ಲೋಕಲ್ ಚುನಾವಣೆಗೆ ಮುಹೂರ್ತ
ಲೋಕ ಸಮರ ಮುಗಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
Team Udayavani, May 3, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ‘ಲೋಕ’ ಸಮರ ಮುಗಿದ ಬೆನ್ನಲ್ಲೇ ‘ಲೋಕಲ್’ ಸಮರಕ್ಕೆ ಮುಹೂರ್ತ ನಿಗದಿಯಾಗಿದ್ದು, ಎರಡನೇ ಹಂತದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಗುರುವಾರ ವೇಳಾಪಟ್ಟಿ ಪ್ರಕಟಿಸಿದೆ.
ಅದರಂತೆ, ರಾಜ್ಯದ 22 ಜಿಲ್ಲೆಗಳಲ್ಲಿ 8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 63 ನಗರ ಸ್ಥಳೀಯ ಸಂಸ್ಥೆಗಳ 1,361 ವಾರ್ಡ್‌ಗಳಲ್ಲಿ ಮೇ 29ರಂದು ಮತದಾನ ನಡೆಯಲಿದ್ದು, ಮೇ 9ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಚುನಾವಣೆ ಘೋಷಣೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಇದೇ ವೇಳೆ ಬಿಬಿಎಂಪಿಯ ಎರಡು ವಾರ್ಡ್, ತುಮಕೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ನಗರಸಭೆ, ಬೆಳಗಾವಿಯ ಜಿಲ್ಲೆಯ ಸದಲಗಾ ಪುರಸಭೆ ಮತ್ತು ಮುಗಳಖೋಡ ಪುರಸಭೆಯ ಒಂದೊಂದು ವಾರ್ಡ್‌ಗೆ ಉಪ ಚುನಾವಣೆ ನಡೆಯಲಿದೆ.
ಅಲ್ಲದೇ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ರಾಜ್ಯದ 8 ತಾಲೂಕು ಪಂಚಾಯಿತಿಗಳ 10 ಕ್ಷೇತ್ರಗಳ ಸದಸ್ಯ ಸ್ಥಾನಗಳು ಹಾಗೂ ಗ್ರಾಮ ಪಂಚಾಯಿತಿಗಳ 202 ಸದಸ್ಯ ಸ್ಥಾನಗಳ ಉಪ ಚುನಾವಣೆಗೂ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಉಪ ಚುನಾವಣೆಗಳಿಗೆ ಮೇ 29ರಂದು ಮತದಾನ ನಡೆಯಲಿದ್ದು, ಜಿಲ್ಲಾಧಿಕಾರಿಗಳು ಮೇ 13ಕ್ಕೆ ಅಧಿಸೂಚನೆ ಹೊರಡಿಸಲಿದ್ದಾರೆ. ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಉಪ ಚುನಾವಣೆಯ ಮತ ಎಣಿಕೆ ಮೇ 31ರಂದು ನಡೆಯಲಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟ ಸಂಬಂಧ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಈ ಮಾಹಿತಿ ನೀಡಿದರು.
ರಾಜ್ಯ ಚುನಾವಣಾ ಆಯೋಗವು 2018ರ ಸೆಪ್ಟಂಬರ್‌ವರೆಗೆ ಅವಧಿ ಮುಕ್ತಾಯವಾಗುವ ಒಟ್ಟು 109 ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆಸಿತ್ತು. ಈಗ 2019ರ ಮಾರ್ಚ್‌ರಿಂದ ಜುಲೈವರೆಗೆ ಅವಧಿ ಮುಕ್ತಾಯವಾಗುವ ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ವ್ಯಾಜ್ಯಗಳಿರುವ 39 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ, ಉಳಿದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 31ರವರೆಗೆ ಅದು ಇರುತ್ತದೆ ಎಂದು ಆಯುಕ್ತರು ತಿಳಿಸಿದರು.
22 ಜಿಲ್ಲೆಗಳಲ್ಲಿ ಚುನಾವಣೆ: ಉಡುಪಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆಸಲಾಗಿದೆ. ರಾಮನಗರ, ಕೊಡಗು, ಬೆಳಗಾವಿ, ಕಲಬುರಗಿ ಜಿಲ್ಲೆಯ ಚುನಾವಣೆ ನಡೆಸಲು ಬಾಕಿ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಹೈಕೋರ್ಟ್‌ನಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಎರಡನೇ ಹಂತದಲ್ಲಿ ಚುನಾವಣೆ ಇರುವುದಿಲ್ಲ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಚಾಮರಾಜನಗರ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೀದರ್, ಬಳ್ಳಾರಿ, ಯಾದಗಿರಿ ಸೇರಿ 22 ಜಿಲ್ಲೆಗಳಲ್ಲಿ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಕುಂದಗೋಳದಲ್ಲಿ ‘ಲೋಕಲ್’ ಚುನಾವಣೆ ಇಲ್ಲ: ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿರುವುದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಕುಂದುಗೋಳ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಈ ಕ್ಷೇತ್ರದ ಶಾಸಕರಾಗಿದ್ದ ಸಿ.ಎಸ್. ಶಿವಳ್ಳಿ ಅವರ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದ್ದು, ಮೇ 19ರಂದು ಮತದಾನ ನಡೆಯಲಿದೆ.
