ಮುಂಗಾರು ಮಳೆ ವೈಫಲ್ಯ: ಬಾಯಿ ಸುಡಲಿದೆಯೇ ಹೆಸರು ಕಾಳು-ಬೇಳೆ?
ಮಳೆ ಕೊರತೆಯಿಂದ ಎರಡು ಜಿಲ್ಲೆಗಳಲ್ಲಿಯೂ ಬಿತ್ತನೆ ಸಾಕಷ್ಟು ಕುಂಠಿತವಾಗಿದೆ.
Team Udayavani, Jul 21, 2023, 10:47 AM IST
ಹುಬ್ಬಳ್ಳಿ: ಮುಂಗಾರು ಮಳೆ ವೈಫಲ್ಯದಿಂದಾಗಿ ಈ ಬಾರಿ ಶೇ.25-30ರಷ್ಟು ಸಹ ಹೆಸರು ಬೆಳೆ ಫಸಲು ಬರುವುದು ಕಷ್ಟವಾಗಿದೆ. ಹೆಸರು ಹೆಚ್ಚು ಬೆಳೆಯುವ ಉತ್ತರ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿಯೂ ಮುಂಗಾರು ಹಂಗಾಮಿಗೆ ಬಿತ್ತನೆ ಪ್ರಮಾಣ ಸಾಕಷ್ಟು ಕುಸಿತವಾಗಿದೆ. ಇನ್ನು ಮುಂದೆ ಹೆಸರು ಬಿತ್ತನೆ ಮಾಡಿದರೂ ಬೆಳೆ ಬರುವುದು ಕಷ್ಟ ಎಂದು ತಿಳಿದು ರೈತರ ಪರ್ಯಾಯ ಬೆಳೆಗೆ ಹೆಜ್ಜೆ ಇರಿಸಿದ್ದಾರೆ.
ಬೇಳೆ ಕಾಳುಗಳಲ್ಲಿ ಹೆಸರು ತನ್ನದೇ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮುಂಗಾರು ಹಂಗಾಮಿಗೆ ಕೆಲ ಜಿಲ್ಲೆಗಳಲ್ಲಿ ಹೆಚ್ಚಾಗಿ ಹೆಸರು ಪ್ರಮುಖ ಬೆಳೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೆಸರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಇದು ಹೆಚ್ಚಿನ ಪ್ರಮಾ ಣದಲ್ಲಿ ಮಳೆಯಾಧಾರಿತ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದೆ.
ಮುಂಗಾರು ಮಳೆ ವೈಫಲ್ಯದಿಂದ ಒಂದೆಡೆ ಬಿತ್ತನೆ ಕುಂಠಿತವಾಗಿದ್ದರೆ; ಇನ್ನೊಂದೆಡೆ ಬಿತ್ತನೆಯಾದ ಕಡೆಯೂ ಮಳೆ ಕೊರತೆಯಿಂದ ನಿರೀಕ್ಷಿತ ರೀತಿಯಲ್ಲಿ ಬೆಳೆ ಇಲ್ಲವಾಗಿದೆ. ರಾಜಸ್ಥಾನ ಹೊರತುಪಡಿಸಿದರೆ ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಹೆಸರು ಬೆಳೆ ಬೆಳೆಯುವ ಪ್ರದೇಶ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಶೇ.20-25ರಷ್ಟು ಪಾಲು ನೀಡುತ್ತಿದೆ.
ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ತಮಿಳುನಾಡು ರಾಜ್ಯಗಳಲ್ಲಿಯೂ
ಹೆಸರು ಬೆಳೆಯಲಾಗುತ್ತದೆ. ಈ ಬಾರಿಯ ಮುಂಗಾರು ಉತ್ತರ ಭಾರತದಲ್ಲಿ ಕಂಡರಿಯದ ಪ್ರವಾಹ ತಂದ್ದಿದರೆ, ದಕ್ಷಿಣದ ಹಲವು ರಾಜ್ಯಗಳಲ್ಲಿ ಮಳೆ ತೀವ್ರ ಕೊರತೆ ಹಾಗೂ ಬರದ ಸ್ಥಿತಿ ನಿರ್ಮಾಣ ಮಾಡಿದೆ.
