ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…
Team Udayavani, Oct 4, 2022, 6:20 AM IST
ನಮ್ಮ ಪ್ರತೀ ಹಬ್ಬದ ಹಿಂದೆಯೂ ಸಾಕಷ್ಟು ನಂಬಿಕೆಗಳು, ಸಂಪ್ರದಾಯ, ಆಚರಣೆ ಇವೆ. ಅದರಲ್ಲೂ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ರಿವಾಜು. ಹಾಗೆ ಒಂದೊಂದು ಹಬ್ಬಕ್ಕೆ ಒಬ್ಬೊಬ್ಬ ದೇವರು, ಪ್ರತೀ ದೇವರಿಗೂ ಒಂದು ಪ್ರಿಯವಾದ ನೈವೇದ್ಯ, ದೇವರಿಗೊಂದು ವಾಹನ, ಅದಕ್ಕೊಂದು ಹಿನ್ನೆಲೆಯ ಪೌರಾಣಿಕ ಕಥೆ ಮತ್ತು ಅದನ್ನು ಮುಂದುವರಿಸಿಕೊಂಡು ಅಷ್ಟೆ ಶ್ರದ್ಧೆಯಿಂದ ಮುಂದಿನ ಪೀಳಿಗೆಗೆ ವರ್ಗಾಯಿಸುವ ನಾವು. ಇವೆಲ್ಲ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ತುಂಬ ಖುಷಿ ಮತ್ತು ಪ್ರೀತಿ ತುಂಬುವ ಮಹತ್ಕಾರ್ಯವೇ ಹೌದು.
ನಮ್ಮ ಎಲ್ಲ ಹಬ್ಬಗಳಲ್ಲೇ ತುಂಬ ದೀರ್ಘ ಮತ್ತು ವಿಜೃಂಭಣೆಯ ಹಬ್ಬವೆಂದರೆ ವಿಜಯ ದಶಮಿ, ಇದನ್ನ ಕೆಲವೆಡೆ ದಸರೆ ಎಂತಲು, ದುರ್ಗಾ ಪೂಜೆ ಅಂತಲೂ, ಇನ್ನು ಕೆಲವೆಡೆ ನವರಾತ್ರಿ ಅಂತಲೂ ಕರೆಯುತ್ತಾರೆ. ವಿಜಯ ದಶಮಿಯಲ್ಲಿ ಮೊದಲ ಒಂಬತ್ತು ದಿನ ಒಬ್ಬೊಬ್ಬ ದೇವಿಯ ಆರಾಧನೆ ನಡೆಯುತ್ತದೆ. ಶ್ರೀ ದೇವಿಯ ದೇವಿ ಪುರಾಣ, ದೇವಿ ಶುಂಭ ನಿಶುಂಭರಿಂದ ತಾಪತ್ರಯ ಅನುಭವಿಸುತ್ತಿದ್ದ ದೇವಾನು ದೇವತೆಗಳನ್ನ ರಕ್ಷಿಸಿ ದುಷ್ಟ ರಾಕ್ಷಸ ಸಂಕುಲವನ್ನ ಹೇಗೆ ಸಂಹರಿಸುತ್ತಾಳೆ ಎಂಬುದು ಈ ಪುರಾಣ ಕಥೆಯ ತುಂಬ ತುಂಬಿದೆ. ಇದನ್ನ ಕರ್ನಾಟಕದ ಹಲವು ಭಾಗಗಳ ಮಠ ಹಾಗೂ ದುರ್ಗಾ ದೇವಿ/ಕಾಳಿಕಾ ದೇವಿ /ಗಾಯತ್ರಿ ದೇವಿಯ ದೇವಸ್ಥಾನಗಳಲ್ಲಿ ಗಮಕದಲ್ಲಿ ಹಾಡುತ್ತಾರೆ ಹಾಗೆ ಅದರ ಅರ್ಥ ವಿವರಣೆಯನ್ನ ವಿವರಿಸುತ್ತಾರೆ. ಅಲ್ಲಿ ಆ ಊರಿನ ಸಾಕಷ್ಟು ಭಕ್ತರು ದೇವಿ ಪುರಾಣ ಶ್ರವಣ ಮಾಡಲೆಂದೇ ಬರುತ್ತಾರೆ.
