MUDA Scam: ಮುಖ್ಯಮಂತ್ರಿ ವಿರುದ್ಧ ತನಿಖೆಯ ಅಗತ್ಯವಿದೆ: ಹೈಕೋರ್ಟ್
ಫಲಾನುಭವಿ ಮುಖ್ಯಮಂತ್ರಿಗೆ ಹೊರಗಿನವರಲ್ಲ, ಕುಟುಂಬಕ್ಕೆ ಸೇರಿದವರು: ಹೈಕೋರ್ಟ್ ಅಭಿಮತ, ಸಿದ್ದರಾಮಯ್ಯಗೆ ಕಾನೂನು ಸಂಕಷ್ಟ
Team Udayavani, Sep 25, 2024, 7:30 AM IST
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ತಮ್ಮ ವಿರುದ್ಧ ಅಭಿಯೋಜನೆಗೆ ಪೂರ್ವಾನುಮತಿ ನೀಡಿದ ರಾಜ್ಯಪಾಲರ ವಿರುದ್ಧ ಕಾನೂನು ಸಮರ ಸಾರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲ ಹಂತದಲ್ಲಿ ಹೈಕೋರ್ಟ್‌ನಲ್ಲಿ ಹಿನ್ನಡೆ ಉಂಟಾಗಿದೆ.
ಅರ್ಜಿದಾರರ (ಸಿದ್ದರಾಮಯ್ಯ) ಕುಟುಂಬಕ್ಕೆ ಸೇರಿದವರೇ (ಪತ್ನಿ) ಫಲಾ ನುಭವಿಯಾಗಿರುವ ಹಿನ್ನೆಲೆಯಲ್ಲಿ ತನಿಖೆ ಅಗತ್ಯವಾಗಿದೆ ಎಂದು ಹೈಕೋರ್ಟ್ ಸುದೀರ್ಘ 197 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿರುವ ಕಾರಣ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 218ರಡಿ ಅನುಮತಿ ನೀಡಿ ರಾಜ್ಯಪಾಲರು 2024 ಆಗಸ್ಟ್ 16ರಂದು ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸುವಂತೆ ಕೋರಿಸಿದ್ದ ರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಸೆ. 12ರಂದು ಕಾದಿರಿಸಿದ್ದ ತೀರ್ಪನ್ನು ಮಂಗಳವಾರ ಮಧ್ಯಾಹ್ನ 12 ಗಂಟೆ 08 ನಿಮಿಷಕ್ಕೆ ಪ್ರಕಟಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಖ್ಯಮಂತ್ರಿಗಳ ಅರ್ಜಿ ವಜಾಗೊಳಿಸಿ, ರಾಜ್ಯಪಾಲರ ಆದೇಶ ಎತ್ತಿಹಿಡಿಯಿತು.
ರಾಜ್ಯಪಾಲರ ಆದೇಶದಲ್ಲಿ ಯಾವುದೇ ಕಾನೂನಿನ ಲೋಪ ಕಾಣುತ್ತಿಲ್ಲ, ಸಂಪೂರ್ಣ ವಿವೇಚನೆಯಿಂದ ಕೂಡಿದೆ. ವಾಸ್ತವವಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಕಡ್ಡಾಯವಾಗಿದೆ. ಆದರೆ ಖಾಸಗಿ ದೂರುದಾರರ ವಿಚಾರದಲ್ಲಿ ಇದರ ಅಗತ್ಯವಿಲ್ಲ. ಪ್ರಕರಣದಲ್ಲಿ ಪ್ರಸ್ತಾವಿಸಲಾಗಿರುವ ವಾಸ್ತವ ಸಂಗತಿಗಳು ನಿಸ್ಸಂಶಯವಾಗಿ ತನಿಖೆಗೆ ಒಳಪಡಬೇಕಾಗಿದೆ. ಆದೇಶವು ಸೆಕ್ಷನ್ 17ಎ ಗೆ ಮಾತ್ರ ಸಿಮೀತವಾಗಿದ್ದು, ಬಿಎನ್‌ಎಸ್‌ಎಸ್ 218ಗೆ ಈ ಆದೇಶ ಅನ್ವಯವಾಗುವುದಿಲ್ಲ’ ಎಂದು ಆದೇಶದಲ್ಲಿ ಹೇಳಿದೆ.
