ಹೊಸ ಪರೀಕ್ಷಾ ಪದ್ಧತಿಗೆ ಒಗ್ಗಿಕೊಂಡಾರೇ ವಿದ್ಯಾರ್ಥಿಗಳು?
Team Udayavani, Jun 6, 2021, 6:30 AM IST
ಎಲ್ಲ ಅನುಮಾನಗಳಿಗೆ ತೆರೆಬಿದ್ದಿದೆ. ಎಸೆಸೆಲ್ಸಿ ಪರೀಕ್ಷೆ ನಡೆಯ ಬಹುದೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೋವಿಡ್ 19 ಮಹಾ ಮಾರಿಯ ತೆಕ್ಕೆಯಲ್ಲಿ ಬಂಧಿಸಲ್ಪಟ್ಟು ಒದ್ದಾಟ ನಡೆಸುತ್ತಿದ್ದರೂ ಪರೀ ಕ್ಷೆಯ ಸಿದ್ಧತೆ ಭರದಿಂದ ಆರಂಭಗೊಂಡಿದೆ. ಜುಲೈ ಮೂರನೇ ವಾರ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮಹೂರ್ತ ನಿಗದಿಪಡಿಸಿದೆ.
2020ರಲ್ಲಿ ಇದೇ ರೀತಿಯ ಪರಿಸ್ಥಿತಿ. ದಿಢೀರನೆ ವಕ್ಕರಿಸಿಕೊಂಡು ವ್ಯಾಪಿಸಿದ ಕೋವಿಡ್-19 ಅಂತಿಮ ಪರೀಕ್ಷೆಯ ಸಿದ್ಧತೆಯಲ್ಲಿದ್ದ ವಿದ್ಯಾರ್ಥಿಗಳನ್ನು ತಬ್ಬಿಬ್ಟಾಗಿಸಿತ್ತು. ಇನ್ನೇನು ಒಂದು ವಾರದಲ್ಲಿ ನಡೆಯಬೇಕಿದ್ದ ಪರೀಕ್ಷೆ ತಿಂಗಳುಗಳು ಕಳೆದರೂ ಅನಿಶ್ಚಿತತೆ ಯಿಂದಲೇ ಕೂಡಿತ್ತು. ಬಹುತೇಕ ಪರೀಕ್ಷೆ ನಡೆ ಯುವುದಿಲ್ಲವೆಂದೇ ನಂಬಲಾಗಿತ್ತು. ಆದರೆ ರಾಜ್ಯ ಸರಕಾರ ಎಸೆಸೆಲ್ಸಿ ಪರೀಕ್ಷೆ ಯಶಸ್ವಿ ಯಾಗಿ ನಡೆಸಿ ದೇಶದಲ್ಲೇ ಮಾದರಿ ಯಾಯಿತು. ಇದೀಗ ಮತ್ತದೇ ಸ್ಥಿತಿ. 2020ರ ಗಟ್ಟಿ ನಿರ್ಧಾರವನ್ನೇ ಈ ಬಾರಿಯೂ ಮಾಡಲಾಗಿದೆ. ಆದರೆ ಈಗಿನ ಪರಿಸ್ಥಿತಿ ತೀರಾನೇ ಭಿನ್ನ. ಅದಕ್ಕಾಗಿಯೇ ಕಳೆದ ಸಾಲಿನಲ್ಲಿ ಪರೀಕ್ಷೆ ನಡೆಯಲೇ ಬೇಕೆಂದು ಹಠತೊಟ್ಟಿದ್ದ ಶಿಕ್ಷಣ ತಜ್ಞರಾಗಲಿ, ಪೋಷಕರಾಗಲಿ ಈ ಸಾಲಿನ ಪರೀಕ್ಷೆಯ ಪರವಾಗಿ ಧ್ವನಿಯೆತ್ತಿರಲಿಲ್ಲ.
