New Year 2024: ಹೊಸ ವರ್ಷಕ್ಕೊಂದು ಹೊಸ ಲೆಕ್ಕಾಚಾರ…..
ಹೊಸದಿನಗಳಲ್ಲಿ ಬದುಕು ಹೊಸತನದಿಂದ ತುಂಬಲಿ
Team Udayavani, Dec 31, 2023, 10:00 AM IST
2023ರ ಆದಿಯಲ್ಲಿ ನಮ್ಮ ನಮ್ಮ ಡೈರಿಯಲ್ಲಿ ಬರೆದುಕೊಂಡ ಸಂಗತಿಗಳು, ಲೆಕ್ಕಾಚಾರಗಳು ಎಷ್ಟರಮಟ್ಟಿಗೆ ಪೂರ್ಣಗೊಂಡಿದೆ ಎಂದು ನೋಡುವ ಸಮಯವಿದು. ಅಂದರೆ 2023ರ ಅಂತ್ಯದಲ್ಲಿದ್ದು, ಹೊಸ ವರ್ಷ 2024ಅನ್ನು ಬರಮಾಡಿಕೊಳ್ಳಲ್ಲಿದ್ದೇವೆ. ಬದುಕಿನ ಮತ್ತೂಂದು ವರ್ಷ ಉರುಳಿದೆ, ಆಯಸ್ಸು ಇನ್ನೊಂದು ವರ್ಷ ಹೆಚ್ಚಾಗಿದೆ. ಪ್ರತೀ ವರ್ಷ ಉತ್ತಮ ಬದುಕಿಗಾಗಿ ಹೊಸ ವರ್ಷದ ಪ್ಲ್ರಾನ್‌ಗಳನ್ನು ಮಾಡುತ್ತೇವೆ ಆದರೆ ಅದರಲ್ಲಿ ಸಾಧಿಸುವುದೆಷ್ಟು….ಇದು ನಮಗೆ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.
ಹೊಸವರ್ಷ ಹೊಸ ಸಂಭ್ರಮವನ್ನು, ಹೊಸದಿನಗಳನ್ನು ಹೊತ್ತು ತರುತ್ತದೆ. ಬದುಕಿನ ಇನ್ನೊಂದು ವರ್ಷಕ್ಕೆ ಹೊಸ ಆರಂಭವೂ ದೊರೆಯುತ್ತದೆ. ಈ ವೇಳೆ ನಾವು ತೆಗೆದುಕೊಳ್ಳುವ ಸಂಕಲ್ಪ ದೃಢವಾಗಿರಬೇಕು. ನಾವು ಹಾಕಿಕೊಂಡ ಒಂದಿಷ್ಟು ಲೆಕ್ಕಾಚಾರಗಳು ಮೇಲೆಕೆಳಗಾಗಬಹುದು, ಅದನ್ನು ಸರಿದೂಗಿಸಿಕೊಂಡು ಹೋಗುವ ಕಲೆಯನ್ನು ನಾವು ಕರಗತಮಾಡಿಕೊಳ್ಳಬೇಕು.ಬದುಕು ಹೊಸತನವನ್ನು ಕಾಣಲಿ, ಇನ್ನಷ್ಟು ವಿಜೃಂಭಿಸಲಿ.
