ಚುಮುಚುಮು ಬೆಳಗಲ್ಲಿ ಪಾಂಚಾಲಿಯ ದನಿ!
Team Udayavani, Jan 31, 2021, 6:20 AM IST
ನನ್ನೊಳಗೆ ಹಸಿವಿತ್ತು. ನೋವಿತ್ತು. ಯಾತನೆಯಿತ್ತು. ಸಂಕಟವಿತ್ತು. ಇಡೀ ರಾತ್ರಿ ಬಿಕ್ಕಳಿಸಿದರೂ ಮುಗಿಯದಂಥ ದುಃಖವಿತ್ತು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಅಳುವುದಕ್ಕೆ ನನಗೆ ಒಂದು ಜಾಗವೇ ಸಿಗಲಿಲ್ಲ. ಮಹಾ ಪರಾಕ್ರಮಿ ಅನ್ನಿಸಿಕೊಂಡಿದ್ದ ರಾಜನೊಬ್ಬನ ಮಗಳು ನಾನು. ಹಾಗಿದ್ದರೂ ನನಗೆ ಹೆಜ್ಜೆಹೆಜ್ಜೆಗೂ ಅವಮಾನವಾ ಯಿತು. ತುಂಬಿದ ಸಭೆಯಲ್ಲೇ ನನ್ನ ಮಾನಹರಣದಂಥ ಪ್ರಯತ್ನ ನಡೆಯಿತು. ಉಹುಂ, ಆಗಲೂ ಯಾರೂ ನನ್ನ ಪರವಾಗಿ ದನಿಯೆ ತ್ತಲಿಲ್ಲ. ನನ್ನ ರಕ್ಷಣೆಗಾಗಿ ಪ್ರಾರ್ಥಿಸಲಿಲ್ಲ. ಅನುಕಂಪದ ಮಾತನಾಡ ಲಿಲ್ಲ. ಹೀಗಾ ದಾಗ ಅಳು ಬಾರದೇ ಇರ್ತದಾ? ಉಹುಂ, ಆಗಲೂ ನನಗೆ ನನ್ನಿಷ್ಟದಂತೆ ಅಳಲು ಸಾಧ್ಯವಾಗಲಿಲ್ಲ. ನಿಜ ಹೇಳಬೇಕೆಂದರೆ ನನ್ನಿಷ್ಟದಂತೆ ಬದುಕಲಿಕ್ಕೂ ಅವಕಾಶ ಸಿಗಲಿಲ್ಲ!
ವಾಸ್ತವ ಹೀಗಿದ್ದರೂ ನನ್ನೊಳಗಿನ ನೋವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. ನನ್ನ ದುರ್ವಿಧಿಗೆ ಯಾರೂ ಮರುಗಲಿಲ್ಲ. ಸಮಾಧಾನ ಹೇಳಲಿಲ್ಲ. ಬದಲಿಗೆ ತಿರಸ್ಕಾರದಿಂದ ಕಂಡರು. ವ್ಯಂಗ್ಯದ ಮಾತುಗಳಿಂದ ತಿವಿದರು. ಸಾಮಾನ್ಯ ಜನರಂತೂ- ದ್ರೌಪದಿಗೇನು ಕಡಿಮೆ? ಆಕೆಗೆ ದ್ರುಪದನ ಬೆಂಬಲವಿದೆ. ಕೃಷ್ಣನ ಕಣ್ಗಾವಲಿದೆ. ಪಾಂಡವರ ಅಷ್ಟೂ ಪ್ರೀತಿ ದಕ್ಕಿದೆ… ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದರು. ಇಂಥ ಮಾತುಗಳನ್ನು ಮೇಲಿಂದ ಮೇಲೆ ಕೇಳಿದಾಗ ನನಗೆ ತಲೆಚಿಟ್ಟು ಹಿಡಿಯುತ್ತಿತ್ತು.
