Manipal: ಚಿರತೆ ಹಲವೆಡೆ ಓಡಾಟ, ಹೆಚ್ಚಿದ ಆತಂಕ
ಮನೆಯೊಂದರ ಕಾರಿಗೆ ಹಾನಿ, ಇಲಾಖೆ ಗಸ್ತಿಗೆ ಹೆಚ್ಚಿದ ಒತ್ತಡ
Team Udayavani, Jul 31, 2024, 7:30 AM IST
ಮಣಿಪಾಲ: ಒಂದು ವಾರದಿಂದ ಮಣಿಪಾಲ ಪರಿಸರದಲ್ಲಿ ನಿರಂತರ ಚಿರತೆ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆಯಿಂದ ಅತೀ ಶೀಘ್ರ ಚಿರತೆಯ ಜಾಡು ಹಿಡಿಯುವ ಕಾರ್ಯ ಆಗಬೇಕು ಎಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ.
ಕಳೆದ ಶುಕ್ರವಾರ ರಾತ್ರಿ ಪೆರಂಪಳ್ಳಿಯ ಮನೆಯ ಆವರಣದೊಳಗೆ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಸೋಮ ವಾರ ತಡರಾತ್ರಿ ಅನಂತ ನಗರ, ಸಿಂಡಿಕೇಟ್ ವೃತ್ತ, ಎಂಡ್ ಪಾಯಿಂಟ್ ಪ್ರದೇಶಗಳಲ್ಲಿ ಚಿರತೆಯನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ.
ಪೆರಂಪಳ್ಳಿಯಲ್ಲಿ ಚಿರತೆ ಚಲನವಲನ ಪತ್ತೆಯಾದ ಅನಂತರ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಈಗ ಅನಂತ ನಗರದಲ್ಲಿ ಚಿರತೆ ಓಡಾಡಿದ ಕುರುಹು ಪತ್ತೆಯಾಗಿದೆ. ಪೆರಂಪಳ್ಳಿಯಲ್ಲಿ ಓಡಾಡಿದ ಚಿರತೆಯೇ ಇಲ್ಲಿಗೂ ಬಂದಿರಬಹುದೇ ಅಥವಾ ಈ ಪರಿಸರದಲ್ಲಿ ಬೇರೆ 2-3 ಚಿರತೆ ಇರಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ.
ಇಲ್ಲಿನ ಸ್ಥಳೀಯರೊಬ್ಬರು ಪಾರ್ಕ್ ಮಾಡಿದ ಕಾರಿಗೆ ಹಾನಿಯಾಗಿದ್ದು, ಇದು ಚಿರತೆಯಿಂದಾಗಿರುವುದು ಎನ್ನಲಾಗಿದೆ. ಕಾರಿನ ಟೈರ್ ಮೇಲ್ಭಾಗದಲ್ಲಿ ಪರಚಿ ಜಖಂಗೊಳಿಸಿದಂತಿದೆ. ಈ ಪರಿಸರದಲ್ಲಿ ಚಿರತೆ ಓಡಾಡಿರುವ ಕಾಲಿನ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.
ಮಣಿಪಾಲ ಎಂಡ್‌ಪಾಯಿಂಟ್‌ನಲ್ಲೂ ಚಿರತೆ ಓಡಾಟ ಕಂಡುಬಂದಿದ್ದು, ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಚಿರತೆಯನ್ನು ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಎಂಡ್‌ಪಾಯಿಂಟ್ ಪ್ರದೇಶಕ್ಕೆ ಮಂಗಳವಾರ ಅರಣ್ಯ ಇಲಾಖೆ ಉಪ ವಲಯ ಅಧಿಕಾರಿ ಸುರೇಶ್ ಗಾಣಿಗ ಭೇಟಿ ನೀಡಿದ್ದು, ಅಲ್ಲಿ ಬೋನ್ ಇಡಲಾಗಿದೆ. ಈ ವೇಳೆ ಮಾಹೆ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು, ಸೆಕ್ಯೂರಿಟಿ ಆಫೀಸರ್ ಸತೀಶ್ ಮೊದಲಾದವರು ಉಪಸ್ಥಿತರಿದ್ದರು.