ಬದುಕಿನ ಜಂಜಾಟದಲ್ಲಿ ಸಂಬಂಧ, ಪ್ರೀತಿ, ಸಂತೋಷ, ದುಃಖ, ಕೆಲಸದ ಒತ್ತಡಗಳ ನಡುವೆ, ಜೀವನದ ಹಲವು ಲೆಕ್ಕಾಚಾರಗಳ ಜತೆಯಲ್ಲಿ, ಗಂಟೆಗಳು, ದಿನಗಳು, ತಿಂಗಳುಗಳನ್ನು ಕಳೆಯುತ್ತಾ ಮತ್ತೂಂದು ವರುಷ ಉರುಳಿ ಹೋಗಿದ್ದು ಗೊತ್ತಾಗಲೇ ಇಲ್ಲ. 2023ರ ಮೊದಲ ದಿನ ಹೊಸ ವರುಷವನ್ನು ಆಚರಿಸಿದ ಸಂಭ್ರಮದ ನೆನಪಿನ್ನೂ ಹಸಿಹಸಿಯಾಗಿಯೇ ಇದೆ, ಆಗಲೇ ಆ ವರುಷದ ಕೊನೆಯ ದಿನಗಳನ್ನು ಎಣಿಸುತ್ತ ಮುಂಬರುವ ಮಗದೊಂದು ಹೊಸ ವರುಷಕ್ಕೆ ಕಾಲಿಡಲು ಇನ್ನೆಷ್ಟು ದಿನವೆಂದು ಲೆಕ್ಕ ಹಾಕುತ್ತಿದ್ದೇವೆ. ಈ ವರುಷದ ಮೊದಲ ದಿನದಂದು ಮಾಡಿದ ಸಂಕಲ್ಪಗಳಲ್ಲಿ ಹಾಗೂ ತೆಗೆದುಕೊಂಡ ನಿರ್ಣಯಗಳಲ್ಲಿ ಎಷ್ಟನ್ನು ನಾವು ಈಡೇರಿಸಿಕೊಂಡಿದ್ದೇವೆ ಎಂಬ ಲೆಕ್ಕಾಚಾರ ಮಾಡಲು ದಿನಗಳು ಉಳಿದಿರುವುದು ಬೆರಳಣಿಕೆಯಷ್ಟು ಮಾತ್ರ. ಹಳೆಯ ಲೆಕ್ಕ ಚುಕ್ತಾ ಮಾಡಿ, ಕೂಡಿಸಿದೆಷ್ಟು, ಕಳೆದಿದ್ದೆಷ್ಟು, ಹಾಗೆ ಉಳಿಸಿಕೊಂಡ ಬಾಬ್ತು ಎಷ್ಟು ಎಂದು ನೋಡಲಿಕ್ಕೆ ಇನ್ನೇನು ಕೆಲವೇ ದಿನಗಳಿವೆ.
ಒಬ್ಬೊಬ್ಬರದು ಒಂದು ರೀತಿಯ ಲೆಕ್ಕಾಚಾರವಿರುತ್ತದೆ ಅವರವರ ಜೀವನ ಶೈಲಿಯಲ್ಲಿ. ಏನನ್ನೋ ಸಾಧಿಸುವುದ್ದಕ್ಕಾಗಿರಲಿ, ಮನೆ, ವಾಹನ, ಭೂಮಿ ಅಥವಾ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳುವದಿರಲಿ, ಹೀಗೆ ಯಾವುದೇ ವಿಷಯ ತೆಗೆದುಕೊಂಡರೂ ಅವುಗಳನ್ನು ಪಡೆಯುವದಕ್ಕೆ ಒಂದು ಕನಿಷ್ಠ ಲೆಕ್ಕಾಚಾರ ಬೇಕಾಗುತ್ತದೆ. ಕೆಲವರಂತೂ ಸಂಬಂಧಗಳಲ್ಲಿ ಕೂಡ ಲೆಕ್ಕಾಚಾರ ಹಾಕುತ್ತಾರೆ. ಅಂತವರನ್ನು ಹಾಗೂ ಅಂತಹ ಒಂದು ಲೆಕ್ಕಾಚಾರವನ್ನು ಒತ್ತೆಗಿಟ್ಟು ಮುಂದೆ ಸಾಗುವುದು ಕೂಡ ಒಂದು ಲೆಕ್ಕಾಚಾರವೇ ತಾನೇ.
