ಯುರೋಪ್ ದೇಶಗಳಲ್ಲಿ ಪ್ರವಾಸ ನಿರ್ಬಂಧ ತೆರವು : ಇಲ್ಲಿದೆ ಸಂಕ್ಷಿಪ್ತ ಮಾಹಿತಿ
Team Udayavani, May 20, 2020, 2:15 PM IST
ಮಣಿಪಾಲ: ಯುರೋಪ್‌ನ ಹೆಚ್ಚಿನೆಲ್ಲ ದೇಶಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿದೆ. ಹೊಟೇಲುಗಳು, ಅಂಗಡಿಗಳು, ಸಲೂನುಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು ತೆರೆಯುತ್ತಿವೆ. ಅಂತೆಯೇ ಹಲವು ದೇಶಗಳ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸುವ ಸನ್ನಾಹದಲ್ಲಿವೆ. ಯಾವ ದೇಶದಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.
ಇಟಲಿ: ಇಟಲಿಯಲ್ಲಿ ಮಂಗಳವಾರದಿಂದ ಹೊಟೇಲು, ಬಾರ್, ಎಲ್ಲ ರೀತಿಯ ಅಂಗಡಿಗಳು, ಮ್ಯೂಸಿಯಂಗಳನ್ನು ತೆರೆಯಲಾಗಿದೆ. ಜೂ.3ರಿಂದ ವಿದೇಶಿ ಪ್ರವಾಸಿಗರಿಗೆ ಅನುಮತಿ ಕೊಡುವ ನಿರ್ಣಯ ಕೈಗೊಂಡಿದ್ದಾರೆ.
ಬ್ರಿಟನ್: ಬ್ರಿಟನ್‌ನಲ್ಲಿ ಈಗಲೂ ವಿದೇಶಿ ಪ್ರಯಾಸಿಗರಿಗೆ ಅನುಮತಿ ನೀಡುವ ವಿಚಾರಕ್ಕೆ ವಿರೋಧ ಇದೆ. ಅದಾಗ್ಯೂ ಗಡಿಯಲ್ಲಿ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಸಂಪರ್ಕ ಮತ್ತು ವಸತಿಯ ಮಾಹಿತಿಯನ್ನು ಕೊಡಬೇಕು. ಸಂಪರ್ಕ ಪತ್ತೆ ಹಚ್ಚುವ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಅವರಿಗೆ ಹೇಳಲಾಗುವುದು. ವಿನಾಯಿತಿ ಪಟ್ಟಿಯಿಂದ ಹೊರಗಿರುವವರೆಲ್ಲ ದೇಶದೊಳಕ್ಕೆ ಬಂದ ಬಳಿಕ 14 ದಿನ ಕ್ವಾರಂಟೈನ್‌ನಲ್ಲಿರಬೇಕು. ಸರಕಾರ ಕ್ವಾರಂಟೈನ್ ಸೌಲಭ್ಯ ಮಾಡಿಕೊಡುತ್ತದೆ.
ಆಸ್ಟ್ರಿಯಾ: ಆರಂಭದಲ್ಲಿ ನೆರೆ ದೇಶಗಳಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು. ಜರ್ಮನಿ, ಸ್ವಿಜರ್‌ಲ್ಯಾಂಡ್, ಲೈಸೆಸ್ಟೈನ್, ಜೆಕ್ ರಿಪಬ್ಲಿಕ್,ಸ್ಲೋವಾಕಿಯ ಮತ್ತು ಹಂಗೇರಿ ದೇಶಗಳ ಗಡಿಯನ್ನು ತೆರೆಯಲಾಗುವುದು. ವಿಯೆನ್ನಾ, ಇನ್ಸ್‌ಬಕ್ ಮತ್ತು ಸಲ್ಸ್‌ಬರ್ಗ್ ವಿಮಾನ ನಿಲ್ದಾಣಗಳನ್ನು ಕಾರ್ಯಾರಂಭಿಸಿವೆ. ಮೇ 29ರಿಂದ ಹೊಟೇಲ್, ಬಾರ್‌ಗಳು ತೆರೆಯಲಿವೆ. ದೇಶದೊಳಗೆ ಬರಲು ಆರೋಗ್ಯ ಪ್ರಮಾಣಪತ್ರ ಕಡ್ಡಾಯ ಮತ್ತು 14 ದಿನ ಕ್ವಾರಂಟೈನ್ ಆಗಬೇಕು.