2020ರ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದೂಟಲ್ಪಟ್ಟುದುದು ಮತ್ತು ಪರೀಕ್ಷಾ ದಿನಗಳಲ್ಲಿ ತಮ್ಮ ಶಿಕ್ಷಕ ರೊಂದಿಗೆ ಮುಖಾಮುಖೀ ಚರ್ಚಿಸುವ ಅವಕಾಶ ಲಭಿಸಿರಲಿಲ್ಲ ಎಂಬ ಕೊರಗು ಮಾತ್ರ ಇತ್ತು. ಉಳಿದಂತೆ ಭೌತಿಕ ತರಗತಿಗಳು ಪೂರ್ಣವಾಗಿದ್ದವು. ಎಲ್ಲ ಪಾಠಗಳು ಹಾಗೂ ಪುನರಾವರ್ತನೆಗಳೂ ಮುಗಿದಿದ್ದವು. ಪೂರ್ವಸಿದ್ಧತಾ ಪರೀಕ್ಷೆಗಳೂ ನಡೆದಿದ್ದವು. ಇಷ್ಟೆಲ್ಲ ತಯಾರಿ ಪೂರ್ಣಗೊಂಡ ಮೇಲೆ ಪರೀಕ್ಷೆ ನಡೆಸಲೇಬೇಕೆಂಬ ಒತ್ತಡ ಸಹಜ.
ಶಿಕ್ಷಣ ಸಚಿವರ ಗಟ್ಟಿ ನಿರ್ಧಾರ: 2021ರ ಪರೀಕ್ಷೆಗೆ ಇರುವ ಪರಿಸ್ಥಿತಿ ತೀರಾನೇ ಭಿನ್ನ. ಕೇವಲ 80 ದಿನಗಳ ಭೌತಿಕ ತರಗತಿ ಮಾತ್ರ ಈ ವಿದ್ಯಾರ್ಥಿಗಳಿಗೆ ಲಭ್ಯವಾಗಿತ್ತು. ಅದೂ ಕೋವಿಡ್-19ರ ಭಯದಿಂದಲೇ ನಡೆದ ತರಗತಿಗಳು. ಕೋವಿಡ್ ಮಾರ್ಗಸೂಚಿ ಗಳನ್ನು ಪಾಲಿಸಿಕೊಂಡು ಅಷ್ಟೂ ದಿನ ತರಗತಿ ನಡೆಸಿದ್ದೂ ಒಂದು ಸಾಹಸವೇ. ವಿದ್ಯಾಗಮ, ಸಂವೇದಾ ಅಥವಾ ಇನ್ಯಾವುದೇ ಪರ್ಯಾಯ ವ್ಯವಸ್ಥೆ ಭೌತಿಕ ತರಗತಿಗೆ ಸರಿಸಮವಾಗದು. ಸುದೀರ್ಘ ಅವಧಿಯಲ್ಲಿ ಶಾಲಾ ಕೊಠಡಿಯಿಂದ ಹೊರಗಿದ್ದು, ಹಿಂದಿನ ತರಗತಿಯಲ್ಲಿ ಅಂತಿಮ ಪರೀಕ್ಷೆಯೂ ಇಲ್ಲದೆ 10ನೇ ತರಗತಿ ಮೆಟ್ಟಿಲು ಹತ್ತಿದ್ದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು.
ಇನ್ನೇನು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿತ್ತು. ಶಿಕ್ಷಕರ ಹಾಗೂ ಇಲಾಖೆಯ ಅವಿರತ ಪ್ರಯತ್ನದಿಂದ ಸಿದ್ಧತೆ ನಡೆಯುತ್ತಿರುವಾಗಲೇ 2ನೇ ಅಲೆ ಇಡೀ ವ್ಯವಸ್ಥೆಯ ಮೇಲೆ ಮತ್ತೂಮ್ಮೆ ತಣ್ಣೀರೆರಚಿತು. 2021ರ ಸ್ಥಿತಿ ಹಿಂದಿನ ಸಾಲಿನಂತೆ ಪರೀಕ್ಷೆ ನಡೆಸುವ ಪರವಾಗಿರಲಿಲ್ಲ. ಆದರೂ ಮತ್ತೂಮ್ಮೆ ಸರಕಾರ ಗಟ್ಟಿ ನಿರ್ಧಾರ ತಾಳಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಆಯ್ಕೆಯ ದೃಷ್ಟಿಯಿಂದ ಎಸೆಸೆಲ್ಸಿ ಪರೀಕ್ಷೆ ಅನಿವಾರ್ಯ ಎಂಬುದು ಸರಕಾರದ ನಿಲುವು.
