Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್
ವಡೋದರಾದಲ್ಲಿ ಟಾಟಾ, ಏರ್‌ಬಸ್ ಜಂಟಿಯಾಗಿ ಉತ್ಪಾದನೆ, ಇದು ದೇಶದ ಮೊದಲ ಖಾಸಗಿ ಮಿಲಿಟರಿ ಸರಕು ಸಾಗಣೆ ವಿಮಾನ ಕಾರ್ಖಾನೆ
Team Udayavani, Oct 30, 2024, 9:46 PM IST
ರಕ್ಷಣ ಉಪಕರಣಗಳಲ್ಲೂ ಆತ್ಮನಿರ್ಭರತೆ ಸಾಧಿಸಲು ಹೊರಟಿರುವ ಭಾರತ ಇದೀಗ ಸೇನೆಗೆ ಬೇಕಿರುವ ಸರಕು ಸಾಗಣೆ ವಾಹನವನ್ನು ದೇಶೀಯವಾಗಿ ಉತ್ಪಾದನೆ ಮಾಡಲು ಮುಂದಾಗಿದೆ. ಇದಕ್ಕಾಗಿ ಗುಜರಾತ್‌ನ ವಡೋದರಾದಲ್ಲಿ ಟಾಟಾ ಹಾಗೂ ಏರ್‌ಬಸ್ ಸೇರಿ ಮಿಲಿಟರಿ ವಿಮಾನವನ್ನು ತಯಾರು ಮಾಡುವ ಘಟಕವನ್ನು ಸ್ಥಾಪನೆ ಮಾಡಿವೆ. ಈ ಹಿನ್ನೆಲೆಯಲ್ಲಿ ಏನಿದು ಟಾಟಾ ಸಂಸ್ಥೆಯ ಮಿಲಿಟರಿ ವಿಮಾನ ಘಟಕ, ಇದರಿಂದ ಭಾರತಕ್ಕೇನು ಲಾಭ?, ಏರ್‌ಬಸ್ ಸಿ-295 ವಿಮಾನದ ವಿಶೇಷತೆಯೇನು ಎಂಬುದರ ಸ್ಥೂಲನೋಟ ಇಲ್ಲಿದೆ.
ಭಾರತೀಯ ಸೇನೆ ಮತ್ತು ಟಾಟಾ ಸಂಸ್ಥೆಯ ನಡುವೆ ಅವಿನಾಭಾವ ಸಂಬಂಧ ಇದೆ. ಭಾರತೀಯ ಸೇನೆಗೆ ಬೇಕಾದ ಟ್ರಕ್‌ಗಳು, ಜೀಪುಗಳು, ಸೇನಾ ವಾಹನಗಳು, ಲಾಂಚರ್ ಹೊತ್ತೂಯ್ಯಬಲ್ಲ ವಾಹನಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಟಾಟಾ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಪೂರೈಕೆ ಮಾಡುತ್ತಿದೆ.
ಇದಕ್ಕೂ ಮೊದಲು ಮೊದಲ ಮತ್ತು 2ನೇ ವಿಶ್ವಯುದ್ಧದ ಸಮಯದಲ್ಲೂ ಟಾಟಾ ಮಿಲಿಟರಿ ವಾಹನಗಳನ್ನು ತಯಾರು ಮಾಡಿ, ವಿವಿಧ ದೇಶಗಳಿಗೆ ಪೂರೈಕೆ ಮಾಡಿದೆ. ಇದೀಗ ಭಾರತೀಯ ಸೇನೆಗೆ ಬೇಕಾದ ಸರಕು ಸಾಗಣೆ ವಾಹನವನ್ನೂ ತಯಾರು ಮಾಡಲು ಟಾಟಾ ಮುಂದಾಗಿದ್ದು, ಏರ್ ಬಸ್ ಜತೆಗೂಡಿ ಗುಜರಾತ್‌ನಲ್ಲಿ ದೇಶದ ಮೊದಲ ಖಾಸಗಿ ಮಿಲಿಟರಿ ವಿಮಾನ ತಯಾರಿಕ ಘಟಕವನ್ನು ಸ್ಥಾಪನೆ ಮಾಡಿದೆ.
