Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
71ನೇ ಅಖೀಲ ಭಾರತ ಸಹಕಾರ ಸಪ್ತಾಹ 2024, ಎಸ್‌ಸಿಡಿಸಿಸಿ ಬ್ಯಾಂಕ್ ಬಳಿಯಿಂದ ಕರಾವಳಿ ಉತ್ಸವ ಮೈದಾನದವರೆಗೆ "ಸಹಕಾರ ಜಾಥಾ"
Team Udayavani, Nov 17, 2024, 12:53 AM IST
ಮಂಗಳೂರು: ಮುಂದಿನ ದಿನಗಳಲ್ಲಿ “ಸಹಕಾರ ಆಂದೋಲನ’ “ಜನರ ಆಂದೋಲನ’ವಾಗಬೇಕು. ಸಹಕಾರಿ ಸಂಸ್ಥೆಗಳಲ್ಲಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಹೊಣೆ ನಿರ್ವಹಿಸಬೇಕು. ಪಕ್ಷ- ಜಾತಿ ಆಧಾರದಲ್ಲಿ ಸಹಕಾರಿ ಸಂಸ್ಥೆ ಕಾರ್ಯ ನಿರ್ವ ಹಿಸಬಾರದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಉಭಯ ಜಿಲ್ಲೆಗಳ, ಕೃಷಿಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಎಲ್ಲ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ “71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024′ ಅನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಸ್ಥೆ ಜನರ ಸಂಸ್ಥೆಗಳಾಗಿ, ಸದಸ್ಯರ ಸಂಖ್ಯೆ ದುಪ್ಪಟ್ಟಾಗಬೇಕು. ಸದಸ್ಯರ ಬೇಡಿಕೆಗಳನ್ನು ಪೂರೈಸಿದಾಗ 120 ವರ್ಷಗಳ ಇತಿಹಾಸದ ಸಹಕಾರಿ ಆಂದೋಲನಕ್ಕೆ ಕೀರ್ತಿ ಬಂದೀತು ಎಂದರು.
ಸಾಲಮೇಳ ಅಗತ್ಯ: ಖಾದರ್
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿದಾಗ 33 ಕೋಟಿ ಜನಸಂಖ್ಯೆಯಿದ್ದ ದೇಶ ದಲ್ಲಿ ಒಂದು ಹೊತ್ತಿನ ಊಟಕ್ಕೆ ಕಷ್ಟಪಡ ಬೇಕಾದ ಪರಿಸ್ಥಿತಿ ಇತ್ತು. ಇಂದು 140 ಕೋಟಿ ಜನರಿಗೆ ಮೂರು ಹೊತ್ತಿನ ಆಹಾರ ನೀಡಿ, ವಿಶ್ವಕ್ಕೆ ರಫ್ತು ಮಾಡುವ ಸಾಮರ್ಥ್ಯ ನಮಗಿದೆ ಎಂದಾದರೆ ಅದಕ್ಕೆ ಕಾರಣ ಸಹಕಾರ ಕ್ಷೇತ್ರ. ಜನಾರ್ದನ ಪೂಜಾರಿ ಯವರ ಮಾದರಿಯಲ್ಲಿ ಸಹಕಾರ ಕ್ಷೇತ್ರದ ಮೂಲಕವೂ “ಸಾಲ ಮೇಳ’ ನಡೆಯಬೇಕು. ಕರಾವಳಿ ಭಾಗದ ಹೈನುಗಾರರಿಗೆ ನೀಡುವ ಪ್ರೋತ್ಸಾಹ ಧನವನ್ನು ಇತರ ಜಿಲ್ಲೆಗಳಿಗಿಂತ ಶೇ.10-20ರಷ್ಟು ಏರಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜನರ ಸಾಮರ್ಥ್ಯ, ಶಕ್ತಿಯನ್ನು ಒಗ್ಗೂಡಿಸಿ, ಪರಿ ಣಾಮಕಾರಿಯಾಗಿ ಕೆಲಸ ಮಾಡಲು ಸಹ ಕಾರ ಕ್ಷೇತ್ರ ಅವಕಾಶ ನೀಡಿದೆ ಎಂದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಕೆಳಮಟ್ಟದ ಜನರ ಬದುಕಿನಲ್ಲಿ ಬದಲಾವಣೆ ತಂದ ಕ್ಷೇತ್ರ ಸಹಕಾರ ಕ್ಷೇತ್ರ ಎಂದರು. ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಉದ್ಯೋಗಶೀಲತೆ, ಉದ್ಯೋಗ ಸೃಷ್ಟಿಯಲ್ಲಿ ಸಹಕಾರ ಕ್ಷೇತ್ರ ದೊಡ್ಡ ಕೊಡುಗೆ ನೀಡುತ್ತಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಸಹಕಾರಿ ಕ್ಷೇತ್ರ ಚುರುಕು ಮತ್ತು ಬುದ್ಧಿವಂ ತಿಕೆಯಿಂದ ಗಟ್ಟಿಯಾಗಿ ಉಳಿಸುವ ಕೆಲಸ ಕರಾವಳಿಯಲ್ಲಿ ನಡೆಯುತ್ತಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಲ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ| ಭರತ್ ಶೆಟ್ಟಿ ವೈ., ಯಶ್‌ಪಾಲ್ ಸುವರ್ಣ, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಸಹಕಾರ ಸಂಘಗಳ ಅಪರ ಉಪನಿಬಂಧಕರಾದ ಕೆ.