ಬದಲಾದ ಪರೀಕ್ಷಾ ಪದ್ಧತಿ: ಇಲ್ಲಿ ಯೋಚಿಸಬೇಕಿರುವುದು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಪ್ರಕ್ರಿಯೆ ಪ್ರಾಮಾಣಿಕ ವಾಗಿ ಪೂರ್ಣಗೊಂಡಿ ದೆಯೇ?, ಒಂದು ವೇಳೆ ಅದು ಪೂರ್ಣ ಗೊಂಡಿಲ್ಲವಾಗಿದ್ದರೆ ವಿದ್ಯಾರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗದೇ? ಎಂಬುದು. ಇಲ್ಲಿ ಇನ್ನೊಂದು ಮಹತ್ವದ ವಿಷಯ ಎಂದರೆ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಿರುವುದು. ಪರೀಕ್ಷೆ ಕೇವಲ 2 ದಿನಗಳು ಮಾತ್ರ. ಕೋರ್ ವಿಷಯಗಳು ಹಾಗೂ ಭಾಷಾ ವಿಷಯಗಳು ಎಂಬ ಎರಡು ಪ್ರಶ್ನೆ ಪತ್ರಿಕೆಗಳು. ಪ್ರತಿಯೊಂದು ವಿಷಯಕ್ಕೂ 40 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳು. ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಕಾರ ಪರೀಕ್ಷೆ. ಮೇಲ್ನೋಟಕ್ಕೆ ಇದು ಉತ್ತಮ. ಆದರೆ ಇಲ್ಲಿ ಸಂಶಯ ವಿರುವುದು ಪರೀಕ್ಷೆ ನಡೆಸುವ ನಮ್ಮ ಸಾಮರ್ಥ್ಯದ ಬಗ್ಗೆ ಅಲ್ಲ. ಬದಲಾಗಿ ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆಯ ಬಗ್ಗೆ. ಹೊಸ ಪರೀಕ್ಷಾ ಪದ್ಧತಿಗೆ ಅವರಿಗೆ ಸೂಕ್ತ ತರಬೇತಿ ನೀಡಲಾ ಗಿದೆಯೇ? ಹಿಂದಿನ ಪರೀಕ್ಷಾ ಪದ್ಧತಿಗೆ ಸಂಪೂರ್ಣವಾಗಿ ಒಗ್ಗಿಕೊಂಡಿರುವ ವಿದ್ಯಾರ್ಥಿಗಳು ಏಕಾಏಕಿ ಹೊಸ ಪದ್ಧತಿಯಲ್ಲಿ ಯಶಸ್ವಿ ಯಾಗಬಲ್ಲರೇ ಎಂಬುದು. ಇನ್ನು ಕೆಲವು ದಿನಗಳ ತರಬೇತಿ ನೀಡಿದರೂ ಅದು ಎಷ್ಟರ ಮಟ್ಟಿಗೆ ಫಲಕಾರಿ? ಎಂಬುದು ಕೂಡ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಕಾಡುತ್ತಿದೆ.
ಮಕ್ಕಳ ಆರೋಗ್ಯ ಗಮನದಲ್ಲಿರಿಸಿ
ಮಕ್ಕಳಿಗೆ ಪರೀಕ್ಷೆ ನಡೆಸದೆ ಇರುವುದು ಸರಿಯಲ್ಲ. ಪರೀಕ್ಷೆ ಬೇಕು. ಎಲ್ಲ ಶಾಲೆಗಳನ್ನು ಬಳಸಿಕೊಂಡು ಒಂದು ಕೊಠಡಿಯಲ್ಲಿ 7-8 ಮಂದಿಯನ್ನು ಅಂತರದಲ್ಲಿ ಕುಳ್ಳಿರಿಸಿ ಪರೀಕ್ಷೆ ನಡೆಸುವುದು ಸೂಕ್ತ. ಸುರಕ್ಷತ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಬೇಕು. ಪಠ್ಯಗಳ ವಿಷಯವನ್ನು ಪ್ರತ್ಯೇಕಿಸದೆ ಹಿಂದಿನ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು. ಈ ವೇಳೆ ಮಕ್ಕಳ ಭವಿಷ್ಯ ಮತ್ತು ಆರೋಗ್ಯ ಇವೆರಡನ್ನು ಗಮನದಲ್ಲಿರಿಸಿಕೊಳ್ಳುವುದು ಅಗತ್ಯ. ಪುತ್ರಿ ಮಯೂರಿ ಕೂಡ ಪರೀಕ್ಷೆ ಬೇಕು ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾಳೆ.