ಮಹಾಜನರೆ, ಕೇಳಿ: ನನಗೆ ಕೃಷ್ಣನ ಕಣ್ಗಾವಲಿತ್ತು ಎಂಬುದಷ್ಟೇ ನಿಜ. ಉಳಿದ ಮಾತುಗಳೆಲ್ಲ ಸುಳ್ಳು. ಪಾಂಡವರನ್ನು ಕೈ ಹಿಡಿದ ನಂತರವೇ ನನಗೆ ಪಾಂಚಾಲಿ ಎಂಬ ಹೆಸರು ಬಂತು ಎಂಬುದಿದೆಯಲ್ಲ; ಅದು ಮೂರ್ಖರ ಮಾತು. ಕೇಳಿ: ಪಾಂಚಾಲ ದೇಶದ ರಾಜಪುತ್ರಿ ನಾನು. ಆ ಕಾರಣಕ್ಕೇ ನಾನು ಪಾಂಚಾಲಿ. ಯಾರೂ ನಂಬದಂತಹ ಸತ್ಯವೊಂದಿದೆ: ಏನೆಂದರೆ ಪಾಂಡವರ ಪತ್ನಿಯಾಗಿ ನಾನು ಯಾವತ್ತೂ ಸುಖವಾಗಿರಲಿಲ್ಲ…’ ಎಂದು ಹೇಳಿಬಿಡುವ ಆಸೆಯಾಗುತ್ತಿತ್ತು. ಆದರೆ ಎಲ್ಲರಿಗೂ ಮುಖಾಮುಖೀ ಯಾಗಿ ನಿಂತು ಮಾತಾಡಲು ನನಗೆ ಅವಕಾಶವೇ ಸಿಗಲಿಲ್ಲ.
ಅರಮನೆಯಲ್ಲಿ ಹೂವಂತೆ ಬೆಳೆದವಳು ನಾನು. ನನಗಿದ್ದ ಹೆಸರುಗಳು ಒಂದೇ ಎರಡೇ? ದ್ರುಪದನ ಮಗಳಾದ್ದರಿಂದ ದ್ರೌಪದಿ ಎನಿಸಿಕೊಂಡಿದ್ದಾರೆ. ತಂದೆಯವರಿಗೆ ಯಜ್ಞಸೇನ ಎಂಬ ಹೆಸರಿತ್ತಲ್ಲ? ಅದೇ ಕಾರಣದಿಂದ ಯಾಜ್ಞಸೇನಿ ಎಂಬ ಹೆಸರೂ ಅಂಟಿಕೊಂಡಿತ್ತು. ಚೂರೇ ಚೂರು ಕಪ್ಪಗಿದ್ದ ಕಾರಣಕ್ಕೆ ಕೃಷ್ಣೆ ಅನ್ನಿಸಿಕೊಂಡಿದ್ದಾರೆ. ಇದರ ಜತೆಜತೆಗೆ ತಂದೆಯವರು ಆಗಾಗ್ಗೆ ಕಂದಾ, ಮಗಳೇ, ಭದ್ರೇ ಎಂದೆಲ್ಲ ಕರೆಯುತ್ತಿದ್ದರು. ಜಗತ್ತು ಈಗಲಾದರೂ ಅರ್ಥಮಾಡಿಕೊಳ್ಳಲಿ. ಈ ದ್ರೌಪದಿ ನಿಜಕ್ಕೂ ಸಂತೋಷದಿಂದ ಇದ್ದುದು ಪಾಂಡವರ ಕೈಹಿಡಿದ ಅನಂತರ ಅಲ್ಲ; ದ್ರುಪದನ ಮಗಳಾಗಿದ್ದಾಗ ಮಾತ್ರ!
