NDA Government: ಮೋದಿ ಸರಕಾರಕ್ಕೆ ಲ್ಯಾಟರಲ್ ಇಕ್ಕಟ್ಟು!
ಮೋದಿ 3.0 ಅವಧಿಯ ಬಲು ದೊಡ್ಡ ನಿರ್ಣಯಕ್ಕೆ ಆಕ್ರೋಶ ವಿಪಕ್ಷ ವಿರೋಧ, ಮಿತ್ರ ಪಕ್ಷಗಳ ಆಕ್ಷೇಪಕ್ಕೆ ಲ್ಯಾಟರಲ್ ಎಂಟ್ರಿಗೆ ಕೊಕ್
Team Udayavani, Aug 21, 2024, 7:17 AM IST
ಕೇಂದ್ರೀಯ ಲೋಕಸೇವಾ ಆಯೋಗ ಶನಿವಾರ ವಿವಿಧ ಸಚಿವಾಲಯಗಳ 45 ಹುದ್ದೆಗಳಿಗೆ ಪರಿಣತರನ್ನು ನೇರವಾಗಿ ನೇಮಕ (ಲ್ಯಾಟರಲ್ ಎಂಟ್ರಿ) ಮಾಡುವ ಬಗ್ಗೆ ತೀರ್ಮಾನಿಸಿ, ಅರ್ಜಿಗಳನ್ನೂ ಆಹ್ವಾನಿಸಿತ್ತು. ಆದರೆ ಎನ್‌ಡಿಎ ಮಿತ್ರ ಪಕ್ಷಗಳು ಮತ್ತು ವಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮೋದಿ ಸರಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಹಾಗಿದ್ದರೆ ಏನಿದು ಲ್ಯಾಟರಲ್ ಎಂಟ್ರಿ, ಯಾಕೆ ವಿರೋಧ, ಮೀಸಲಾತಿ ನಷ್ಟವೇ ಇತ್ಯಾದಿ ಮಾಹಿತಿ ಇಲ್ಲಿದೆ.
ಏನಿದು ಲ್ಯಾಟರಲ್ ವ್ಯವಸ್ಥೆ?
ಬಹು ಸ್ಪಷ್ಟವಾಗಿ ಹೇಳಬೇಕೆಂದರೆ ಇದು ನೇರ ನೇಮಕ ವ್ಯವಸ್ಥೆ. ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ, ಜಂಟಿ ನಿರ್ದೇಶಕ, ಡೆಪ್ಯುಟಿ ಸೆಕ್ರೆಟರಿ, ಹೆಚ್ಚುವರಿ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಸಾಮಾನ್ಯವಾಗಿ ಗ್ರೂಪ್ ಎ ಹಂತದ ಹುದ್ದೆಗಳನ್ನು ಐಎಎಸ್ ಅಧಿಕಾರಿಗಳೇ ಹೊಂದಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಾಗರಿಕ ವಿಮಾನಯಾನ, ಕೃಷಿ ಮತ್ತು ರೈತರ ಕಲ್ಯಾಣ ಸೇರಿದಂತೆ ಆಯ್ದ ಸಚಿ ವಾಲಯಗಳಲ್ಲಿನ ಹುದ್ದೆಗಳನ್ನು ಐಎಎಸ್ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಕೇಂದ್ರ ಸರಕಾರದ ಹೊಸ ವ್ಯವಸ್ಥೆಯನ್ನು ಈ ಹುದ್ದೆಗಳಿಗೆ ಐಎಎಸ್ ಹೊರತಾಗಿರುವ ಅಧಿಕಾರಿಗಳನ್ನು ಆಯಾ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಹೊಂದಿರುವವನ್ನು ನೇರವಾಗಿ, ನಿಗದಿತ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅದನ್ನೇ “ಲ್ಯಾಟರಲ್ ಎಂಟ್ರಿ’ ಎಂದು ಕರೆಯಲಾಗುತ್ತದೆ.
