ಗೊಂದಲದ ಗೂಡಾದ ನೀಟ್
Team Udayavani, May 6, 2019, 3:10 AM IST
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯ ಕೇಂದ್ರ ಬದಲಾಗಿರುವ ಮಾಹಿತಿ ಸೂಕ್ತ ಸಮಯದಲ್ಲಿ ತಲುಪದೇ ಇರುವುದರಿಂದ ರಾಜ್ಯದ ನೂರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಲಾಗಿತ್ತು. ಬದಲಾದ ಕೇಂದ್ರದ ಬಗ್ಗೆ ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕ, ಪೋಷಕರಿಗೆ ಮಾಹಿತಿ ಸಿಗದೇ ಇರುವುದರಿಂದ ಭಾನುವಾರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಗೋಳಾಡುವಂತಾಗಿದೆ.
ವೈದ್ಯಕೀಯ ಪದವಿ ಕೋರ್ಸ್‌ಗಳ ಸೀಟು ಹಂಚಿಕೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ನೀಟ್ ನಡೆಸುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಸೀಟಿಗಾಗಿ 13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳೂ ಸೇರಿದ್ದರು.
ಪರೀಕ್ಷಾ ಕೇಂದ್ರ ಬದಲಾಗಿದ್ದರಿಂದ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಪ್ರವೇಶ ನೀಡದಿದ್ದರಿಂದ ಪಾಲಕ, ಪೋಷಕರು ಮತ್ತು ವಿದ್ಯಾರ್ಥಿಗಳು ಕೇಂದ್ರದ ಮುಂಭಾಗದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
ಮರು ಪರೀಕ್ಷೆ ಆಗ್ರಹ: “ಪರೀಕ್ಷಾ ಕೇಂದ್ರದ ಬದಲಾವಣೆ ಕುರಿತು ನಮಗೆ ಮಾಹಿತಿ ತಲುಪಿಲ್ಲ. ಯಲಹಂಕ ಕೇಂದ್ರದಿಂದ ಕೂಡ್ಲು ಗೇಟ್ ಬಳಿಯ ದಯಾನಂದ ಸಾಗರ ವಿಶ್ವವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಬರುವ ವೇಳೆಗೆ ಮಧ್ಯಾಹ್ನ 3 ಗಂಟೆಯಾಗಿತ್ತು.
ಕೊನೆಗಳಿಗೆಯಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆಯಿಂದ ತೊಂದರೆಯಾಗಿದೆ. ಹೀಗಾಗಿ ನೀಟ್ ಪರೀಕ್ಷೆಯನ್ನು ಮತ್ತೂಮ್ಮೆ ನಡೆಸಬೇಕು’ ಎಂದು ನೊಂದ ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷಾ ಕೇಂದ್ರದ ಎದುರು ಆಗ್ರಹಿಸಿದರು.
ಆಕ್ರೋಶಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ಮಾನವಸಂಪನ್ಮೂಲಾಭಿವೃದ್ಧಿ ಇಲಾಖೆ ಹಾಗೂ ಪ್ರಧಾನಿ ಮೋದಿಯವರಿಗೆ ನೇರವಾಗಿ ಟ್ವೀಟ್ ಮಾಡಿ, ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದಾರೆ.
ಸಿಎಂ ಟ್ವೀಟ್: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ಹಂಪಿ ಎಕ್ಸ್‌ಪ್ರೆಸ್ ರೈಲು ವಿಳಂಬವಾಗಿದ್ದರಿಂದ ಉತ್ತರ ಕರ್ನಾಟಕ ಭಾಗದ ಅನೇಕ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.
ಪರೀಕ್ಷಾ ಕೇಂದ್ರ ಬದಲಾಗಿರುವ ಬಗ್ಗೆ ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿದ್ದರಿಂದಲೂ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಾಧ್ಯವಾಗಿಲ್ಲ. ಹೀಗಾಗಿ ವೈದ್ಯಕೀಯ ಸೀಟು ಪಡೆಯಲು ನೀಟ್ ಬರೆಯಬೇಕೆಂದಿದ್ದು, ವಂಚಿತರಾದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ ಕಲ್ಪಿಸಿಕೊಡುವಂತೆ ಪ್ರಧಾನಿ ಮೋದಿಯವರಿಗೆ ಟ್ವೀಟ್ ಮೂಲಕ ಕೋರಿಕೊಂಡಿದ್ದಾರೆ.
