ಅಖಾಡವೇರಿದ ರಣಕಲಿಗಳು
Team Udayavani, Mar 26, 2019, 6:00 AM IST
ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಇಂದೇ ಕಡೇ ದಿನ. ಸೋಮವಾರವೇ ಬಹುತೇಕ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ.ಮಾಜಿ ಪ್ರಧಾನಿ ದೇವೇಗೌಡ, ಮೊಮ್ಮಗ ನಿಖೀಲ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ,ಎ.ಮಂಜು, ಪ್ರಮೋದ್ ಮಧ್ವರಾಜ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು. ಸೋಮವಾರದ ಸ್ಟಾರ್ ಕ್ಷೇತ್ರ ತುಮಕೂರು. ಇಲ್ಲಿ ದೇವೇಗೌಡರಿಗೆ ಬಂಡಾಯ ಅಭ್ಯರ್ಥಿಗಳಾಗಿ ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಮೆರವಣಿಗೆ ಮೊಟಕು
ಪರಮೇಶ್ವರ್ ಸಾಥ್
ಕ್ಷೇತ್ರದಲ್ಲಿನ ಬಂಡಾಯದ ನಡುವೆಯೂ ಇದೇ ಮೊದಲ ಬಾರಿಗೆ ಹಾಸನದಿಂದ ಹೊರಗೆ ಸ್ಪರ್ಧಿಸುತ್ತಿರುವ ದೇವೇಗೌಡರು, ತುಮಕೂರಿನಲ್ಲಿ ಸರಿಯಾಗಿ 2.15ಕ್ಕೆ ನಾಮಪತ್ರ ಸಲ್ಲಿಸಿದರು. ಸರ್ಕಾರಿ ಜೂನಿಯರ್ ಕಾಲೇಜಿನಿಂದ ಮೆರವಣಿಗೆಯಲ್ಲಿ ಹೊರಟರಾದರೂ, ಶುಭಗಳಿಗೆ ಮೀರಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಅರ್ಧಕ್ಕೆ ಬಿಟ್ಟು, ಕಾರು ಹತ್ತಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಪತ್ರ ಸಲ್ಲಿಸಿದರು. ಇವರಿಗೆ ಸಾಥ್ ನೀಡಿದ್ದು ಡಿಸಿಎಂ ಡಾ.ಜಿ. ಪರಮೇಶ್ವರ. ಮೆರವಣಿಗೆಯಲ್ಲಿ ಸಾವಿರಾರು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಭಾಗಿಯಾಗಿದ್ದುದು ವಿಶೇಷ.
ಪೌರ ಕಾರ್ಮಿಕರಿಗೆ
ಎ.ಮಂಜು ನಮನ
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವ ಎ.ಮಂಜು ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿಯ ಪಾದಪೂಜೆ ಮಾಡಿದರು. ಅಲ್ಲದೆ, ಗೋ ಪೂಜೆ ಮಾಡಿದ್ದೂ ಅಲ್ಲದೇ ಹಸುವಿಗೆ ಸಿಹಿ ತಿನಿಸಿದರು. ಬಳಿಕ ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಮಂಜು ಅವರಿಗೆ ಶಾಸಕರಾದ ಪ್ರೀತಂ ಗೌಡ, ಬೆಳ್ಳಿಪ್ರಕಾಶ್ ಸಾಥ್ ನೀಡಿದರು. ನಂತರ ಬಂದು ಸೇರಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜನರನ್ನುದ್ದೇಶಿಸಿ ಮಾತನಾಡಿದರು. ಸರಿಯಾಗಿ ಮಧ್ಯಾಹ್ನ 12.50ಕ್ಕೆ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ರೇವಣ್ಣ ನಿಂಬೆಹಣ್ಣು, ನಿಖೀಲ್ ನಾಮಪತ್ರ
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಸೆಡ್ಡು ಹೊಡೆಯಲೇಬೇಕು ಎಂದು ಹಠ ತೊಟ್ಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ಜನಸಾಗರವನ್ನೇ ಸೇರಿಸುವಲ್ಲಿ ಯಶಸ್ವಿಯಾದರು. ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ, ಪುತ್ರ ನಿಖೀಲ್ ಕುಮಾರಸ್ವಾಮಿ, 11 ಗಂಟೆ ವೇಳೆಗೆ ಮಂಡ್ಯಗೆ ಬಂದರು. ಕೆಲಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದ ನಿಖೀಲ್, ಶುಭಗಳಿಗೆ ಹತ್ತಿರಕ್ಕೆ ಬಂದಿದ್ದರಿಂದ ದೊಡ್ಡಪ್ಪ ರೇವಣ್ಣ ಅವರ ಜತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರೇವಣ್ಣ ಅವರು ನಿಖೀಲ್‌ಗೆ ಶಾಲು ಹೊದಿಸಿ, ನಿಂಬೆಹಣ್ಣು ಕೊಟ್ಟು ಒಳಗೆ ಕರೆದೊಯ್ದಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಕೆ ನಂತರ ನಡೆದ ಭಾರೀ ಮೆರವಣಿಗೆಯಲ್ಲಿ ನಿಖೀಲ್ ಪಾಲ್ಗೊಂಡರು. ಬಳಿಕ ನಡೆದ ಜನಶಕ್ತಿ ರ್ಯಾಲಿಯಲ್ಲಿ ಪಾಲ್ಗೊಂಡ ಡಿ.ಕೆ. ಶಿವಕುಮಾರ್ ನಿಖೀಲ್ ಬೆಂಬಲಿಸಿದರು.
