![Maha Kumbh 2025: Minister Prahlad Joshi takes holy dip at Triveni Sangam](https://www.udayavani.com/wp-content/uploads/2025/02/js-415x231.jpg)
![Maha Kumbh 2025: Minister Prahlad Joshi takes holy dip at Triveni Sangam](https://www.udayavani.com/wp-content/uploads/2025/02/js-415x231.jpg)
Team Udayavani, Jan 30, 2025, 7:20 AM IST
ಮಂಗಳೂರು: ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು 20 ವರ್ಷಗಳ ಜೈಲು ಶಿಕ್ಷೆ ಮತ್ತು 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಧರ್ಮಸ್ಥಳ ಗ್ರಾಮ ಕಲ್ಕಜೆ ದೊಂಡೋಲೆಯ ಕೆ.ಎಸ್. ಕೇಶವ ಪೂಜಾರಿ(43) ಶಿಕ್ಷೆಗೊಳಗಾದವನು. ಆರೋಪಿ ಕೇಶವ ಪೂಜಾರಿ 15 ವರ್ಷದ ಬಾಲಕಿ ಆಕೆಯ ಮನೆಯಲ್ಲಿ ಒಬ್ಬಳೇ ಇರುವಾಗ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಅಲ್ಲದೆ ಜೀವಬೆದರಿಕೆ ಹಾಕಿದ್ದ. 2023ರ ನವೆಂಬರ್‌ನಲ್ಲಿ ಬಾಲಕಿಯ ಕಾಲಿನಲ್ಲಿ ಊತ ಕಂಡು ಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಐದೂವರೆ ತಿಂಗಳ ಗರ್ಭಿಣಿ ಎಂಬುದಾಗಿ ವೈದ್ಯರು ತಿಳಿಸಿದ್ದರು.
ಆರೋಪಿ ಹೆದರಿಸಿದ್ದ ಹಿನ್ನೆಲೆಯಲ್ಲಿ ಬಾಲಕಿ ಬೇರೊಬ್ಬ ಕಾಲ್ಪನಿಕ ವ್ಯಕ್ತಿಯ ಹೆಸರು ಹೇಳಿದ್ದಳು. ಆದರೆ ಬಾಲಕಿ ಹೇಳಿದ ಹೆಸರಿನ ವ್ಯಕ್ತಿ ಬಾಲಕಿ ಹೇಳಿದ ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಆಕೆಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಧೈರ್ಯ ತುಂಬಿ ಪುನಃ ವಿಚಾರಿಸಿದಾಗ ಕೇಶವ ಪೂಜಾರಿ ಕೃತ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು. ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಆರೋಪಿ ಕೇಶವ ಪೂಜಾರಿಯೇ ಬಾಲಕಿಯ ಭ್ರೂಣದ ಜೈವಿಕ ತಂದೆ ಎಂಬುದು ದೃಢಪಟ್ಟಿತ್ತು.
ಧರ್ಮಸ್ಥಳ ಪೊಲೀಸ್ ನಿರೀಕ್ಷಕ ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರ 16 ಸಾಕ್ಷಿದಾರರನ್ನು ವಿಚಾರಿಸಿ 33 ದಾಖಲೆಗಳನ್ನು ಗುರುತಿಸಲಾಗಿತ್ತು. ನ್ಯಾಯಾಧೀಶರು ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಪರಿಗಣಿಸಿ ಹಾಗೂ ವಾದ-ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಜ. 28ರಂದು ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.
ಬಾಲಕಿಗೆ 6.45 ಲಕ್ಷ ರೂ. ಪರಿಹಾರ
ದಂಡದ ಒಟ್ಟು ಹಣವಾದ 55 ಸಾವಿರ ರೂ.ಗಳನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 6.45 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಲಿಖಿತ ನಿರ್ದೇಶನ ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.