ಕೆಲವೆಡೆ ದೇವಿಯ ಮುಂದೆ ಒಂಬತ್ತು ದಿನಗಳ ಕಾಲ ದೀಪವಿಟ್ಟು ಆದು ನಂದದಂತೆ ಕಾಯುತ್ತಾರೆ. ಅದರ ಕೆಳಗೆ ಒಂಬತ್ತು ಬಗೆಯ ಧಾನ್ಯಗಳನ್ನ ಹಾಕಿ ಒಂಬತ್ತನೇ ದಿನ ಬರುವ ಪೈರನ್ನು ದಶಮಿಯ ದಿನ ನದಿಗಳಿಗೆ ತಂದು ನದಿಯಲ್ಲಿ ತೇಲಿ ಬಿಡುತ್ತಾರೆ.
ಒಂಬತ್ತು ದಿನಗಳ ಕಾಲ ಒಂದೊಂದು ದೇವಿಯ ಪೂಜೆಯ ಅನಂತರ ಒಂಬತ್ತನೆ ದಿನ ರಾತ್ರಿ ದೇವಿ ದುಷ್ಟರನ್ನ ಸಂಹರಿಸುತ್ತಾಳೆ. ಆ ಆಯುಧಗಳನ್ನು ತ್ಯಜಿಸುತ್ತಾಳೆ. ಆದ್ದರಿಂದ ಅವುಗಳನ್ನು ತೊಳೆದು ಪೂಜೆ ಮಾಡಬೇಕೆನ್ನುವುದು ಸಂಪ್ರದಾಯ. ಆದರೆ ಕೇವಲ ಯುದ್ಧೋಪಕರಣಗಳಲ್ಲದೆ ಮನೆಯಲ್ಲಿನ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಉಪಕರಣಗಳು, ಈಳಿಗೆ ಮಣೆ, ಚಾಕು, ಕತ್ತರಿ, ಸರಸ್ವತಿ ದೇವಿಗೆ ಸಂಬಂಧಪಟ್ಟ ಪೆನ್ನು, ಪುಸ್ತಕ, ಕಂಪಾಸ್ ಬಾಕ್ಸ್ , ಶಾರದೆಗೆ ಸಂಬಂಧಿಸಿದ ವೀಣೆ, ತಂಬೂರಿ, ತಬಲ, ಹಾರ್ಮೊನಿಯಂ, ಹೀಗೆ ತಮ್ಮ ಮನೆಯಲ್ಲಿರುವ ತಮ್ಮ ವೃತ್ತಿಗೆ ಸಂಬಂಧಿಸಿದ ಎಲ್ಲ ಮುಖ್ಯ ಆಯುಧಗಳನ್ನು ಆ ದಿನ ಶುಭ್ರವಾಗಿ ತೊಳೆದು ಒಂದು ಕರಿಕಂಬಳಿ ಹಾಸಿ ಅದರ ಮೇಲಿಟ್ಟು ಪೂಜೆಗೈಯ್ಯುತ್ತಾರೆ. ಜತೆಗೆ ಮನೆಯಲ್ಲಿನ ವಾಹನಗಳು, ಬಟ್ಟೆ ಹೊಲಿಯುವ ರಾಟಿ, ನೂಲುವ ಚರಕ, ನೇಕಾರರ ಮಗ್ಗ ಎಲ್ಲವನ್ನು ಪೂಜೆಗೈದು ಇಡೀ ವರ್ಷ ತಮ್ಮ ಅನ್ನಕ್ಕೆ ದಾರಿಯಾದ ಯಂತ್ರಗಳಿಗೆ ಆ ದಿನ ರಜೆ ಘೋಷಿಸುತ್ತಾರೆ. ಸಿಹಿ ಅಡುಗೆ ಮಾಡಿ ನೈವೇದ್ಯ ತೋರಿಸುತ್ತಾರೆ.