40 ವಿಮಾನಗಳು ಭಾರತದಲ್ಲೇ ನಿರ್ಮಾಣ
ಟಾಟಾ ಹಾಗೂ ಏರ್‌ಬಸ್ ಸೇರಿ ನಿರ್ಮಾಣ ಮಾಡಿರುವ ವಡೋದರಾದ ಕಾರ್ಖಾನೆಯಲ್ಲಿ ಏರ್‌ಬಸ್ ಸಿ-295ನ 40 ವಿಮಾನಗಳು ನಿರ್ಮಾಣವಾಗಲಿವೆ. ಇದು ರಕ್ಷಣ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಹೊರಟಿರುವ ಭಾರತದ ಪಾಲಿಗೆ ದೊಡ್ಡ ಹೆಜ್ಜೆಯಾಗಲಿದೆ. ಒಟ್ಟು 56 ಸಿ-295 ವಿಮಾನಕ್ಕೆ ಭಾರತ ಸರಕಾರ ಆರ್ಡರ್ ಸಲ್ಲಿಸಿದ್ದು, 16 ವಿಮಾನಗಳು ಸ್ಪೇನ್‌ನಿಂದ ಸೇನೆಗೆ ಹಸ್ತಾಂತರವಾಗಲಿದ್ದು, 40 ವಿಮಾನವನ್ನು “ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್’ ನಿರ್ಮಾಣ ಮಾಡಲಿದೆ.
ವಡೋದರಾದಲ್ಲೇ ಪೂರ್ಣ ವಿಮಾನ ನಿರ್ಮಾಣ
ವಡೋದರಾದಲ್ಲಿ ಟಾಟಾ ಸಂಸ್ಥೆ ಹೊಂದಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸೆಂಟರ್‌ನಲ್ಲಿ ಈ ವಿಮಾನಗಳು ಸಂಪೂರ್ಣವಾಗಿ ತಯಾರಾಗಲಿವೆ. ವಿಮಾನ ಎಂಜಿನ್ ಸೇರಿದಂತೆ ಒಂದಷ್ಟು ಘಟಕಗಳು ಹೈದರಾ ಬಾದ್‌ನಲ್ಲಿರುವ ಏರ್‌ಬಸ್ ಕಾರ್ಖಾನೆಯಲ್ಲಿ ತಯಾರಾದರೆ, ಉಳಿದವು ಗಳನ್ನು ಟಾಟಾ ಹಾಗೂ ಭಾರತದ ಇತರ ಸಂಸ್ಥೆಗಳು ಉತ್ಪಾದನೆ ಮಾಡಲಿವೆ. ಬಳಿಕ ಅಂತಿಮವಾಗಿ ವಡೋದರಾದ ಕಾರ್ಖಾನೆಯಲ್ಲಿ ಜೋಡಣೆ ಮಾಡಿ ವಿಮಾನವನ್ನು ಸೇನೆಗೆ ಹಸ್ತಾಂತರಿಸಲಾಗುತ್ತದೆ.
