Monti fest:ಮೊದಲ ಬೆಳೆಯ ದೇವತಾರ್ಪಣೆ-ಕನ್ಯಾ ಮೇರಿಯಮ್ಮ ಜನ್ಮದಿನ…ತೆನೆ ಸೌಭಾಗ್ಯದ ಸುದಿನ
ಕ್ರೈಸ್ತರು ಮಾಂಸ-ಮದ್ಯಗಳಿಲ್ಲದೆ ಆಚರಿಸುವ ಹಬ್ಬಗಳು ವಿರಳ
Team Udayavani, Sep 8, 2023, 11:14 AM IST
ಕೌಟುಂಬಿಕ ಜೀವನ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಒಗ್ಗಟ್ಟು, ಸಂಪ್ರದಾಯ-ಸಂಸ್ಕೃತಿ ಪ್ರೇಮ ಹಾಗೂ ಕುಟುಂಬ ಜೀವನದ ಸಂದೇಶವನ್ನು ನೀಡುವ ಕನ್ಯಾ ಮೇರಿ ಮಾತೆಯ ಜನ್ಮದಿನ ಮತ್ತು ಹೊಸ ಪೈರಿನ ಹಬ್ಬವು ಮಹತ್ವಪೂರ್ಣ ಎನಿಸಲಿದೆ.
ಆಷಾಢ ಮಾಸ ಕಳೆದು ಶ್ರಾವಣದಲ್ಲಿ ಎಲ್ಲೆಡೆ ಹಬ್ಬಗಳ ಸಂಭ್ರಮ. ಮಳೆಗಾಲದ ಜತೆಜತೆಯಲ್ಲೇ ಆರಂಭವಾಗುವ ಕೃಷಿ ಬೆಳೆಗಳು ಈ ಹೊತ್ತಿಗೆ ಬಲಿತು ನಿಲ್ಲುವ ಕಾಲ. ನಮ್ಮ ಪರಿಸರದ ಮುಖ್ಯ ಬೆಳೆಯಾದ ಭತ್ತದ ಗದ್ದೆಗಳಲ್ಲಿ ತೆನೆಗಳು ಮಂದ ಗಾಳಿಗೆ ಲಜ್ಜೆಭರಿತ ತರುಣಿಯಂತೆ ಬಾಗಿ ನಿಲ್ಲುತ್ತದೆ. ಇದನ್ನು ಕಂಡ ರೈತರಲ್ಲಿ ಸಂತೃಪ್ತಿಯ ಭಾವ ಮೂಡುತ್ತದೆ. ಸೆಪ್ಟಂಬರ್ 8 ಕನ್ಯಾ ಮೇರಿಯಮ್ಮನ ಜನ್ಮದಿನ ಹಾಗೂ ತೆನೆ ಸೌಭಾಗ್ಯದ ಸುದಿನ.
ಅದೊಂದು ವಿಶೇಷ ಹಬ್ಬ. ಕ್ರೈಸ್ತ ಬಾಂಧವರ ಹಬ್ಬಗಳ ಸಾಲಲ್ಲಿ ಇದು ಬಲು ವಿಶಿಷ್ಟವಾದುದು. ಮಾತೆ ಮೇರಿಯ ಜನ್ಮದಿನವನ್ನು (ನೇಟಿವಿಟಿ ಆಫ್ ಮದರ್ ಮೇರಿ) ಹಬ್ಬವನ್ನಾಗಿ ಸಾಂಪ್ರಾದಾಯಿಕ ಶೈಲಿಯಲ್ಲಿ ಸಡಗರ ಸಂಭ್ರಮದಿಂದ
ಆಚರಿಸಿ ಕನ್ಯಾ ಮಾತೆ ಮೇರಿಗೆ ನಮಿಸುತ್ತಾರೆ. ಭತ್ತದ ಕೃಷಿಯಲ್ಲಿ ತೆನೆ ಬಲಿತುಕೊಳ್ಳುವ ಕಾಲಕ್ಕೆ ಈ ಹಬ್ಬ ಬರುತ್ತದೆ.
ಮೊಂತಿ ಫೆಸ್ತ್
ಕನ್ಯಾ ಮರಿಯಮ್ಮಳನ್ನು ಹಲವು ನಾಮಗಳಿಂದ ಕರೆಯಲಾಗುತ್ತದೆ. ಲೂರ್ದ್ ನಗರದಲ್ಲಿ ಪ್ರತ್ಯಕ್ಷವಾದುದಕ್ಕೆ ಲೂರ್ದ್ ಎಂದೂ, ಫಾತಿಮಾನಗರದಲ್ಲಿ ಪ್ರತ್ಯಕ್ಷವಾದುದಕ್ಕೆ ಫಾತಿಮಾ ಮಾತೆ ಎಂತಲೂ ಕರೆಯಲಾಗುತ್ತದೆ. ಹಾಗೆಯೇ “ಮೊಂತಿ ಫೆಸ್ತ್’ ಅಂದರೆ ಪರ್ವತ ಮಾತೆ, ಮೇರಿ ಮಾತೆಯು ಯೇಸುಕ್ರಿಸ್ತರ ಮಾತೆ.