ವಿಜಯದಶಮಿ ಹಬ್ಬ ಕೇವಲ ಮನೆಗಳಿಗೆ ಮನೆಯ ಉಪಕರಣಗಳಿಗೆ ಮಾತ್ರ ಮೀಸಲಿರದೆ ಬೇರೆ ಬೇರೆ ಕೈಗಾರಿಕೆಗಳು, ಯಂತ್ರ ಸಂಬಂಧಿ ಕೆಲಸ ಮಾಡುವ ಇಲಾಖೆ ಗಳು, ವಾಹನ ಹಾಗೂ ರೈಲ್ವೇ ವಲಯ, ದಿನ ಪತ್ರಿಕೆಗಳ ಯಂತ್ರಗಳಿಗೆ ಎಲ್ಲ ಕಡೆಗೂ ದೇವಿಯನ್ನ, ಯಂತ್ರಗಳನ್ನ ಆರಾಧಿಸಿ ಪೂಜೆ ಮಾಡಿ ಸಿಬಂದಿಯೆಲ್ಲ ಸಂಭ್ರಮಿಸುವ ಕ್ಷಣಗಳು ನಮಗೆ ಭಾರತದಾದ್ಯಂತ ಕಾಣಸಿಗುತ್ತವೆ. ಒಟ್ಟಾರೆ ಶಕ್ತಿಯ ಆರಾಧನೆ ಈ ಹಬ್ಬದ ವಿಶೇಷ.
ದೇವಿಯು ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯ ರಾತ್ರಿಯ ತನಕ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಸಂಹರಿಸಿದಳು ಎಂಬ ಪ್ರತೀತಿ ಇದೆ. ಹಾಗಾಗಿ ಆಕೆ ಮಹಿಷಾಸುರ ಮರ್ದಿನಿಯಾದಳು. ಆಕೆ ಶಕ್ತಿ ದೇವತೆ. ಹತ್ತನೇ ದಿನ ಆಕೆ ವಿಜಯಶಾಲಿಯಾದಳು.
ನವರಾತ್ರಿಗೆ ನವ ದೇವತೆಯರಾದ ಶೈಲಪುತ್ರಿ:ಚಾಮುಂಡಿಯ ಅವತಾರ ಜತೆಗೆ ಪರ್ವತ ರಾಜನ ಮಗಳಾಗಿ ಜನಿಸಿ ಶಿವನನ್ನು ವರಿಸುವ ಪಾರ್ವತಿಯು ಹೌದು.
ಬ್ರಹ್ಮಚಾರಿಣಿ: ಪಾರ್ವತಿ ಮಾತೆ ಶಿವನನ್ನು ವರಿಸಲು ಕಠಿನ ತಪಸ್ಸು ಆಚರಿಸುತ್ತಾಳೆ. ಕನ್ಯೆಯಾದ ದೇವಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ.
ಚಂದ್ರಘಂಟಾ: ಶೃಂಗಾರದ ಸಂಕೇತವಾಗಿ ಈ ದೇವಿಯನ್ನು ಪೂಜಿಸುತ್ತೇವೆ. ಹತ್ತು ಕೈಗಳಿದ್ದು ದೇವಿ ತನ್ನ ಕೈಗಳಲ್ಲಿ ಶಕ್ತಾ ಯುಧಗಳನ್ನು ಹೊಂದಿದ್ದಾಳೆ.
ಕೂಷ್ಮಾಂಡ ದೇವಿ: ಸೌಂದರ್ಯ ಮತ್ತು ಧೈರ್ಯದ ಸಂಕೇತ ಮಂದಹಾಸ ಬೀರುವ ದೇವಿಯಾಗಿದ್ದಾಳೆ.
ಸ್ಕಂದಮಾತಾ: ಸುಬ್ರಹ್ಮಣ್ಯನ ತಾಯಿ ಪಾರ್ವತಿ ದೇವಿಯ ಮತ್ತೊಂದು ಅವತಾರ. ಸಂಪತ್ತಿನ ಪ್ರತೀಕವೂ ಹೌದು.