ಇ-ಮೇಲ್ ಮೂಲಕ ಮಾಹಿತಿ ಸರಿಯಲ್ಲ: ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಇರುತ್ತದೆ. ಪರೀಕ್ಷಾ ಕೇಂದ್ರ ಬದಲಾಗಿರುವ ಬಗ್ಗೆ ಮೇಲ್ ಮೂಲಕ ಮಾಹಿತಿ ನೀಡಲಾಗಿದೆ. ಇ-ಮೇಲ್ ಸಂದೇಶ ನೋಡಿರುವ ವಿದ್ಯಾರ್ಥಿಗಳು ಬದಲಾದ ಕೇಂದ್ರಕ್ಕೆ ಬಂದಿರಬಹುದು.
ಆದರೆ, ಪರೀಕ್ಷಾ ಸಂದರ್ಭದಲ್ಲಿ ಮೊಬೈಲ್ ಬಳಸದ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗಿದೆ. ಎನ್‌ಟಿಎ ನೊಂದ ವಿದ್ಯಾರ್ಥಿಗಳಿಗೆ ಪುನರ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡುವ ಬದಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರೆ ಎಷ್ಟೋ ಅನುಕೂಲ ಆಗುತ್ತಿತ್ತು ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಜೀವಶಾಸ್ತ್ರ ಸುಲಭವಿತ್ತು: ಇನ್ನು ಪರೀಕ್ಷೆ ಬರೆದ ಬಹುತೇಕ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಪರೀಕ್ಷೆ ಕಠಿಣವಾಗಿದ್ದು, ರಸಾಯನಶಾಸ್ತ್ರ ಹಾಗೂ ಜೀವ ವಿಜ್ಞಾನ ಪರೀಕ್ಷೆಗಳು ಸುಲಭವಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲೂ ಅಷ್ಟೇನೂ ಗೊಂದಲ ಇರಲಿಲ್ಲ. ಜೀವ ವಿಜ್ಞಾನ ತುಂಬ ಸುಲಭವಿತ್ತು. ಪಿಯುಸಿ ಮತ್ತು ಸಿಬಿಎಸಿಇ ಪಠ್ಯದಲ್ಲಿನ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಗಿ ತಪಾಸಣೆ: ನೀಟ್ ಬರೆಯಲು ಬಂದಿದ್ದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ಅತಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದು, ಎನ್‌ಟಿಎ ಸೂಚಿಸಿದ್ದ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಕೊಠಡಿಯ ಒಳಗೆ ಕೊಂಡೊಯ್ಯಲು ಬಿಟ್ಟಿಲ್ಲ. ಹಾಗೆಯೇ ವಾಚ್, ಫ್ಯಾನ್ಸಿ ಆಭರಣ ಇತ್ಯಾದಿಗಳನ್ನು ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿಗಳಿಂದ ಅದನ್ನು ವಾಪಸ್ ಪಡೆದು, ನಂತರ ಕೊಠಡಿಯೊಳಗೆ ಬಿಡಲಾಯಿತು. ಎನ್‌ಟಿಎ ಸೂಚಿಸಿದ್ದ ಸಮಯಕ್ಕಿಂತ ಹತ್ತು ನಿಮಿಷ ತಡವಾಗಿ ಬಂದವರನ್ನು ಕೆಲವು ಕೇಂದ್ರದಲ್ಲಿ ಒಳಗೆ ಬಿಟ್ಟಿಲ್ಲ.
ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ: ರೈಲು ವಿಳಂಬವಾಗಿರುವುದು ಮತ್ತು ಪರೀಕ್ಷಾ ಕೇಂದ್ರವ ಬದಲಾದ ಮಾಹಿತಿ ಸರಿಯಾದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೀಡದೇ ಇರುವುದರಿಂದ ನೂರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.
ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಮೇಲೆ ಒತ್ತಡ ಹೇರಿ, ವಿದ್ಯಾರ್ಥಿಗಳಿಗೆ ಬೆಂಗಳೂರು ಕೇಂದ್ರದಲ್ಲಿ ಮತ್ತೂಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಆಗ್ರಹಿಸಿದೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಸಿರುವ ಎಬಿವಿಪಿ ಕಾರ್ಯಕರ್ತರು ಅನ್ಯಾಯವಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.