Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ
21 ವರ್ಷಗಳಿಂದ ಅಣ್ಣನ ಮುಖ ನೋಡಿಲ್ಲ, ಸಾಧು ಸ್ವಭಾವದವನು ಹೇಗೆ ಕಠೊರನಾದನೋ ಗೊತ್ತಿಲ್ಲ: ವಿಕ್ರಂ ತಂಗಿ ಸುಗುಣಾ ಕಣ್ಣೀರು
Team Udayavani, Nov 20, 2024, 7:49 AM IST
ಉಡುಪಿ: ಆತ ಜೀವದಲ್ಲಿದ್ದರೂ ಭಯವಿತ್ತು. ಈಗ ಜೀವ ಕಳೆದುಕೊಂಡಾಗಲೂ ಭಯವಾಗುತ್ತಿದೆ. ಇವತ್ತು ಆತನ ಸಾವಿನ ಸುದ್ದಿಯನ್ನು ನಮಗೆ ಯಾರೂ ಹೇಳಿಲ್ಲ. ಬೆಳಗ್ಗೆ 7 ಗಂಟೆಗೆ ಟಿವಿ, ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ನಮಗೆ ಗೊತ್ತಾಗಿದ್ದು ಎಂದು ವಿಕ್ರಂ ಗೌಡನ ತಂಗಿ ಸುಗುಣಾ ಕಣ್ಣೀರು ಹಾಕುತ್ತ ಅಣ್ಣನ ಸಾವಿಗೆ ಮರುಕ ವ್ಯಕ್ತಪಡಿಸಿದರು.
ಎಎನ್‌ಎಫ್ ಪಡೆಯ ಯೋಧರ ಗುಂಡೇಟಿಗೆ ನ. 18ರ ರಾತ್ರಿ ಬಲಿಯಾದ ವಿಕ್ರಂ ಗೌಡನ ತಂಗಿ ಮನೆ ಕೂಡ್ಲುವಿನ ನಾಡ್ಪಾಲುವಿನಲ್ಲಿದೆ. ಈ ವೇಳೆ ಅವರು ಅಣ್ಣನ ಸಾವಿನ ದುಃಖದಲ್ಲೂ ಆತ ತಪ್ಪು ಮಾಡಿದ್ದಾನೆ, ಏನು ಮಾಡುವುದು ಹೇಳಿ ಎನ್ನುವ ಹತಾಶೆಯ ಮಾತುಗಳನ್ನಾಡಿದರು.
ಮದುವೆಯಾದ ಮೇಲೆ ಒಡನಾಟವಿಲ್ಲ
ಗುಲಾಬಿ-ವೆಂಕಯ್ಯ ಅವರ ನಾಲ್ವರು ಮಕ್ಕಳಲ್ಲಿ ವಿಕ್ರಂ ಗೌಡ ಹಿರಿಯವ. ಬಳಿಕ ತಂಗಿ, ಆಕೆ ಬಾಲ್ಯದಲ್ಲೇ ಮೃತಪಟ್ಟಿದ್ದಾಳೆ. ಇನ್ನೊಬ್ಬ ಸಹೋ ದರ ಸುರೇಶ್ ಹೆಬ್ರಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಕೊಂಡಿ ದ್ದಾನೆ. ನಾನು ಕೊನೆಯವಳು. ಮದುವೆ ಆಗುವ ವರೆಗೆ ತಮ್ಮ ವಿಕ್ರಂ ಗೌಡನ ಜತೆ ಒಡನಾಟದಲ್ಲಿದ್ದೆ. ಬಳಿಕ ಆತನ ಸಂಪರ್ಕ ಕಡಿಮೆ ಎಂದು ಸುಗುಣಾ ಹೇಳಿದರು. ಇವರ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ.
ನಾಲ್ಕನೇ ತರಗತಿ ಓದಿದ್ದ
ಸಹೋದರ ವಿಕ್ರಂ ಗೌಡ ನಾಲ್ಕನೇ ತರಗತಿ ತನಕ ಓದಿದ್ದ. ಬಾಲ್ಯದಲ್ಲಿ ಆತ ಚುರುಕಿದ್ದ. ಆತ ಒಳ್ಳೆಯ ಗುಣವಂತನಾಗಿದ್ದ. ಎಲ್ಲರ ಒಡನಾಟ ಬೆಳೆಸಿ ಕೊಂಡಿದ್ದ. ಇದೇ ಸಂದರ್ಭ ಈ ಭಾಗದಲ್ಲಿ ಕರ್ನಾಟಕ ವಿಮೋಚನ ಸಂಘದ ಚಳವಳಿ ಆರಂಭ ಗೊಂಡಿತ್ತು. ಅದರ ಬ್ಯಾನರ್ ಅಡಿ ಹೋರಾಟಗಳು ನಡೆಯುತ್ತಿದ್ದವು.