ಉತ್ತರದಲ್ಲಿ ಬಿಜೆಪಿ
ಶಕ್ತಿ ಪ್ರದರ್ಶನ
ಮೈತ್ರಿ ಸರ್ಕಾರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿ.ವಿ.ಸದಾನಂದಗೌಡರು, ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸೋಮವಾರ ಮಧ್ಯಾಹ್ನ ಪಕ್ಷದ ಕಾರ್ಯಕರ್ತರು, ನಾಯಕರ ಜತೆ ಮೆರವಣಿಗೆಯಲ್ಲಿ ಸಾಗಿದ ಡಿವಿಎಸ್, ಮೊದಲಿಗೆ ಸಂಜಯನಗರದ ರಾಧಾಕೃಷ್ಣ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಆಂಜನೇಯ ಸ್ವಾಮಿಗೂ ಪೂಜೆ ಸಲ್ಲಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಶಾಸಕರಾದ ಸುರೇಶ್ ಕುಮಾರ್, ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥ್
ನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ ಪಾಲ್ಗೊಂಡರು.
ಬಾಗೇಪಲ್ಲಿಯಲ್ಲಿ
ಮೊಯ್ಲಿ ಉಮೇದು
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಬಾಗೇಪಲ್ಲಿಯ ಇತಿಹಾಸ ಪ್ರಸಿದ್ಧ ಗಡಿದಂ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸ್ಥಳೀಯ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಜೊತೆಗೂಡಿ ಬಾಗೇಪಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಅಲ್ಲಿಂದ ಚಿಕ್ಕಬಳ್ಳಾಪುರದ ನಂದಿಯ ಬೋಗನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಚಿವರಾದ ಎಂ.ಟಿ.ಬಿ.ನಾಗರಾಜ್, ಶಾಸಕರಾದ ಸುಧಾಕರ್, ಎಸ್.ಎನ್.ಸುಬ್ಟಾರೆಡ್ಡಿ, ವೆಂಕಟರವಣಯ್ಯ, ಮಾಜಿ ಶಾಸಕರಾದ ಆಂಜನಾಮೂರ್ತಿ, ಪಿಳ್ಳ ಮುನಿಶಾಮಪ್ಪ, ವಿಧಾನ ಪರಿಷತ್ ಸದಸ್ಯ ರವಿ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.
ಕಾಣಿಸಿಕೊಂಡ ಮೈತ್ರಿ ಗೊಂದಲ
ಮಂಡ್ಯದಲ್ಲಿ ನಿಖೀಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಭಾರೀ ಜನರನ್ನು ಸೇರಿಸಿದರೂ, ಕೊರತೆಯಾಗಿ ಕಂಡಿದ್ದು ಕಾಂಗ್ರೆಸ್ ನಾಯಕರು. ಮೈತ್ರಿ ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರೂ, ಮೈಸೂರಿನಲ್ಲೇ ಇದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬರಲಿಲ್ಲ. ಅಲ್ಲದೆ ಸ್ಥಳೀಯ ನಾಯಕರೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇದೇ ಸನ್ನಿವೇಶ ಮೈಸೂರಿನಲ್ಲೂ ಕಂಡು ಬಂದಿತು. ಕಾಂಗ್ರೆಸ್‌ನ ವಿಜಯಶಂಕರ್ ಅವರು ನಾಮಪತ್ರ ಸಲ್ಲಿಕೆ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲೇ ಇದ್ದರು. ಆದರೆ, ಅತ್ತ ಹಾಯಲಿಲ್ಲ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಜರಿದ್ದು, ಬಳಿಕ ಚಿತ್ರದುರ್ಗಕ್ಕೆ ತೆರಲಿದರು. ಆರಂಭದಲ್ಲಿ ಸಚಿವ ಸಾ.ರಾ.ಮಹೇಶ್ ಕಾಣಿಸಿಕೊಂಡರೂ, ನಂತರ ನಿರ್ಗಮಿಸಿದರು. ಉಳಿದಂತೆ ಜಿ.ಟಿ.ದೇವೇಗೌಡ ಅವರು ಅತ್ತ ಸುಳಿಯಲೇ ಇಲ್ಲ.