ಭಗವಂತನ ಅನುಗ್ರಹದಿಂದ ಹುಟ್ಟಿದವಳಂತೆ ನಾನು. ಹಾಗಂತ ತಂದೆಯವರು ಅದೆಷ್ಟೋ ಬಾರಿ ಹೇಳಿದ್ದರು. ಅದೇ ಸಂದರ್ಭದಲ್ಲಿ ಇನ್ನೂ ಒಂದು ಮಾತು ಹೇಳಿದ್ದರು: ಮಗಳೆ, ನೀನು ಅಪ್ಸರೆಯನ್ನೂ ಮೀರಿಸುವಂಥ ಸುಂದರಿ. ನಿನಗೆ ಅನುರೂಪನಾದ ಗಂಡು ಎಂಬುವವನಿದ್ದರೆ- ಅವನು ಅರ್ಜುನ. ದ್ರೋಣಾಚಾರ್ಯರ ಶಿಷ್ಯ. ಮಹಾ ಪರಾಕ್ರಮಿ. ತುಂಬು ತೇಜಸ್ಸಿನ ರೂಪುವಂತ. ಆದರೆ ಈಗ ಅವನು ಎಲ್ಲಿದ್ದಾರೆನೆ, ಹೇಗಿದ್ದಾರೆನೆ ಎಂಬುದೇ ತಿಳಿಯುತ್ತಿಲ್ಲ. ಇರಲಿ, ಶೀಘ್ರದಲ್ಲಿಯೇ ನಿನ್ನ ಸ್ವಯಂವರ ಏರ್ಪಡಿಸುತ್ತೇನೆ. ನೆರೆಹೊರೆಯ ಎಲ್ಲ ರಾಜರಿಗೂ ಆಹ್ವಾನ ಕಳುಹಿಸುತ್ತೇನೆ. ಆದರೆ ಅರ್ಜುನ ಮಾತ್ರ ಗೆಲ್ಲಬಲ್ಲಂಥ ಒಂದು ಸ್ಪರ್ಧೆ ಏರ್ಪಡಿಸುತ್ತೇನೆ. ಸ್ವಯಂವರಕ್ಕೆ ಅರ್ಜುನ ಬಂದೇ ಬರುತ್ತಾನೆ…’
ಕಡೆಗೂ ಅಪ್ಪನ ಮಾತೇ ನಿಜವಾಯಿತು. ಬ್ರಾಹ್ಮಣನ ವೇಷದಲ್ಲಿ ಬಂದ ಅರ್ಜುನ ನನ್ನನ್ನು ಗೆದ್ದುಕೊಂಡ. ನಾನು ಸಂತೋಷದ ಹೊಳೆ ಯಲ್ಲಿ ಕೊಚ್ಚಿಹೋದೆ. ಜನ್ಮಾಂತರದ ಕನಸೊಂದು ನನಸಾಯಿತೆಂದು ಬೀಗಿದೆ. ಭವಿಷ್ಯದ ದಿನಗಳಲ್ಲಿ ಅರ್ಜುನನೊಂದಿಗೆ ಸರಸವಾಡುವ, ಮಧುಚಂದ್ರದಲ್ಲಿ ಮೈಮರೆಯುವ, ಆತನ ಎದೆಯ ಮೇಲೆ ತಲೆಯಿಟ್ಟು ಪಿಸುಗುಡುವ ಸಂದರ್ಭಗಳನ್ನೇ ಅಂದಾಜು ಮಾಡಿಕೊಳ್ಳುತ್ತಿದ್ದಾರೆ. ಹಿರಿಯರಾದ ಧರ್ಮರಾಯನನ್ನು, ಭೀಮನನ್ನು ಹೇಗೆ ಮಾತಾಡಿಸಬೇಕೆಂದು ಯೋಚಿಸುತ್ತಿದ್ದೆ. ಆಗಲೇ ನಡೆದು ಹೋಯಿತಲ್ಲ ಅನಾಹುತ? ತಮ್ಮಂದಿರೊಂದಿಗೆ ಮನೆಗೆ ಬಂದ ಧರ್ಮರಾಯ – “ಅಮ್ಮಾ, ನಾವು ಇವತ್ತು ಏನೋ ಒಂದು ವಿಶೇಷ ವಸ್ತು ತಂದಿದ್ದೇವೆ’ ಎಂದ. ಕುಂತಿ, ಅವನ ಮಾತಲ್ಲಿನ ಸಂಭ್ರಮವನ್ನು