2031ರ ವೇಳೆ 56 ವಿಮಾನ ಸೇನೆಯ ಸುಪರ್ದಿಗೆ
ಸ್ಪೇನ್‌ನಲ್ಲಿ ತಯಾರಾಗುತ್ತಿರುವ 16 ವಿಮಾನಗಳು 2028ರ ಸೆಪ್ಟೆಂಬರ್ ವೇಳೆಗೆ ಸೇನೆಗೆ ಹಸ್ತಾಂತರವಾಗಲಿದೆ. ವಡೋದರಾದಲ್ಲಿ ಟಾಟಾ ತಯಾರು ಮಾಡುತ್ತಿರುವ ವಿಮಾನದಲ್ಲಿ ಮೊದಲ ವಿಮಾನ 2026ರ ಸೆಪ್ಟೆಂಬರ್‌ನಲ್ಲಿ ಸೇನೆಗೆ ಹಸ್ತಾಂತರವಾಗಲಿದ್ದು, 2031ರ ವೇಳೆಗೆ ಎಲ್ಲಾ ವಿಮಾನಗಳನ್ನು ಹಸ್ತಾಂತರ ಮಾಡಲು ಯೋಜಿಸಲಾಗಿದೆ. ಭಾರತದ ಸೇನೆಗೆ ಅಗತ್ಯವಿರುವ ವಿಮಾನಗಳನ್ನು ಪೂರೈಕೆ ಮಾಡಿದ ಬಳಿಕ, ಭಾರತೀಯ ಸೇನೆಯಿಂದ ಹೆಚ್ಚಿನ ವಿಮಾನಕ್ಕೆ ಆರ್ಡರ್ ಬರದಿದ್ದರೆ, ಏರ್‌ಬಸ್ ಸಿ- 295 ವಿಮಾನ ಗಳನ್ನು ರಫ್ತು ಮಾಡಲಾಗುತ್ತದೆ ಎಂದು ಟಾಟಾ ಸಂಸ್ಥೆ ಹೇಳಿದೆ.
ಪ್ರಮುಖ ಬಿಡಿಭಾಗಗಳು ಇಲ್ಲೇ ಉತ್ಪಾದನೆ
ಸಿ 295 ವಿಮಾನಕ್ಕೆ ಅಗತ್ಯವಿರುವ ಬಹುತೇಕ ಬಿಡಿಭಾಗಗಳನ್ನು ಟಾಟಾ ಅಡ್ವಾನ್ಸ್$x ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯೇ ತಯಾರು ಮಾಡಲಿದೆ. ಟೂಲಿಂಗ್, ಸಹ ಜೋಡಣಾ ಸಾಮಾಗ್ರಿ, ಪ್ರಮುಖ ಜೋಡಣಾ ಸಲಕರಣೆ, ಜಿಗ್ಸ್ ಮತ್ತು ಟೆಸ್ಟರ್‌ಗಳು ಇಲ್ಲೇ ಉತ್ಪಾದನೆಯಾಗಲಿವೆ. ಉಳಿದ ಒಂದಷ್ಟು ಬಿಡಿಭಾಗಗಳನ್ನು ಬೆಂಗಳೂರಿನಲ್ಲಿರುವ ಬಿಇಎಲ್ ಸೇರಿದಂತೆ ಇತರ ಭಾರ ತೀಯ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆಗಳು ಒದಗಿಸಲಿವೆ. ಈ ವಿಮಾನಕ್ಕೆ ಅವಶ್ಯಕತೆ ಇರುವ 13000 ಬಿಡಿಭಾಗಗಳು ಭಾರತದಲ್ಲೇ ತಯಾರಾಗುತ್ತವೆ ಎಂಬುದು ವಿಶೇಷ. ಬಳಿಕ ವಡೋದರಾದಲ್ಲಿರುವ ಘಟಕದಲ್ಲೇ ವಿಮಾನದ ಜೋಡಣಾ ಕಾರ್ಯ ನಡೆಯಲಿದೆ.
ಏನಿದು ಟಾಟಾ ಅಡ್ವಾನ್ಸ್ಡ್‌ಸಿಸ್ಟಮ್ಸ್ ಲಿಮಿಟೆಡ್?