ಹೊಸ ವರುಷದ ಮೊದಲ ದಿನದಂದು ಈ ವರುಷ ಕಳೆಯುವಷ್ಟರಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳುತ್ತೇನೆ, ಕುಡಿಯುವುದನ್ನು ಕಮ್ಮಿ ಮಾಡುತ್ತೇನೆ, ಪ್ರತೀ ದಿನವೂ ವಾಕಿಂಗ್‌ಗೆ ಹೋಗುತ್ತೇನೆ, ಪುಸ್ತಕಗಳನ್ನು ಓದುತ್ತೇನೆ, ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರುತ್ತೇನೆ ಎಂಬ ಇತ್ಯಾದಿ, ಇತ್ಯಾದಿ ಸಂಕಲ್ಪಗಳನ್ನು ಮಾಡಿಕೊಂಡು, ಅವುಗಳನ್ನು ಅಂದುಕೊಂಡಂತೆ ಒಮ್ಮೆಲೇ ನೆರೆವೇರಿಸಲು ಸಾಧ್ಯವಾಗದೆ, ಕನಿಷ್ಠ ಪಕ್ಷ ವಾರಕ್ಕೆರೆಡು ದಿವಸವಾದರೂ ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತಲೋ, ಇವತ್ತಷ್ಟೇ ಹೊಸ ವರುಷ ಶುರುವಾಗಿದೆ, ಹಾಗಾಗಿ ನಾಳೆಯಿಂದ ಖಂಡಿತ ಶುರುಮಾಡುತ್ತೇನೆ ಎಂಬ ಲೆಕ್ಕಾಚಾರ ಹೊಸ ವರುಷದ ಎರಡನೇ ದಿವಸವೇ ಶುರುವಾಗಿರುತ್ತದೆ. ನಾಳೆ, ನಾಡಿದ್ದು ಆರಂಭ ಮಾಡೋಣ ಎಂದು ಲೆಕ್ಕಾಚಾರ ಹಾಕುತ್ತ ಒಂದೆರೆಡು ತಿಂಗಳು ಕಳೆಯುವದರೊಳಗೆ ಮಾಡಿದ ಸಂಕಲ್ಪಗಳು ಕೇವಲ ಕಲ್ಪನೆಯ ರೂಪ ತಾಳಿರುತ್ತದೆ. ಆರಂಭಮಾಡುವ ಅಥವಾ ಮುಂದುವರೆಸುವ ಸಾಧ್ಯತೆಗಳ ಬದಲು, ಅವುಗಳನ್ನು ಮುಂದೆ ಹಾಕುವ ಸಬೂಬುಗಳೇ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿಬಿಟ್ಟಿರುತ್ತದೆ.
ಸಂಭ್ರಮದಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಬಾರದು, ಅನುಕಂಪ ತೋರಿಸುವಾಗ ಭರವಸೆ ನೀಡಬಾರದು ಎಂಬಂತೆ ಹೊಸವರುಷದ ಸಂಭ್ರಮದ ಆಚರಣೆಯ ಅಬ್ಬರದಲ್ಲಿ ಇಂತಹ ಸಂಕಲ್ಪಗಳನ್ನು ಮಾಡುವ ಬದಲು ಅಥವಾ ಇಂದಿನಿಂದ ಆರಂಭ ಮಾಡುತ್ತೇನೆ ಅನ್ನುವ ಬದಲು, ಅಂದುಕೊಂಡಿದ್ದನ್ನು ಮೊದಲು ಆರಂಭ ಮಾಡಿ, ಅನಂತರ ಅವುಗಳನ್ನು ತಪ್ಪದೆ ಮುಂದುವರೆಸುವ ಸಂಕಲ್ಪ ಮಾಡುವುದು ಒಳ್ಳೆಯ ಲೆಕ್ಕಾಚಾರ ಎಂದು ಹೇಳಬಹುದು.
ಏನನ್ನೇ ಸಾಧಿಸಲು ಬಹಳ ಮುಖ್ಯವಾಗಿ ನಮಗೆ ಬೇಕಾಗಿರುವ ಪ್ರಮುಖ ಅಂಶಗಳೆಂದರೆ ಸದೃಢ ಮನಸ್ಸು ಹಾಗೂ ಆರೋಗ್ಯ. ಬದುಕಿನ ಅನೇಕ ಲೆಕ್ಕಾಚಾರಗಳನ್ನು ತಲೆಕೆಳಾಗಿಸುವುದರ ಹಿಂದೆ ಇವೆರೆಡರ ಕೈವಾಡ ಇದ್ದೆ ಇರುತ್ತೆ. ಅನೇಕ ಬಾರಿ ನೀವಂದುಕೊಂಡ ಸಂಕಲ್ಪ ಅದೆಷ್ಟೇ ಗಟ್ಟಿಯಾಗಿದ್ದರೂ ನಿಮ್ಮ ದೇಹದ ಆರೋಗ್ಯ ಕೈಕೊಟ್ಟರೆ, ಸಂಕಲ್ಪಕ್ಕೆ ಎಳ್ಳು ನೀರು ಬಿಟ್ಟಂತೆಯೇ ಲೆಕ್ಕ. ಮನಸ್ಸು ಹಾಗೂ ದೇಹದ ನಿಯಂತ್ರಣ ನಿಮ್ಮದೇ ಕೈಯಲ್ಲಿ ಇದ್ದರೂ, ಅನೇಕ ಬಾರಿ ಅದು ಸೂತ್ರ ಹರಿದ ಗಾಳಿ ಪಟದಂತೆ ಹಾರುತ್ತಿರುತ್ತದೆ. ಮನಸ್ಸನ್ನು ಆಗ್ರಹಿಸದೆ ನೀವೆಷ್ಟೇ ಪ್ರಯತ್ನ ಪಟ್ಟರೂ ದೇಹದ ಆರೋಗ್ಯದ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ಸಂಕಲ್ಪ ನೀರಿನ ಮೇಲಿನ ಗುಳ್ಳೆಯೇ ಸರಿ.