* ವಾಸ್ತವ ಪರಿಸ್ಥಿತಿಯಲ್ಲಿ 17ಅ ಅಡಿಯಲ್ಲಿ ಅನುಮತಿ ಕಡ್ಡಾಯವಾಗಿದೆ. ಆದರೆ ಖಾಸಗಿ ದೂರುದಾರರ ವಿಚಾರದಲ್ಲಿ ಸಿಆರ್‌ಪಿಸಿ 200 ಅಥವಾ 223ರಡಿಯಲ್ಲಿ ಪೊಲೀಸ್ ಅಧಿಕಾರಿಯು ಅನುಮತಿ ಕೋರಬೇಕೆನ್ನುವ ಅಗತ್ಯ ಎಲ್ಲಿಯೂ ಇಲ್ಲ. ಅಂತಹ ಅನುಮತಿಯನ್ನು ಪಡೆಯುವುದು ದೂರುದಾರರ ಕರ್ತವ್ಯವಾಗಿದೆ.
* ಸಾಮಾನ್ಯ ಸಂದರ್ಭಗಳಲ್ಲಿ ರಾಜ್ಯಪಾಲರು ಸಂವಿಧಾನದ 163ನೇ ವಿಧಿಯಂತೆ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು. ಆದರೆ ಅಸಾಧಾರಣ ಹಾಗೂ ವಿಶೇಷ ಸಂದರ್ಭಗಳು ಉದ್ಭವಿಸಿದರೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಪ್ರಸ್ತುತ ಪ್ರಕರಣವು ಅಂತಹ ಒಂದು ವಿನಾಯಿತಿ ಹೊಂದಿದೆ.
* ರಾಜ್ಯಪಾಲರು ಸ್ವತಂತ್ರ ವಿವೇಚನೆಯಿಂದ ಆದೇಶ ನೀಡಿರುವುದರಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ. ನಿರ್ಧಾರವನ್ನು ಮಾಡುವ ಪ್ರಾಧಿಕಾರಿ (ರಾಜ್ಯಪಾಲರು) ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ದಾಖಲಿಸಿದ್ದರೆ ಸಾಕಾಗುತ್ತದೆ.
* ರಾಜ್ಯಪಾಲರ ತಮ್ಮ ಆದೇಶದಲ್ಲಿ ಅಗಾಧವಾದ ವಿವೇಚನೆಯನ್ನು ಬಳಸಿರುವುದು ಕಂಡುಬರುತ್ತದೆ.
* ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿ (ತನಿಖೆಗೆ) ಅನುಮತಿ ನೀಡುವುದಕ್ಕೂ ಮೊದಲು ವಿಚಾರಣೆ ಆಲಿ
ಸಬೇಕು ಎಂಬುದು ಕಡ್ಡಾಯವಲ್ಲ. ಅದು ಸಕ್ಷಮ ಪ್ರಾಧಿಕಾರದ ವಿವೇಚನೆಗೆ ಬಿಟ್ಟ ವಿಚಾರವಾಗುತ್ತದೆ.
* ರಾಜ್ಯಪಾಲರು ಆತುರಾತುರವಾಗಿ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಅವರ ಆದೇಶವನ್ನು ದೋಷದಿಂದ ಕೂಡಿದೆ ಎನ್ನಲಾಗದು. ಆದೇಶವು ಸೆಕ್ಷನ್ 17ಎ ಗೆ ಮಾತ್ರವೇ ಸೀಮಿತವಾಗಿರಲಿದೆ. ರಾಜ್ಯಪಾಲರಿಗೆ ನೀಡಲಾಗಿರುವ ದೂರಿನಲ್ಲಿ ವಿವರಿಸಲ್ಪಟ್ಟಿರುವ ವಿಷಯಗಳ ಬಗ್ಗೆ ತನಿಖೆ ನಡೆಯಬೇಕು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
6 ದಿನ ವಿಚಾರಣೆ; 9 ವಕೀಲರು, 18 ತಾಸು ವಾದ
ಆಗಸ್ಟ್ 19ರಂದು ಮೊದಲ ಬಾರಿಗೆ ಅರ್ಜಿಯ ವಿಚಾರಣೆ ನಡೆದಿತ್ತು. ಅಂತಿಮ ವಿಚಾರಣೆ ಸೆ. 12ರಂದು ನಡೆಯಿತು. ಒಟ್ಟು 6 ದಿನ ನಡೆದ ವಿಚಾರಣೆಯಲ್ಲಿ ಸಿಎಂ, ರಾಜ್ಯಪಾಲರು ಹಾಗೂ ದೂರುದಾರರ ಪರ ಸೇರಿ ಒಟ್ಟು 9 ಮಂದಿ ವಕೀಲರು 18 ಗಂಟೆಗೂ ಹೆಚ್ಚು ಕಾಲ ವಾದಗಳನ್ನು ಮಂಡಿಸಿದ್ದಾರೆ.