ಕಾತ್ಯಾಯಿನಿ: ಬೆಳಕು, ಸಂತೋಷ, ಸಡಗರದ ಸಂಕೇತವಾಗಿದ್ದು ಕಾತ್ಯಾಯನ ಋಷಿಯ ಪುತ್ರಿ.
ಕಾಳರಾತ್ರಿ: ಭಯಾನಕ ದೇವಿಯ ಅವತಾರವಾಗಿದ್ದು, ಸಮೃದ್ಧಿ ಅಭಿವೃದ್ಧಿಯ ಸಂಕೇತವಾಗಿದ್ದಾಳೆ. ಜತೆಗೆ ನಕಾರಾತ್ಮಕತೆಯನ್ನು ದೂರ ಮಾಡುವ ದೇವಿ.ಶುಭವನ್ನು ನೀಡುವ ಈ ದೇವಿಗೆ ಶುಭಂಕರಿ ಎಂದೂ ಕರೆಯಲಾಗುತ್ತದೆ.
ಮಹಾಗೌರಿ: ಈಕೆಯನ್ನು ಅನ್ನಪೂರ್ಣೆ ಎಂದು ಕರೆಯಲಾ ಗುತ್ತದೆ. ಇಷ್ಟಾರ್ಥ ಸಿದ್ದಿಗಾಗಿ ಈ ದೇವಿಯನ್ನು ಆರಾಧಿಸಲಾಗುತ್ತದೆ.
ಸಿದ್ಧಿರಾತ್ರಿ: ಎಲ್ಲ 8 ಸಿದ್ಧಿಗಳನ್ನು ಒಳಗೊಂಡಿದ್ದಾಳೆ.ಸಿಂಹಿಣಿಯಾದ ಇವಳು ಸಮಸ್ತ ಕಾರ್ಯಗಳಿಗೂ ಸಿದ್ಧಿಯನ್ನು ದಯಪಾಲಿಸುವ ದೇವಿ.
ಹೀಗೆ ದಿನಕ್ಕೊಬ್ಬ ದೇವಿಯನ್ನ ಆರಾಧಿಸಿ ಇಷ್ಟಾರ್ಥ ಫಲ ಪಡೆಯುವುದಿದೆ. ಪ್ರಾರ್ಥಿಸುವ ಮನಗಳಿಗೆ ನವರಾತ್ರಿಯ ವಿಶೇಷ ದೇವಿಯರ ಅನುಗ್ರಹವಿದೆ.
ಈ ಹಬ್ಬದ ವೈಶಿಷ್ಟ್ಯ ಇಲ್ಲಿಗೆ ನಿಲ್ಲುವುದಿಲ್ಲ. ದಸರಾ ಅಂದರೆ ದಶ ಹರಾ, ದಶ ಎಂದರೆ ಹತ್ತು ಹರಾ ಎಂದರೆ ಸೋತಿವೆ. ಅಷ್ಟದಿಕ್ಕುಗಳ ಜತೆಗೆ ಆಕಾಶ ನೆಲದ ದಿಸೆಗಳು ದೇವಿಯ ನಿಯಂತ್ರಣಕ್ಕೆ ಬಂದಿರುತ್ತವೆ ಮತ್ತು ಸಂಪನ್ನವಾಗಿರುತ್ತವೆ. ಹತ್ತೂ ದಿಕ್ಕುಗಳ ಮೇಲೆ ನಿಯಂತ್ರಣ ಸಿಕ್ಕಿರುತ್ತದೆ ತಾಯಿ ದುರ್ಗೆಗೆ ನವರಾತ್ರಿಯ ಯುದ್ಧ ಕಳೆದ ಮೇಲೆ.ನವರಾತ್ರಿ ಕಳೆದು ಬರುವ ಮಾರನೆ ಬೆಳಗು ದಶಮಿಯ ದಿನ ಈ ದಿನಕ್ಕೆ ಮತ್ತು ಒಂದು ಪೌರಾಣಿಕ ಕಥೆಯ ನಂಟಿದೆ ಅದು ರಾಮಾಯಣದ್ದು ಶ್ರೀರಾಮನು ರಾವಣನ ಮೇಲೆ ವಿಜಯ ಸಾಧಿಸಿದ್ದು ಇದೇ ದಿನ ದಶಹರ-ದಶಕಂಠ ರಾವಣನನ್ನು ಸಂಹರಿಸಿದ ದಿನ ಎಂಬ ಹಿನ್ನೆಲೆ ಇರುವುದು ಕೂಡ ವಿಶೇಷವೆನಿಸುತ್ತದೆ.