ನಕ್ಸಲ್ ಹಾದಿ
ವಿಮೋಚನ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ನಮ್ಮ ಇಬ್ಬರು ಮಾವಂದಿರನ್ನು ಜೈಲಿಗೆ ಹಾಕಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾವ ಕಾಳು ಗೌಡ ಮನೆ ಬಿಟ್ಟು ಹೋದವರು ಎಲ್ಲಿದ್ದಾರೆ ಎನ್ನುವುದು ಇಂದಿಗೂ ತಿಳಿದಿಲ್ಲ. ಮಾವನ ಮಗನನ್ನು ಕೂಡ ಜೈಲಿಗೆ ಹಾಕಿದ್ದರು. ನನ್ನ ಗಂಡನನ್ನು ಕೂಡ ನಾಲ್ಕು ತಿಂಗಳು ಜೈಲಿನಲ್ಲಿರಿಸಿದ್ದರು ಎಂದು ಸುಗುಣಾ ಅಂದಿನ ದಿನಗಳನ್ನು ನೆನಪಿಸಿಕೊಂಡರು.
ಕಾಡಿನ ದಾರಿ ಹಿಡಿದುದು ಹೇಗೆ?
ತಮ್ಮ ವಿಕ್ರಂ ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದ. ಒಮ್ಮೆ ಅರಣ್ಯಾಧಿಕಾರಿಗಳು ಅವನನ್ನು ವಿಚಾರಣೆಗೆ ಒಳಪಡಿಸಿದ್ದರು. ಮತ್ತೆ ಆತ ಮನೆಗೆ ಬರುವುದನ್ನೇ ಕಡಿಮೆ ಮಾಡಿ ಬಿಟ್ಟ. ಹೀಗೆ ಮನೆಗೆ ಬಾರದೆ ಇದ್ದವನು ಕಾಡು ದಾರಿಯನ್ನು ಹೇಗೆ ಹಿಡಿದ ಎಂಬುದೇ ನಮಗೆ ಗೊತ್ತಿಲ್ಲ. ನಾನು ಅವನನ್ನು ಕಾಣದೆ ಸುಮಾರು 21 ವರ್ಷವಾಯಿತು ಎಂದು ಬಾಗಿಲ ಸಂದಿಯಲ್ಲಿ ನಿಂತು ತಮ್ಮನ ನೆನೆದು ಕಣ್ಣೀರು ಸುರಿಸಿದರು.
ಟಿವಿ, ಪೇಪರ್‌ನಲ್ಲಿ ತಿಳಿದುಕೊಳ್ಳುತ್ತಿದ್ದೆವು
ಆತ ನಕ್ಸಲ್ ಯಾಕೆ ಆದನೋ ಎನ್ನುವುದು ನಮಗೆ ಗೊತ್ತಿಲ್ಲ. ನಾವು ಟಿವಿಯಲ್ಲಿ, ಪೇಪರ್‌ನಲ್ಲಿ ಆತನ ಬಗ್ಗೆ ತಿಳಿದುಕೊಳ್ಳುತ್ತಿದ್ದದ್ದು ಬಿಟ್ಟರೆ ಆತ ಮನೆಗೆ ಬಂದದ್ದೇ ಇಲ್ಲ. ಯಾವ ವಿಚಾರವೂ ನಮಗೆ ಗೊತ್ತಿಲ್ಲ. ಯಾಕೆ ಇಷ್ಟೊಂದು ಕಠೊರನಾದ ಎನ್ನುವುದೇ ನಮ್ಮನ್ನು ಈಗಲೂ ಕಾಡುತ್ತಿರುವ ಪ್ರಶ್ನೆಯಾಗಿದೆ ಎಂದು ಆತನ ಕೃತ್ಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಪೊಲೀಸರು ಹುಡುಕಿಕೊಂಡು ಬರುತ್ತಿದ್ದರು
ಮನೆಗೆ ಕೇರಳ, ಚಿಕ್ಕಮಗಳೂರು, ಉಡುಪಿ ಹೀಗೆ ವಿವಿಧ ಜಿಲ್ಲೆಗಳ ಪೊಲೀಸರು ಆತನನ್ನು ಹುಡುಕಿ ಕೊಂಡು ನೋಟಿಸ್ ಹಿಡಿದು ಮನೆಯ ಬಾಗಿಲು ಬಡಿಯುತ್ತಿದ್ದರು. ನಾವು ಮನೆಯಲ್ಲಿ ಆತ ಇಲ್ಲದಿರುವ ಬಗ್ಗೆ ಹೇಳಿದಾಗ ವಾಪಸ್ ಹೋಗುತ್ತಿದ್ದರು ಎಂದರು.