ರಾತ್ರಿ ಓಡಾಡಲು ಭಯ
ಮಣಿಪಾಲದ ಮುಖ್ಯರಸ್ತೆಯ ಆಸು ಪಾಸಿನಲ್ಲಿಯೇ ಚಿರತೆ ಕಾಣಿಸಿ ಕೊಂಡಿರುವುದರಿಂದ ರಾತ್ರಿ ವೇಳೆ ಮಣಿಪಾಲ ಪರಿಸರದಲ್ಲಿ ಜನರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣಗೊಂಡಿದ್ದು, ಹೊಟೇಲ್ ಕಾರ್ಮಿಕರು ಸಹಿತ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳು ಕೆಲಸ ಮುಗಿಸಿ ಮನೆ ಕಡೆಗೆ ತೆರಳಲು ಆತಂಕಪಡುವಂತಾಗಿದೆ.
ನಾಯಿಗಳಿಗೆ ಹೊಂಚು ಹಾಕುವ ಚಿರತೆ
ನಗರ ಭಾಗಕ್ಕೆ ಚಿರತೆಗಳು ಯಾಕೆ ಆಗಮಿಸುತ್ತಿವೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಸಣ್ಣಪುಟ್ಟ ಕಾಡಿನಲ್ಲಿ ಚಿರತೆಗೆ ಬೇಕಾದ ಆಹಾರ ಕಡಿಮೆಯಾಗಿದ್ದು, ಇದು ನಾಡಿನತ್ತ ವಲಸೆ ಬರಲು ಕಾರಣವಾಗುತ್ತಿದೆ. ಸುಲಭವಾಗಿ ಸಿಗುವ ಕೋಳಿ, ನಾಯಿಗಳನ್ನು ಹುಡುಕಿಕೊಂಡು ಚಿರತೆ ಬರುತ್ತಿದೆ.
ಅದರಲ್ಲಿಯೂ ಮಣಿಪಾಲದಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಎಂಡ್‌ಪಾಯಿಂಟ್ ಸುತ್ತಲಿನ ಪ್ರದೇಶದಲ್ಲಿ ಚಿರತೆಗಳ ಬಾಯಿಗೆ ಆಹಾರವಾಗುತ್ತಿದೆ ಎಂಬುದು ಅರಣ್ಯ ಇಲಾಖೆ ಸಿಬಂದಿ ಅಭಿಪ್ರಾಯ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆಯೂ ಮುಂದಾಗಬೇಕಾದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.
ಚಿರತೆ ನೋಡಿ ಬೆಚ್ಚಿದ ಕಾರ್ಮಿಕರು
ಅನಂತನಗರ ಸಮೀಪದ ಹೊಟೇಲ್ ಒಂದರಲ್ಲಿ ತಡರಾತ್ರಿ ಕರ್ತವ್ಯ ಮುಗಿಸಿ ರೂಮ್ ಕಡೆಗೆ ಸಾಗುತ್ತಿದ್ದ ಕಾರ್ಮಿಕರು ಚಿರತೆಯನ್ನು ಕಂಡು ಬೆಚ್ಚಿಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಚಿರತೆ ರಸ್ತೆಯಲ್ಲಿ ಹೋಗುತ್ತಿರುವುದು ಕಂಡು ಹೆದರಿದ ಕಾರ್ಮಿಕರು, ಕೆಲವರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಚಿರತೆ ಪೊದೆಗಳ ಎಡೆಗೆ ಸಾಗಿ ಕಣ್ಮರೆಯಾಗಿದೆ ಎನ್ನುತ್ತಾರೆ ಕಾರ್ಮಿಕರು.
