New Harvest Festival: ಕರಾವಳಿಯಲ್ಲಿ ಕೆಥೋಲಿಕ್ ಕ್ರೈಸ್ತರ ತೆನೆ ಹಬ್ಬ ಮೊಂತಿ ಫೆಸ್ತ್
ನಾಳೆ (ಸೆ.8) ಕನ್ಯಾ ಮರಿಯಮ್ಮ ಜನ್ಮದಿನ; ತೆನೆ ಹಬ್ಬದ ವಿಶೇಷವೇ ಸಸ್ಯಾಹಾರಿ ಭೋಜನ, ಕ್ರೈಸ್ತರ ಮನೆಯಲ್ಲಿ ಕನಿಷ್ಠ 3, 5 ,7 ಬಗೆಯ ಸಸ್ಯಾಹಾರಿ ಖಾದ್ಯಗಳ ತಯಾರಿ
Team Udayavani, Sep 7, 2024, 9:00 AM IST
“ಸಕ್ಕಡ್ ಸಾಂಗಾತಾ ಮೆಳ್ಯಾಂ, ಮರಿಯೆಕ್ ಹೊಗೊಳ್ಶಿಯಾಂ! ಕರಾವಳಿಯ ಕೊಂಕಣಿ ಕೆಥೋಲಿಕರಿಗೆ ರವಿವಾರ ಮೊಂತಿ ಹಬ್ಬ ಅಥವಾ ಮೇರಿ ಮಾತೆಯ ಜನ್ಮದಿನದ ಸಂಭ್ರಮವಾಗಿದೆ. ಪ್ರತೀ ವರ್ಷ ಸೆಪ್ಟಂಬರ್ 8 ರಂದು ಕರಾವಳಿ ಕ್ರೈಸ್ತರು ಆಚರಿಸುವ ಪ್ರಮುಖ ಹಬ್ಬ ಇದಾಗಿದ್ದು ಹೊಸ ಬೆಳೆಯ ಹಬ್ಬವಾಗಿಯೂ ಗುರುತಿಸಲ್ಪಟ್ಟಿದೆ.
ಮೊಂತಿ ಹಬ್ಬಕ್ಕೆ ಮುಂಚಿತವಾಗಿ 9 ದಿನ ಮಾತೆ ಮೇರಿಯ ಕೃಪೆಯನ್ನು ಬೇಡಿಕೊಂಡು ವಿಶೇಷ ಪ್ರಾರ್ಥನೆ(ನವೇನಾ) ಕರಾವಳಿಯ ಎಲ್ಲ ಚರ್ಚ್‌ಗಳಲ್ಲಿ ನಡೆಯುತ್ತದೆ. 9ನೇ ದಿನವನ್ನು ಮೊಂತಿ ಹಬ್ಬವಾಗಿ ಕರಾವಳಿಯ ಕ್ರೈಸ್ತ ಬಂಧುಗಳು ಆಚರಣೆ ಮಾಡುತ್ತಾರೆ. ಹಬ್ಬದ ದಿನದಂದು ಕನ್ಯಾ ಮರಿಯಮ್ಮ ಅವರ ಮೂರ್ತಿಯನ್ನು ಚರ್ಚ್‌ನ ಮುಂಭಾಗದಲ್ಲಿಟ್ಟು ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮರಿಗೆ ಪುಷ್ಪಾರ್ಪಣೆ ಮಾಡಿದ ಅನಂತರ ಚರ್ಚ್‌ಗಳಲ್ಲಿ ಮೊಂತಿ ಹಬ್ಬಕ್ಕಾಗಿ ವಿಶೇಷವಾದ ಪ್ರಾರ್ಥನೆ, ಬಲಿಪೂಜೆಗಳು ನಡೆಯುತ್ತವೆ.
ಈ ವೇಳೆ ಗದ್ದೆಗಳಲ್ಲಿ ಬೆಳೆದ ಹೊಸ ತೆನೆಯನ್ನು ವಾಳೆಯ ಗುರಿಕಾರರು ಗೌರವಪೂರ್ವಕವಾಗಿ ಚರ್ಚ್‌ಗೆ ತಂದು ಧರ್ಮಗುರುಗಳು ಆಶೀರ್ವಚನ ಮಾಡಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಹಬ್ಬದ ಪ್ರಸಾದ ರೂಪದಲ್ಲಿ ಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಮಾಡಿದ ಪುಟಾಣಿ ಮಕ್ಕಳಿಗೆ ಕಬ್ಬು, ಸಿಹಿ ತಿಂಡಿಗಳನ್ನು ನೀಡಲಾಗುತ್ತದೆ.
