Narayana Guru Jayanthi: ಸಹೃದಯಿ ಸಂತ ಸತ್ವ ಬ್ರಹ್ಮಶ್ರೀ ನಾರಾಯಣ ಗುರು
Team Udayavani, Aug 20, 2024, 6:45 AM IST
ಜಗದೋದ್ಧಾರ ನಿರ್ಧಾರದ ಸದೃಢ ನಿಲುವಿನ ಅಪೂರ್ವ ಸಂದೇಶಗಳ ಅನುಷ್ಠಾನದ ಮುಖಾಂತರ ಮನುಕುಲವನ್ನು ಸುಧಾರಣೆಯ ಸರಿದಾರಿಯಲ್ಲಿ ಮುನ್ನಡೆಸಿದ ಮಹಾಮಾನ್ಯರು ಬ್ರಹ್ಮಶ್ರೀ ನಾರಾಯಣಗುರುಗಳು.
ಹುಟ್ಟು ಸಾಮಾನ್ಯವಾಗಿದ್ದರೂ ಮಾಡಿದ ಸತ್ಕಾರ್ಯಗಳಿಂದ ಅಸಾಮಾನ್ಯರೆನಿಸಿದ ನಾರಾ ಯಣ ಗುರುಗಳ 170ನೇ ಜನ್ಮದಿನದಲ್ಲಿದ್ದೇವೆ. ಸಿಂಹ ಮಾಸದ ಶತಭಿಷಾ ನಕ್ಷತ್ರದಂದು ಕೇರಳದ ಪುಟ್ಟ ಹಳ್ಳಿ ಚೆಂಬಳಂತಿಯಲ್ಲಿ ಮಾದನ್ ಆಶಾನ್ ಹಾಗೂ ಕುಟ್ಟಿಯಮ್ಮ ದಂಪತಿಯ ಪುತ್ರನಾಗಿ ಜನಿಸಿದ “ನಾಣು’ ಬಾಲ್ಯದಲ್ಲೇ ಸತ್ಯ ಸಂಶೋಧಕನ ಲಕ್ಷಣದೊಂದಿಗೆ ಗುರುತಿಸಿಕೊಂಡಿದ್ದು ಲೋಕಸುಭಿಕ್ಷೆಯ ಸಂಕೇತವೇ ಸರಿ. ಅನೇಕಾನೇಕ ದಿವ್ಯತಮ ದ್ರಷ್ಟಾರಗಳಿಂದ ನಾರಾಯಣ ಗುರುವಾಗಿ “ಬ್ರಹ್ಮಶ್ರೀ’ಯಾಗಿ ಲೋಕ ಸಮಸ್ತರ ಹಿತವನ್ನು ಬಯಸಿ ಬದುಕು ಮತ್ತು ಬೋಧನೆ ಗಳಿಂದಲೇ ಪರಿವರ್ತನ ಪರಮರೆನಿಸಿದ್ದು ಮಹಾನ್ ಗಾಥೆ.
ಅಂದಿನ ಕೇರಳದಲ್ಲಿ ಭಯಾನಕವಾಗಿದ್ದ ಅಸ್ಪೃ ಶ್ಯತೆ, ಅಂಧಶ್ರದ್ಧೆಯ ಬಹುವಿಧಗಳಿಗೆ ಮೌನ ಕ್ರಾಂತಿಯನ್ನು ಸಂಘರ್ಷ ರಹಿತವಾಗಿ ಸಂಘಟಿಸಿ ಶೋಷಿತರ ಜೀವನಗತಿಗೊಂದು ಸುಧಾರಣೆಯ ಹೊಸ ಸೂತ್ರವನ್ನು ಹೆಣೆದರು. ಜೀವಿತಾವಧಿಯನ್ನು ಸಂಪೂರ್ಣವಾಗಿ ಸಮಾಜೋದ್ಧಾರಕ್ಕೆ ಸದ್ಬಳಕೆ ಮಾಡಿದ ಪರಿಣಾಮಾತ್ಮಕ ವಿಚಾರಗಳಿಂದಲೇ ನವ ಮನ್ವಂತರಕ್ಕೂ ಮಾದರಿಯಾಗಿ ನಾರಾಯಣ ಗುರುಗಳು ಗೋಚರಿಸುತ್ತಾರೆ.