2017ರಲ್ಲಿ ಲ್ಯಾಟರಲ್ ಶುರು
ಮೋದಿ ಸರಕಾರ ಪುನಾರಚಿಸಿದ್ದ ನೀತಿ ಆಯೋಗ 2017 ರಲ್ಲಿ ಮಧ್ಯಮ ಮತ್ತು ಮೇಲ್ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಪರಿಣತರನ್ನು ನೇಮಿಸಿಕೊಳ್ಳಬೇಕು ಎಂದು ಸಲಹೆ ಮಾಡಿತ್ತು. ಅವರು ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿ ದವರು, ರಾಜ್ಯ ಅಥವಾ ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಇದ್ದವರನ್ನು ನೇಮಕ ಮಾಡುವುದು ಅದರ ಉದ್ದೇಶ. ಆರಂಭದಲ್ಲಿ 3 ವರ್ಷಗಳ ಅವಧಿಯಲ್ಲಿ ನೇಮಕ ಮಾಡಿಕೊಂಡರೂ, ಅಗತ್ಯಕ್ಕೆ ಅನುಸಾರವಾಗಿ ಅವರ ಸೇವೆಯನ್ನು 5 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ಇದೆ.
2018ರಲ್ಲಿ ಮೊದಲ ನೇಮಕ
ನರೇಂದ್ರ ಮೋದಿ ನೇತೃತ್ವದ ಸರಕಾರ 2018ರಲ್ಲಿ ಮೊದಲ ಬಾರಿಗೆ ಜಂಟಿ ಕಾರ್ಯದರ್ಶಿ ಹುದ್ದೆ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಕ್ಕೆ ತೀರ್ಮಾನಿಸಿತ್ತು. ಬಳಿಕ ನಿರ್ದೇಶಕ, ಡೆಪ್ಯುಟಿ ಸೆಕ್ರೆಟರಿ ಹುದ್ದೆಗಳಿಗೆ ನೇರ ನೇಮಕ ಮಾಡುವುದನ್ನು ಅನಂತರದ ಹಂತಗಳಲ್ಲಿ ಕೈಗೊಳ್ಳಲಾಗಿತ್ತು. ಆಯಾ ಇಲಾಖೆಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಅನಂತರದ ಪ್ರಭಾವಿ ಹುದ್ದೆ ಎಂದರೆ ಜಂಟಿ ಕಾರ್ಯದರ್ಶಿ.
ಅವರ ಕೆಳ ಹಂತದಲ್ಲಿ ನಿರ್ದೇಶಕ, ನಿರ್ದೇಶಕ ಹುದ್ದೆಯಿಂದ ಕೆಳಹಂತದಲ್ಲಿ ಡೆಪ್ಯುಟಿ ಸೆಕ್ರೆಟರಿ ಇರುತ್ತಾರೆ. ಈ ಎರಡು ಹುದ್ದೆಗಳು ಮಧ್ಯಮ ಹಂತದ ಹುದ್ದೆಗಳು. ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಮೇಲ್ಮಟ್ಟದ ಹುದ್ದೆಗಳು ನಿರ್ಧಾರಗಳನ್ನು ಕೈಗೊಳ್ಳುವ ಮಟ್ಟದಲ್ಲಿ ಇರುತ್ತಾರೆ. ನೀತಿ ನಿರೂಪಣೆ ಮಾಡುವ ಉನ್ನತ ಮಟ್ಟದಲ್ಲಿ ತಜ್ಞರು ಇರಬೇಕು ಎಂದು ಸರಕಾರ ಬಯಸಿತ್ತು.
