![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Sep 13, 2024, 7:20 AM IST
ಬೆಳ್ತಂಗಡಿ: ಸರಕಾರ ರಾಜ್ಯದ ಜನತೆಗೆ ಉಚಿತ ವಿದ್ಯುತ್ ಕೊಡುಗೆ ನೀಡಿರುವ ಮಧ್ಯೆ ಇತ್ತ ಸರಕಾರಿ ಸಾಮ್ಯದ ಸ್ಥಳೀಯಾಡಳಿತಗಳು ಲಕ್ಷಗಟ್ಟಲೆ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿದ್ದು, ಮೆಸ್ಕಾಂ ಒಂದರಲ್ಲೇ 458 ಕೋಟಿ ರೂ. ಹೊರ ಬಾಕಿ ಇದೆ. 280 ಕೋ.ರೂ.ಗೂ ಅಧಿಕ ನಷ್ಟದಲ್ಲಿರುವ ಮೆಸ್ಕಾಂ ಕಂಪೆನಿ ಈಗ ಸರಕಾರದ ಸೂಚನೆಯಂತೆ ಸ್ಥಳೀಯಾಡಳಿತ ಸಂಸ್ಥೆಗಳ ಬಾಕಿ ವಸೂಲಾತಿಗೆ ಮುಂದಾಗಿದೆ.
ಗ್ರಾ.ಪಂ. ಮತ್ತು ಸ್ಥಳೀಯ ಸಂಸ್ಥೆಗಳು ಲಕ್ಷಗಟ್ಟಲೆ ರೂ. ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ವಿದ್ಯುತ್ ಸರಬರಾಜು ಕಂಪೆನಿಗಳು ಆರ್ಥಿಕ ನಷ್ಟ ಎದುರಿಸುತ್ತಿವೆ. ಈ ನೆಲೆಯಲ್ಲಿ ಪ್ರತಿ ತಿಂಗಳು ಶೇ. 100 ವಸೂಲಾತಿಗೆ ಉಪವಿಭಾಗ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮೆಸ್ಕಾಂ ಅಧಿಕಾರಿಗಳ ವಿಭಾಗವಾರು ತಂಡವನ್ನು ರಚಿಸಿ ಕ್ರಮ ಕೈಗೊಳ್ಳುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.
ಎಲ್ಲ 6 ವಿದ್ಯುತ್ ಕಂಪೆನಿಯಿಂದಲೂ ಕ್ರಮ
ರಾಜ್ಯದ ಪ್ರಮುಖ 6 ವಿದ್ಯುತ್ ವಿತರಣ ಕಂಪೆನಿಗಳಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ, (ಬೆಸ್ಕಾಂ) ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ), ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವೂ ಬಾಕಿ ವಸೂಲಾತಿಗೆ ಮುಂದಾಗಿದೆ.
ಇದರಲ್ಲಿ ಪ್ರಮುಖವಾಗಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರುವ ಸಾರ್ವಜನಿಕ ಆಸ್ಪತ್ರೆ, ಸರಕಾರಿ ವಿದ್ಯಾರ್ಥಿ ನಿಲಯ, ಕುಡಿಯುವ ನೀರು ಸರಬರಾಜು, ಪೊಲೀಸ್ ಇಲಾಖೆ, ನ್ಯಾಯಾಲಯ, ತಾಲೂಕು ಕಚೇರಿ ಹೊರತುಪಡಿಸಿ ಉಳಿದೆಲ್ಲ ಸಂಸ್ಥೆಗಳಿಗೆ ತತ್‌ಕ್ಷಣ ಮೊತ್ತ ಪಾವತಿಸಲು 7 ದಿನಗಳ ನೋಟಿಸ್ ನೀಡಿ, ಬಳಿಕವೂ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಆದೇಶಿಸಲಾಗಿದೆ.