ಸಿದ್ದರಾಮಯ್ಯ ಪರ ವಕೀಲರ ವಾದ
ಸಹಜ ನ್ಯಾಯ ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿ, ಶಾಸನಬದ್ಧ ಆದೇಶಗಳನ್ನು ಉಲ್ಲಂ ಸಿ, ಸಚಿವ ಸಂಪುಟದ ಸಲಹೆಯನ್ನು ಧಿಕ್ಕರಿಸಿ ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದ್ದು, ಇದೊಂದು ಚುನಾಯಿತ ಸರ್ಕಾರವೊಂದನ್ನು ಅಸ್ಥಿರಗೊಳಿಸುವ ಸಂಘಟಿತ ಪ್ರಯತ್ನದ ಭಾಗವಾಗಿದೆ ಎಂದು ಸಿಎಂ ಪರ ವಕೀಲರು ವಾದಿಸಿದ್ದರು.
ಮಧ್ಯಾಂತರ ತಡೆಗೆ ನ್ಯಾಯಮೂರ್ತಿಗಳ ನಕಾರ
ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದ್ದಂತೆ ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ತೀರ್ಪಿಗೆ ಎರಡು ವಾರದ ಮಟ್ಟಿಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ “ನನ್ನ ಆದೇಶಕ್ಕೆ ನಾನೇ ತಡೆ ನೀಡುವುದಿಲ್ಲ’ ಎಂದು ಹೇಳಿದ ನ್ಯಾಯಮೂರ್ತಿಗಳು ತಡೆ ನೀಡಲು ನಿರಾಕರಿಸಿದರು. ಮುಂದಿನ ಕಾನೂನು ಆಯ್ಕೆಗಳು ಅರ್ಜಿ ದಾರರಿಗೆ ಮುಕ್ತವಾಗಿರಲಿವೆ ಎಂದು ಹೇಳಿದ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ಈ ಆದೇಶದಿಂದ ಮುಂದಿನ ಆದೇಶದವರೆಗೆ ಸಿಎಂ ವಿರುದ್ಧ ಯಾವುದೇ ಬಲವಂತದ ಕ್ರಮ ಜರಗಿಸುವಂತಿಲ್ಲ ಹಾಗೂ ಪ್ರಕರಣ ಮುಂದುವರಿಸು ವಂತಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆಗಸ್ಟ್ 19ರಂದು ನೀಡಿದ್ದ ಮಧ್ಯಾಂತರ ಆದೇಶ ಸಹ ತೆರವುಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರ ಆದೇಶ ಏನಾಗಿತ್ತು?
ದೂರುದಾರ ಟಿ.ಜೆ. ಅಬ್ರಾಹಂ, ಎಚ್.ಎಸ್. ಪ್ರದೀಪ್ ಹಾಗೂ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ನ್ವಯ ಸಿಎಂ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17 ಎ ಹಾಗೂ ಬಿನ್‌ಎಸ್‌ಸ್ 218 ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆಗಸ್ಟ್ 16ರಂದು ರಾಜ್ಯಪಾಲರು ಆದೇಶ ಹೊರಡಿಸಿದ್ದರು. ದೂರಿನ ಅಂಶಗಳನ್ನು ಗಮನಿಸಿದರೆ ದೊಡ್ಡ ಮಟ್ಟದ ಹಗರಣ, ಅಧಿಕಾರ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ತನಿಖೆ ಆಗಬೇಕಿದೆ ಎಂದು ರಾಜ್ಯಪಾಲರು ಆದೇಶದಲ್ಲಿ ಹೇಳಿದ್ದರು.