ಜೀವನದ ಮೊದಲ ಭಾಗ ಧ್ಯಾನ, ತಪಶ್ಚರ್ಯೆ, ಅಧ್ಯಯನ, ಅಧ್ಯಾಪನ, ಬಳಿಕ ಸಮಾಜದ ಅನಿಷ್ಟ ಗಳಿಗೆ ಸಾತ್ವಿಕ ರೀತಿಯಲ್ಲಿ ಪರಿಹಾರ ಕಾರ್ಯ, ನಿಮ್ನ ವರ್ಗದವರ ಉದ್ಧಾರ, ತಪಃಶಕ್ತಿ ಸಂಪಾದನೆ, ಸಂಸ್ಕೃತ, ತಮಿಳು, ಮಲಯಾಳ ಭಾಷೆಗಳಲ್ಲಿ ಅಪಾರ ಪಾಂಡಿತ್ಯಾರ್ಜನೆ… ಹೀಗೆ ಪರಿಪಾಲಿಸಿದ ಪ್ರತಿಯೊಂದರಲ್ಲೂ ಪರಮೋಚ್ಚ ಪ್ರಭಾವಿ ಯೆನಿಸಿದ್ದಾರೆ. ಸಾಮಾನ್ಯರಂತಿದ್ದು ಜನಮನಕ್ಕೆ ತಿಳಿಸಿದ ನೀತಿಗಳು ಅನುಕರಣೀಯ.
ವೈಚಾರಿಕವಾಗಿ ನಾರಾಯಣ ಗುರುಗಳು ಬಹಳ ಎತ್ತರದ ಸ್ಥಾನದಲ್ಲಿದ್ದಾರೆ. ಅವರ ದೃಷ್ಟಿಯಲ್ಲಿ ಜಾತೀಯತೆ ಇಲ್ಲ. ಮನುಷ್ಯರೆಲ್ಲ ಒಂದೇ ಜಾತಿ ಎಂದು ಹೇಳಿದರೂ ವಾಸ್ತವದಲ್ಲಿ ಇದಕ್ಕಿಂತ ತೀರಾ ಭಿನ್ನವಾಗಿ ಆಚರಣೆಯಲ್ಲಿದ್ದ ಅಂಧಕಾರವನ್ನು ನೀಗಿಸುವ ಸಲುವಾಗಿ “ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು’ ಎನ್ನುವ ವಿಶ್ವ ಪ್ರಜ್ಞೆಯನ್ನು ಜಾಗೃತಗೊಳಿಸಿ ಮಾನವತೆಯ ರಾಯಭಾರಿಯಾದರು.
ಗುರುಗಳು ಎಲ್ಲರನ್ನೂ ಒಂದಾಗಿ ಕಂಡವರು. ಇರುವವನು ಒಬ್ಬನೇ ಪರಮಾತ್ಮ. ಒಂದೇ ತತ್ತÌ, ಒಂದೇ ಸತ್ಯ ಎಂದು ಹೃದಯಕ್ಕೆ ಮುಟ್ಟುವಂತೆ ಹೇಳಿದ ನಾರಾಯಣರು ಕೃಷಿ ಮೂಲದ, ವೈದ್ಯ ಮೂಲ ಪರಂಪರೆಯ ತಾಯಿಬೇರಿನಿಂದ ಚಿಗುರಿ ದವರು.
ಜ್ಞಾನ ವಿಕಾಸದಿಂದ ಅನಿಷ್ಟಗಳ ನಿವಾರಣೆ ಹಾಗೂ ಸಾಮಾಜಿಕ ನ್ಯಾಯ ಸಾಧ್ಯವೆಂದು ಅದಕ್ಕೆ ಶಿಕ್ಷಣವೊಂದನ್ನೇ ಸಾಧನವಾಗಿಸಿ “ವಿದ್ಯೆಯಿಂದ ಸ್ವತಂತ್ರರಾಗಬಹುದು’ ಎನ್ನುವುದನ್ನು ಅಕ್ಷರಶಃ ಸಾಧಿಸಿದ್ದಾರೆ.