“ಮೊಂತಿ ಹಬ್ಬ’ದ ಮತ್ತೂಂದು ಪ್ರಮುಖ ಆಚರಣೆಯಲ್ಲಿ ಹೊಸ ಅಕ್ಕಿ ಊಟ ವಿಶೇಷ ಮನ್ನಣೆ ಪಡೆದುಕೊಂಡಿದೆ. ಭತ್ತದ ತೆನೆಗಳನ್ನು ಚರ್ಚ್‌ಗಳಲ್ಲಿ ಪವಿತ್ರೀಕರಿಸಿ ಅನಂತರ ಕ್ರೈಸ್ತ ಸಮುದಾಯದವರಿಗೆ ಹಂಚಲಾಗುತ್ತದೆ. ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಸೇವಿಸುವುದು ಈ ಹಬ್ಬದ ವಿಶೇಷತೆಗಳಲ್ಲಿ ಒಂದಾಗಿದೆ. ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ತೆರಳಿದ ಕುಟುಂಬ ಸದಸ್ಯರೆಲ್ಲರೂ ಈ ಹಬ್ಬದ ಸಂದರ್ಭ ಹಾಜರಿರುವುದು ಕಡ್ಡಾಯ.
ಅನಿವಾರ್ಯ ಕಾರಣಗಳಿಂದಾಗಿ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರುವ ಕುಟುಂಬ ಸದಸ್ಯರಿಗೆ ಅಂಚೆ ಮೂಲಕ ಭತ್ತದ ತೆನೆ ಕಳುಹಿಸಿ ಅವರೂ “ಪ್ರಥಮ ಭೋಜನ’ದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ವಿದೇಶದಲ್ಲಿ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆ ನಿಂತ ಕೆಥೋಲಿಕ್ ಕ್ರೈಸ್ತರು ಅಲ್ಲಿನ ಕ್ರೈಸ್ತ ದೇವಾಲಯಗಳಲ್ಲಿ ಕುಟುಂಬದ ಸದಸ್ಯರಂತೆ ಜತೆಗೂಡಿ ಸಂಭ್ರಮದ ತೆನೆಹಬ್ಬ ಆಚರಿಸಿ ಈ “ಹೊಸ ಅಕ್ಕಿ’ ಊಟ ಮಾಡುವುದು ನಡೆದುಕೊಂಡು ಬಂದಿದೆ. ಈ ಹಬ್ಬ ಒಂದರ್ಥದಲ್ಲಿ ಕುಟುಂಬ ಸದಸ್ಯರ ಏಕತೆಯ ಸಂಕೇತ.
ಈ ಹಬ್ಬದ ಸಮಯದಲ್ಲಿ ಪ್ರಕೃತಿಯು ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳನಳಿಸಿ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವ ವಿವಿಧ ಆಚರಣೆಗಳು ಕರಾವಳಿಯಲ್ಲಿ ನಡೆಯುತ್ತದೆ. ಇದರ ಭಾಗವಾಗಿಯೇ ಕ್ರೈಸ್ತರು ಮೊಂತಿ ಫೆಸ್ತ್ ಅಥವಾ ತೆನೆ ಹಬ್ಬ ಆಚರಿಸುತ್ತಾರೆ.
ಕರಾವಳಿಯ ಕ್ರೈಸ್ತರು ಹೆಚ್ಚಿನವರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡವರು. ಪ್ರಕೃತಿಯಿಂದ ಪಡೆದ ಕೊಡುಗೆಗೆ ಕೃತಜ್ಞತೆಯೊಂದಿಗೆ ಪೂಜೆ ಸಲ್ಲಿಸುವ ಪದ್ಧತಿ ತಲತಲಾಂತರಗಳಿಂದ ನಡೆದು ಬಂದಿದೆ. ಈ ಹಬ್ಬದ ಹುಟ್ಟು ಮತ್ತು ಹಿನ್ನಲೆಯ ಬಗ್ಗೆ ಬೇರೆ ಬೇರೆ ಉಲ್ಲೇಖಗಳು ಕಂಡು ಬರುತ್ತವೆ. ಮಂಗಳೂರು ಹೊರ ಹೊಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳ ಹಿಂದೆ ಮೊಂತಿ ಫೆಸ್ತ್ ಆಚರಣೆ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ.
ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಗುರ ಮಠವೊಂದು ಇಲ್ಲಿ ಸ್ಥಾಪನೆಯಾಯಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಗೋವಾದಿಂದ ಬಂದ ಕೆಥೋಲಿಕ್ ಧರ್ಮಗುರು ಫಾದರ್ ಜೋಕಿಂ ಮಿರಾಂದಾ ಅವರು ಸ್ಥಳೀಯ ಚರ್ಚ್‌ನ ವಾರ್ಷಿಕ ಹಬ್ಬದ ಜತೆಗೆ ಮೇರಿ ಮಾತೆಯ ಜನ್ಮ ದಿನವನ್ನು ಪ್ರಥಮ ಬಾರಿಗೆ ಆಚರಿಸಿದರು ಎನ್ನುವುದು ಪ್ರತೀತಿ. ಮೊಂತೆ ಪದದಿಂದ ಮೊಂತಿ ಬಂತು. ವರ್ಷ ಕಳೆದಂತೆ ಈ ಆಚರಣೆ ಮಂದುವರಿಯುತ್ತಾ ಕ್ರಮೇಣ ಮೊಂತಿ ಫೆಸ್ತ್ ಆಯಿತು ಎನ್ನುವುದು ಹಿರಿಯರ ಅಭಿಪ್ರಾಯ.