ಬೆಲ್ಜಿಯಂ: ಜೂ. 15ರ ಬಳಿಕ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಮತಿ ನೀಡಲಿದೆ. ಇಲ್ಲಿ ಸಾರ್ವಜನಿಕ ಸಾರಿಗೆ ಈಗಾಗಲೇ ಕಾರ್ಯಾರಂಭಿಸಿದೆ. ಅಂಗಡಿ, ಮ್ಯೂಸಿಯಂಗಳು ತೆರೆದಿವೆ. ಜೂ.8ರಿಂದ ಕೆಫೆಗಳು, ಹೊಟೇಲುಗಳು ಮತ್ತು ಕೆಲವು ಪ್ರವಾಸಿ ಆಕರ್ಷಣೆಯ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ವಸತಿಯ ದಾಖಲೆ ಮತ್ತು ಪ್ರಯಾಣದ ದಾಖಲೆಗಳನ್ನು ತೋರಿಸಬೇಕು. 14 ದಿನಗಳ ಕ್ವಾರಂಟೈನ್ ಇದೆ.
ಬಲ್ಗೇರಿಯ: ಗಡಿಗಳನ್ನು ತೆರೆಯುವ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಸೋಫಿಯಾ ಮತ್ತು ಲಂಡನ್‌ಗೆ ಕೆಲವು ವಿಮಾನಗಳ ಸಂಚಾರ ಇದೆ. ಹೊಟೇಲ್ ಮತ್ತು ಈಜುಕೊಳಗಳು ತೆರೆದಿವೆ. ವೈಯಕ್ತಿಕ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಮಾರುಕಟ್ಟೆ ತೆರೆಯಲಾಗಿದೆ.
ಕ್ರೊವೇಷ್ಯಾ: ಕೆಲವು ಗಡಿಗಳನ್ನು ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ತೆರೆಯಲಾಗಿದೆ. ಸೀಮಿತ ಪ್ರಯಾಣಕ್ಕಷ್ಟೇ ಅನುಮತಿಯಿದೆ. ಪ್ರವಾಸಿಗರಿಗೆ ಗಡಿಗಳನ್ನು ತೆರೆಯುವ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಕೆಲವು ಅಂತಾರಾಷ್ಟ್ರೀಯ ಮತ್ತು ಆಂತರಿಕ ವಿಮಾನಗಳು ಸಂಚರಿಸುತ್ತಿವೆ. ಪಾರ್ಕ್, ಅಂಗಡಿ, ಮ್ಯೂಸಿಯಂ, ಹೊಟೇಲ್, ಬಾರ್‌ಗಳು ತೆರೆದಿವೆ.
ಸಿಪ್ರಸ್: ವಿಮಾನ ನಿಲ್ದಾಣಗಳು ಮತ್ತು ಬಂದರುಗಳು ಜೂ.9ರಿಂದ ಕಾರ್ಯಾರಂಭಿಸಬಹುದು. ಹೊಟೇಲುಗಳು, ಬಯಲು ರಂಗಮಂದಿರಗಳು, ಮಾಲ್, ಅಂಗಡಿಗಳನ್ನು ತೆರೆಯಲು ಅನುಮತಿಯಿದೆ. ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ನೀತಿ ರಚನೆಯಾಗಿಲ್ಲ. ಬೀಚ್‌ಗಳು ಮತ್ತು ಮ್ಯೂಸಿಯಂಗಳು ಜೂ.1ರಿಂದ ತೆರೆಯಲಿವೆ. ಒಮ್ಮೆಗೆ 10 ಮಂದಿಗೆ ಮಾತ್ರ ಪ್ರವೇಶ ಅವಕಾಶ.
ಜೆಕ್ ರಿಪಬ್ಲಿಕ್: ಆಸ್ಟ್ರಿಯಾ ಮತ್ತು ಜರ್ಮನಿ ಜತೆಗಿನ ಗಡಿಗಳನ್ನು ಜೂ.15ರಂದು ತೆರೆಯಲಾಗುವುದು. ಯುಕೆಯ ಜನರ ಅನಗತ್ಯ ಪ್ರವಾಸಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಅಂಗಡಿ, ಹೊಟೇಲ್, ಪಬ್,ಮ್ಯೂಸಿಯಂ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ತೆರೆಯಲಾಗಿದೆ. 100 ಜನರಿಗೆ ಒಟ್ಟು ಸೇರಲು ಅನುಮತಿಯಿದೆ. ಲಾಡ್ಜ್ಗಳು ಮತ್ತು ಟ್ಯಾಕ್ಸಿಗಳು ಮೇ 25ರಿಂದ ಕಾರ್ಯಾರಂಭಿಸಲಿವೆ.