-ವೀಣಾ ಶೆಟ್ಟಿ ಗೃಹಿಣಿ, ಸಾಣೂರು ಕಾರ್ಕಳ
ಪ್ರಶ್ನೆಪತ್ರಿಕೆ ಸ್ವರೂಪದ್ದೇ ಗೊಂದಲ
ಪರೀಕ್ಷೆ ಬೇಕು. ಮುಂದಿನ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಪರೀಕ್ಷೆ ಇದ್ದರೆ ಹೆಚ್ಚು ಅನುಕೂಲ. ಇಷ್ಟು ಸಮಯ ಪರೀಕ್ಷೆಗಾಗಿ ನಿರಂತರ ಸಿದ್ಧತೆ ನಡೆಸಿದ್ದ ಕಾರಣ ಪರೀಕ್ಷೆ ಬರೆಯುವುದು ನನಗೆ ಇಷ್ಟ. ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾದ ಬಗ್ಗೆ ಗೊಂದಲ ಇದೆ. ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವುದು ಇದುವರೆಗೆ ಇದ್ದ ಮಾದರಿಗಿಂತ ಕಷ್ಟ ಅನಿಸುತ್ತದೆ. ಪರೀಕ್ಷೆಯ ಬಗ್ಗೆ ನನಗೆ ಭಯವಾಗಲೀ ಒತ್ತಡವಾಗಲೀ ಇಲ್ಲ. ಪರೀಕ್ಷೆ ಬರೆಯಲು ಸಿದ್ಧಳಿದ್ದೇನೆ. ಗಣಿತದಲ್ಲಿ ಬಹು ಆಯ್ಕೆ ಹೇಗೆ ಬರಬಹುದು ಎಂಬ ಬಗ್ಗೆ ಕಳವಳ ಇದೆ.
-ಚೇತನಾ ಕೆ., ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಒಂದೊಂದು ಅಂಕಕ್ಕಾಗಿ ಸಿದ್ಧತೆ
6 ಪರೀಕ್ಷೆ ಮಾಡಿದರೂ 2 ನಡೆಸಿದರೂ ಅಡ್ಡಿಯಿಲ್ಲ. ಆದರೆ ಹೊಸ ವಿಧಾನದಲ್ಲಿ ಬಹು ಆಯ್ಕೆ ಪ್ರಶ್ನೆಗಳಿಗೆ ಸಿಗುವ ಒಂದೊಂದು ಅಂಕಗಳಿಗಾಗಿ ಹೆಚ್ಚು ಸಿದ್ಧತೆ ನಡೆಸಬೇಕಾಗುತ್ತದೆ. ನಾವು 3, 5 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿದ್ದು, ಪ್ರಬಂಧ ರಚನೆ, ಕವಿ ಪರಿಚಯ ಇತ್ಯಾದಿ ಕಲಿತಿದ್ದೇವೆ. ಭಾಷಾ ವಿಷಯಗಳಲ್ಲಿ ಒಂದೊಂದು ಅಂಕ ಗಳಿಕೆಗೆ ತಯಾರಾಗುವುದು ಕಷ್ಟ. ಆದರೂ ಸಮಯ ಇರುವ ಕಾರಣ ಕಲಿಯುವ ಭರವಸೆ ಇದೆ.