ಇದರಿಂದ ಖಾರೀಫ್ ಹಂಗಾಮಿನಲ್ಲಿ ಹೆಸರು ಬೆಳೆ ಕುಂಠಿತವಾಗಿದೆ. ಇನ್ನೇನಿದ್ದರೂ ರಬಿ ಹಂಗಾಮಿಗೆ ಹೆಸರು ಬೆಳೆ ನಿರೀಕ್ಷಿಸಬೇಕಾಗಿದೆಯಾದರೂ, ಖಾರೀಫ್‌ಗೆ ಹೋಲಿಸಿದರೆ ರಬಿನಲ್ಲಿ ಹೆಸರು ಬಿತ್ತನೆ ಕಡಿಮೆ ಎನ್ನಬಹುದಾಗಿದೆ.
ಬಿತ್ತನೆ ಪ್ರಮಾಣ ಕುಸಿತ: ಈ ಬಾರಿಯ ಮುಂಗಾರು ಹಂಗಾಮಿಗೆ ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಹೆಸರು ಬೆಳೆ ಶೇ.30-40ರಷ್ಟಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಮಳೆಯ ಕೊರತೆಯಿಂದ ಬೆಳೆ ಕಮರುವ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಪೈಕಿ ಜುಲೈ ಮೊದಲ ವಾರಕ್ಕೆ ಕೇವಲ 67 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಹೆಸರು ಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗೆ ಸುಮಾರು 2.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ರಾಜ್ಯದಲ್ಲಿ ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಹೆಸರು ಬೆಳೆಯಲಾಗುತ್ತಿದೆಯಾದರೂ, ಗದಗ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಹೆಸರು ಬೆಳೆಯುವ ಪ್ರದೇಶವಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಹೆಸರು ಹೆಚ್ಚಿನ ಬೆಳೆಯಾಗಿದ್ದು, ಮಳೆ ಕೊರತೆಯಿಂದ ಎರಡು ಜಿಲ್ಲೆಗಳಲ್ಲಿಯೂ ಬಿತ್ತನೆ ಸಾಕಷ್ಟು ಕುಂಠಿತವಾಗಿದೆ.
ಮುಂಗಾರು ಹಂಗಾಮಿಗೆ ಮೇ ಮಧ್ಯ ಭಾಗದಿಂದ ಜುಲೈ ಮೊದಲ ವಾರದವರೆಗೆ ಹೆಸರು ಬಿತ್ತನೆ ಮಾಡಲಾಗುತ್ತದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಿದ್ದಲ್ಲಿ ರೈತರು ಮೇ ಮಧ್ಯ ಭಾಗದಿಂದಲೇ ಹೆಸರು ಬಿತ್ತನೆ ಆರಂಭಿಸುತ್ತಾರೆ. ಇಲ್ಲವಾದರೆ ಮುಂಗಾರು ಆರಂಭಕ್ಕೆ ಜೂನ್‌ನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ. ಈ ಬಾರಿ ಮುಂಗಾರು ಮಳೆ ಜುಲೈ ಮೊದಲ ವಾರದವರೆಗೂ ಸಮರ್ಪಕ ರೀತಿಯಲ್ಲಿ ಇಲ್ಲವಾದ್ದರಿಂದ ಹೆಸರು ಬೆಳೆ ಬಿತ್ತನೆ ಹೆಚ್ಚಿನ ಪ್ರದೇಶದಲ್ಲಿ ಸಾಧ್ಯವಾಗಿಲ್ಲ.
ಧಾರವಾಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಒಂದು ಗ್ರಾಮದಲ್ಲಿ 5-6 ಸಾವಿರ ಎಕರೆಯಷ್ಟು ಮುಂಗಾರು ಹಂಗಾಮಿಗೆ ಬಿತ್ತನೆ ಆಗುತ್ತಿತ್ತು. ಈ ಬಾರಿ ಕನಿಷ್ಟ 30-35 ಎಕರೆಯಷ್ಟು ಸಹ ಬಿತ್ತನೆ ಆಗಿಲ್ಲವಾಗಿದೆ. ಮಹಾರಾಷ್ಟ್ರದಲ್ಲಿ ಹೆಸರು ಬೆಳೆಯುವ ಜಿಲ್ಲೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿಯೂ ಮುಂಗಾರು ಮಳೆ ವೈಫಲ್ಯದಿಂದ ನಿರೀಕ್ಷಿತ ಮಟ್ಟದಲ್ಲಿ ಹೆಸರು ಬಿತ್ತನೆ ಆಗಿಲ್ಲವಾಗಿದ್ದು, ಈ ಬಾರಿ ಶೇ.25-30 ಪ್ರಮಾಣದ ಹೆಸರು ಫಸಲು ಬರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಮಳೆ ಕೊರತೆಯಿಂದ ಮುಂಗಾರು ಹಂಗಾಮಿಗೆ ಹೆಸರು ಬೆಳೆ ಬಿತ್ತನೆ ಕುಂಠಿತ ವಾಗಿದ್ದರೆ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಉತ್ತರದ ಹೆಸರು ಬೆಳೆಯುವ ರಾಜ್ಯಗಳಲ್ಲಿ ಅತಿವೃಷ್ಟಿ- ಪ್ರವಾಹ ಸ್ಥಿತಿಯಿಂದ ಹೆಸರು ಬೆಳೆ ಇಲ್ಲವಾಗುತ್ತಿದೆ. ಸಹಜವಾಗಿಯೇ ಈ ಬಾರಿ ಹೆಸರು ಹಾಗೂ ಹೆಸರು ಬೇಳೆ ಬೆಲೆ ಗಗನಮುಖಿಯಾಗುವುದು ಖಚಿತ ಎಂದೇ ಭಾವಿಸಲಾಗಿದೆ. ಉತ್ತಮ ದರ ಸಿಗುವ ಸಂದರ್ಭದಲ್ಲಿ ಹೊಲದಲ್ಲಿ ಬೆಳೆ ಇಲ್ಲವಾಯಿತಲ್ಲ ಎಂಬ ಸಂಕಷ್ಟ ರೈತರದ್ದಾಗಿದೆ.
ಎಣ್ಣೆಕಾಳು ಬಿತ್ತನೆಯೂ ಕುಂಠಿತ
ಮುಂಗಾರು ಹಂಗಾಮಿಗೆ ಹೆಸರು ಸೇರಿದಂತೆ ವಿವಿಧ ಅಕ್ಕಡಿಕಾಳು, ಎಣ್ಣೆಕಾಳುಗಳನ್ನು ಬಿತ್ತನೆ ಮಾಡಲಾಗುತ್ತದೆ. ಎಣ್ಣೆಕಾಳುಗಳಾದ ಶೇಂಗಾ, ಸೂರ್ಯಕಾಂತಿ, ಸೋಯಾಬಿನ್, ಎಳ್ಳು ಬಿತ್ತನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಹೆಸರು ಬೆಳೆ ರೀತಿಯಲ್ಲಿ ಎಣ್ಣೆಕಾಳುಗಳ ಬಿತ್ತನೆಗೂ ಹಿನ್ನಡೆಯಾಗಿದೆ. ಮುಂಗಾರು ಹಂಗಾಮಿಗೆ ಧಾರವಾಡ, ಗದಗ, ರಾಯಚೂರು, ಯಾದಗಿರಿ, ಹಾವೇರಿ ಇನ್ನಿತರ ಕಡೆಗಳಲ್ಲಿ ಅಷ್ಟು ಇಷ್ಟು ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತಾದರೂ, ಮಳೆ ಕೊರತೆಯಿಂದ ಮೊಳಕೆ ಬಾರದೆ ನೆಲದಲ್ಲಿಯೇ ಶೇಂಗಾ ಕಾಳು ಕೆಟ್ಟು ಹೋಗಿದೆ. ಕೆಲವೆಡೆ ಮೊಳಕೆ ಬಂದಿತ್ತಾದರೂ, ನೀರಿಲ್ಲದೆ ಅದು ಕಮರಿದೆ. ಇನ್ನು ಮುಂದೆ ಬೆಳೆ ಬರುವುದಿಲ್ಲವೆಂದು ರೈತರು ಶೇಂಗಾವನ್ನು ತೆಗೆದು ಬೇರೆ ಬೆಳೆ ಬಿತ್ತನೆಗೆ ಮುಂದಾಗಿದ್ದಾರೆ.
*ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.