ಡೆನ್ಮಾರ್ಕ್: ಗಡಿ ತೆರೆಯುವ ಬಗ್ಗೆ ಜೂ.1ರಂದು ನಿರ್ಧರಿಸಲಾಗುವುದು. ಕೋಪನ್‌ಹೇಗನ್ ಮತ್ತು ಬಿಲ್ಲುಂಡ್ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ. ಅಂಗಡಿ, ಪಾರ್ಕ್, ಹೊಟೇಲ್‌ಗಳನ್ನು ತೆರೆಯಲಾಗಿದೆ ಮತ್ತು ಸಾರ್ವಜನಿಕ ಸಾರಿಗೆ ಕಾರ್ಯಾರಂಭಿಸಿದೆ. ಕ್ರೀಡಾ ಸೌಲಭ್ಯಗಳು, ರಂಗ ಮಂದಿರಗಳು ಮತ್ತು ಸಿನೇಮಾ ಮಂದಿರಗಳು ಜೂ. 8ರಿಂದ ತೆರೆಯಲಿವೆ. ಎಸ್ಟೋನಿಯ, ಲಾತ್ವಿಯ ಮತ್ತು ಲಿಥುವೇನಿಯದ ಪ್ರವಾಸಿಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ.
ಫಿನ್ ಲ್ಯಾಂಡ್: ಗಡಿ ತೆರೆಯುವ ದಿನಾಂಕ ಘೋಷಣೆಯಾಗಿಲ್ಲ. ಬ್ರಿಟನ್‌ಗೆ ವಿಮಾನ ಸೇವೆ ಇದೆ. ಅಂಗಡಿಗಳು ತೆರೆದಿವೆ. ಹೊಟೇಲ್, ಬಾರ್ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಜೂ.1ರಿಂದ ತೆರೆಯಲಾಗುವುದು. ಜು.31ರಿಂದ 50ಕ್ಕಿಂತ ಹೆಚ್ಚಿನ ಜನರ ಕಾರ್ಯಕ್ರಮಗಳಿಗೆ ಅನುಮತಿ ಸಿಗಲಿದೆ.
ಫ್ರಾನ್ಸ್: ಸ್ವಿಜರ್‌ಲ್ಯಾಂಡ್ ಮತ್ತು ಜರ್ಮನಿ ಗಡಿಯನ್ನು ಜೂ.15ರಂದು ತೆರೆಯಲಾಗುವುದು. ಸಾರ್ವಜನಿಕ ಸಾರಿಗೆ ಕಾರ್ಯಾರಂಭಿಸಿದೆ. ಕೆಲವು ಅಂಗಡಿಗಳನ್ನು ತೆರೆಯಲಾಗಿದೆ. ಹೊಟೇಲುಗಳು ಮತ್ತು ಬಾರ್‌ಗಳು ಜೂ.2ರಿಂದ ತೆರೆಯಲಿವೆ. ಬೀಚ್‌ಗಳು ಮತ್ತು ಪಾರ್ಕ್‌ಗಳು, ಮ್ಯೂಸಿಯಂಗಳು ಜೂ.1ರ ತನಕ ಮುಚ್ಚಿರುತ್ತವೆ.ಜುಲೈ ತನಕ ಪ್ರವಾಸಿಗರು ಆರೋಗ್ಯ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.
ಜರ್ಮನಿ: ಸ್ವಿಜರ್‌ಲ್ಯಾಂಡ್,ಫ್ರಾನ್ಸ್ ಮತ್ತು ಆಸ್ಟ್ರಿಯ ಗಡಿಗಳನ್ನು ಜೂ.15ರಂದು ತೆರೆಯಲಾಗುವುದು. ಹೊಟೇಲುಗಳೂ ಅಂದಿನಿಂದಲೇ ತೆರೆಯಲಿವೆ. ದೊಡ್ಡ ಕಾರ್ಯಕ್ರಮಗಳು ಆಗಸ್ಟ್ ನಂತರವೇ ನಡೆಯಲಿವೆ.
