Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
ನೂಕಾಟ ತಳ್ಳಾಟದಲ್ಲಿ ಆಡಳಿತ ಸೌಧ ಕಚೇರಿಯ ಪ್ರವೇಶ ದ್ವಾರದ ಗಾಜು ಪುಡಿ, ಮಹಿಳಾ ಪೊಲೀಸ್, ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯ
Team Udayavani, Nov 16, 2024, 6:20 AM IST
ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಕಪಟ್ಟಿ ಸಮಸ್ಯೆ, ಕಾಲೇಜುಗಳ ಪರೀಕ್ಷಾ ಶುಲ್ಕ ಹೆಚ್ಚಳ, ಯುಯುಸಿಎಂಎಸ್ ಪೋರ್ಟಲ್‌ನಲ್ಲಿರುವ ಸಮಸ್ಯೆ ಸಹಿತ ವಿವಿಧ ಸಮಸ್ಯೆಗಳ ವಿರುದ್ಧ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶುಕ್ರವಾರ ವಿವಿ ಆಡಳಿತ ಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ವಿದ್ಯಾರ್ಥಿಗಳು ಏಕಾಏಕಿ ಕುಲಪತಿಯವರ ಕಚೇರಿಯೊಳಗೆ ಧರಣಿ ನಡೆಸಲು ಆಡಳಿತ ಸೌಧದದ ಕಟ್ಟಡಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದಿದ್ದು, ಈ ಸಂದರ್ಭದಲ್ಲಿ ನಡೆದ ನೂಕಾಟ ತಳ್ಳಾಟದಲ್ಲಿ ಆಡಳಿತ ಸೌಧ ಕಚೇರಿಯ ಪ್ರವೇಶ ದ್ವಾರದ ಗಾಜು ಪುಡಿಯಾಗಿ ಮಹಿಳಾ ಪೊಲೀಸ್ ಹಾಗೂ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರವೇಶ ದ್ವಾರದ ಎದುರೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಕ್ಕೆ ಕುಲಪತಿ ಪ್ರೊ| ಪಿ.ಎಲ್. ಧರ್ಮ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಮತ್ತು ಕುಲಪತಿ ನಡುವೆ ಚರ್ಚೆ, ಘೋಷಣೆಗಳು ನಡೆದು ಅಂತಿಮವಾಗಿ ಸರಕಾರಕ್ಕೆ ವರದಿ ಸಲ್ಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಮಧ್ಯಾಹ್ನದ ವೇಳೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಬೆಳಗ್ಗಿನಿಂದಲೇ ಉಡುಪಿ, ದಕ್ಷಿಣ ಕನ್ನಡ ಸಹಿತ ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಮಂಗಳಗಂಗೋತ್ರಿ ಕ್ಯಾಂಪಸ್‌ಗೆ ವಿಶೇಷ ಬಸ್‌ಗಳಲ್ಲಿ ಆಗಮಿಸಿ ಆಡಳಿತ ಸೌಧದ ವರೆಗೆ ಮೆರವಣಿಗೆಯಲ್ಲಿ ತೆರಳಿದರು. ಪೊಲೀಸರು ಆಡಳಿತ ಸೌಧದ ಪಾರ್ಕಿಂಗ್ ಪ್ರದೇಶದಲ್ಲೇ ಬ್ಯಾರಿಕೇಡ್ ಹಾಕಿ ವಿದ್ಯಾರ್ಥಿಗಳನ್ನು ತಡೆದಿದ್ದು, ಏಕಾಏಕಿ ವಿದ್ಯಾರ್ಥಿಗಳ ಒಂದು ತಂಡ ಬ್ಯಾರಿಕೇಡ್ ತಪ್ಪಿಸಿ ನೇರವಾಗಿ ಆಡಳಿತ ಸೌಧದ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ.
ಸೆನೆಟ್ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ವರದಿ
ವಿದ್ಯಾರ್ಥಿಗಳ ಅಂಕಪಟ್ಟಿ ಸಹಿತ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ವಿವಿಯ ಸಿಂಡಿಕೇಟ್ ಸಭೆ ಗಂಭೀರವಾಗಿದ್ದು, ಇಂದು ನಡೆದಿರುವ ಘಟನೆಗೆ ಸಂಬಂಧಿಸಿ ಸಂಜೆಯೊಳಗೆ ಸರಕಾರಕ್ಕೆ ವರದಿ ಸಲ್ಲಿಸಿ ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು ಎಂದು ಪ್ರೊ| ಧರ್ಮ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಸಮಸ್ಯೆ ತತ್‌ಕ್ಷಣ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಮಂಗಳೂರು ಸಂಘಟನಾ ಕಾರ್ಯ ದರ್ಶಿ ಚಂದ್ರಶೇಖರ್ ಮರಾಠೆ, ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ, ಮಂಗಳೂರು ಮಹಾನಗರ ಕಾರ್ಯದರ್ಶಿ ಮೋನಿಷ್, ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ, ಮುಖಂಡರಾದ ಶ್ರೀಲಕ್ಷಿ$¾à, ಮಂದಾರ, ಭರತ್, ಹರ್ಷ, ಪ್ರತೀಕ್ ಮುಂತಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.