ಸಿಎಂ ಅರ್ಜಿಯಲ್ಲಿ ಏನಿತ್ತು?
ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ನನ್ನ ವಿರುದ್ಧ ರಾಜ್ಯಪಾಲರು ನೀಡಿದ್ದ ಶೋಕಾಸ್ ನೋಟಿಸ್‌ಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ 2024ರ ಆಗಸ್ಟ್ 1ರಂದು ನೀಡಿದ ಸಲಹೆ ಧಿಕ್ಕರಿಸಿ ರಾಜ್ಯಪಾಲರು ಆಭಿಯೋಜನೆಗೆ ಅನುಮತಿ ನೀಡಿದೆ. ಈ ನಿರ್ಧಾರ ಅಸಾಂವಿಧಾನಿಕವಾಗಿದ್ದು, ಕಾನೂನಿನ ಎಲ್ಲ ಅಂಶಗಳನ್ನೂ ಗಾಳಿಗೆ ತೂರಿರುವ ಇಂತಹ ಆದೇಶವನ್ನು ವಜಾ ಮಾಡಬೇಕು. ರಾಜ್ಯಪಾಲರು ಸ್ವೇಚ್ಛೆ ಮತ್ತು ತಾರತಮ್ಯ ನೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖೀಸಲಾಗಿತ್ತು.
“ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದ್ದ ಅನುಮತಿ ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಮುಖ್ಯಮಂತ್ರಿ ಆದಿಯಾಗಿ, ಸಚಿವರು, ಶಾಸಕರು ಸೇರಿ ಅನೇಕ ಕಾಂಗ್ರೆಸ್ ನಾಯಕರು ಕಳೆದ ಅನೇಕ ದಿನಗಳಿಂದ ರಾಜ್ಯಪಾಲರನ್ನು, ರಾಜಭವನವನ್ನು ನಿಂದಿಸುತ್ತಾ ಬಂದಿದ್ದು, ಹೈಕೋರ್ಟ್ ತೀರ್ಪು ಇಡೀ ಕಾಂಗ್ರೆಸ್ ಪಕ್ಷಕ್ಕೆ ಛಡಿ ಏಟು ಕೊಟ್ಟಿದೆ.” – ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ
ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯ. ಇದು ನಮ್ಮ ಹೋರಾಟಕ್ಕೆ ಸಿಕ್ಕ ವಿಜಯ. ರಾಜಕಾರಣಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಗೆ ತಕ್ಕ ಪಾಠವಾಗಿದೆ. – ಸ್ನೇಹಮಯಿ ಕೃಷ್ಣ, ದೂರುದಾರ
ಹೈಕೋರ್ಟ್ ನಮ್ಮ ವಾದಕ್ಕೆ ಮತ್ತು ಆಕ್ಷೇಪಣೆಗಳಿಗೆ ಮನ್ನಣೆ ನೀಡಿದೆ. ರಾಜ್ಯಪಾಲರ ಪೂರ್ವಾನುಮತಿ ಸರಿಯಿಲ್ಲ ಎಂದು ವಾದ ಮಾಡುವುದು ಅವರ ಹಕ್ಕಾಗಿತ್ತು. ಆದರೆ ಹೈಕೋರ್ಟ್ ಅದನ್ನು ಮಾನ್ಯ ಮಾಡಿಲ್ಲ . ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಎಲ್ಲ ಹಕ್ಕುಗಳೂ ಅರ್ಜಿದಾರರಿಗಿವೆ. – ಟಿ.ಜೆ. ಅಬ್ರಹಾಂ, ದೂರುದಾರ
ನಮಗೆ ಗೆಲುವು ಸಿಕ್ಕಿದೆ. ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದೇವೆ. ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. – ಪ್ರದೀಪ್‌ಕುಮಾರ್ ಎಸ್.ಪಿ., ದೂರುದಾರ
ದುರದೃಷ್ಟಕರ. ಜನರಿಂದ ಆಯ್ಕೆಯಾದ ಸರ್ಕಾರ ಅಸ್ಥಿರಗೊಳಿಸಿ, ಮುಖ್ಯಮಂತ್ರಿ ವಿರುದ್ಧದ ಬಿಜೆಪಿಯ ಷಡ್ಯಂತ್ರದ ಭಾಗವಾಗಿಯೇ ಪ್ರಕ್ರಿಯೆ ನಡೆಯುತ್ತಿರುವುದು ಸ್ಪಷ್ಟ. – ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಮುಖಂಡ
ರಾಜ್ಯಪಾಲರು ರಾಜಭವನವನ್ನು ರಾಜಕೀಯ ಕಚೇರಿ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಪ್ರಜಾಪ್ರಭುತ್ವದ ದಮನ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಮಾಡಿದ ಪ್ರಯೋಗವನ್ನು ಕರ್ನಾಟಕದಲ್ಲೂ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಸಂಘರ್ಷ. ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ
ನಾವೆಲ್ಲ ಸಚಿವರು, ನಮ್ಮ ಹೈಕಮಾಂಡ್ ಸೇರಿ ಇಡೀ ಪಕ್ಷ ಸಿದ್ದರಾಮಯ್ಯರ ಜತೆಗಿದ್ದೇವೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು? ಹೈಕೋರ್ಟ್ ಆದೇಶ ಸಿಎಂಗೆ ಹಿನ್ನಡೆ ಅಲ್ಲವೇ ಅಲ್ಲ. ತನಿಖೆಗಷ್ಟೇ ಅವರು ಆದೇಶಿಸಿರುವುದು. ಕಾನೂನು ಹೋರಾಟ ಮುಂದುವರಿಯಲಿದೆ. – ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಇದು ತನಿಖೆಗೆ ಅರ್ಹವಾದ ಪ್ರಕರಣ ಎಂದು ಕೋರ್ಟ್ ತೀಕ್ಷ್ಣವಾಗಿ ಹೇಳಿದೆ. ಮುಖ್ಯಮಂತ್ರಿಗಳೇ ನೀವೀಗ ತನಿಖೆ ಎದುರಿಸಬೇಕಿದೆ. ಅಧಿಕಾರದಲ್ಲಿದ್ದುಕೊಂಡು ತನಿಖೆ ಎದುರಿಸುವುದು ನೈತಿಕತೆಯೇ? ತತ್‌ಕ್ಷಣ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಸಿದ್ಧರಾಗಿ. – ವಿ. ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಪ್ರ. ಕಾರ್ಯದರ್ಶಿ
ನ್ಯಾಯಾಲಯ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದಿದೆ. ರಾಜ್ಯಪಾಲರು ಅನುಮತಿ ನೀಡಿದಾಗ ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆ ಎಂಬ ಆಪಾದನೆ ಮಾಡಿದ್ದೀರಿ, ಈಗ ರಾಜ್ಯಪಾಲರ ಕ್ಷಮೆ ಕೋರಿ ಕೋರ್ಟ್ ತೀರ್ಪಿಗೆ ತಲೆ ಬಾಗಿ ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ.
– ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ
ಸಿದ್ದರಾಮಯ್ಯ ಆರೋಪ ಮುಕ್ತರಾಗುವವರೆಗೆ ರಾಜೀನಾಮೆ ನೀಡಿ ಸಿಎಂ ಸ್ಥಾನದಿಂದ ಹೊರಗಿಲಿ. ಆರೋಪ ಮುಕ್ತರಾದ ಅನಂತರ ಬೇಕಾದರೆ ಅವರೇ ಸಿಎಂ ಆಗಲಿ. ಆಪಾದನೆ ಬಂದಾಗ ರಾಜೀನಾಮೆ ಕೊಡಬೇಕು. ಅದು ಕರ್ನಾಟಕದ ಮಣ್ಣಿನ ಸಂಸ್ಕೃತಿ. – ಬಿ.ವೈ. ರಾಘವೇಂದ್ರ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.