಲ್ಯ ವಿವಾಹದ ಸುದ್ದಿ ಕೊಟ್ಟವರಿಗೆ, 5 ಸಾವಿರ ರೂಪಾಯಿ ಬಹುಮಾನ ಕೊಡುತ್ತೇವೆ ಮತ್ತು ಅವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ ಎಂದು ಘೋಷಿಸಿದೆ. ಬಹುಮಾನದ ಆಸೆಗೆ ಜನ ಸುದ್ದಿ ತಲುಪಿಸತೊಡಗಿದರು! ತತ್‌ಕ್ಷಣವೇ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಮದುವೆ ನಿಲ್ಲಿಸಿ, ಆ ಮಗುವನ್ನು ಓದಿಸಲು, ಗೃಹ ಕೈಗಾರಿಕೆಯ ತರಬೇತಿಗೆ ಕಳಿಸಲು ಸಲಹೆ ಮಾಡಿದೆ. ಒಳ್ಳೆಯ ಮಾತಿಗೆ ಬಗ್ಗದೇ ಹೋದವರಿಗೆ ಕಾನೂನಿನ ಬಗ್ಗೆ ತಿಳಿಸಿ, ಈ ತಪ್ಪಿಗೆ ಜೈಲು ಶಿಕ್ಷೆ ಆಗುತ್ತೆ, ಎಂದು ಎಚ್ಚರಿಕೆ ನೀಡಿದೆ. ಪರಿಣಾಮ; ಬಾಲ್ಯವಿವಾಹಗಳು ವಿರಳವಾದವು. ಓದುವ, ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಿತು. ಕೆಲವೊಮ್ಮೆ ಹಳ್ಳಿಗಳಿಗೆ ಹೋದಾಗ ಛಕ್ಕನೆ ಎದುರಾಗುವ ಹೆಣ್ಣು ಮಕ್ಕಳು- ನಿಮ್ಮಿಂದ ನಮ್ಮ ಬದುಕು ಹಸನಾಯಿತು ಎನ್ನುತ್ತ ಕೈ ಮುಗಿ ಯುತ್ತಾರೆ. ಆಗೆಲ್ಲ ಸಾರ್ಥಕ ಭಾವದಿಂದ ಕಣ್ತುಂಬಿ ಬರುತ್ತದೆ.
ಸರಕಾರಿ ಶಾಲೆಗಳ ಉನ್ನತೀಕರಣ, ರಾಜಸ್ವ ಸಂಗ್ರಹ, ವಾಮಾ ಚಾರದಂಥ ಪಿಡುಗಿಗೆ ತಡೆ ಹಾಕಿದ್ದು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿದ್ದು, ನರೇಗಾ ಯೋಜನೆಗಳ ಅನುಷ್ಠಾನ- ಇದರಲ್ಲೆಲ್ಲ ನಮಗೆ ದೊಡ್ಡ ಯಶ ಸಿಕ್ಕಿದೆ. ಎಲ್ಲ ಶ್ರೇಯ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಲ್ಲಬೇಕು. ಕಾರಣ ನಾನು ಕನಸಿನಲ್ಲೂ ನಿರೀಕ್ಷಿಸದಂಥ ಸ್ವಾತಂತ್ರ್ಯವನ್ನು ಅವರು ಕೊಟ್ಟಿದ್ದಾರೆ. ಜಿಲ್ಲೆಯ ಸಮಸ್ತ ನಾಗರಿಕರು ಮತ್ತು ಅಧಿಕಾರಿಗಳೂ ಈ ಯಶಸ್ಸಿಗೆ ಕಾರಣರು. ಈ ಹಿಂದೆ ಆಡಿಕೊಂಡಿದ್ದವರೇ ಈಗ ಹಾಡಿ ಹೊಗಳುತ್ತಿದ್ದಾರೆ. ರೀಲ್ ಮಾಸ್ಟರ್ ಎಂದು ವ್ಯಂಗ್ಯವಾಗಿ ಹೇಳಿದವರೇ ನೀವೀಗ ಹಲವರಿಗೆ ರೋಲ್ ಮಾಡೆಲ್ ಎಂಬ ಮೆಚ್ಚುಗೆಯ ಮಾತಾಡಿದ್ದಾರೆ. ಇದನ್ನೆಲ್ಲ ಕಂಡಾಗ ಖುಷಿ ಆಗುತ್ತೆ.
ನನ್ನ ಪ್ರಕಾರ, ಸಕ್ಸಸ್ ಪಡೆಯಬೇಕೆಂದರೆ ಪರಿಶ್ರಮ ಮಾತ್ರವಲ್ಲ, ಸಾಧಿಸಿಯೇ ತೀರುವೆ ಎಂಬ ಛಲ ಇರಬೇಕು. ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ಸೋಲುಗಳಿಗೆ ಹೆದರದೇ ಮುನ್ನುಗ್ಗಿದರೆ ಮಾತ್ರ ಜೀವನ ಹೋರಾಟದಲ್ಲಿ ಗೆಲುವು ಪಡೆಯಬಹುದು’ ಎನ್ನುತ್ತಾ ತಮ್ಮ ಮಾತುಗಳಿಗೆ ಫುಲ್ ಸ್ಟಾಪ್ ಹಾಕಿದರು ವಿಜಯ….
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.