ತಜ್ಞರ ಸೇವೆ ಪಡೆಯುವ ಗುರಿ
ಕೇಂದ್ರ ಸರಕಾರವು ಲ್ಯಾಟರಲ್ ಎಂಟ್ರಿ ನೇಮಕ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವಾಗ, ಐಎಎಸ್ ಅಧಿಕಾರಿಗಳು ಸಚಿವಾಲಯಗಳಲ್ಲಿನ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸುವುದು ಹೌದಾದರೂ ತಜ್ಞತೆಯ ಲಾಭ ದೊರೆಯುವುದಿಲ್ಲ ಎಂದು ಹೇಳಿಕೊಂಡಿತ್ತು. ಬದಲಾ ಗಿರುವ ಕಾಲಗತಿಯಲ್ಲಿ ಆರೋಗ್ಯ, ಸಾರಿಗೆ, ವಿಮಾನಯಾನ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾಗಿರುವ ಮತ್ತು ನೇರವಾಗಿ ತಟ್ಟುವ ವಿಭಾಗಗಳಲ್ಲಿನ ನಿರ್ಣಯಗಳು ಅವರಿಗೆ ಅನುಕೂಲಕರವಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಆಯಾ ಕ್ಷೇತ್ರದ ಪರಿಣತರನ್ನೇ ನೇಮಿಸಿ ಉತ್ತಮ ಆಡಳಿತ ನೀಡುವುದು ಸರಕಾರದ ಉದ್ದೇಶ ಎನ್ನುವುದು ಸರಕಾರದ ವಾದವಾಗಿತ್ತು.
ವೀರಪ್ಪ ಮೊಲಿ ಆಯೋಗದ ಶಿಫಾರಸು
ಕೆಲವು ಹುದ್ದೆಗಳಿಗೆ ಪರಿಣತರ ನೇಮಕಕ್ಕೆ ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಲಿ ನೇತೃತ್ವದ 2ನೇ ಆಡಳಿತ ಸುಧಾರಣ ಆಯೋಗ ಶಿಫಾರಸು ಮಾಡಿತ್ತು. ಖಾಸಗಿ, ಶೈಕ್ಷಣಿಕ ವಲಯ, ಸರಕಾರಿ ಸ್ವಾಮ್ಯದ ಕಂಪೆನಿಗಳಿಂದ ತಜ್ಞರನ್ನು ಅಲ್ಪಾವಧಿಗೆ ಅಥವಾ ನಿಗದಿತ ಅವಧಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳಬಹುದು. ಆಯ್ಕೆಯಲ್ಲಿ ಪಾರದರ್ಶಕತೆ ಜತೆಗೆ ಪ್ರತಿಭೆಯೇ ಪ್ರಮುಖವಾಗಿ ಇರಬೇಕು. ಜನಪರ ಮತ್ತು ಜನಸ್ನೇಹಿ ಆಡಳಿತಕ್ಕೆ ಇಂಥ ತೀರ್ಮಾನ ಅಗತ್ಯ ಎಂದು ಆಯೋಗ ಹೇಳಿತ್ತು.
ಲ್ಯಾಟರಲ್ ಎಂಟ್ರಿ ನೇಮಕ ಪ್ರಕ್ರಿಯೆ ಹೇಗೆ?
ಕೇಂದ್ರ ಸರಕಾರ ಯಾವ ಇಲಾಖೆಗೆ ನೇಮಕ ಮಾಡಬಹುದು ಎಂದು ತೀರ್ಮಾನ ಮಾಡಿದಂತೆ ಮತ್ತು ನಿಗದಿ ಮಾಡಲಾಗಿರುವ ಸಂಖ್ಯೆಗೆ ಅನುಗುಣವಾಗಿ ಪರಿಣತರನ್ನು ನೇಮಿಸಬಹುದು. ಅವರನ್ನು ಯುಪಿಎಸ್‌ಸಿ ಮೂಲಕವೇ ಮಾಡಲಾಗುತ್ತದೆ. 2018ರಿಂದ ಇದುವರೆಗೆ 63 ಮಂದಿಯನ್ನು ನೇಮಿಸಲಾಗಿದೆ. ಈ ಪೈಕಿ 35 ಮಂದಿ ಖಾಸಗಿ ವಲಯದಿಂದಲೇ ಇದ್ದಾರೆ. 2019ರಲ್ಲಿ 8 ಮಂದಿ ಜಂಟಿ ಕಾರ್ಯದರ್ಶಿಗಳು, 2022ರಲ್ಲಿ 3 ಜಂಟಿ ಕಾರ್ಯದರ್ಶಿಗಳು, 27 ನಿರ್ದೇಶಕರನ್ನು ನೇಮಿಸಲಾಗಿತ್ತು.
