ಪೈಪೋಟಿಯ ಭರದಲ್ಲಿ ಮಾಧ್ಯಮಗಳು ಹೊಣೆಗಾರಿಕೆ ಮರೆಯದಿರಲಿ
Team Udayavani, Apr 25, 2022, 6:00 AM IST
ಹೊಸದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ, ರಷ್ಯಾ-ಉಕ್ರೇನ್ ಯುದ್ಧ ಸಹಿತ ವಿವಿಧ ಘಟನೆಗಳ ಸಂದರ್ಭದಲ್ಲಿ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಕೆಲವು ಖಾಸಗಿ ಟಿ.ವಿ. ಚಾನೆಲ್‌ಗಳು ಪ್ರಚೋದನಕಾರಿ ಸುದ್ದಿಗಳನ್ನು ಬಿತ್ತರಿಸಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನಾವಳಿಗಳನ್ನು ವರದಿ ಮಾಡುವಾಗ ಮತ್ತು ಸುದ್ದಿಗಳನ್ನು ಬಿತ್ತರಿಸುವಾಗ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವಂತೆ ಖಾಸಗಿ ಟಿ.ವಿ. ಚಾನೆಲ್‌ಗಳಿಗೆ ಎಚ್ಚರಿಕೆಯ ಸಲಹೆಯನ್ನು ಸರಕಾರ ನೀಡಿದೆ.
ಕೋಮು ಹಿಂಸಾಚಾರದಂತಹ ಘಟನೆಗಳು ನಡೆದಾಗ ವದಂತಿಗಳನ್ನೇ ಸುದ್ದಿಗಳಾಗಿ ಬಿತ್ತರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಅನಧಿಕೃತ ಮಾಹಿತಿ, ವೀಡಿಯೋ ತುಣುಕುಗಳನ್ನು ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಬಿತ್ತರಿಸುವುದು ಸಾಮಾನ್ಯವಾಗಿದೆ. ಈ ಮಾಹಿತಿಗಳು ಮತ್ತು ವೀಡಿಯೋ ತುಣುಕುಗಳ ನಿಖರತೆ ಮತ್ತು ವಾಸ್ತವಾಂಶಗಳ ಬಗೆಗೆ ಪರಿಶೀಲನೆ ನಡೆಸದೆ ಸುದ್ದಿ ನೀಡುವ ಪೈಪೋಟಿಯಲ್ಲಿ ಬೇಕಾಬಿಟ್ಟಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಸರಕಾರಕ್ಕೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾವುದೇ ದುರಂತ, ಹಿಂಸಾಚಾರ, ಕೋಮುದಳ್ಳುರಿಯಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಕೆಲವು ಮಾಧ್ಯಮಗಳ ಈ ರೀತಿಯ ವರ್ತನೆಯು ಪರಿಸ್ಥಿತಿ ಯನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತಿದೆ. ಇಂದಿನ ಪೈಪೋಟಿಯ ಕಾಲಘಟ್ಟದಲ್ಲಿ ಎಲ್ಲವೂ ಮೊದಲು ನಮ್ಮ ವಾಹಿನಿಯಲ್ಲೇ ಬಿತ್ತರಗೊಳ್ಳ ಬೇಕು ಎಂಬ ಧಾವಂತದಲ್ಲಿ ತಿರುಚಲ್ಪಟ್ಟ ಅಥವಾ ಯಾವುದೋ ಹಳೆಯ ವೀಡಿಯೋ ತುಣುಕುಗಳನ್ನು ಬಿತ್ತರಿಸುವ ಕಾರ್ಯ ಕೆಲವು ಆಧುನಿಕ ಮಾಧ್ಯಮಗಳಿಂದಾಗುತ್ತಿವೆ. ಈ ಕಾರಣದಿಂದಾಗಿಯೇ ಕೋಮು ಹಿಂಸಾಚಾರ, ದುರಂತಗಳು ನಡೆದ ಸಂದರ್ಭದಲ್ಲಿ ಇಂಟರ್‌ನೆಟ್ ಸಂಪರ್ಕ ಸ್ಥಗಿತ, ಕೇಬಲ್ ಕಡಿತದಂತಹ ಕಠಿನ ಮತ್ತು ಅನಿವಾರ್ಯ ಕ್ರಮಗಳನ್ನು ಸ್ಥಳೀಯಾಡಳಿತ ವ್ಯವಸ್ಥೆ ಕೈಗೊಂಡ ಉದಾಹರಣೆ ನಮ್ಮ ಮುಂದೆ ಸಾಕಷ್ಟಿವೆ. ಆದರೆ ಈ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸುವ ಇದೇ ಸಂಸ್ಥೆಗಳು ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸುವ ಸಂದರ್ಭದಲ್ಲಿ ಕಿಂಚಿತ್ ವಿವೇಚನೆಯನ್ನೂ ತೋರದಿರುವುದು ದುರಂತ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮ ರಂಗ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ತಂತ್ರಜ್ಞಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವಂತೆಯೇ ಇದರ ಅಡ್ಡ ಪರಿ ಣಾಮಗಳ ಕರಿಛಾಯೆ ನೇರವಾಗಿ ಜನಸಾಮಾನ್ಯರ ಮೇಲೂ ಬೀಳ ತೊಡಗಿದೆ. ತಂತ್ರಜ್ಞಾನದ ಅಭೂತಪೂರ್ವ ಬೆಳವಣಿಗೆಯಿಂದಾಗಿ ಕ್ಷಣಮಾತ್ರದಲ್ಲಿ ವಿಶ್ವದ ಯಾವುದೇ ಒಂದು ಮೂಲೆಯಲ್ಲಿ ಒಂದು ದುರಂತ ಸಂಭವಿಸಿದರೂ ಅದು ಕ್ಷಣ ಮಾತ್ರದಲ್ಲಿ ಜನರನ್ನು ತಲುಪುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಬಿತ್ತರಿಸಲಾಗುವ ಸುದ್ದಿಯ ಖಚಿತತೆ ಮತ್ತವುಗಳು ಜನರ ಮೇಲೆ ಬೀರುವ ಪರಿಣಾಮವನ್ನೂ ಮೊದಲೇ ಗ್ರಹಿಸುವುದು ಜವಾಬ್ದಾರಿ ಯುತ ಮಾಧ್ಯಮ ಸಂಸ್ಥೆಯ ಕರ್ತವ್ಯವೂ ಹೌದು. ಇದನ್ನು ಮರೆತು ವದಂತಿ, ಪುಕಾರುಗಳನ್ನು ಪ್ರಸಾರ ಮಾಡುವುದು ಸರ್ವಥಾ ಸರಿಯಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.