ಈ ಸಂಸ್ಥೆಯ ಸಂಪೂರ್ಣ ಒಡೆತನ ಟಾಟಾ ಸನ್ಸ್ ಬಳಿ ಇದ್ದು, ಏರೋಸ್ಪೇಸ್ ಹಾಗೂ ರಕ್ಷಣ ಕ್ಷೇತ್ರದಲ್ಲಿ ಇದು ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿದೆ. ಹಲವು ಜಂಟಿ ಒಪ್ಪಂದಗಳನ್ನು ಮಾಡಿಕೊಂಡಿರುವ ಟಾಟಾ ಭಾರತೀಯ ಸೇನೆಗೆ ಬೇಕಾದ ಪರಿಕರಗಳನ್ನು ಒದಗಿಸುತ್ತಿದೆ.ಅಲ್ಲದೇ ಉಪಗ್ರಹ, ಕ್ಷಿಪಣಿ, ರಾಡಾರ್, ಡ್ರೋನ್, ಆರ್ಟಿಲರಿ ಗನ್‌ಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ಉತ್ಪಾದನೆ ಮಾಡುತ್ತಿದೆ.
ಏರ್‌ಬಸ್ ಸಿ- 295 ಸರಕು ಸಾಗಣೆ ವಿಮಾನದ ವೈಶಿಷ್ಟ್ಯಗಳು
ಏರ್‌ಬಸ್ ಸಿ- 295 ವಿಮಾನ ಮಧ್ಯಮ ಗಾತ್ರದ ಸರಕು ಸಾಗಣೆ ವಿಮಾನವಾಗಿದ್ದು, ವೈದ್ಯಕೀಯ ಸಹಾಯ, ವಿಪತ್ತು ನಿರ್ವಹಣೆ, ನೌಕಾಪಡೆ ಗಸ್ತಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ಅಲ್ಲದೇ ವಾಟರ್ ಕ್ಯಾನನ್ ಆಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ಈ ವಿಮಾನವನ್ನು ಇಳಿಸಲು ಸಂಪೂರ್ಣವಾಗಿ ತಯಾರಾಗಿರುವ ರನ್‌ವೇ ಬೇಕೇ ಬೇಕು ಎನ್ನುವ ಆವಶ್ಯಕತೆ ಇಲ್ಲ. ಹುಲ್ಲುಗಾವಲು, ಮಣ್ಣಿನ ನೆಲದಲ್ಲೂ ಇದು ಲ್ಯಾಂಡ್ ಮತ್ತು ಟೇಕಾಫ್ ಆಗಲಿದೆ. ಹೀಗಾಗಿ ಸೇನಾಪಡೆಗಳು ಈ ವಿಮಾನವನ್ನು ಹೆಚ್ಚು ಬಳಕೆ ಮಾಡುತ್ತವೆ.
ಭಾರತದಿಂದ ಈ ವಿಮಾನಕ್ಕೆ ಇಷ್ಟೊಂದು ಬೇಡಿಕೆ ಏಕೆ?
ಭಾರತೀಯ ಸೇನೆಯ ಬಳಿ ಈಗಾಗಲೇ ಸರಕು ಸಾಗಣೆಗೆ ಅವ್ರೋ ಎಚ್‌ಎಸ್ 748 ವಿಮಾನಗಳಿವೆ. ಈ ವಿಮಾನಗಳು ಹಳೆಯದ್ದಾಗಿದ್ದು, ಇವುಗಳ ನಿರ್ವಹಣೆಯೂ ದುಬಾರಿ ಯಾಗಿದೆ. ಹೀಗಾಗಿ ಈ ವಿಮಾನಗಳನ್ನು ಬದಲಾವಣೆ ಮಾಡುವ ತುರ್ತು ಸೇನೆಗಿತ್ತು. ಹೀಗಾಗಿ ರನ್‌ವೇಗಳಿಲ್ಲದ ಪ್ರದೇಶಗಳಿಂದಲೂ ಟೇಕಾಫ್ ಆಗಬಲ್ಲ, ಲ್ಯಾಂಡ್ ಆಗಬಲ್ಲ ಸಿ 295 ವಿಮಾನವನ್ನು ನಿಯೋಜನೆ ಮಾಡಲಾಗುತ್ತಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಭಾರತ ಸೇನೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ರಕ್ಷಣ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದೆ. ಇಂತಹ ಸಮಯದಲ್ಲಿ ಎಲ್ಲ ಮಾದರಿಯ ವಾತಾವರಣದಲ್ಲೂ ಕಾರ್ಯ ನಿರ್ವಹಿಸಬಲ್ಲ, ನಿರ್ವಹಣ ವೆಚ್ಚ ಕಡಿಮೆ ಇರುವ ವಿಮಾನದ ಆವಶ್ಯಕತೆ ಭಾರತದ ಸೇನೆಗಿತ್ತು.