ಗಮನಿಸದೆ, ಅದನ್ನು ಐವರೂ ಸಮನಾಗಿ ಹಂಚಿಕೊಳ್ಳಿ’ ಎಂದೇಬಿಟ್ಟಳು. ಈ ಜಗತ್ತಿನಲ್ಲಿ ಹಣ್ಣನ್ನು ಹಂಚಿಕೊಂಡು ಬದುಕಬಹುದೇ ವಿನಃ ಹೆಣ್ಣನ್ನು ಹಂಚಿಕೊಂಡು ಬಾಳುವುದು ಸಾಧ್ಯವೇ ಇಲ್ಲ ಎಂಬ ಸರಳ ಸತ್ಯ ಅಂಥ ಮಹಾಮಾತೆ ಕುಂತಿಗೂ ಹೊಳೆಯಲಿಲ್ಲ. ಧರ್ಮರಾಯ ನಿಗೂ ತಿಳಿಯಲಿಲ್ಲ! ಅಮ್ಮನ ಮಾತನ್ನು ನಿಜ ಮಾಡಲು ಹೊರಟ ಪಾಂಡವರು- ದ್ರೌಪದೀ, ನಿನಗಿದು ಸಮ್ಮತಿಯೆ’ ಎಂದು ಕೇಳಲಿಲ್ಲ. ಬದಲಿಗೆ ಧರ್ಮದ ಹೆಸರು ಹೇಳಿ ನನ್ನ ಬಾಯಿ ಮುಚ್ಚಿಸಿದರು.
ದುರ್ಯೋಧನನ ಆಸ್ಥಾನದಲ್ಲಿ ವಸ್ತ್ರಾಪಹರಣದ ಘಟನೆ ಜರಗಿದಾಗ ಪಾಂಡವರು ನಿರ್ವೀರ್ಯರಂತೆ’ ಕೂತಿದ್ದರಲ್ಲ? ಅವತ್ತೇ ಈ ದ್ರೌಪದಿಯ ಮನಸು ಕಲ್ಲಾಯಿತು. ಆದರೆ ತೋರಿಕೆಯ ಪ್ರೀತಿ ತೋರುವುದು ಹೆಣ್ಣಿಗೆ ತಂತಾನೇ ಒಲಿದು ಬಂದ ಕಲೆ. ಮುಂದೆ, ಈ ತೋರಿಕೆಯ ಪ್ರೀತಿಯಿಂದಲೇ ನಾನು ಪಾಂಡವರ ಜೊತೆಗಿದ್ದೆ. ಒಪ್ಪಂದದ ಪ್ರಕಾರ, ಒಬ್ಬರ ಅನಂತರ ಒಬ್ಬರಿಗೆ ನಾನು ಪತ್ನಿ ಯಾಗಬೇಕಿತ್ತು. ಮನದೊಳಗಿನ ಆಸೆ ಎಂಬುದಿದೆಯಲ್ಲ; ಅದಕ್ಕೆ ಯಾವ ತಡೆ? ಕಾಮದ ಕಿಚ್ಚಿಗೆ ಎಲ್ಲಿದೆ ತಡೆಗೋಡೆ? ಈ ಕಾರಣ ದಿಂದಾದರೂ ನಾನು ಅವರೊಂದಿಗೆ ಸೇರಬೇಕಿತ್ತು. ಶಯನಗೃಹದಲ್ಲೂ ಧರ್ಮರಾಯನದು ಅದೇ ವೇದಾಂತದ ಮಾತು. ಅರ್ಜುನ ನನ್ನೊಂದಿಗಿರುತ್ತಿದ್ದ ನಿಜ. ಆದರೆ, ಅವನ ಮನದೊಳಗೆ ಇನ್ಯಾರದೋ ಸದ್ದು ಕೇಳಿಸುತ್ತಿತ್ತು. (ಮುಂದೆ ಅವನು ಉಲೂಪಿ, ಚಿತ್ರಾಂಗದೆ, ಸುಭದ್ರೆ… ಹೀಗೆ ಒಂದೊಂದೇ ಮದುವೆ ಮಾಡಿಕೊಂಡ. ಹೀಗೆ ಮದುವೆಯಾಗಿ ದ್ರೌಪದಿಗೆ ಮೋಸ ಮಾಡಿದೆ ಎಂಬ ಪಾಪಪ್ರಜ್ಞೆ ಎಂದೂ ಅವನನ್ನು ಕಾಡಲೇ ಇಲ್ಲ.) ಈಗ ಇನ್ನೂ ಒಂದು ಸತ್ಯ ಹೇಳಿಬಿಡುತ್ತೇನೆ: ನಕುಲ, ಸಹದೇವರು – ಬಹುಶಃ ನನ್ನದೇ ವಾರಿಗೆಯವರು. ಅವರನ್ನು ಗಂಡಂದಿರು ಎಂದು ಒಪ್ಪಿಕೊಳ್ಳುವುದಕ್ಕೇ ನನಗೆ ಮುಜುಗರವಾಗುತ್ತಿತ್ತು. ಈ ಕಾರಣ ದಿಂದಲೇ ಯಾವುದಾ ದರೂ ನೆಪ ಹೇಳಿ ನಾನು ಮಾತಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದೆ – ಇಬ್ಬರಿಂದಲೂ!
ನಿಜ ಹೇಳಬೇಕೆಂದರೆ ನನಗೆ ಇಷ್ಟವಾದವನು ಭೀಮ! ನನಗೆ ಚಿಕ್ಕದೊಂದು ನೋವಾದರೂ ಅವನು ಕಣ್ಣೀರಾಗುತ್ತಿದ್ದ. ಅವಮಾನ ವಾದರೆ ಪ್ರತಿಭಟಿಸುತ್ತಿದ್ದ. ನನ್ನನ್ನು ನಗಿಸುತ್ತಿದ್ದ. ಈ ಹಿಂದೆಯೇ ಒಬ್ಬಳು ರಾಕ್ಷಸಿಯೊಂದಿಗೆ ಮದುವೆಯಾಗಿರುವ ಸಂಗತಿಯನ್ನೂ ಆತ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದ.
ಮದುವೆಯಾದ ಅನಂತರದಲ್ಲಿ ಗಂಡ-ಹೆಂಡಿರ ಮಧ್ಯೆ ಎಷ್ಟೇ ಭಿನ್ನಾಭಿಪ್ರಾಯಗಳು ಬಂದರೂ ಮಕ್ಕಳಾಗುವುದು ತಪ್ಪುವುದಿಲ್ಲ! ಈ ಮಾತು ನನ್ನ ವಿಷಯದಲ್ಲೂ ನಿಜವಾಯಿತು. ಧರ್ಮರಾಯನಿಂದ ಪ್ರತಿವಿಂದ್ಯ, ಭೀಮನಿಂದ ಸೋಮಸುತ, ಅರ್ಜುನನಿಂದ ಶ್ರುತ ಕಮಾರ್, ನಕುಲ-ಸಹದೇವರಿಂದ ಕ್ರಮವಾಗಿ ಶತಾನೀಕ ಮತ್ತು ಶ್ರುತಸೇನ ಎಂಬ ಮಕ್ಕಳಾದರು. ಮಕ್ಕಳ ಆಟ-ಪಾಠ ನೋಡಿಕೊಂಡು ಖುಷಿಯಾಗಿರೋಣ ಎಂದುಕೊಂಡರೆ- ಅಯ್ಯೋ ದುರ್ವಿಧಿಯೇ, ನನಗೆ ಅದಕ್ಕೆ ಅವಕಾಶವೇ ಸಿಗಲಿಲ್ಲ. ಧರ್ಮಪಾಲನೆಯ ನೆಪದಲ್ಲಿ ನಾನು ಪಾಂಡವರೊಂದಿಗೆ ಕಾಡುಪಾಲಾದೆ! ಪುರಾಣ ಬರೆದವರೆಲ್ಲ- ವನವಾಸದಲ್ಲಿ ದ್ರೌಪದಿ ಸುಖವಾಗಿದ್ದಳು ಎಂದೇ ಬರೆದರು. ನನ್ನ ಕಣ್ಣೀರು ಕಾಡಿನ ಪ್ರತಿಯೊಂದು ಮರದಡಿಗೂ ಬಿದ್ದದ್ದನ್ನು ಆ ಜನ ಗಮನಿಸಲೇ ಇಲ್ಲ.