ಗ್ರೀಸ್: ಜು.1ರಂದು ಅಂತಾರಾಷ್ಟ್ರೀಯ ಗಡಿಗಳನ್ನು ತೆರೆಯಲಾಗುವುದು. ಬ್ರಿಟನ್‌ಗೆ ಕೆಲವು ವಿಮಾನಗಳ ಸಂಚಾರ ಜೂ.1ರಂದು ಶುರುವಾಗಲಿದೆ. ಎವಿಯಾ ಮತ್ತು ಕ್ರೀಟ್ ದ್ವೀಪಗಳಿಗೆ ಪ್ರಯಾಣಿಸಲು ಅನುಮತಿಯಿದೆ. ಜೂನ್‌ನಲ್ಲಿ ಹೊಟೇಲು, ಅಂಗಡಿ ಸೇರಿದಂತೆ ಎಲ್ಲ ವ್ಯಾಪಾರ ಚಟುವಟಿಕೆಗಳು ಹಂತಹಂತವಾಗಿ ಪ್ರಾರಂಭವಾಗಲಿವೆ.
ಹಂಗೇರಿ: ಆಸ್ಟ್ರಿಯದ ಗಡಿಗಳನ್ನು ಜೂ.15ರಂದು ತೆರೆಯಲಾಗುವುದು. ಬುಡಾಪೆಸ್ಟ್‌ನಲ್ಲಿ ಈಗಾಗಲೇ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬಂದಿದೆ.
ಐಸ್‌ಲ್ಯಾಂಡ್: ಜೂ.15ರ ಬಳಿಕ ಪ್ರವಾಸಿಗರಿಗಿರುವ ನಿರ್ಬಂಧಗಳು ತೆರವಾಗಲಿವೆ. ಆರೋಗ್ಯ ಪ್ರಮಾಣಪತ್ರ ಅಗತ್ಯ ಮತ್ತು 14 ದಿನ ಕ್ವಾರಂಟೈನ್ ಆಗಬೇಕು. ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅಯರ್‌ಲ್ಯಾಂಡ್: ಬ್ರಿಟನ್‌ಗೆ ವಿಮಾನ ಮತ್ತು ನೌಕಾ ಸಂಚಾರವಿದೆ. 14 ದಿನಗಳ ಕ್ವಾರಂಟೈನ್ ಕಡ್ಡಾಯ. ವಸತಿ ಸ್ಥಳದ ಮಾಹಿತಿ ಕೊಡಬೇಕು. ಸೀಮಿತ ಸಾರ್ವಜನಿಕ ಸಾರಿಗೆ ಲಭ್ಯವಿದೆ. ಪಬ್‌ಗಳು ಜೂ.29ರಂದು ತೆರೆಯಲಿವೆ. ಗ್ಯಾಲರಿಗಳು ಜ.20ಕ್ಕೆ ತೆರೆಯಲಿವೆ.
ಲಕ್ಸಂಬರ್ಗ್: ಜರ್ಮನಿಯ ಗಡಿಗಳನ್ನು ತೆರೆಯಲಾಗಿದೆ. ಮೇ.25ಕ್ಕೆ ಹೊಟೇಲುಗಳು, ಬಾರ್‌ಗಳು, ಅಂಗಡಿಗಳು ತೆರೆಯಲಿವೆ.
ಮಾಲ್ಟಾ: ಗಡಿ ತೆರೆಯುವ ನಿರ್ಧಾರವಾಗಿಲ್ಲ. ವಿಮಾನ ನಿಲ್ದಾಣಗಳು ಮಾಸಾಂತ್ಯದಲ್ಲಿ ಕಾರ್ಯಾರಂಭಿಸಲಿವೆ. ಪ್ರವಾಸಿಗರು 14 ದಿನ ಕ್ವಾರಂಟೈನ್ ಆಗಬೇಕು.
