ಎಷ್ಟೇ ಸವಾಲುಗಳಿದ್ದರೂ ರಾಜ್ಯದ ಸಮಗ್ರ ಅಭಿವೃದ್ಧಿ ನಮ್ಮ ಗುರಿ : ನಳಿನ್ ಕುಮಾರ್ ಕಟೀಲ್
Team Udayavani, Jul 26, 2020, 9:58 AM IST
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರ ಸಮಸ್ಯೆ, ಸವಾಲುಗಳು ಎದುರಾದವು. ಆದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರವು ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದೆ.
ಬಹುಶಃ ಒಂದು ವರ್ಷದ ಆಡಳಿತದಲ್ಲಿ ಇಷ್ಟೊಂದು ಸವಾಲನ್ನು ಎದುರಿಸಿದ ಮತ್ತೂಂದು ರಾಜಕೀಯ ಪಕ್ಷ ಮತ್ತು ಮುಖ್ಯಮಂತ್ರಿಯವರು ಕರ್ನಾಟಕದ ಇತಿ ಹಾಸದಲ್ಲಿ ಇರಲಾರರು. ಜುಲೈ 26ರಂದು ಒಂದು ವರ್ಷ ಪೂರೈಸಿರುವ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರದ ಸಾಧನೆಯ ಅವಲೋಕನ ಮಾಡುವ ಮೊದಲು ಪ್ರಕೃತಿ ಮಾತೆಯ ಚರಣಕ್ಕೆ ನಮಿಸಿಯೇ ಪ್ರಾರಂಭಿಸುವುದು ಸೂಕ್ತ ಎಂದು ಭಾವಿಸುತ್ತೇನೆ. ನಾವು ರಾಜಕೀಯ ಪಕ್ಷವಾಗಿ, ಅಧಿಕಾರದ ಚುಕ್ಕಾಣಿ ಹಿಡಿದಾಗ ಸವಾಲುಗಳ ಸರಮಾಲೆಯೇ ನಮ್ಮನ್ನು ದಶ ದಿಕ್ಕುಗಳಿಂದಲೂ ಆವರಿಸುತ್ತದೆ. ಅದನ್ನು ಎದುರಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ನಾಡಿನ ಅಭಿ ವೃದ್ಧಿ ಮಾಡುತ್ತಾ, ನೀಡಿದ ಜವಾಬ್ದಾರಿಯನ್ನು ದಡ ಮುಟ್ಟಿಸುವುದಿದೆಯಲ್ಲ, ಅದು ನಿಜವಾದ ಸಾಧನೆ.
ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಾಗ ರಾಜ್ಯ ಬರದ ಛಾಯೆಯಲ್ಲಿತ್ತು. ಅದಕ್ಕೆ ಯೋಜನೆ ರೂಪಿಸುತ್ತಿದ್ದಾಗಲೇ ಘೋರ ಪ್ರವಾಹ ಪರಿಸ್ಥಿತಿ. ರಾಜ್ಯದಲ್ಲಿ 118 ವರ್ಷಗಳಲ್ಲೇ ಅತೀ ಹೆಚ್ಚು ಸರಾಸರಿ ಮಳೆ ದಾಖಲಾಗಿತ್ತು. 25 ಜಿಲ್ಲೆಗಳ 119 ತಾಲೂಕು ಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಬೇಕಾ ಯಿತು. ಅಧಿಕಾರಾವಧಿಯ ಮೊದಲ ಸವಾಲನ್ನು ಸಮರ್ಥವಾಗಿ ಎದುರಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು 1,869 ಕೋಟಿ ರೂ.ಗಳ ಪರಿಹಾರ ಧನ ಮಂಜೂರು ಮಾಡಿದರು. ಪರಿಹಾರ ವಿತರಣೆ, ಮೂಲ ಸೌಕರ್ಯ ಮತ್ತಿತರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರಕಾರ ಒಟ್ಟು 6,108 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕಿಸಾನ್ ಸಮ್ಮಾನ್ ಯೋಜನೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರಕಾರದ ವತಿಯಿಂದ ಹೆಚ್ಚುವರಿಯಾಗಿ 4,000 ರೂ.ಗಳನ್ನು ನೀಡುವ ಯೋಜನೆ ರೂಪಿಸಲಾಯಿತು. ನೇಕಾರರಿಗೆ ಮತ್ತು ಮೀನುಗಾರರಿಗೆ ಸಾಲ ಮನ್ನಾ ಮುಂತಾದ ಯೋಜನೆ ಗಳನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಯಿತು. ಪಿಎಂ ಕಿಸಾನ್-ಕರ್ನಾಟಕ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿರುವುದನ್ನು ಅಂಕಿ- ಅಂಶಗಳೇ ಹೇಳುತ್ತವೆ. ಸರಕಾರವನ್ನು ನಡೆಸುತ್ತಿರುವ ಆಡಳಿತ ಪಕ್ಷದ ಅಧ್ಯಕ್ಷನಾಗಿ ಇದು ನನಗೆ ಹೆಮ್ಮೆಯ ವಿಷಯವಲ್ಲವೇ.