ಉಳಿದ ಹೆಂಗಸರಂತೆ ನನಗೂ ಆಸೆಗಳಿದ್ದವು. ಬಯಕೆಗಳಿದ್ದವು. ಒಂದು ಮಾತನ್ನು ಸಮಸ್ತ ಗಂಡುಗಳೂ ಅರ್ಥಮಾಡಿಕೊಳ್ಳಲಿ. ಏನೆಂದರೆ, ಹೆಣ್ಣಿನ ಬಯಕೆಗಳಿಗೆ ಒಂದು ಕಾಲ’ ಇರುತ್ತದೆ. ಅಂಥ ಸಂದರ್ಭ’ದಲ್ಲಿ ಬಯಸಿದ್ದು ಸಿಕ್ಕರಷ್ಟೇ ಆಕೆಗೆ ತೃಪ್ತಿ. ಮುಪ್ಪಾನು ಮುದುಕಿಯಾದಾಗ ಪಾರಿಜಾತದ ರಾಶಿಯೇ ಮಡಿಲಿಗೆ ಬಿದ್ದರೆ ಏನುಪಯೋಗ? ಕೇಳಿ: ನನಗೆ- ಕೌರವರ ಮುಂದೆ ಮೆರೆಯಬೇಕೆಂಬ ಆಸೆಯಿತ್ತು. ಅದು ಈಡೇರಲಿಲ್ಲ. ಮೈಮುಟ್ಟಿದ ದುಶ್ಯಾಸನನನ್ನು ಆ ರಾಜಸಭೆಯಲ್ಲೇ ಸೀಳಿಹಾಕಬೇಕೆಂದೂ ಅನಿಸಿತ್ತು. ಅದೂ ಸಾಧ್ಯವಾಗಲಿಲ್ಲ.
ನನ್ನನ್ನು ವಿಪರೀತ ಘಾಸಿಗೊಳಿಸಿದ್ದು ಅರ್ಜುನನ ವರ್ತನೆ. ಆತ ಜೀವನ ನಾಟಕದಲ್ಲಿ ಯಾರಿಗೋ ಗುರುವಾದ. ಇನ್ಯಾರಿಗೋ ಗುರಿಯಾದ. ಬೃಹನ್ನಳೆಯಾದ. ಭಟ್ಟಂಗಿಯೂ ಆದ. ಅವನ ಒಂದೊಂದು ನಡೆಯೂ ನನ್ನನ್ನು ಹಿಂಸಿಸುತ್ತಿತ್ತು.