ಭಾರತದಲ್ಲೇಕೆ ಏರ್‌ಬಸ್ ಘಟಕ ಸ್ಥಾಪನೆ?
ಏರ್‌ಬಸ್ ಸಿ 295 ವಿಮಾನಕ್ಕೆ ಭಾರತ ಪ್ರಮುಖ ಮಾರುಕಟ್ಟೆಯಾಗಿದ್ದು, ಗರಿಷ್ಠ ವಿಮಾನಗಳನ್ನು ಭಾರತ ಆರ್ಡರ್ ಮಾಡಿದೆ. ಒಟ್ಟು 56 ವಿಮಾನಗಳಿಗೆ ಏರ್‌ಬಸ್ ಹಾಗೂ ಭಾರತ 2021ರಲ್ಲಿ 21,935 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದವು. ಸ್ಪೇನ್ ಈಗಾಗಲೇ 6 ವಿಮಾನಗಳ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದರ ನಡುವೆಯೇ ಭಾರತದಲ್ಲೇ ವಿಮಾನ ತಯಾರಿಕೆಗೆ ಮುಂದಾದ ಭಾರತ ಸರಕಾರ ಬಿಡ್ ಆಹ್ವಾನ ಮಾಡಿತ್ತು. ಟಾಟಾ ಸಂಸ್ಥೆ ಇದರ ತಯಾರಿಕೆಗೆ ಮುಂದಾಗಿದ್ದು, ಏರ್‌ಬಸ್ ಜತೆ ಸೇರಿ ವಿಮಾನ ತಯಾರಿಕ ಘಟಕವನ್ನು ಸ್ಥಾಪನೆ ಮಾಡಿದೆ.
ಮೇಕ್ ಇನ್ ಇಂಡಿಯಾಕ್ಕೆ ಭಾರೀ ಬಲ
ರಕ್ಷಣ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸುವ ಭಾರತದ ಮಹತ್ವಾಕಾಂಕ್ಷೆಗೆ ಈ ಉತ್ಪಾದನ ಘಟಕ ಹೆಚ್ಚಿನ ಬಲ ನೀಡಲಿದೆ. ರಕ್ಷಣ ಪರಿಕರಗಳಿಗೆ ಭಾರತ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ರಷ್ಯಾ- ಉಕ್ರೇನ್ ಯುದ್ಧದ ಬಳಿಕ ರಕ್ಷಣ ಪರಿಕರಗಳ ಕೊರತೆ ಉಂಟಾಗಿತ್ತು. ಇದೀಗ ಭಾರತದಲ್ಲೇ ಮಿಲಿಟರಿ ವಿಮಾನ ತಯಾರಾಗುತ್ತಿರುವುದು ಭಾರತದ ರಕ್ಷಣ ವಲಯಕ್ಕೆ ಹೆಚ್ಚು ಬಲ ಕೊಟ್ಟಿದೆ. ಈ ವಿಮಾನದಲ್ಲಿ ಒಟ್ಟು 14,000 ಬಿಡಿಭಾಗಗಳಿದ್ದು, ಇದರಲ್ಲಿ 13,000 ಬಿಡಿಭಾಗಗಳನ್ನು ಭಾರತದಲ್ಲೇ ತಯಾರು ಮಾಡಲಾಗುತ್ತದೆ. ಹೀಗಾಗಿ ಭಾರತೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳೂ ದೊರೆಯಲಿವೆ.
– ಗಣೇಶ್ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ
Hamas: ಸಿನ್ವರ್ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್ ಯತ್ನ?
BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!
Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.