ಸಂತ ಅನ್ನಾ ಜೋಕಿಂ ದಂಪತಿಗೆ ಇಳಿವಯಸ್ಸಿನಲ್ಲಿ ಹುಟ್ಟಿದ ಮಗು. ಈ ಹಬ್ಬವನ್ನು ಕರಾವಳಿಯ ಕ್ರೈಸ್ತರು ಸುಮಾರು ಎರಡುವರೆ ಶತಮಾನದಿಂದ ಆಚರಿಸುತ್ತಾ ಬಂದಿದ್ದಾರೆ. ಕ್ರಿ.ಶ. 5ನೇ ಶತಮಾನದ ಆದಿಯಲ್ಲಿ ಸಿರಿಯಾ, ಪ್ಯಾಲೆಸ್ತಿನ್‌ನಲ್ಲಿ ಈ ಹಬ್ಬವನ್ನು ಆಚರಿಸುವ ಕ್ರಮ ಇತ್ತೆಂದು ಚರಿತ್ರೆಯಿಂದ ತಿಳಿಯುತ್ತದೆ. ಕರಾವಳಿ ಕ್ರೈಸ್ತರು ಇದನ್ನು “ಮೊಂತಿ ಫೆಸ್ತ್’ ಎಂದು ಕೊಂಡಾಡುತ್ತಾರೆ. “ಮೊಂತಿ’ ಎಂದರೆ ಬೆಟ್ಟ, ಪರ್ವತ ಎಂದರ್ಥ. “ಫೆಸ್ತ್’ಎಂದರೆ ಹಬ್ಬ. ಹೀಗೆ ಈ ಹಬ್ಬವು ಮಂಬಯಿಯ ಬಾಂದ್ರಾದಿಂದ ಮಂಗಳೂರಿಗೆ ಬಂದಿರಬಹುದು ಎಂದು ತಜ್ಞರ ಅಭಿಪ್ರಾಯವಿದೆ. ಮುಂಬಯಿಯ ಬಾಂದ್ರಾದಲ್ಲಿ ಮೇರಿ ಮಾತೆಯ ದೇವಾಲಯವಿದೆ.
ಹೊಸತು ಸೇವಿಸುವ ಸಂಪ್ರದಾಯ
ಹಬ್ಬಕ್ಕೆ ಸಿದ್ಧತೆಯಾಗಿ 9 ದಿನ ಮೊದಲೇ ವಿಶೇಷ ಪ್ರಾರ್ಥನೆ ಮತ್ತು ತಯಾರಿ ಆರಂಭವಾಗುತ್ತದೆ. ಈ ದಿನಗಳಲ್ಲಿ ಮಕ್ಕಳು ವಿವಿಧ ಹೂಗಳನ್ನು ತಟ್ಟೆಯಲ್ಲಿ ಜೋಡಿಸಿಟ್ಟು ತಂದು ಪೂಜೆಯ ಅನಂತರ ಮಾತೆ ಮೇರಿಯ ಪ್ರತಿಮೆಯಿರುವ ಗುಹಾಸ್ಥಾನ (ಗ್ರೊಟ್ಟೊ) ಎದುರು ವಿವಿಧ ಕೀರ್ತನೆಗಳೊಂದಿಗೆ ಮಾತೆ ಮೇರಿಯ ಪಾದಕ್ಕೆ ಅರ್ಪಿಸುತ್ತಾರೆ. ಹಬ್ಬದ ದಿನ ಕೃಷಿಕರು ತಾವು ಬೆಳೆಸಿದ ಪ್ರಥಮ ಫಲಗಳನ್ನು ದೇವ ಮಂದಿರಕ್ಕೆ ತಂದು ಮಾತೆ ಮೇರಿಯ ಪಾದಕ್ಕೆ ಕಾಣಿಕೆಯಾಗಿ ಅರ್ಪಿಸಿ ಅರ್ಥಪೂರ್ಣವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ತೆನೆಗಳನ್ನು ಸುಲಿದು ಪಾಯಸಕ್ಕೆ ಬೆರೆಸಿ ಚರ್ಚ್‌ನ ಸಮೀಪದಲ್ಲೇ ಸಾಮೂಹಿಕವಾಗಿ ಹೊಸತನ್ನು ಸೇವಿಸುವ ಸಂಪ್ರದಾಯವೂ ಇತ್ತೀಚೆಗೆ ಪ್ರಾರಂಭವಾಗಿದೆ.
