Localbody Reservation: ಸ್ಥಳೀಯಾಡಳಿತ ಸಂಸ್ಥೆಗಳು, ಜನಪ್ರತಿನಿಧಿಗಳು ಸಕ್ರಿಯರಾಗಲಿ
Team Udayavani, Aug 8, 2024, 6:00 AM IST
ಕಳೆದೊಂದು ವರ್ಷಕ್ಕೂ ಅಧಿಕ ಸಮಯದಿಂದ ನಾನಾ ಕಾರಣಗಳಿಂದಾಗಿ ಮುಂದೂಡುತ್ತಲೇ ಬರಲಾಗಿದ್ದ ರಾಜ್ಯದ 61 ನಗರಸಭೆ, 123 ಪುರಸಭೆ ಮತ್ತು 117 ಪಟ್ಟಣ ಪಂಚಾಯತ್‌ಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರಕಾರ ಕೊನೆಗೂ ಅಧಿಸೂಚನೆ ಹೊರಡಿಸಿದೆ.
ಈ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿ ಗಳಿದ್ದರೂ ಮೀಸಲಾತಿ ನಿಗದಿ ವಿಚಾರವಾಗಿ ಕಾನೂನು ಸಮರ, ಒಬಿಸಿ ವರ್ಗದವರಿಗೆ ಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ, ಈ ಆದೇಶದ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ ಆಯೋಗ ರಚಿಸಿದುದು, ಇವೆಲ್ಲದರ ನಡುವೆ ಎದುರಾದ ಚುನಾವಣೆಗಳು… ಹೀಗೆ ಸುದೀರ್ಘ ವಿಳಂಬದ ಬಳಿಕ ಕೊನೆಗೂ ರಾಜ್ಯ ಸರಕಾರ ಅಳೆದೂ ತೂಗಿ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ರಾಜ್ಯ ಸರಕಾರದ ಈ ನಿರ್ಧಾರದಿಂದ ಈ ಎಲ್ಲ ಸ್ಥಳೀಯಾಡಳಿತ ಮತ್ತು ನಗರಾಡಳಿತ ಸಂಸ್ಥೆಗಳು ಶೀಘ್ರದಲ್ಲಿಯೇ ಚುನಾಯಿತ ಜನಪ್ರತಿನಿಧಿಗಳು ಆಡಳಿತ ಚುಕ್ಕಾಣಿಯನ್ನು ಮರಳಿ ಹಿಡಿಯಲಿದ್ದಾರೆ. ಇದರಿಂದ ಈ ಸಂಸ್ಥೆಗಳಲ್ಲಿದ್ದ ಅಧಿಕಾರಿ ವರ್ಗದ ಕಾರುಬಾರಿಗೆ ಒಂದಿಷ್ಟು ಕಡಿವಾಣ ಬೀಳಲಿದೆ.ಇವೆಲ್ಲದಕ್ಕಿಂತ ಮುಖ್ಯವಾಗಿ ಅಧಿಕಾರ ವಿಕೇಂದ್ರೀಕರಣದ ನೈಜ ಆಶಯ ಈಡೇರಿದಂತಾಗಲಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಇನ್ನು ಒಂದು ವರ್ಷವಷ್ಟೇ ಬಾಕಿ ಉಳಿದಿರುವುದರಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಬಾಕಿ ಉಳಿದಿರುವ ಸಮಯದಲ್ಲಿ ತಮ್ಮ ಶಕ್ತಿಮೀರಿ ಕಾರ್ಯನಿರ್ವಹಿಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಯತ್ನ ನಡೆಸಬೇಕು.
ನಗರಾಡಳಿತ ಮತ್ತು ಸ್ಥಳೀಯಾಡಳಿಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ್ದರೂ ಚುನಾವಣೆಗೆ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಆದಷ್ಟು ಶೀಘ್ರ ಚುನಾವಣ ದಿನಾಂಕವನ್ನು ಪ್ರಕಟಿಸಿ, ಚುನಾಯಿತ ಅಧ್ಯಕ್ಷ, ಉಪಾಧ್ಯಕ್ಷರು ಅಧಿಕಾರವಹಿಸಿಕೊಳ್ಳುವಂತಾಗಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು.
ಚುನಾವಣ ದಿನ ನಿಗದಿಗೆ ವಿನಾಕಾರಣ ಇನ್ನಷ್ಟು ವಿಳಂಬ ಮಾಡದೆ ಆದಷ್ಟು ಕ್ಷಿಪ್ರಗತಿಯಲ್ಲಿ ಈ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಅಧಿಕಾರ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಅಷ್ಟು ಮಾತ್ರವಲ್ಲದೆ ಮೀಸಲಾತಿ ನಿಗದಿ ವಿಷಯವಾಗಿ ಸುದೀರ್ಘ ಕಾನೂನು ಹೋರಾಟದ ಸಂದರ್ಭದಲ್ಲಿ ಹೈಕೋರ್ಟ್‌ನ ಸ್ಪಷ್ಟ ನಿರ್ದೇಶನದ ಬಳಿಕ ರಾಜ್ಯ ಸರಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಪ್ರಕಟಿಸಿರುವ ಮೀಸಲಾತಿ ಪಟ್ಟಿಯ ವಿರುದ್ಧ ಆಕಾಂಕ್ಷಿಗಳು ಮತ್ತೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರುವುದರಿಂದ ಸರಕಾರ ಈ ವಿಷಯದಲ್ಲಿ ಇನ್ನಷ್ಟು ಕಾಲಹರಣ ಮಾಡುವುದು ತರವಲ್ಲ.
ರಾಜ್ಯದ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ನಾಗರಿಕರಿಗಂತೂ ತಮ್ಮ ವಾರ್ಡ್‌ನ ಸದಸ್ಯ ಯಾರು ಎಂಬುದು ಕೂಡ ಮರೆತುಹೋಗಿರುವ ಪರಿಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಆಡಳಿತವಿದ್ದುದರಿಂದ ಈ ಸಂಸ್ಥೆಗಳ ಸದಸ್ಯರು ಕೂಡ ಹಿನ್ನೆಲೆಗೆ ಸರಿಯುವಂತಾಗಿತ್ತು. ತೀವ್ರತೆರನಾದ ಸಮಸ್ಯೆ ಬಾಧಿಸಿದಾಗಲಷ್ಟೇ ಆಗೊಮ್ಮೆ ಈಗೊಮ್ಮೆ ಎಂಬಂತೆ ಕಾಣಿಸಿಕೊಳ್ಳುತ್ತಿದ್ದ ಸದಸ್ಯರು ಈಗ ಮತ್ತೆ ಸಕ್ರಿಯವಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಸಜ್ಜಾಗಬೇಕು.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದು ಚುನಾಯಿತ ಪ್ರತಿನಿಧಿಗಳು ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರ ಸೂತ್ರ ಹಿಡಿಯುತ್ತಿದ್ದಂತೆಯೇ ಸದಸ್ಯರು ತಮ್ಮ ವಾರ್ಡ್‌ಗಳ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು. ವರ್ಷದ ಅವಧಿಯಲ್ಲಿ ಮತ್ತೆ ಚುನಾವಣೆ ಎದುರಾಗಲಿರುವುದರಿಂದ ಹಾಲಿ ಚುನಾಯಿತ ಸದಸ್ಯರಿಗೆ ಬಾಕಿ ಉಳಿದಿರುವ ಅವಧಿ ಅಗ್ನಿ ಪರೀಕ್ಷೆಯೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.