ಎಸ್. ನವೀನ್, ಎಚ್. ಬಾಲಶೇಖರ್, ಸಹಕಾರ ಮಾರಾಟ ಮಹಾ ಮಂಡಲದ ವ್ಯವಸ್ಥಾಪಕ ನಿರ್ದೇಶಕ ಗುರುಸ್ವಾಮಿ, ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ ಪಿ.,
ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಉಡುಪಿ ಉಪನಿಬಂಧಕಿ ಲಾವಣ್ಯಾ ಕೆ.ಆರ್.,ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲೊಟ್ಟು, ರಾಜು ಪೂಜಾರಿ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಕೆ.ಜೈರಾಜ್ ಬಿ.ರೈ, ರಾಜೇಶ್ ರಾವ್, ಎಸ್.ಎನ್.ಮನ್ಮಥ, ಸಿಇಒ ಕೆ. ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮಹಾ ಮಂಡಲದ ನಿರ್ದೇಶಕ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ವಂದಿಸಿದರು. ಬಾಲಕೃಷ್ಣ ನಿರೂಪಿಸಿದರು.
ಸಹಕಾರ ಜಾಥಾ
ಎಸ್‌ಸಿಡಿಸಿಸಿ ಬ್ಯಾಂಕ್ ಬಳಿಯಿಂದ ಕರಾವಳಿ ಉತ್ಸವ ಮೈದಾನದವರೆಗೆ “ಸಹಕಾರ ಜಾಥಾ’ ಸಾಗಿಬಂತು. ಸಮಾವೇಶದಲ್ಲಿ ನಂದಿನಿಯ
“ಪ್ರೀಮಿಯಂ ಪ್ರೊಬಯಾಟಿಕ್ ಮೊಸರು’ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಉತ್ತಮ ಸಹಕಾರ ಸಂಘ, ಶತಮಾನೋತ್ಸವ ಪೂರೈಸಿದ ಸಹಕಾರ ಸಂಘ, ಉತ್ತಮ ಸ್ವ ಸಹಾಯ ಸಂಘಗಳಿಗೆ ಪ್ರಶಸ್ತಿ ಹಾಗೂ ಕೆಲವು ಸಾಧಕರಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ 2024 ನೀಡಿ ಗೌರವಿಸಲಾಯಿತು.
ಸಹಕಾರ ಕ್ಷೇತ್ರದಿಂದ ಮಹಿಳಾ ಸ್ವಾವಲಂಬನೆ: ಡಾ| ಎಂ.ಎನ್.ಆರ್.
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರ ಮಹಿಳೆಯರ ಅಭೂತಪೂರ್ವ ಬೆಂಬಲ ಹಾಗೂ ಸಹಕಾರದಿಂದ ನಡೆಯುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ. 2025ರ ಫೆ.24ರಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಳ್ಳಲಿದ್ದು, ಈ ಕಾರ್ಯಕ್ರಮದ ಆಚರಣೆಗೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಸಹಕಾರ ಶಿಕ್ಷಣ ನಿಧಿಗೆ 2.65 ಕೋ.ರೂ. ದೇಣಿಗೆ
ರಾಜ್ಯ ಸಹಕಾರ ಮಹಾಮಂ ಡಲದ “ಸಹಕಾರ ಶಿಕ್ಷಣ ನಿಧಿಗೆ’ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ 2,65,35,683 ರೂ. ದೇಣಿಗೆಯ ಚೆಕ್ಕನ್ನು ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ಜಿ.ಟಿ.ದೇವೇಗೌಡ ಅವರಿಗೆ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.