ಸಸ್ಯಾಹಾರಿ ಭೋಜನ
ಕ್ರೈಸ್ತರು ಮಾಂಸ-ಮದ್ಯಗಳಿಲ್ಲದೆ ಆಚರಿಸುವ ಹಬ್ಬಗಳು ವಿರಳ ಅಥವಾ ಇಲ್ಲವೆಂದೇ ಹೇಳಬಹುದು. ಈ ಕಾರಣಕ್ಕೂ ಇದೊಂದು ವಿಶೇಷ ಹಬ್ಬ. ಈ ಹಬ್ಬವು ವಿಶೇಷವಾಗಿ ತರಕಾರಿ ಪಲ್ಯೆ, ಪಾಯಸಗಳಿಂದ ಕೂಡಿದ ಹಬ್ಬವಾಗಿದೆ. ಮದುವೆಯಾದ ಮಗಳು ತನ್ನ ಗಂಡನೊಂದಿಗೆ ತವರು ಮನೆಗೆ ಭೇಟಿ ಮಾಡುವುದು, ಬಾಳೆಎಲೆಯಲ್ಲಿ ಭೋಜನ ಸ್ವೀಕರಿಸುವುದು. ಕೆಸುವು, ಹರಿವೆ ದಂಟಿನ ಪದಾರ್ಥ, ಪತ್ರೊಡೆ ಇತ್ಯಾದಿಗಳು ಕರಾವಳಿಯ ಕೊಂಕಣಿ ಕ್ರೈಸ್ತರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹಬ್ಬದ ಪ್ರಯುಕ್ತ ಸಂಘ-ಸಂಸ್ಥೆಗಳು ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಆಚರಿಸುತ್ತವೆ.
ಪ್ರತಿಯೊಂದು ಜಾತಿ-ಧರ್ಮದಲ್ಲೂ ಹಿರಿಯರು ರೂಪಿಸಿದ ಕೆಲವು ಸಂಪ್ರದಾಯಗಳು ಇರುತ್ತವೆ. ಇವುಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಆಗ ನಾವು ನಮ್ಮ ಹಿರಿಯರು, ಧರ್ಮವನ್ನು ಗೌರವಿಸಿದಂತಾಗುತ್ತದೆ. ಕೌಟುಂಬಿಕ ಜೀವನ ಕುಸಿಯುತ್ತಿರುವ ಈ ಕಾಲದಲ್ಲಿ ಮೊಂತಿ ಮಾತೆಯ ಒಳ್ಳೆಯತನಕ್ಕೆ ಆಕೆಯ ತಂದೆ-ತಾಯಿ ಜೋಕಿಂ ಮತ್ತು ಆನ್ನಮ್ಮನವರು ಕಾರಣೀಕರ್ತರಾಗಿದ್ದಾರೆ. ಒಬ್ಬರನ್ನೊಬ್ಬರು ಪ್ರೀತಿಸಿ ತಮ್ಮ ಮಕ್ಕಳ ಕಡೆ ವಿಶೇಷ ಗಮನಹರಿಸಿ ಅವರಲ್ಲಿ ದೇವರ ಮೇಲಿನ ಪ್ರೀತಿ ಬೆಳೆಸಬೇಕಾಗಿದೆ.
ದೇವರು ನೀಡುವ ಪ್ರಸಾದ
ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಗಳನ್ನು ಆಶೀರ್ವದಿಸಿ ಮೆರವಣಿಗೆಯಲ್ಲಿ ಚರ್ಚ್‌ನ ಒಳಗೆ ಕೊಂಡೊಯ್ದು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುವರು. ಬಲಿಪೂಜೆಯ ಅನಂತರ ಧರ್ಮಗುರುಗಳು ಪ್ರತೀ ಕುಟುಂಬಕ್ಕೆ ಹೊಸ ಭತ್ತದ ತೆನೆ ನೀಡಿ ಗೌರವಿಸುವರು. ಈ ಸಮಯದಲ್ಲಿ ಚರ್ಚ್‌ಗೆ ಬಂದ ಎಲ್ಲರಿಗೂ ಸಿಹಿತಿಂಡಿ ಹಾಗೂ ಕಬ್ಬಿನ ತುಂಡುಗಳನ್ನು ವಿತರಿಸಲಾಗುತ್ತದೆ.
ಹೊಸ ಬೆಳೆ ಅಥವಾ ಮೊದಲ ಫಲವನ್ನು ಕಾಣಿಕೆಯಾಗಿ ದೇವರಿಗೆ ಸಮರ್ಪಿಸುವ ಪರಿಪಾಠ ಹಿಂದಿನಿಂದಲೂ ಇದೆ. ಬೆಳೆ-ಫಲಗಳು ದೇವರು ನೀಡುವ ಪ್ರಸಾದವೆನ್ನುವ ನಂಬಿಕೆ ಎಲ್ಲ ಧರ್ಮಗಳಲ್ಲೂ ಇದೆ. ಕರಾವಳಿಯ ಕ್ರೈಸ್ತರು ಸಾಂಕೇತಿಕವಾಗಿ ಈ ಪರಿಸರದ ಮುಖ್ಯ ಬೆಳೆ ಮತ್ತು ಪ್ರಮುಖ ಆಹಾರವಾದ ಭತ್ತದ ತೆನೆಗಳನ್ನು ದೇವರಿಗೆ ಸಮರ್ಪಿಸುತ್ತಾರೆ.
ಲೇಖನ ಸಂಗ್ರಹ: ದೊನಾತ್ ಡಿ’ಅಲ್ಮೇಡಾ, ತೊಟ್ಟಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.