14.74 ಲಕ್ಷ ಮತದಾರರು: ಚುನಾವಣೆಯ ನಡೆಯಲಿರುವ 63 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 8 ನಗರಸಭೆಗಳ 248, 33 ಪುರಸಭೆಗಳ 783 ಹಾಗೂ 22 ಪಟ್ಟಣ ಪಂಚಾಯಿತಿಗಳ 330 ವಾರ್ಡ್‌ಗಳು ಸೇರಿ ಒಟ್ಟು 1,361 ವಾರ್ಡ್‌ಗಳಲ್ಲಿ 7.47 ಲಕ್ಷ ಪುರುಷರು, 7.36 ಲಕ್ಷ ಮಹಿಳೆಯರು, 181 ಇತರರು ಸೇರಿ ಒಟ್ಟು 14.74 ಲಕ್ಷ ಮತದಾರರು ಇದ್ದಾರೆ. 1,646 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 1,998 ಬ್ಯಾಲೆಟ್ ಯೂನಿಟ್, 1,998 ಕಂಟ್ರೋಲ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ. ಚುನಾವಣಾ ಕರ್ತವ್ಯಕ್ಕೆ 8,230 ಮತಗಟ್ಟೆ ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ.
ಅಭ್ಯರ್ಥಿಗಳ ಘೋಷಣಾ ಪತ್ರ: ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರ ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ, ಸ್ಥಿರಾಸ್ತಿಗಳ ವಿವರ, ತನ್ನ ಸ್ವವಿವರ, ವಿದ್ಯಾರ್ಹತೆ, ಆದಾಯದ ಮೂಲಗಳಗಳನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣಾ ಪತ್ರ/ಪ್ರಮಾಣಪತ್ರ ಸಲ್ಲಿಸಬೇಕು. ಇದರ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡ್ ನಲ್ಲಿ ಒಂದೇ ಹೆಸರಿನ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರು ವುದರಿಂದ ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ನಮೂದಿಸಲಾಗುತ್ತಿತ್ತು. ಆದಾಗ್ಯೂ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತಿಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಮತಯಂತ್ರದಲ್ಲಿ ‘ನೋಟಾ’ ಅವಕಾಶವೂ ಇರಲಿದೆ.
ವೆಚ್ಚದ ಮಿತಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಚುನಾವಣಾ ಗರಿಷ್ಠ ವೆಚ್ಚದ ಮಿತಿಯನ್ನು ನಿಗದಿಪಡಿಸಿ 2011ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರಂತೆ ನಗರಸಭೆಗೆ ಗರಿಷ್ಠ 2 ಲಕ್ಷ, ಪುರಸಭೆಗೆ 1.50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂ. ಚುನಾವಣಾ ವೆಚ್ಚದ ಗರಿಷ್ಠ ಮಿತಿ ಇರಲಿದೆ.
ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳು
8 ನಗರಸಭೆ: ಹಿರಿಯೂರು, ಹರಿಹರ, ಶಿಡ್ಲಘಟ್ಟ, ಸಾಗರ, ತಿಪಟೂರು, ನಂಜನಗೂಡು, ಬಸವಕಲ್ಯಾಣ, ಶಹಾಪುರ.
33 ಪುರಸಭೆ: ಆನೇಕಲ್, ದೇವನಹಳ್ಳಿ, ನೆಲಮಂಗಲ, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಬಾಗೇಪಲ್ಲಿ, ಶಿಕಾರಿಪುರ, ಪಾವಗಡ, ಕುಣಿಗಲ್, ಕೆ.ಆರ್. ನಗರ, ಬನ್ನೂರು, ಕಡೂರು, ಮೂಡಬಿದಿರೆ, ಮಳವಳ್ಳಿ, ಕೆ.ಆರ್. ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ, ಬಾಗೇವಾಡಿ, ಇಂಡಿ, ತಾಳಿಕೋಟೆ, ನವಲಗುಂದ, ಮುಂಡರಗಿ, ನರಗುಂದ, ಬ್ಯಾಡಗಿ, ಶಿಗ್ಗಾಂವ, ಭಟ್ಕಳ, ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪ, ಸಂಡೂರು, ಹರಪನಹಳ್ಳಿ, ಹೂವಿನಹಡಗಲಿ.
22 ಪಟ್ಟಣ ಪಂಚಾಯಿತಿ: ಮೊಳಕಾಲ್ಮೂರು, ಹೊಳಲ್ಕೆರೆ, ಶಿರಾಳಕೊಪ್ಪ, ಸೊರಬ, ಹೊಸನಗರ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಮೂಲ್ಕಿ, ಸುಳ್ಯ, ಆಲೂರು, ಅರಕಲಗೂಡು, ಯಳಂದೂರು, ಹನೂರು, ಕಲಘಟಗಿ, ಅಳ್ನಾವರ, ಹೊನ್ನಾವರ, ಸಿದ್ದಾಪುರ, ಔರಾದ್, ಕಮಲಾಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.