ಮೆಸ್ಕಾಂನಲ್ಲೇ 458.97 ಕೋ.ರೂ. ಬಾಕಿ
ಮೆಸ್ಕಾಂ ವ್ಯಾಪ್ತಿಯ ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿ ಸರಕಾರಿ ಇಲಾಖೆ ಮತ್ತು ನೀರು ಸರಬರಾಜು ಹಾಗೂ ಬೀದಿದೀಪ ಸೇರಿ ಜಿಲ್ಲಾವಾರು ಒಟ್ಟು 58,657 ಸ್ಥಾವರಗಳ ಒಟ್ಟು 458.097 ಕೋ.ರೂ.ಗಳನ್ನು ಮೆಸ್ಕಾಂಗೆ ಭರಿಸಲು ಬಾಕಿಯಿದೆ. ಅದೇ ರೀತಿ 5 ಸಾ. ರೂ. ಗಿಂತ ಹೆಚ್ಚು ಬಾಕಿ ಇರಿಸಿಕೊಂಡಿರುವ ನಾಲ್ಕು ಜಿಲ್ಲೆಗಳ ವಾಣಿಜ್ಯ ಕೈಗಾರಿಕೋದ್ಯಮ ಸಹಿತ ಇತರ ಒಟ್ಟು 8,107 ಸ್ಥಾವರಗಳ 8.82 ಕೋ.ರೂ. ಬಾಕಿ ಬಿಲ್ ವಸೂಲಾತಿಗೆ ಈಗಾಗಲೇ ಅಭಿಯಾನ ಆರಂಭಿಸಿದೆ.
ಬೆಳ್ತಂಗಡಿ ತಾಲೂಕಿನಲ್ಲಿ 6 ಕೋ.ರೂ. ಬಾಕಿ
ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ಹಾಗೂ ಉಜಿರೆ ಉಪವಿಭಾಗಕ್ಕೆ ಸಂಬಂಧಿಸಿ ಉದಾಹರಣೆಗೆ 48 ಗ್ರಾ.ಪಂ.ಗಳ ಕುಡಿಯುವ ನೀರು, ಹಾಗೂ ದಾರಿ ದೀಪ ಸ್ಥಾವರಗಳ ಬಾಕಿ ಮೊತ್ತ ಒಟ್ಟು 6,82,24,726.6 ಕೋ.ರೂ. ಉಳಿಸಿಕೊಂಡಿದೆ. ಕೆಲವು ಗ್ರಾ.ಪಂ.ಗಳು 30 ಲಕ್ಷ ರೂ.ಗೂ ಅಧಿಕ ಮೊತ್ತ ಬಾಕಿ ಉಳಿಸಿವೆ. ಹೀಗಿರುವಾಗ ನಾಲ್ಕು ಜಿಲ್ಲೆಗಳಿಗೆ ಒಳಪಟ್ಟಂತೆ ಬಾಕಿ ಹೊರೆ ಮೆಸ್ಕಾಂಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
“ಸೆ. 1ರಿಂದಲೇ ವಿಶೇಷ ಕಂದಾಯ ವಸೂಲಾತಿ ತಂಡ ರಚಿಸಿ ಅಭಿಯಾನ ಆರಂಭಿಸಿದೆ. ಮೆಸ್ಕಾಂ ಪ್ರತಿದಿನ ವಿದ್ಯುತ್ ಖರೀದಿಗಾಗಿ 40 ಕೋ.ರೂ. ಪಾವತಿಸುತ್ತಿದೆ. ಗಂಗಾಕಲ್ಯಾಣ ಯೋಜನೆಯಡಿ ಒಂದು ಘಟಕಕ್ಕೆ ಸರಕಾರ 75 ಸಾವಿರ ರೂ. ನೀಡಿದರೆ ನೈಜ ವೆಚ್ಚ 30 ಲಕ್ಷ ರೂ. ತಗಲುತ್ತದೆ. ಇವೆಲ್ಲವನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯವಾಗಿದೆ.” – ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕಿ, ಮೆಸ್ಕಾಂ
-ಚೈತ್ರೇಶ್ ಇಳಂತಿಲ
You seem to have an Ad Blocker on.
To continue reading, please turn it off or whitelist Udayavani.