ಮಣ್ಣಪಳ್ಳ ವಾಯು ವಿಹಾರಿಗಳಿಗೆ ಆತಂಕ
ಮಣಿಪಾಲದ ಮಣ್ಣಪಳ್ಳ ಕೆರೆ ಸುತ್ತಮುತ್ತ ಗಿಡಗಂಟಿ ಪೊದೆಗಳು ಬೆಳೆದುಕೊಂಡಿದ್ದು, ಈ ಭಾಗದಲ್ಲಿಯೂ ಚಿರತೆ ಅಡಗಿರುವ ಸಾಧ್ಯತೆ ಇದೆ. ನಿತ್ಯ ನೂರಾರು ಮಂದಿ ಹಿರಿಯರು, ಮಕ್ಕಳು ಇಲ್ಲಿ ವಿಹಾರಕ್ಕೆ ಆಗಮಿಸುತ್ತಿದ್ದು, ಚಿರತೆ ಓಡಾಟದ ವಿಚಾರದಿಂದ ಆತಂಕಗೊಂಡು ಕೆಲವರು ವಿಹಾರಕ್ಕೆ ತೆರಳು ಹಿಂದೇಟು ಹಾಕುತ್ತಿದ್ದಾರೆ. ತತ್‌ಕ್ಷಣವೇ ಇಲ್ಲಿ ಅಗತ್ಯ ಭದ್ರತ ಸಿಬಂದಿ ನೇಮಕ ಮಾಡಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ರಾತ್ರಿ ಅರಣ್ಯ ಇಲಾಖೆ ಗಸ್ತು ಅವಶ್ಯ
ಮಣಿಪಾಲದಲ್ಲಿ ಚಿರತೆ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಮಣಿಪಾಲದಲ್ಲಿ ಗಿಡ, ಮರ ಪೊದೆಗಳಿರುವ ಜಾಗದಲ್ಲಿ ಚಿರತೆ ಸೆರೆ ಹಿಡಿಯುವ ಬೋನು ಇರಿಸುವಂತೆ ಒತ್ತಾಯಿಸಿದ್ದಾರೆ.
“ಮಣಿಪಾಲ ಪರಿಸರದಲ್ಲಿ ಕಾಣಿಸಿ ಕೊಂಡ ಚಿರತೆ ಸೆರೆ ಹಿಡಿಯಲು ಇಲಾಖೆ ಎಲ್ಲ ರೀತಿಯಿಂದ ಕಾರ್ಯಯೋಜನೆ ರೂಪಿಸಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಇಲಾಖೆ ಸಿಬಂದಿ ಈಗಾಗಲೇ ಚಿರತೆ ಕಾಣಿಸಿಕೊಂಡ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಚಿರತೆ ಕಾಣಿಸಿಕೊಂಡಲ್ಲಿ ತತ್‌ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಮಣಿಪಾಲ ಎಂಡ್‌ಪಾಯಿಂಟ್ ಪ್ರದೇಶದ ಬಳಿ ಚಿರತೆ ಸೆರೆ ಹಿಡಿಯಲು ಬೋನು ಇರಿಸಲಾಗಿದೆ. ರಾತ್ರಿ ವೇಳೆ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ತಿರುಗಿ ಪರಿಶೀಲನೆ ನಡೆಸುವಂತೆ ಅಧಿಕಾರಿ, ಸಿಬಂದಿಗೆ ಸೂಚಿಸಲಾಗಿದೆ. ಚಿರತೆ ಕಂಡರೆ ಕೂಡಲೇ ಆರ್‌ಎಫ್ಒ (9900816131), ಡಿಆರ್‌ಎಫ್ಒ (9449103163), ಉಡುಪಿ ಆರ್‌ಎಫ್ಒ ಕಚೇರಿ 0820-2523081 ಮಾಹಿತಿ ನೀಡಬಹುದು.” – ವಾರಿಜಾಕ್ಷಿ, ಆರ್‌ಎಫ್ಒ, ಅರಣ್ಯ ಇಲಾಖೆ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.