ಸ್ತ್ರೀ ಶೋಷಣೆಯ ಪರಿಹಾರವಾಗಿ ಮಹಿಳಾ ಸಮಾನತೆಯ ಪರವಾಗಿದ್ದ ಗುರುಗಳು ಅರ್ಥಹೀನವಾದ ಬಾಲ್ಯ ವಿವಾಹ, ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಹೆಣ್ಣು ಮಕ್ಕಳ ಜೀವನಾವರ್ತಿ ಪ್ರಕ್ರಿಯೆಗಳ ಕುರಿತಾದ ಅಸಂಬದ್ಧ ಆಚರಣೆಗಳನ್ನು ಖಂಡಿಸಿ, ಸರಳ ವಿವಾಹ ಕ್ರಮವನ್ನು ಪ್ರೋತ್ಸಾಹಿಸಿದರು. ಮಹಿಳೆಯರಿಗೂ ಸಮಾನ ಶಿಕ್ಷಣದ ಅಗತ್ಯವಿದೆ ಎಂಬುದಾಗಿ ಪ್ರತಿಪಾದಿಸಿದವರು.
ಜಾತೀಯ ಕಾರಣಕ್ಕೆ ಅಸಮಾನತೆಯನ್ನು ಎದುರಿಸಿ ದೇವಾಲಯಗಳ ಪ್ರವೇಶವನ್ನು ನಿರಾಕರಿ ಸಿದಾಗ ಅಂಥವರೇ ಪೂಜಿಸುವ ಮತ್ತು ಎಲ್ಲರಿಗೂ ಮುಕ್ತ ಪ್ರವೇಶಿಸುವ ದೇಗುಲಗಳನ್ನು ಸ್ಥಾಪಿಸಿ ರುವುದನ್ನು ಗಮನಿಸಿದಾಗ ಅವರ ದೂರದರ್ಶಿತ್ವ ಮತ್ತು ಸಂಯಮದ ಕಾರ್ಯತಂತ್ರ ಅರಿವಾಗುತ್ತದೆ.
ದೇವಸ್ಥಾನಗಳ ಬಗ್ಗೆ ಗುರುಗಳ ಪರಿಕಲ್ಪನೆ ಕ್ರಾಂತಿಕಾರಿಯಾದದ್ದು. ಅರವಿಪುರಂನಲ್ಲಿ ಸಾಮಾನ್ಯ ಶಿಲೆಯನ್ನೇ ಶಿವಲಿಂಗವಾಗಿ, ಕಳವಂಗೋಡ್‌ನಲ್ಲಿ “ಓಂ ಶಾಂತಿ’ ಬರೆದ ಕನ್ನಡಿ, ಕಾಳಿಕಂಠೇಶ್ವರದಲ್ಲಿ ಸತ್ಯ, ಧರ್ಮ, ದಯೆ, ಪ್ರೇಮ ಬರೆದ ಫಲಕ, ಚಿದಂಬರ ಕ್ಷೇತ್ರದಲ್ಲಿ ನಂದಾದೀಪ, ಮಂಗಳೂರು ಕುದ್ರೋಳಿಯಲ್ಲಿ ಸರ್ವಾರಾಧ್ಯ ಗೋಕರ್ಣನಾಥೇಶ್ವರ, ಶಿವಗಿರಿಯಲ್ಲಿ ಅವರ ಚಿಂತನೆಯ ಮೂಲ ಧಾತುವಾದ ಅರಿವು ಸಂಕೇತವಾಗಿ ಸರಸ್ವತಿ… ಹೀಗೆ ತಾನು ಪ್ರತಿಷ್ಠಾಪಿಸಿದ ಪ್ರತಿಯೊಂದು ದೇವಾಲ ಯದಲ್ಲೂ ಆತ್ಮನೇ ಪರಮಾತ್ಮ ಎನ್ನುವ ಶೋಧ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.