ಕರಾವಳಿಯ ಕೆಥೋಲಿಕರು ಎಲ್ಲಿಯೇ ವಾಸಿಸುತ್ತಿದ್ದರೂ, ಅಲ್ಲೆಲ್ಲ ಈ ತೆನೆ ಹಬ್ಬವನ್ನು ಆಚರಿಸುತ್ತಾರೆ. ಚರ್ಚ್‌ನಿಂದ ಹೊಸ ತೆನೆಯೊಂದಿಗೆ ಮನೆಗೆ ತೆರಳಿದ ಬಳಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಬಳಿಕ ಆಶೀರ್ವದಿಸಿದ ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು ಪಾಯಸದಲ್ಲಿ ಹಾಕಿ ಮಿಶ್ರಣ ಮಾಡಿ ಅದನ್ನು ಕುಟುಂಬದ ಹಿರಿಯರೆನಿಸಿದವರು ಎಲ್ಲ ಮನೆ ಮಂದಿಗೆ ಬಡಿಸುತ್ತಾರೆ.
ಭೋಜನದ ವೇಳೆ ಅದನ್ನು ಪ್ರಥಮವಾಗಿ ಸೇವಿಸುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಈ ದಿನ ಊಟ ಮಾಡುತ್ತಾರೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವ ಅಧುನಿಕ ಕಾಲದಲ್ಲಿ ಇಂತಹ ಆಚರಣೆಗಳಿಗೆ ಹೆಚ್ಚಿನ ಅರ್ಥವಿದೆ. ಸಂಬಂಧಗಳನ್ನು ಬೆಸೆದು ಅಥವಾ ಬಲಪಡಿಸಿ ಕುಟುಂಬದ ಹಾಗೂ ಸಮುದಾಯದ ಐಕ್ಯವನ್ನು ಕಾಯ್ದುಕೊಂಡು ಹೋಗುವ ಒಂದು ಪ್ರಯತ್ನ ಈ ಹಬ್ಬದ ಮೂಲಕ ನಡೆಯುತ್ತದೆ.
ತೆನೆ ಹಬ್ಬದ ವಿಶೇಷವೇ ಸಸ್ಯಾಹಾರಿ ಭೋಜನ. ಕ್ರೈಸ್ತರ ಪ್ರತೀ ಮನೆಯಲ್ಲಿ ಕನಿಷ್ಠ 3, 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳನ್ನಾದರೂ ತಯಾರಿಸಲಾಗುತ್ತದೆ. ಅದ ರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆ ಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ಈ ದಿನದಂದು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಈ ಹಬ್ಬದ ಇನ್ನೊಂದು ವೈಶಿಷ್ಟ್ಯ.
ನವ ಸಮಾಜ ಆಧುನಿಕತೆಯತ್ತ ಮುಖ ಮಾಡುತ್ತಿದ್ದರೂ ಕೂಡ ಕರಾವಳಿಯ ಕ್ರೈಸ್ತ ಸಮುದಾಯ ಇಂದಿಗೂ ತನ್ನ ಆಚರಣೆಯನ್ನು ಕೈಬಿಡದೆ ನಡೆಸಿಕೊಂಡು ಬಂದಿರುವುದು ವಿಶೇಷ. ಆಧುನಿಕ ಸಮಾಜದಲ್ಲಿ ಅಂಚೆ ವ್ಯವಸ್ಥೆ ಮೂಲೆಗುಂಪಾಗುತ್ತಿದ್ದರೂ ಕೂಡ ಹಬ್ಬಕ್ಕಾಗಿ ಹೊಸ ತೆನೆಯನ್ನು ಅಂಚೆ ಮೂಲಕ ಪರ ಊರಿನಲ್ಲಿರುವ ತಮ್ಮವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಇಂದಿಗೂ ಉಳಿದಿದೆ. ಈ ಮೂಲಕ ಆಚರಣೆಯಲ್ಲಿ ಬದಲಾವಣೆ ಕಾಣದೆ ತನ್ನತನವನ್ನು ಉಳಿಸಿಕೊಂಡಿದೆ.
-ಮೈಕಲ್ ರೊಡ್ರಿಗಸ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.