ಅಂತ್ಯಕ್ರಿಯೆಯಲ್ಲಿ ನಾವು ಭಾಗಿಯಾಗುವುದಿಲ್ಲ
ಆತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ನಾವು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ. ನಮ್ಮ ಸೋದರ ಸಂಬಂಧಿಗಳೂ ಹೋಗುವುದಿಲ್ಲ ಎಂದಿದ್ದಾರೆ. ನಮಗೆ ಭಯವಿದೆ. ನಮಗೆ ಯಾವ ರಕ್ಷಣೆಯೂ ಇಲ್ಲ. ತಮ್ಮ ವಿಕ್ರಂ ವಾಸವಿದ್ದ ಮನೆ ಪಾಳು ಬಿದ್ದಿದೆ. ಪಕ್ಕದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದೇವೆ. ಆದರೆ ನಮಗೆ ಮನೆ ನಿರ್ಮಾಣಕ್ಕೆ ಹಣದ ಕೊರತೆಯಿದೆ. ಸಾಕಷ್ಟು ಬಡತನದಿಂದ ಬಳಲುತ್ತಿದ್ದೇವೆ ಎಂದು ಸುಗುಣಾ ಅಳಲನ್ನು ತೋಡಿಕೊಂಡರು.
ಶರಣಾಗತಿಗೆ ಒತ್ತಾಯವಿತ್ತು
ಪೊಲೀಸರು ಆಗಾಗ ಮನೆಗೆ ಬಂದು ವಿಕ್ರಂ ಗೌಡನ ಶರಣಾಗತಿಗೆ ಒತ್ತಾಯಪಡಿಸುತ್ತಿದ್ದರೂ ಆತ ನಮ್ಮ ಸಂಪರ್ಕಕ್ಕೆ ಸಿಗದ ಕಾರಣ ನಾವು ಅಸಹಾಯಕರಾದೆವು. ಆತ ಮುಖ್ಯ ವಾಹಿನಿಗೆ ಬರುತ್ತಿದ್ದರೆ ಇಂದು ಇಂತಹ ಘಟನೆ ಸಂಭವಿಸುತ್ತಿರಲಿಲ್ಲ. -ಸುಗುಣಾ, ವಿಕ್ರಂ ಗೌಡನ ತಂಗಿ
ವಿಕ್ರಂ ನಕ್ಸಲ್ ತಂಡದಲ್ಲಿ ಸೇರಿಕೊಂಡಿದ್ದು ಹೇಗೆ ಎನ್ನುವ ಬಗ್ಗೆ ನಮಗೆ ಗೊತ್ತಿಲ್ಲ. ಆತನ ಕೃತ್ಯದ ಬಗ್ಗೆ ನಾವೇನೂ ಹೇಳುವುದಿಲ್ಲ. ಈಗಾಗಲೇ ತುಂಬಾ ಹಿಂಸೆ, ಕಷ್ಟ ಅನುಭವಿಸಿದ್ದೇವೆ. ಇನ್ನಾದರೂ ನಮ್ಮ ಕಷ್ಟಗಳಿಗೆ ಮುಕ್ತಿ ಸಿಕ್ಕಿ ನೆಮ್ಮದಿ ಸಿಗುವಂತಾಗಲಿ. –ಪ್ರವೀಣ (ವಿಕ್ರಮ ಗೌಡನ ಸಂಬಂಧಿ)
ವಿಕ್ರಂ ಗೌಡನನ್ನು 13 ವರ್ಷಗಳ ಹಿಂದೆ ಕಂಡಿದ್ದೆ. ಆತ ನಮ್ಮ ಮುಂದೆ ಒಳ್ಳೆಯ ವ್ಯಕ್ತಿಯಾಗಿ ಕಾಣುತ್ತಿದ್ದ. ಆದರೆ ಆತನ ಇತರ ಕೃತ್ಯಗಳ ಬಗ್ಗೆ ನಮಗೆ ಅರಿವಿಲ್ಲ. ಆತ ಮನೆಗೆ ಬರುವುದನ್ನೂ ಕಂಡಿಲ್ಲ. -ಗಿರಿಜಾ ಶೆಟ್ಟಿ (ಪರಿಸರದ ನಿವಾಸಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.