ದೇವಸ್ಥಾನಗಳು ಭಕ್ತಿಪೀಠವಾಗುವುದರ ಜತೆ ಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಉದ್ಯಾನ, ವಾಚನಾಲಯದೊಂದಿಗೆ ಅವು ಸ್ವತ್ಛ ಪರಿಸರದಲ್ಲಿ ನಿರ್ಮಾಣಗೊಳ್ಳಬೇಕೆಂದು ಬಯಸಿದ್ದು ಗಮನಾರ್ಹ. ಪರೋಪಕಾರವೇ ತನ್ನ ಜೀವನದ ಧ್ಯೇಯ ಎನ್ನುತ್ತಾ ಸಮಾಜದ ಎಲ್ಲ ಧರ್ಮದವರನ್ನು ಒಗ್ಗೂಡಿಸಿ ಸರ್ವಧರ್ಮ ಸಮ್ಮೇಳನ ನಡೆಸಿ “ನಾವೆಲ್ಲ ಇಲ್ಲಿ ಸೇರುವುದು ವಾದಿಸಲಿಕ್ಕಲ್ಲ, ವಾದಿಸಿ ಜಯಿ ಸಲಿಕ್ಕಲ್ಲ, ಪರಸ್ಪರ ತಿಳಿಯಲು ಮತ್ತು ತಿಳಿಸಲು’ ಎನ್ನುವ ವಿಚಾರಧಾರೆಗಳಿಂದ ಯಶಸ್ವಿಯಾಗಿದ್ದಾರೆ.
ಗುರುಗಳ ಬದುಕು ಪವಾಡವಲ್ಲ, ಪರಿಶ್ರಮ. ಸ್ವಾಮಿ ಎಂದುಕೊಂಡು ಪೀಠದಲ್ಲಿ ಕೂರಲಿಲ್ಲ. ತಲೆ ಮೇಲೆ ಕಿರೀಟ ಇಡಲಿಲ್ಲ. ಸಮಾಜದಲ್ಲಿ ತಲೆಯೆತ್ತಿ ನಡೆಯಲಾರದವನಿಗೆ ಸಾಮಾಜಿಕ ನ್ಯಾಯ ಕೊಡುವುದೇ ನನಗೆ ಪೀಠ. ಅವರ ಬದುಕಿನಲ್ಲಿ ಚೈತನ್ಯ ಕಾಣುವುದೇ ನನಗೆ ಕಿರೀಟ ಎಂದು ಸಾರುತ್ತಾ ಮೌಲ್ಯಾತ್ಮಕ ಅರಿವಿಗೆ ಒತ್ತು ನೀಡಿರುವವರು.
ಗುರುಗಳು ಯಾವುದೇ ಸಂಪ್ರದಾ ಯವನ್ನಾಗಲಿ, ಸಂವಹನ ಮಾರ್ಗವನ್ನಾಗಲಿ ನಿರಾಕರಿಸಿದವರಲ್ಲ. ಅವರ ವಿಧಾನಗಳಲ್ಲಿ ಸಮಾನತೆಯ ಧೋರಣೆಗಳಿದ್ದವು, ನೋವಿಗೆ ಸ್ಪಂದಿಸುವ ಗುಣವಿತ್ತು, ಸಕಾರಾತ್ಮಕ ಆಸಕ್ತಿಯಿತ್ತು, ಸಹೋದರತ್ವದ ಅಂಶಗಳಿತ್ತು. ಬೆಳವಣಿಗೆಯ ದೃಷ್ಟಿಯಿಂದ ಬೋಧಿಸಿದ ನಿತ್ಯ ಸತ್ಯಗಳು, ಸರ್ವ ಸಮಾನತೆಯ ಸಮನ್ವಯ ದೃಷ್ಟಿ, ಸಮಾಜ ಕ್ಷೇಮಕ್ಕಾಗಿ ಹೊಸೆದ ಧರ್ಮ ಸೂತ್ರಗಳು, ದಿವ್ಯದಾರ್ಶನಿಕ ಪ್ರತಿಭೆಯಿಂದ ಮೂಡಿ ಬಂದ ವಿಶಿಷ್ಟ ಕೃತಿಗಳು, ಅರಿವಿನ ಹೊಲದಲ್ಲಿ ಬಿತ್ತಿ ಬೆಳೆದ ಪ್ರಗತಿಯ ಫಸಲು ಸಮಾಜದಲ್ಲಿ ಅಸಾಧಾರಣ ಸಂಚಲನ ಉಂಟುಮಾಡಿದ ನಿತ್ಯ ಸತ್ಯ ಸಂಗತಿ ಗಳಾಗಿವೆೆ.