ನೆದರ್‌ಲ್ಯಾಂಡ್ಸ್: ಶೆಂಗೇನ್ ರಾಷ್ಟ್ರಗಳ ಪ್ರವಾಸಿಗರಿಗೆ ಗಡಿ ತೆರೆಯಲಾಗಿದೆ. ಕೆಲವು ವಿಮಾನಗಳು ಸಂಚರಿಸುತ್ತಿವೆ. ಅಂಗಡಿಗಳು ಮತ್ತು ಕೆಲವು ಹೊಟೇಲುಗಳು ತೆರೆದಿವೆ. ಸಾರ್ವಜನಿಕ ಸಾರಿಗೆ ಜೂ.1ರಿಂದ ಆರಂಭವಾಗಲಿವೆ.
ನಾರ್ವೆ: ಗಡಿಗಳನ್ನು ತೆರೆಯುವ ದಿನಾಂಕ ಘೋಷಣೆಯಾಗಿಲ್ಲ.ಕೆಲವು ಹೊಟೇಲು, ಅಂಗಡಿಗಳು ತರೆದಿವೆ. 50 ಜನರ ಕಾರ್ಯಕ್ರಮಗಳಿಗೆ ಅನುಮತಿಯಿದೆ. ಉಳಿದೆಲ್ಲ ಸೌಲಭ್ಯಗಳು ಜೂ.15ರ ಬಳಿಕ ಪ್ರಾರಂಭವಾಗುತ್ತವೆ.
ಪೋಲ್ಯಾಂಡ್: ಜೂ.13ರಿಂದ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಮತಿ ಸಿಗುವ ಸಾಧ್ಯತೆಯಿದೆ. ಮೇ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಶುರುವಾಗುತ್ತದೆ. 14 ದಿನಗಳ ಕ್ವಾರಂಟೈನ್ ಇದೆ. ಹೊಟೇಲ್, ಅಂಗಡಿ, ಮ್ಯೂಸಿಯಂ, ಆರ್ಟ್ ಗ್ಯಾಲರಿ ಇತ್ಯಾದಿಗಳು ಶುರುವಾಗಿವೆ.
ಪೋರ್ಚುಗಲ್: ಅಂತಾರಾಷ್ಟ್ರೀಯ ಗಡಿಗಳು ಸದ್ಯದಲ್ಲೇ ತೆರೆಯಲಿವೆ. ಪ್ರವಾಸಿಗರನ್ನು ಸ್ವಾಗತಿಸಲು ದೇಶ ಸಜ್ಜಾಗಿದೆ. ಲಂಡನ್ ಮತ್ತು ಲಿಸ್ಟನ್ ನಡುವೆ ವಿಮಾನ ಸಂಚಾರ ಇದೆ. ಸಾರ್ವಜನಿಕ ಸಾರಿಗೆ ಮಿತವಾಗಿ ಕಾರ್ಯಾಚರಿಸುತ್ತಿದೆ.
ರೊಮೇನಿಯ: ಗಡಿಗಳನ್ನು ತರೆಯುವ ದಿನಾಂಕ ನಿಗದಿಯಾಗಿಲ್ಲ. ಹೊಟೇಲು, ಅಂಗಡಿಗಳು, ಮ್ಯೂಸಿಯಂ ಇತ್ಯಾದಿಗಳು ತೆರೆದಿವೆ.
ಸ್ವೀಡನ್: ಯುಕೆ ಮತ್ತು ಯುರೋಪ್ ಪ್ರಜೆಗಳಿಗೆ ಗಡಿಗಳನ್ನು ತೆರೆಯಲಾಗಿದೆ. ಲಂಡನ್ ಮತ್ತು ಸ್ಟಾಕ್‌ಹೋಮ್ ನಡುವೆ ಸೀಮಿತ ವಿಮಾನ ಸಂಚಾರವಿದೆ. ಅಂಗಡಿ, ಹೊಟೇಲ್ ಮತ್ತಿತರ ವಾಣಿಜ್ಯ ವ್ಯವಹಾರಗಳು ಮಾಮೂಲಿನಂತಿವೆ. 50ಕ್ಕಿಂತ ಹೆಚ್ಚು ಮಂದಿಗೆ ಒಟ್ಟು ಸೇರಲು ಅನುಮತಿಯಿಲ್ಲ.
ಟರ್ಕಿ: ಈ ಮಾಸಾಂತ್ಯದಲ್ಲಿ ದೇಶೀಯ ಪ್ರವಾಸೋದ್ಯಮ ವನ್ನು ತೆರೆಯಲಾಗುವುದು. ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತೆರೆಯಲು ಜೂನ್ ಮಧ್ಯದ ತನಕ ಕಾಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.