ರೈತರಿಗೆ ತಾವು ಬೆಳೆದ ಬೆಳೆಯ ಮೇಲೆ ಹಕ್ಕು ಸಿಗುವಂತಾಗಲು ನಮ್ಮ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ.
ನೇಕಾರರ ಸಾಲ ಮನ್ನಾ
ನೇಕಾರರ ಸಾಲ ಮನ್ನಾಕ್ಕೆ 98.29 ಕೋ. ರೂ. ವೆಚ್ಚವಾಗ ಲಿದ್ದು, 29,621 ನೇಕಾರರು ಇದರ ಅನುಕೂಲ ಪಡೆಯಲಿದ್ದಾರೆ. ಸರಕಾರ ಇನ್ನೂ ಒಂದು ಹೆಜ್ಜೆ ಮುಂದುವರಿದು, 2019 ಜನವರಿಯಿಂದ ಮಾರ್ಚ್ 31ರ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ ನೇಕಾರರಿಗೂ ಈ ಸೌಲಭ್ಯ ವಿಸ್ತರಿಸಿ ಕೋವಿಡ್-19 ಸಂಕಷ್ಟ ಕಾಲದಲ್ಲಿ ಮಾನವೀಯತೆಯನ್ನು ಮೆರೆ ದಿದೆ. ಕೈಮಗ್ಗ ನೇಕಾರರಿಗೆ ವಾರ್ಷಿಕ ತಲಾ 2,000 ರೂಪಾಯಿ ಆರ್ಥಿಕ ನೆರವು ನೀಡುವ “ನೇಕಾರ ಸಮ್ಮಾನ್’ ಯೋಜನೆಗೆ ಚಾಲನೆ ನೀಡಲಾಗಿದೆ.
ಮನೆ ಮನೆಗೆ ಗಂಗೆ
ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಪೂರೈಕೆ ನಮ್ಮ ಸರಕಾರದ ಆದ್ಯತೆಯಾಗಿದ್ದು, “ಮನೆ ಮನೆಗೆ ಗಂಗೆ’ ಯೋಜನೆಯಡಿ 2023ರೊಳಗೆ ಎಲ್ಲ ಗ್ರಾಮೀಣ ಪ್ರದೇಶಗಳ ಮನೆಗಳಿಗೆ ನಳ್ಳಿ ನೀರು ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. 2020-21ನೇ ಸಾಲಿನಲ್ಲಿ 8,984.52 ಕೋ.ರೂ. ಅಂದಾಜು ಮೊತ್ತದಲ್ಲಿ 23.57 ಲಕ್ಷ ಗ್ರಾಮೀಣ ಮನೆಗಳಿಗೆ “ನಳ್ಳಿ ಸಂಪರ್ಕ’ ಗುರಿ ಹೊಂದಲಾಗಿದೆ.
ಕೋವಿಡ್-19
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆಯ ವ್ಯಯವನ್ನು ನಾವು ಮಂಡಿಸಿದೆವು. ಆದರೆ ಜಾಗತಿಕವಾಗಿ ಕಂಗೆಡಿಸಿರುವ ಕೋವಿಡ್-19 ಸೋಂಕಿನಿಂದಾಗಿ ಸರಕಾರದ ಆದ್ಯತೆಗಳು ಸದ್ಯಕ್ಕೆ ಬದಲಾಗುವಂತಾಗಿವೆ.
ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ರಾಜ್ಯ ಸರಕಾರ ತ್ವರಿತವಾಗಿ ಲಾಕ್‌ಡೌನ್ ಘೋಷಿಸಿ ಎಲ್ಲರ ಸುರಕ್ಷತೆಗೆ ಕ್ರಮ ವಹಿಸಲಾಯಿತು. ಬಡವರು ಯಾರೂ ಹಸಿವಿನಿಂದ ಬಳಲದಂತೆ ಎಚ್ಚರ ವಹಿಸಲಾಯಿತು. ಮುಂಗಡ ಪಡಿತರ ವಿತರಣೆ, ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸಲಾಗಿದೆ. ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರ ಜೀವರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳನ್ನು ಗುರುತಿಸಿ, ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 1.5 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದು, ಕರ್ನಾಟಕವು ಇಂತಹ ಸಮೀಕ್ಷೆ ನಡೆಸಿದ ಮೊದಲ ರಾಜ್ಯವಾಗಿದೆ.
ಕೋವಿಡ್-19 ಸೋಂಕಿತರ ಆರೈಕೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಕೋವಿಡ್ ಕೇರ್ ಸೆಂಟರನ್ನು ಸ್ಥಾಪಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ 2,272 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಅಸಂಘಟಿತ ವಲಯಕ್ಕೆ ನೆರವು ನೀಡಲಾಗಿದೆ. ಪೊಲೀಸರ ವೇತನ ಪರಿಷ್ಕರಿಸಲಾಗಿದೆ. ಅಂಗನವಾಡಿ ಕಾರ್ಯ ಕರ್ತೆಯರ ಗೌರವ ಧನವನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗಿದೆ.
ಹೂಡಿಕೆ ಆಕರ್ಷಿಸಲು ಕ್ರಮ
ಹೂಡಿಕೆದಾರರನ್ನು ಆಕರ್ಷಿಸಲು ಸ್ವಿಟ್ಸರ್‌ಲೆಂಡಿನ ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕಾನಮಿಕ್ ಫೋರಂ ಸಮಾವೇಶದಲ್ಲಿ ಸಿಎಂ, ಸಚಿವರು ಪಾಲ್ಗೊಂಡು 40ಕ್ಕೂ ಹೆಚ್ಚು ಜಾಗತಿಕವಾಗಿ ಪ್ರತಿಷ್ಠಿತ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ, ರಾಜ್ಯದಲ್ಲಿ ಹೂಡಿಕೆ ಮಾಡಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವಿಡ್-19ರ ಲಾಕ್‌ಡೌನ್ ಬಳಿಕ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. “ಎಕಾನಮಿಕ್ ಟೈಮ್ಸ್’ ಪತ್ರಿಕೆಯ ವರದಿಯ ಪ್ರಕಾರ ದೇಶದ ಆರ್ಥಿಕ ಚಟುವಟಿಕೆಗಳ ಪುನರಾರಂಭ ಪ್ರಕ್ರಿಯೆಯಲ್ಲಿ ಕರ್ನಾಟಕ ಮುಂಚೂಣಿಯ ರಾಜ್ಯವಾಗಿತ್ತು. ಮಾನವ ಸಂಪನ್ಮೂಲ ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಡಿ ತರುವ “ಸ್ಕಿಲ್ ಕನೆಕ್ಟ್’ ಪೋರ್ಟಲ್ ಪ್ರಾರಂಭಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದಂತೆ, ಜೀವ-ಜೀವನ ಎರಡರ ಸಮತೋಲನಕ್ಕೆ ರಾಜ್ಯ ಸರಕಾರ ಶ್ರಮಿಸುತ್ತಿದೆ. ಸವಾಲುಗಳ ನಡುವೆ ಮುಂದಿನ ಎರಡೂವರೆ ವರ್ಷಗಳ ಅವಧಿ ನಮ್ಮ ಪಾಲಿಗೆ ರಾಜ್ಯದ ಅಭಿವೃದ್ಧಿ ಮತ್ತು ಜನಮೆಚ್ಚುಗೆಯ ಆಡಳಿತ ನೀಡಲು ಪ್ರಮುಖ ಕಾಲಘಟ್ಟವಾಗಿದೆ. ಬಿ.ಎಸ್. ಯಡಿಯೂರಪ್ಪ, ನಮ್ಮ ಸಚಿವರು, ಶಾಸಕರ, ಜನಪ್ರತಿನಿಧಿಗಳ ಅವಿರತ ಶ್ರಮದಿಂದ ಎಷ್ಟೇ ಸವಾಲಿದ್ದರೂ ನಾವು ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.