Mysuru Dasara Utsava: 414ನೇ ದಸರಾ ಉತ್ಸವಕ್ಕೆ ಇಂದು ಚಾಲನೆ
ವಿಶ್ವವಿಖ್ಯಾತ ನಾಡಹಬ್ಬ ಉದ್ಘಾಟಿಸಲಿರುವ ನಾಡೋಜ ಹಂ.ಪ.ನಾಗರಾಜಯ್ಯ, ಅ.12ರಂದು ಅದ್ಧೂರಿ ಜಂಬೂಸವಾರಿ, ಪಂಜಿನ ಕವಾಯತು ಪ್ರದರ್ಶನ
Team Udayavani, Oct 3, 2024, 8:00 AM IST
ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉತ್ಸವಕ್ಕೆ ಮೈಸೂರು ಸಜ್ಜಾಗಿದ್ದು ಎಲ್ಲೆಡೆ ನವರಾತ್ರಿಯ ಸಂಭ್ರಮ, ಸಡಗರ ಕಳೆಕಟ್ಟಿದೆ. ಚಾಮುಂಡಿಬೆಟ್ಟದಲ್ಲಿ ಗುರುವಾರ 414ನೇ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಹಿರಿಯ ಸಾಹಿತಿ ನಾಡೋಜ ಡಾ| ಹಂಪ ನಾಗರಾಜಯ್ಯ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಈ ಮೂಲಕ 10 ದಿನ ನಡೆಯುವ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ.ಮಹದೇವಪ್ಪ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಬೆಳ್ಳಿಯ ರಥದಲ್ಲಿ ನಾಡದೇವಿ ಪ್ರತಿಷ್ಠಾಪನೆ
ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ದೇವಾಲಯದಲ್ಲಿದ್ದ ಬೆಳ್ಳಿ ರಥವನ್ನು ವೇದಿಕೆಯ ಮೇಲೆ ನಿಲ್ಲಿಸಲಾಗಿದೆ. ಬೆಟ್ಟದಲ್ಲಿ ದಸರೆಗೆ ಚಾಲನೆ ದೊರೆಯುತ್ತಿದ್ದಂತೆ ದಸರಾ ದೀಪಾಲಂಕಾರ, ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನ, ಆಹಾರ ಮೇಳ, ದಸರಾ ಕ್ರೀಡಾಕೂಟ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ವಿಜಯದಶಮಿಯಂದು 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ ಗಜಪಡೆಯಿಂದ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ.
ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ 10 ದಿನವೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅ. 3ರಂದು ಬ್ರಾಹ್ಮೀ , 4ರಂದು ಮಹೇಶ್ವರಿ, 5ರಂದು ಕೌಮಾರಿ, 6ರಂದು ವೈಷ್ಣವಿ, 7ರಂದು ವಾರಾಹಿ, 8ರಂದು ಇಂದ್ರಾಣಿ, 9ರಂದು ಸಿದ್ಧಿ ಧಾತ್ರಿ, 10ರಂದು ಸರಸ್ವತಿ, 11ರಂದು ಮಹಾಲಕ್ಷ್ಮೀ ಹಾಗೂ 12ರಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ.
ಇಂದಿನಿಂದ ಖಾಸಗಿ ದರ್ಬಾರ್
ಮೈಸೂರಿನಲ್ಲಿ ದಸರಾ ಮಹೋತ್ಸವ ಸಂಭ್ರಮ ಮನೆ ಮಾಡಿದರೆ, ಅರಮನೆಯಲ್ಲಿ ಶರನ್ನವರಾತ್ರಿ ಆಚರಣೆಯ ಸಡಗರ ಶುರುವಾಗಲಿದೆ. ರಾಜವಂಶಸ್ಥ ಯದುವೀರ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಗ್ಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.30ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಲಿವೆ. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಲಿದೆ. ಬೆ. 11.35 ರಿಂದ 12.05ರ ಒಳಗೆ ಯದುವೀರ ಅವರ ಸಿಂಹಾಸನಾರೋಹಣದ ಮೂಲಕ ಖಾಸಗಿ ದರ್ಬಾರ್ ಆರಂಭವಾಗಲಿದೆ.
ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಬಸವರಾಜ ಭಜಂತ್ರಿ ಆಯ್ಕೆ
ಮೈಸೂರು: ದಸರಾ ಉದ್ಘಾಟನ ಸಂದರ್ಭ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ನೀಡಲಾಗುವ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂಡಿತ್ ಬಸವರಾಜ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಗುರುವಾರ ಸಂಜೆ ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ.
ದಸರಾದಲ್ಲಿ ಭಾಗಿ ಸಿಎಂಗೆ ಬಿಟ್ಟದ್ದು
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯರ ಪತ್ನಿ ವಾಪಸ್ ನೀಡಿರುವುದನ್ನು ನೋಡಿದರೆ ಅವರಿಂದ ತಪ್ಪಾಗಿದೆ ಎಂದು ಅರ್ಥ. ದಸರಾದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುವ ವಿಚಾರ ಅವರ ತೀರ್ಮಾನಕ್ಕೆ ಬಿಟ್ಟದ್ದು. ಜವಾಬ್ದಾರಿ ಸ್ಥಾನದಲ್ಲಿರುವವರ ಹೆಸರು ಮುಡಾ ಹಗರಣದಲ್ಲಿ ಕೇಳಿಬಂದಿರುವ ಕಾರಣ ಈ ಬಗ್ಗೆ ಮುಖ್ಯಮಂತ್ರಿ ಅವಲೋಕನ ಮಾಡಬೇಕು.
-ಯದುವೀರ ಒಡೆಯರ್, ಮೈಸೂರು ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.