ಹಬ್ಬದ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತ ವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಬಂದರಂತೆ, ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರ ಪಡೆದು ದುರ್ಗೆಗೆ ಪೂಜೆ ಸಲ್ಲಿಸಿ ಶಮೀ ವೃಕ್ಷಕ್ಕೆ ನಮಿಸಿ ತಮ್ಮ ಶಸ್ತ್ರಾಸ್ತ್ರ ಪಡೆದು ಯುದ್ಧಕ್ಕೆ ನಡೆದು ಅಲ್ಲಿ ಯುದ್ಧ ಗೆದ್ದದ್ದರ ಪರಿಣಾಮ ವಿಜಯ ದಶಮಿ ಹೆಸರು ಬಂತೆಂದು ಕಥೆ ಇದೆ.
ಈ ಕಾರಣಕ್ಕೆ ನಮ್ಮ ದೇಶದ ಹಲವಾರು ಪ್ರದೇಶದಲ್ಲಿ ಶಮೀ ವೃಕ್ಷ ಅರ್ಥಾತ್ ಬನ್ನೀ ಗಿಡದ ಎಲೆಗಳನ್ನ ಹಿರಿಯರಿಗೆ ಕೊಟ್ಟು ಕಾಲು ನಮಸ್ಕಾರ ಮಾಡಿ ಈ ಕೆಳಗಿನ ಶ್ಲೋಕ ಹೇಳುವ ಪರಿಪಾಠವಿದೆ.
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಯದರ್ಷಿನೀ ಕರಿಷ್ಯಮಾಣಯಾತ್ರಾಯ ಯಥಾಕಾಲಂ ಸುಖಂ ಮಾಯಾತತ್ರ ನಿರ್ವಿಘ್ನಕತ್ರೀ ತ್ವ ಭವ ಶ್ರೀರಾಮಪೂಜಿತಾ
ಇನ್ನೂ ಸರಳ ರೀತಿಯಲ್ಲಿ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಸೊಗಸಾಗಿ ಹೇಳುವುದಾದರೆ ಶಮೀ ಎಲೆಗಳನ್ನ ಕೊಟ್ಟು ನಮಸ್ಕರಿಸಿ ‘ಬಂಗಾರ ಕೊಟ್ಟು ಬಂಗಾರ ತಗೊಂಡ ಬಂಗಾರದಂಗ ಇರೋಣ’ ಬಹುಶಃ ದುಷ್ಟ ರಾಕ್ಷಸತನದ ಗುಣಗಳಿಲ್ಲದೆ, ರಾವಣ ನಂತಾಗದೆ, ಪಾಂಡವ ಕೌರವರಂತೆ ಬಡಿದಾಡದೆ ಬೆಲೆಬಾಳುವ, ಎಲ್ಲರು ಬಯಸುವ ಹಳದಿ ಲೋಹದಂತೆ ಸಕಲರಿಗೂ ಸಲ್ಲುವ ಗುಣದವರಾಗೋಣ ಎಂಬ ವಿಹಿತಾರ್ಥ ಈ ಎರಡು ವಾಕ್ಯದಲ್ಲಿ ಅಡಗಿದಂತೆ ತೋರುತ್ತದೆ. ಆದಿಶಕ್ತಿ ಸಕಲರಿಗೂ ಬಂಗಾರದ ಗುಣಗಳನ್ನೇ ತೊಡಿಸಲಿ.
– ದೀಪಾ ಗೋನಾಳ ಲೇಖಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ
Navratri Special: ತಾಯ್ತನದ ಭಾವ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?
Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.