Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!
ಮುಳ್ಳಮುಟ್ಟೆಗೆ ಪೂರ್ವ ಭಾವಿಯಾಗಿ ಬಂಟ ಕೋಲ ನಡೆಯುವ ಸಂಪ್ರದಾಯವಿದೆ.
Team Udayavani, Oct 31, 2024, 11:09 AM IST
ಕಾಪು: ದೀಪಾವಳಿಯ ಸಾಂಪ್ರದಾಯಿಕ ಆಚರಣೆಗಳ ಜತೆಗೆ ತುಳುನಾಡಿನ ಕೆಲವು ಕಡೆ ವಿಶಿಷ್ಟ ಜನಪದೀಯ ಆಚರ ಣೆಗಳು ನಡೆಯುತ್ತವೆ. ಅವುಗಳಲ್ಲಿ ಕಾಪು ತಾಲೂಕಿನ ವಿವಿಧೆಡೆ ನರಕ ಚತುರ್ದಶಿಯ ದಿನ ಮುಂಜಾನೆ ನಡೆಯುವ ಮುಳ್ಳ ಮುಟ್ಟೆ ಸಂಭ್ರಮಾಚರಣೆಯೂ ಒಂದು.
ಕೊಪ್ಪಲಂಗಡಿ, ಮಲ್ಲಾರು, ಮಜೂರು, ಇನ್ನಂಜೆ, ಕಲ್ಯಾಲು, ಪಾಂಗಾಳ, ಕಟಪಾಡಿ, ಮಣಿಪುರ, ಪಡುಬೆಳ್ಳೆ, ಬೆಳಪು ಪರಿಸರದಲ್ಲಿ
ವಿಶೇಷವಾಗಿ ಈ ಮುಳ್ಳಮುಟ್ಟೆ ನಡೆಯುತ್ತದೆ. ಅದರಲ್ಲೂ ವಿಶೇಷವೆಂಬಂತೆ ಕೊಪ್ಪಲಂಗಡಿ, ಇನ್ನಂಜೆಯಲ್ಲಿ ಮುಳ್ಳಮುಟ್ಟೆ ಪ್ರಯುಕ್ತ ಬಂಟ ಕೋಲ ನಡೆಯುತ್ತದೆ.
ಏನಿದು ಮುಳ್ಳಮುಟ್ಟೆ?
ಮುಳ್ಳಮುಟ್ಟೆ ಎಂದರೆ ಮುಳ್ಳು ಸೌದೆಗಳ ರಾಶಿ. ದೀಪಾವಳಿ ಮುನ್ನಾ ದಿನ ಊರಿನ ಯುವಕರೆಲ್ಲ ಸೇರಿ ಊರಿನಲ್ಲಿರುವ ಕಸಕಡ್ಡಿ, ಮುಳ್ಳುಗಳನ್ನು ಸಂಗ್ರಹಿಸಿ ಊರಿನ ಎತ್ತರದ ಪ್ರದೇಶದಲ್ಲಿ ಅಥವಾ ಬಂಡೆಗಲ್ಲಿನ ಮೇಲೆ ಮುಳ್ಳು, ಸೌದೆ ಸಹಿತ ವಿವಿಧ ಪರಿಕರಗಳನ್ನು ಪೇರಿಸಿಡುತ್ತಾರೆ.
ರಾತ್ರಿ ಪೂರ್ತಿ ವಿವಿಧ ಸಂಭ್ರಮಾಚರಣೆ ನಡೆಸಿ, ನರಕಚತುರ್ದಶಿ (ದೀಪಾವಳಿ) ಮುಂಜಾನೆ ಊರಿನ ಜನರೆಲ್ಲ ಜತೆ ಸೇರಿ ವಾದ್ಯವಾದನಗಳ ಸಂಭ್ರಮದೊಡನೆ ಸಾಮೂಹಿಕವಾಗಿ ಮುಳ್ಳಮುಟ್ಟೆಯ ರಾಶಿಗೆ ಬೆಂಕಿ ಕೊಡುತ್ತಾರೆ. ಹಿಂದಿನ ದಿನ ರಾತ್ರಿ ಪೂರ್ತಿ ಜಾಗರಣೆ ಇರಬೇಕಾದುದರಿಂದ ಮನೋರಂಜನಾ ಕಾರ್ಯಕ್ರಮಗಳು, ಸ್ಪರ್ಧೆಗಳು ಕೂಡ ನಡೆಯುತ್ತವೆ.
ಮಹತ್ವವೇನು?