ರೊಚ್ಚಿಗೆಬ್ಬಿಸುತ್ತಿತ್ತು. ಅದನ್ನೆಲ್ಲ ಹೇಳಿಕೊಂಡರೆ ಆತ ಅದೇ ಹಳಸಲು ಧರ್ಮದ ಮಾತಾಡಿ ಬಾಯಿ ಮುಚ್ಚಿಸುತ್ತಿದ್ದ. ಅವನ ಉಪೇಕ್ಷೆ ಕಂಡಾಗಲೆಲ್ಲ ನನಗೆ ಕರ್ಣನ ನೆನಪಾಗುತ್ತಿತ್ತು. ಹೌದು, ಮನಸ್ಸಿಗೆ ನಾಚಿಕೆ ಕಡಿಮೆ. ಅದು ಬೇಗ ದಾರಿ ತಪ್ಪುತ್ತದೆ. ಬೇಡ ಅನ್ನುವುದನ್ನೇ ಬಯಸುತ್ತದೆ. ಕರ್ಣನ ವಿಷಯದಲ್ಲಿ ನನ್ನ ಮನಸ್ಸು ಮಾಡಿದ್ದೂ ಅದನ್ನೇ. ಈಗ ನಾನೂ ಮುಖವಾಡ ಕಳಚಿಯೇ ಈ ಸತ್ಯ ಹೇಳುತ್ತಿದ್ದೇನೆ. ಅದಕ್ಕಾಗಿ ನನಗೆ ಖಂಡಿತ ಪಶ್ಚಾತ್ತಾಪವಿಲ್ಲ.
ಈ ಇತಿಹಾಸ, ಈ ಜನ ನನ್ನನ್ನು ವಿಪರೀತ ಅವಮಾನಿಸಿದ್ದಾರೆ. ಅನುಮಾನಿಸಿದ್ದಾರೆ. ಕರ್ಣ ಮೃತಪಟ್ಟಾಗ ಕುಂತಿಯ ಶೋಕದ ಸಂದರ್ಭವನ್ನು; ಅಭಿಮನ್ಯುವನ್ನು ಕಳೆದುಕೊಂಡ ಸುಭದ್ರೆಯ ಸಂಕಟವನ್ನು; ಕೌರವರನ್ನೆಲ್ಲ ಕಳೆದುಕೊಂಡ ಗಾಂಧಾರಿಯ ನೋವನ್ನು ಬಣ್ಣಿಸಿದ ಜನ, ಐವರು ಮಕ್ಕಳನ್ನು ಒಂದೇ ದಿನ ಕಳೆದುಕೊಂಡ ನನ್ನ ಸಂಕಟವನ್ನು ಕೇಳಲೇ ಇಲ್ಲವಲ್ಲ ಯಾಕೆ? ದ್ರೌಪದಿಯ ಒಡಲ ಉರಿಯೇಕೆ ಕಥೆಯಾಗಲಿಲ್ಲ? ಅವಳ ಕಣ್ಣೀರೇಕೆ ನೂರೆಂಟು ಕಾವ್ಯವಾಗಿ ಬೆಳಗಲಿಲ್ಲ? ನನ್ನನ್ನು, ನನ್ನ ಸಂಕಟವನ್ನು ಅವಗಣಿಸಿದ ಎಲ್ಲರಿಗೂ ಧಿಕ್ಕಾರವಿರಲಿ…
*****
ಮೊನ್ನೆ “ವಚನಭಾರತ’ ಓದಲೆಂದು ಕುಳಿತೆ. ಕೆಲವೇ ಸಮಯದ ಅನಂತರ “ದ್ರೌಪದಿ’ ಒಂದು ಚಿತ್ರವಾಗಿ, ಒಂದು ನಿಟ್ಟುಸಿರಾಗಿ, ಒಂದು ರಾಗವಾಗಿ ಕಣ್ಮುಂದೆ ಬಂದಳು. ಅನಂತರದಲ್ಲಿ ಆಕೆಯೇ ಕಥೆ ಹೇಳಲು ತೊಡಗಿದಂತಾಗಿ ಮಂಪರು ಕವಿಯಿತು. ಕಥೆ ಮುಂದು ವರಿಯಿತು. ಎಲ್ಲರಿಗೂ ಧಿಕ್ಕಾರವಿರಲಿ ಎಂದು ದ್ರೌಪದಿ ಗುಡುಗು ತ್ತಿದ್ದಂತೆಯೇ ಎಚ್ಚರವಾಯಿತು. ಕಣ್ಣುಜ್ಜಿ ನೋಡಿದರೆ ಎದುರಿಗೆ ಚುಮುಚುಮು ಬೆಳಗಿತ್ತು…
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.