– ಆರಾಧ್ಯ, ನಾಡ ಗುಡ್ಡೆಯಂಗಡಿ ಆಲೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ
ಸರಕಾರ ಇನ್ನಷ್ಟು ಚಿಂತನೆ ನಡೆಸಲಿ
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಎಸೆಸೆಲ್ಸಿ ಮಹತ್ವದ ಘಟ್ಟವಾಗಿದ್ದು ಈಗ ಭದ್ರ ವಾದ ಬುನಾದಿ ಹಾಕಿಕೊಡಲೇ ಬೇಕಾಗಿದೆ. ಸರಕಾರ ಈಗ ತೆಗೆದುಕೊಂಡಿರುವ ನಿರ್ಧಾರ ಮಕ್ಕಳ ಭವಿಷ್ಯಕ್ಕೆ ಅಷ್ಟೊಂದು ಪ್ರಯೋಜನವಿಲ್ಲ. ಕೋವಿಡ್‌ನಿಂದಾಗಿ ಪಾಠ ಪೂರ್ಣ ಆಗಿಲ್ಲ, ಆನ್‌ಲೈನ್ ಕ್ಲಾಸ್ ಮಾತ್ರ ಆಗಿದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಸರಿಯಾಗಿರಬಹುದು. ಮಕ್ಕಳಂತೂ ಒಟ್ಟಾರೆ ಗೊಂದಲದಲ್ಲಿದ್ದಾರೆ. ಈ ಬಾರಿ ಸರಕಾರ ಇನ್ನೂ ಚಿಂತಿಸಬೇಕು. ಎರಡು ತಿಂಗಳ ಬಳಿಕ ಪರೀಕ್ಷೆ ನಡೆಸಿದರೆ ಹೇಗೆ ಎಂದು ಪರಿಶೀಲಿಸಬೇಕಾಗಿದೆ.
-ಏಕನಾಥ ಮಲ್ಯ, ಮೂಡುಬಿದಿರೆ
ಪರೀಕ್ಷೆ ಇದೆ ಎಂದು ಸಂತಸ
ಎಸೆಸೆಲ್ಸಿ ಪರೀಕ್ಷೆ ಇದೆ ಎಂದು ಸರಕಾರ ಘೋಷಿಸಿರುವುದು ಸಂತಸ ತಂದಿದೆ. ಕೋರ್ ಮತ್ತು ಭಾಷಾ ವಿಷಯ -ಹೀಗೆ ಎರಡೇ ಪರೀಕ್ಷೆ ನಡೆಸಿದರೂ ಚಿಂತೆಯಿಲ್ಲ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಕೆಳಗಿನ ತರಗತಿಗಳಲ್ಲಿ ಇರುವಾಗ ಹಿಂದೊಮ್ಮೆ 2-3 ವಿಷಯಗಳನ್ನು ಸೇರಿಸಿ ಇಂತಹ ಪ್ರಯೋಗ ನಡೆಸಲಾಗಿತ್ತು, ಆಗ ಕಷ್ಟ ಅನ್ನಿಸಿರಲಿಲ್ಲ. ಜತೆಗೆ ಓದುವುದಕ್ಕೆ ಇನ್ನೂ ಸಮಯ ಇರುವುದರಿಂದ ಮಾದರಿಗಳನ್ನು ಸಿದ್ಧಪಡಿಸಿ ಸಿದ್ಧರಾಗಬಹುದು.
– ಶ್ರೀಲಕ್ಷ್ಮೀ ಭಟ್ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ, ಶಂಭೂರು
ಪ್ರತೀ ವಿಷಯಕ್ಕೆ ಪರೀಕ್ಷೆ ಬೇಕಿತ್ತು
ಶಿಕ್ಷಣ ಸಚಿವರು ಹೇಳಿದಂತೆ ಏಕಾಏಕಿ ನಮಗೆ ಬಹುನಿಷ್ಟ ಪ್ರಶ್ನೆಗಳಿಗೆ ಹೊಂದಿ ಕೊಳ್ಳುವುದು ಕಷ್ಟಸಾಧ್ಯವಾಗಬಹುದು. ಕಳೆದ ವರ್ಷ ಪ್ರೌಢಶಿಕ್ಷಣ ಮಂಡಳಿಯವರು ಪರೀಕ್ಷೆ ನಡೆಸಿದ ಅನುಭವದ ಆಧಾರದಲ್ಲಿ ಪ್ರತೀ ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸುತ್ತಿದ್ದರೆ ಆಗ ನಮ್ಮ ಪ್ರಯತ್ನಕ್ಕೆ ಸಹಜ ಪ್ರತಿಫಲ ಸಿಗುತ್ತಿತ್ತು. ಆ ಸಂದರ್ಭದಲ್ಲಿ ಪ್ರತೀ ವಿಷಯದ ಅವಧಿಯನ್ನು ಮತ್ತು ಅಂಕಗಳನ್ನು ಕಡಿಮೆ ಮಾಡಬಹುದಿತ್ತು. ಒಟ್ಟಿನಲ್ಲಿ ಪ್ರಸ್ತುತ ರೀತಿಯಲ್ಲಾದರೂ ಪರೀಕ್ಷೆ ನಡೆಸುವುದು ಸಂತಸವಾಗಿದೆ.