ಇದನ್ನು ನರಕಾಸುರನ ವಧೆ ನೆನಪಿಸುವ ಪ್ರಕ್ರಿಯೆ ಎನ್ನಲಾಗುತ್ತದೆ. ಊರಿಗೆ ಬಂದಿರುವ ದುಷ್ಟಾರಿಷ್ಟಗಳು ನಾಶವಾಗಲಿ ಎನ್ನುವುದು ಇದರ ಮತ್ತೊಂದು ಕಲ್ಪನೆ. ಕೃಷಿ ಪ್ರಧಾನ ನೆಲೆಯಲ್ಲಿ ನೋಡಿದಾಗ ಮಳೆಗಾಲದಲ್ಲಿ ಗದ್ದೆ, ಮನೆ ಪರಿಸರ, ಪಕ್ಕದ ಗುಡ್ಡಗಳಲ್ಲಿ ಬೆಳೆದ ಮುಳ್ಳು, ಪೊದೆ, ಕಸ-ಕಡ್ಡಿ, ಗಿಡಗಂಟಿಗಳನ್ನು ಸ್ವಚ್ಛ ಗೊಳಿಸಿ ಬೇಡದೆ ಇರುವುದನ್ನು ಸುಟ್ಟು
ಸ್ವಚ್ಛಗೊಳಿಸುವ ಕಾಯಕಕ್ಕೆ ಈ ರೀತಿಯ ಸಾಮಾಜಿಕ ಮತ್ತು ಧಾರ್ಮಿಕ ಸ್ಪರ್ಶ ನೀಡಲಾಗಿರುವುದು ಕಂಡುಬರುತ್ತದೆ.
ಬಂಟ ಕೋಲ ವಿಶೇಷ
ಕೊಪ್ಪಲಂಗಡಿ, ಇನ್ನಂಜೆ ಗೋಳಿಕಟ್ಟೆ ಪರಿಸರದಲ್ಲಿ ಮುಳ್ಳಮುಟ್ಟೆಗೆ ಪೂರ್ವ ಭಾವಿಯಾಗಿ ಬಂಟ ಕೋಲ ನಡೆಯುವ ಸಂಪ್ರದಾಯವಿದೆ. ಬಂಟ ಕೋಲದ ವೇಷಧಾರಿಗಳು ಊರಿನ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ತೆರಳಿ, ಕಾಣಿಕೆ ಸಮರ್ಪಿಸಿ ಊರಿನ ಮಾರಿ ಓಡಿಸಲು ಶಕ್ತಿ ನೀಡಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಬಂಟ ಕೋಲದ ಜತೆಗೆ ಯುವಕರು ಕೂಡ ವಾದ್ಯ, ತಾಸೆ, ಡೋಲಿನ ವಾದನಕ್ಕೆ ತೂಟೆಯನ್ನು ಹಿಡಿದು ನೃತ್ಯ ಮಾಡುತ್ತಾರೆ.
ಕಾಪುವಿನಲ್ಲಿ ಜನಪ್ರಿಯ
ಕಾಪು ಪರಿಸರದ ಹೆಚ್ಚಿನ ಕಡೆಗಳಲ್ಲಿ ದಶಕಗಳ ಹಿಂದಿನವರೆಗೂ ಮುಳ್ಳುಮಟ್ಟೆ ಜನಪ್ರಿಯವಾಗಿತ್ತು. ಈಗ ಕೆಲವು
ಕಡೆ ಮಾತ್ರ ಉಳಿದುಕೊಂಡಿದೆ. ಕೊಪ್ಪಲಂಗಡಿಯಲ್ಲಿ ಇಂದಿಗೂ ಬಂಟ ಕೋಲದ ಸಂಪ್ರದಾಯ ನಡೆಯುತ್ತಿದೆ.
ರಾತ್ರಿಯಿಡೀ ಬಂಟ ಕೋಲ ನಡೆದು, ಬೆಳಗ್ಗೆ ಮುಳ್ಳಮುಟ್ಟೆ ದಹಿಸಲಾಗುತ್ತದೆ. ಇದನ್ನು ಮುಂದಿನ ಪೀಳಿಗೆಯವರೆಗೂ
ಉಳಿಸಿಕೊಂಡು ಬರುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ.
*ವಿನಾಯಕ ಕಲ್ಗುಟ್ಕರ್, ಕೊಪ್ಪಲಂಗಡಿ
*ರಾಕೇಶ್ ಕುಂಜೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.