ದೀಪ ತಾನು ಉರಿದು ಜಗತ್ತಿಗೆ ಬೆಳಕನ್ನು ನೀಡುವಂತೆ ಜಗತ್ತಿನ ಅಜ್ಞಾನದ ಕತ್ತಲೆಯನ್ನು ಅಧ್ಯಾತ್ಮಿಕ ಬೆಳಕಿನಿಂದ ಬೆಳಗಿಸಿದ ಅಮೃತ ಚೇತನ ಮೂರ್ತಿ ಗುರುಗಳು ಸುಧಾರಣೆಯ ಪ್ರತೀ ಆಯಾಮದಲ್ಲೂ “ಮನುಷ್ಯ ಧರ್ಮವೇ ಶ್ರೇಷ್ಠ’ ಎಂದು ಸಾಧಿಸಿರುವುದು ಸಂಸ್ಕೃತಿ, ಸಂಸ್ಕಾರವಂತ ಸಮಾಜದ ಸೃಷ್ಟಿಗೆ ಸಕಾರಣವಾಗಿದೆ. ಈ ಕಾರಣದಿಂದಲೇ ಗುರುಗಳು ಹಿಂದುಳಿದ ಈಳವ ಜನಾಂಗದಲ್ಲಿ ಜನಿಸಿದರೂ ಸಮಸ್ತರು ಒಪ್ಪಿಕೊಳ್ಳುವಂತಹ ಸಾದೃಶ್ಯ ಸಂದೇಶದ ಸದ್ಗುರುವಾಗಿ ಸ್ವೀಕಾರಾರ್ಹವಾಗಿದ್ದಾರೆ.
ಪ್ರಸ್ತುತ ದಿನಮಾನದ ಬಹಳಷ್ಟು ಗಂಭೀರವಾದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳಿಗೆ ಚಿಕಿತ್ಸಕ ಗುಣ ಗುರುಗಳ ವಿಚಾರ ಧಾರೆಯಲ್ಲಿದೆ. ಇದನ್ನು ಒಪ್ಪುವ ಮತ್ತು ಪಾಲಿಸುವ ಮನಃಸ್ಥಿತಿ ಹೆಚ್ಚಾದಷ್ಟು ಸಮಾಜದಲ್ಲಿ ಪ್ರಗತಿ ಸಾಧ್ಯವಿದೆ. ತ್ಯಾಗ ಮತ್ತು ಸೇವೆಯಿಂದ ಸಾರ್ಥಕ ಗೊಂಡ ಗುರುವಿನ ಚಿಂತನೆಗಳು ಸೂರ್ಯನ ಬೆಳಕಿನಂತೆ ನಿರಂತರ ಪ್ರಭಾವಿಸುತ್ತಿರಲಿ. ಸ್ವಯಂಕೃತ ಅಡ್ಡಗೋಡೆಗಳನ್ನು ಮೀರಿ ಸೌಹಾರ್ದ, ಸಮನ್ವಯ, ಸಮೃದ್ಧಿಯ ಸೇತುವೆಯಲ್ಲಿ ಸಂಪ್ರೀತಿಯಿಂದ ಸಾಗೋಣ. ಗುರು ಬಯಸಿದ ಉತ್ಥಾನದ ಗಮ್ಯ ತಲುಪೋಣ.
ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು, ಉಪನ್ಯಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.