ಬಗೆಹರಿಯದ ಮುನಿಸು
ನಾಮಪತ್ರ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದರೂ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಗೊಂದಲ ಬಗೆಹರಿದಿಲ್ಲ. ತುಮಕೂರಿನಲ್ಲಿ ಸ್ವತಃ ದೇವೇಗೌಡರೇ ಎರಡು ಬಂಡಾಯ ಎದುರಿಸಬೇಕಾಗಿದೆ. ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಗದೊಂದು ಸೆಟ್‌ನ ನಾಮಪತ್ರ ಸಲ್ಲಿಸಿದರು. ಅಷ್ಟೇ ಅಲ್ಲ, ಮೈತ್ರಿ ಬಗ್ಗೆ ಆರಂಭದಿಂದಲೂ ಅಪಸ್ವರ ಹೇಳಿಕೊಂಡೇ ಬಂದಿರುವ ಕೆ.ಎನ್. ರಾಜಣ್ಣ ಅವರೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗೌಡರಿಗೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಜತೆಗೆ ಇವರನ್ನೂ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ರಿಜ್ವಾನ್ ಹರ್ಷದ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಮತ್ತೂಬ್ಬ ಆಕಾಂಕ್ಷಿ ಆರ್.ರೋಷನ್‌ಬೇಗ್ ಗೈರು ಹಾಜರಾಗಿದ್ದರು.
ನಾಮಪತ್ರ ಸಲ್ಲಿಸಿದ ಪ್ರಮುಖರು
ರಾಜಕಾರಣಿಗಳ ಮಂಗಳವಾರದ ಭಯದಿಂದಾಗಿ ಸೋಮವಾರವೇ ನಾಮಪತ್ರಗಳ ಸುರಿಮಳೆಯೇ ಆಯಿತು. ಮೈಸೂರಿನಲ್ಲಿ ಕಾಂಗ್ರೆಸ್‌ನಿಂದ ವಿಜಯಶಂಕರ್, ಬಿಜೆಪಿಯಿಂದ ಪ್ರತಾಪ್ ಸಿಂಹ ಉಮೇದುವಾರಿಕೆ ಸಲ್ಲಿಸಿದರು. ಕಾಂಗ್ರೆಸ್‌ನಿಂದ ಚಿತ್ರದುರ್ಗದಲ್ಲಿ ಬಿ.ಎನ್.ಚಂದ್ರಪ್ಪ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ಬೆಂಗಳೂರು ಕೇಂದ್ರದಿಂದ ರಿಜ್ವಾನ್ ಅರ್ಷದ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್, ದಕ್ಷಿಣ ಕನ್ನಡದಿಂದ ಮಿಥುನ್ ರೈ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿಯಿಂದ ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್, ಚಿಕ್ಕಬಳ್ಳಾಪುರದಿಂದ ಬಿ.ಎನ್.ಬಚ್ಚೇಗೌಡ ಅವರೂ ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಸಿದ್ಧರಾದರು.
ಉತ್ತರಕ್ಕೆ ಕೃಷ್ಣ ಬೈರೇಗೌಡ
ಬೆಂಗಳೂರು: ಜೆಡಿಎಸ್ ಮರಳಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅಂತಿಮವಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಈ ಮೂಲಕ ಉತ್ತರದಲ್ಲಿ ಸದಾ ನಂದಗೌಡ ವರ್ಸಸ್ ಕೃಷ್ಣಬೈರೇಗೌಡ ಸ್ಪರ್ಧೆ ಖಚಿತವಾಗಿದೆ. ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡೂ ಪಕ್ಷಗಳ ಶಾಸಕರೊಂದಿಗೆ ಸುಮಾರು 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಕೃಷ್ಣ ಬೈರೇಗೌಡ ಅವರನ್ನೇ ಅಭ್ಯರ್ಥಿ ಮಾಡಲು ತೀರ್ಮಾನಿಸಿದರು.
ಮಂಗಳವಾರ ಕೃಷ್ಣ ಬೈರೇಗೌಡ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರವನ್ನು ಸೋಮವಾರ ಬೆಳಗ್ಗೆಯಷ್ಟೇ ದೇವೇಗೌಡರು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.