ವಿದೇಶಗಳಲ್ಲೂ ಲ್ಯಾಟರಲ್ ವ್ಯವಸ್ಥೆ
ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಬೆಲ್ಜಿಯಂ ಸೇರಿದಂತೆ ಹಲವು ದೇಶಗಳ ಸರಕಾರಿ ವ್ಯವಸ್ಥೆಯಲ್ಲಿ ಮಧ್ಯಮ ಹಂತದಿಂದ ಉನ್ನತ ಮಟ್ಟದ ವರೆಗಿನ ಸರಕಾರಿ ಅಧಿಕಾರಿಗಳ ವರ್ಗದಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ವ್ಯವಸ್ಥೆ ಇದೆ. ಅಮೆರಿಕದಲ್ಲಿ ಆಧಿಕಾರದಲ್ಲಿ ಇರುವ ರಾಜಕೀಯ ಪಕ್ಷದ ನಾಯಕರ ನಿಕಟವರ್ತಿಗಳನ್ನು ಆಯ್ದ ಸರಕಾರಿ ಹುದ್ದೆಗೆ ನೇಮಿಸಲಾಗುತ್ತದೆ. ಯು.ಕೆ.ಯಲ್ಲಿ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಆಯಾ ವ್ಯಕ್ತಿ ಮತ್ತು ಆತನ ಪರಿಣತಿಯ ಕ್ಷೇತ್ರದಲ್ಲಿನ ಅನುಭವ ನೋಡಿಕೊಂಡು ಪರಿಗಣಿಸಲಾಗುತ್ತದೆ.
ಮೀಸಲಾತಿಗೆ ಧಕ್ಕೆಯಾಗಲ್ಲ: ಕೇಂದ್ರ
ಕೇಂದ್ರ ಸಚಿವ ಜಿತೇಂದ್ರ ಸಿಂಗ್ 2019ರಲ್ಲಿ ರಾಜ್ಯಸಭೆಗೆ ನೀಡಿದ್ದ ಮಾಹಿತಿ ಪ್ರಕಾರ ಲ್ಯಾಟರಲ್ ಎಂಟ್ರಿ ಎನ್ನುವುದು ಕೇಂದ್ರದ ಒಟ್ಟು ನೌಕರರ ವ್ಯಾಪ್ತಿಯಲ್ಲಿ ಸಣ್ಣ ಅಂಶ ಮಾತ್ರ. ಪ್ರತಿ ಸಚಿವಾಲಯದಲ್ಲಿ ಇರುವ ಒಂದೊಂದು ಹುದ್ದೆಗೆ ಮಾತ್ರ ನೇಮಕ. ಜತೆಗೆ ನೇಮಕ ಮಾಡಿಕೊಂಡವರ ಕೆಲಸದ ಅವಧಿ 5 ವರ್ಷಗಳ ವರೆಗೆ ಮಾತ್ರ. ಹೀಗಾಗಿ ಮೀಸಲು ನಷ್ಟವಾಗುವುದಿಲ್ಲ ಎಂದಿದ್ದರು.
ಮೀಸಲಾತಿ ಕಿತ್ತುಕೊಳ್ಳುವ ಆರೋಪ
ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಎಲ್‌ಜೆಪಿ, ಟಿಡಿಪಿ ಸೇರಿ ಪ್ರಮುಖ ಪಕ್ಷಗಳು ಲ್ಯಾಟರಲ್ ಎಂಟ್ರಿ ವ್ಯವಸ್ಥೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಮೀಸಲಾತಿ ನೀಡಿಲ್ಲ. ಕೇಂದ್ರದ ಈ ವ್ಯವಸ್ಥೆ ಮೀಸಲು ವ್ಯವಸ್ಥೆ ಕಿತ್ತುಕೊಳ್ಳುವುದೇ ಆಗಿದೆ ಎಂದು ವಾದಿಸಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ವರ್ಗಕ್ಕೆ ಉದ್ಯೋಗ ಸಿಗಬಾರದು ಎಂದೇ ನೇರ ನೇಮಕ ಕ್ರಮ ಕೈಗೊಂಡಿದೆ ವಿಪಕ್ಷಗಳು ಎಂದು ಆರೋಪಿಸಿವೆ.
– ಸದಾಶಿವ .ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.