ಹಾಡುಗಳ ಜತೆಯಲ್ಲೇ ಲತಾ ಎಂದೆಂದಿಗೂ ಅಮರ
Team Udayavani, Feb 7, 2022, 6:00 AM IST
ಗಾನಕೋಗಿಲೆ, ಗಾನ ಸರಸ್ವತಿ, ಗಾನ ಶಾರದೆ, ಗಾನ ಸಾಮ್ರಾಜಿn, ಗಾನ ದೇವತೆ ಎಂದೆಲ್ಲ ಹೆಸರಾಗಿದ್ದವರು ಲತಾ. ಯಾವುದೇ ಬಿರುದು ಅಥವಾ ಪ್ರಶಸ್ತಿ ಜತೆಯಾದರೂ ಅವರು ಉಬ್ಬುತ್ತಿರಲಿಲ್ಲ. ಬದಲಿಗೆ ಸುಮ್ಮನೇ ಜಾಸ್ತಿ ಹೊಗಳ್ತೀರ, ಹಾಡುವುದು ನನ್ನ ಕೆಲಸ, ಅದು ನನ್ನ ಕರ್ತವ್ಯ ಮತ್ತು ಹೊಟ್ಟೆ ಪಾಡಿಗೆ ದೇವರು ಕರುಣಿಸಿದ ವರ. ಹೀಗಿರುವಾಗ ನನ್ನಲ್ಲಿ ಹೆಚ್ಚುಗಾರಿಕೆ ಏನಿದೆ ಅನ್ನುವಂಥ ಮುಖಭಾವ ಪ್ರದರ್ಶಿಸಿ ಮೌನವಾಗಿ ಇದ್ದುಬಿಡುತ್ತಿದ್ದರು.
ಚಿತ್ರರಂಗ ಯಾವತ್ತೂ ಚಿರ ಯವ್ವನಿಗರನ್ನೇ ಇಷ್ಟಪಡುತ್ತದೆ. ಇದೇ ಕಾರಣಕ್ಕೆ ಪ್ರತೀ 15 ವರ್ಷಕ್ಕೊಮ್ಮೆ ಹೀರೋಗಳು ಬದಲಾಗುತ್ತಾರೆ. ತ್ರಿಲೋಕ ಸುಂದರಿ ಅನ್ನಿಸಿಕೊಂಡವರು ಐದೇ ವರ್ಷಕ್ಕೆ ತೆರೆಮರೆಗೆ ಸರಿಯುತ್ತಾರೆ. ಈ ಕಾರಣದಿಂದಲೇ ಸಂಜೀವ್ ಕುಮಾರ್, ರಾಜೇಶ್ ಖನ್ನಾ, ಅಮಿತಾಭ್, ಧರ್ಮೇಂದ್ರ, ಸಲ್ಮಾನ್, ಆಮಿರ್, ಶಾರುಖ್, ಹೃತಿಕ್ ಎಂದು ಹೀರೋಗಳು, ಮಧುಬಾಲ, ನರ್ಗಿಸ್, ಹೇಮಾಮಾಲಿನಿ, ಶ್ರೀದೇವಿ, ಕಾಜೋಲ್, ಕರೀನಾ …ಎಂದೆಲ್ಲ ಹೀರೋಯಿನ್‌ಗಳೂ ಬದಲಾದರು.
ಆದರೆ 40ರ ದಶಕದಿಂದ ಆರಂಭಿಸಿ 2015ರ ವರೆಗೂ ಅಂದರೆ ಪೂರ್ತಿ 70 ವರ್ಷಗಳ ಕಾಲ ಎಲ್ಲ ನಾಯಕಿಯರಿಗೂ ದನಿಯಾಗಿ ಬೆಳ್ಳಿತೆರೆಯ ಮೆರುಗು ಹೆಚ್ಚಿಸಿದವರು ಲತಾ. ದಿನಗಳು ಕಳೆಯುತ್ತಾ ಹೋದಂತೆಲ್ಲÉ ಆಕೆಯ ದೇಹಕ್ಕೆ ಮಾತ್ರ ವಯಸ್ಸಾಗುತ್ತಿತ್ತು. ಏರುತ್ತಿರುವ ವಯಸ್ಸಿನ ಪರಿಣಾಮ ಆಕೆಯ ಕೊಳಲಿನಂಥ ಕೊರಳಿನ ಮೇಲೆ ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ಪರಿಣಾಮ, 70ನೇ ವಯಸ್ಸಿ ನಲ್ಲೂ 12ರ ಪೋರಿಯ ದನಿಯಲ್ಲಿ ಹಾಡುವುದು ಲತಾ ಅವರಿಗೆ ಸಾಧ್ಯವಾಯಿತು. ಅಂಕಿ ಅಂಶಗಳ ಪ್ರಕಾರ ಏಳು ದಶಕದ ಸುದೀರ್ಘ ಗಾನ ಪಯಣದಲ್ಲಿ 36 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಲತಾ. ಇಲ್ಲೊಂದು ಸ್ವಾರಸ್ಯವಿದೆ. ಕನ್ನಡವೂ ಸೇರಿದಂತೆ 36ಕ್ಕೂ ಹೆಚ್ಚು ಭಾಷೆಯ ಹಾಡುಗಳಿಗೆ ದನಿಯಾಗಿದ್ದ ಲತಾ ಹೆಚ್ಚು ಕಲಿತವರಲ್ಲ. ಆಕೆ ಶಾಲೆಗೆ ಹೋಗಿದ್ದು ಕೇವಲ 2 ದಿನ. ತಂದೆಯ ಆಕಸ್ಮಿಕ ನಿಧನದ ಕಾರಣ, ಶಾಲೆ ಬಿಟ್ಟು ದುಡಿಮೆಗೆ ನಿಲ್ಲಬೇಕಾಯಿತು. ಶಾಲೆಗೇ ಹೋಗದ ಆಕೆ ಹಲವು ಭಾಷೆ ಕಲಿತರು. ವೃತ್ತಿಬದುಕಿನಲ್ಲಿ ಅಪಾರ ಶಿಸ್ತು ರೂಢಿಸಿಕೊಂಡಿದ್ದರು. ರೆಕಾರ್ಡಿಂಗ್‌ಗೆ ತಡವಾಗಿ ಹೋಗಿದ್ದಾಗಲಿ, ಸ್ಟುಡಿಯೋದವರನ್ನು, ಸಂಗೀತ ನಿರ್ದೇಶಕರನ್ನು ಕಾಯಿಸಿದ್ದಾಗಲಿ ಇಲ್ಲವೇ ಇಲ್ಲ. ಬದುಕೆಂಬ ಪಾಠಶಾಲೆ ಅವರಿಗೆ ಗುರುವಾಯಿತು. ಗುರಿ ತೋರಿತು.
ಹಿಂದಿ ಚಿತ್ರರಂಗವೂ ಲತಾ ಅವರನ್ನು “ನೈಟಿಂಗೈಲ್ ಆಫ್ ಬಾಲಿವುಡ್’ ಎಂದು ಪ್ರೀತಿ-ಗೌರವದಿಂದ ಕರೆಯುತ್ತಿತ್ತು ನಿಜ. ಆದರೆ ಆರಂಭದ ದಿನಗಳಲ್ಲಿ ಈ ಹುಡುಗಿಯ ವಾಯ್ಸ… ತೆಳ್ಳಗಿದೆ. ಅದರಲ್ಲಿ ಮಾದಕತೆ ಯಾಗಲಿ, ರೋಮಾಂಚನ ಭಾವವಾಗಲಿ, ಮೃದು ಮಧುರ ಭಾವವಾಗಲೀ ಇಲ್ಲ. ಹಾಗಾಗಿ ಈಕೆಯ ಧ್ವನಿ ಹೀರೋಯಿನ್‌ಗಳಿಗೆ ಹೊಂದಿಕೆ ಆಗುವುದಿಲ್ಲ ಎಂದು ತಿರಸ್ಕರಿಸಲಾಗಿತ್ತು. ಈ ಸೋಲಿನಿಂದ ಕುಗ್ಗದ ಲತಾ, 1949ರಲ್ಲಿ ಬಿಡುಗಡೆಯಾದ “ಮಹಲ್’ ಸಿನೆಮಾದ ಆಯೇಗಾ ಅನವಾಲಾ ಗೀತೆಯ ಮೂಲಕ ಚಿತ್ರಪ್ರೇಮಿಗಳ ಹೃದಯಕ್ಕೇ ಲಗ್ಗೆ ಹಾಕಿದರು. ಮಹಲ್ ಸಿನೆಮಾದ ಮೂಲಕ ತನ್ನ ಯಶಸ್ಸಿನ ಮಹಲನ್ನೂ ಆಕೆ ಕಟ್ಟಿಕೊಂಡರು. ಹಿಂದಿ ಚಿತ್ರರಂಗದ ಆಗಸದಲ್ಲಿ ಲತಾ ಎಂಬ ಗಾನ ಸಾಮ್ರಾಜಿnಯ ಪರ್ವ ಆರಂಭವಾದದ್ದು ಹಾಗೆ.
ಅವರ ದನಿಯ ಕಾರಣದಿಂದಾಗಿ ಅದೆಷ್ಟೋ ಪದಗಳು ದೈವೀಕ ಸ್ಪರ್ಶ ಪಡೆದುಕೊಂಡವು. ಲತಾರ ಕಂಠಸಿರಿ ಇತ್ತು ಎಂಬ ಒಂದೇ ಕಾರಣದಿಂದ ಹಲವು ಸಾಮಾನ್ಯ ಹಾಡುಗಳು ಬೆಳ್ಳಿತೆರೆಯ ಬಂಗಾರದ ಗೀತೆಗಳೆಂದು ಹೆಸರಾದವು. ದೀರ್ಘ ಅವಧಿಯ ಅನಾರೋಗ್ಯದಿಂದ ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ ನಿಜ. ಆದರೆ ಹಾಡುಗಳ ಮೂಲಕ ಅವರು ಮಧುರ ನೆನಪಾಗಿ, ಇಂಪಾದ ರಾಗವಾಗಿ ಸದಾ ಜತೆಗೇ ಇರುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.