– ಗ್ರೀಷ್ಮಾ ವಿ.ಎಂ., ಕೊಯ್ಯೂರು. ವಾಣಿ ಆಂ. ಮಾ. ಪ್ರೌಢಶಾಲೆ, ಹಳೆಕೋಟೆ ಬೆಳ್ತಂಗಡಿ
ವಿಶೇಷ ಕಾನೂನು ತರಬಹುದಿತ್ತು
ಎಸೆಸೆಲ್ಸಿಗೆ ಕೇವಲ 2 ಸರಳೀಕೃತ ಪರೀಕ್ಷೆ ನಡೆಸುವುದರ ಬದಲು ಪಿಯುಸಿ ಯಂತೆ ರದ್ದು ಪಡಿಸಬಹುದಿತ್ತು ಮತ್ತು ಈ ಬಗ್ಗೆ ಕೇಂದ್ರ ಸರಕಾರ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಶೇಷ ಕಾನೂನು ರೂಪಿಸಬಹುದಿತ್ತು. ಉನ್ನತ ಶಿಕ್ಷಣದ ಹಂತದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಅಂಕಗಳನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಕೇಂದ್ರ ಸರಕಾರ ವಿಶೇಷ ಕಾನೂನು ರೂಪಿಸಿದರೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ತೆರಳುವ ಸಂದರ್ಭ ರಕ್ಷಣೆ ಸಿಕ್ಕಿದಂತಾಗುತ್ತದೆ. ಸರಳೀಕೃತ ಪರೀಕ್ಷೆ ನಡೆಸುವುದರಿಂದ ಸಮಗ್ರವಾಗಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಒರೆಗೆ ಹಚ್ಚಿದಂತೆ ಆಗುವುದಿಲ್ಲ.
– ಪ್ರೊ| ಎ.ಎಂ. ನರಹರಿ, ಶಿಕ್ಷಣ ತಜ್ಞ
ಕೋರ್ ವಿಷಯ ಪರೀಕ್ಷೆ ಪ್ರತ್ಯೇಕಿಸಿ
ಕನ್ನಡ, ಹಿಂದಿ, ಇಂಗ್ಲಿಷ್ ಪರೀಕ್ಷೆ ಒಂದು ದಿನ ನಡೆಸಬಹುದು ಅಥವಾ ಕನ್ನಡ- ಹಿಂದಿಯನ್ನು ಒಂದು ದಿನ ನಡೆಸಿ, ಇಂಗ್ಲಿಷ್ ಪರೀಕ್ಷೆಯನ್ನು ಇನ್ನೊಂದು ದಿನ ಮಾಡಬಹುದು. ಆದರೆ ಕೋರ್ ವಿಷಯಗಳ ಪರೀಕ್ಷೆ ಒಂದೇ ದಿನ ಮಾಡಿದರೆ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಕೋರ್ ವಿಷಯಗಳ ಪರೀಕ್ಷೆಗಳನ್ನು ಮೂರು ದಿನ ಒಂದೂವರೆ ತಾಸು ನಡೆಸಿದರೆ ಉತ್ತಮ. ಆಯಾ ಶಾಲೆಗಳನ್ನು ಕೇಂದ್ರ ಮಾಡಿ ಬೇರೆ ಶಾಲೆಯ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ಮಾಡಿದರೆ ಹೆಚ್ಚು ಪ್ರಾಯೋಗಿಕವಾಗುತ್ತದೆ.
– ಕುದಿ ವಸಂತ ಶೆಟ್ಟಿ , ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.