ಜಿಮ್‌ಗಳಲ್ಲಿ ವರುಷದ ಮೊದಲ ವಾರದಲ್ಲಿ ಕಾಣುವ ಜನರ ಸಂಖ್ಯೆ ಕೊನೆಯ ವಾರದಲ್ಲಿ ಅರ್ಧಕ್ಕೆ ಇಳಿದುಬಿಡಲು ಇದೆ ಕಾರಣ. ಅದೆಷ್ಟೋ ಮಂದಿ ಜಿಮ್‌ಗೆ ಸೇರುವ ದಿನ ವರುಷದ ಪೂರ್ತಿ ಶುಲ್ಕ ಕಟ್ಟಿ ಬಿಡುತ್ತಾರೆ. ಕೊನೆ ಪಕ್ಷ ಕಟ್ಟಿರುವ ಶುಲ್ಕಕ್ಕಾದರೂ ಜಿಮ್‌ಗೆ ಹೋಗುವ ಸುಳ್ಳಿನ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಅನಂತರ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವ ಹಾಗೆ ಜಿಮ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಎಷ್ಟು ಬೇಕೋ ಅಷ್ಟು ಸುಳ್ಳಿನ ಸಮಜಾಯಿಷಿಗಳ ಸರಮಾಲೆ ಆರಂಭವಾಗುತ್ತದೆ. ಕೆಲವೇ ತಿಂಗಳುಗಳಲ್ಲಿ ಕಟ್ಟಿದ ಶುಲ್ಕದ ಲೆಕ್ಕಕ್ಕೂ ಕೂಡ ತಮ್ಮದೇ ಆದ ಒಂದು ವಿನಾಯಿತಿ ಕೊಟ್ಟುಕೊಂಡು ಅದರ ಲೆಕ್ಕಾಚಾರ ಮುಗಿಸಿಬಿಡುತ್ತೇವೆ. ಈ ರೀತಿಯ ಸಂಕಲ್ಪಗಳು ಪ್ರತೀ ವರುಷದ ಮೊದಲ ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಅಷ್ಟೇ.
ಸಾಮಾನ್ಯವಾಗಿ ಕೆಲಸದ ಸಂದರ್ಶನದಲ್ಲಿ ಕೇಳುವ ಒಂದು ಪ್ರಶ್ನೆ ಅಂದರೆ ” ಮುಂದಿನ ಐದು ವರುಷಗಳಲ್ಲಿ ನಿಮ್ಮನ್ನು ನೀವು ಯಾವ ಸ್ಥಾನದಲ್ಲಿ ನಿಮ್ಮನ್ನು ನೀವು ನೋಡಲು ಇಚ್ಛಿಸುತ್ತೀರಾ?’ ಎಂದು. ಆ ಪ್ರಶ್ನೆಯ ಹಿಂದ ಕೂಡ ಒಂದು ಲೆಕ್ಕಾಚಾರ ಇದ್ದೆ ಇರುತ್ತದೆ. ಈ ವ್ಯಕ್ತಿ ನಮ್ಮ ಸಂಸ್ಥೆಯಲ್ಲಿ ದೀರ್ಘ ಕಾಲದ ವರೆಗೂ ಸೇವೆ ಸಲ್ಲಿಸುವ ಇರಾದೆ ಹೊಂದಿದ್ದಾನೆಯೇ ಅಥವಾ ಇಲ್ಲವೇ? ಅವರ ಸಂಸ್ಥೆಯಲ್ಲಿ ನಿಮಗೆ ನೀಡುವ ಕೆಲಸವನ್ನು ನೀವು ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಬಹುದು ಮತ್ತು ಅದರಿಂದ ಅವರ ಸಂಸ್ಥೆಗೇನು ಲಾಭ ಎಂಬ ಲೆಕ್ಕಾಚಾರ ಇದ್ದೆ ಇರುತ್ತೆ. ಆ ಪ್ರಶ್ನೆಗೆ ನೀವು ಕೂಡ ನಿಮ್ಮ ವೃತ್ತಿಯಲ್ಲಿ ಸಾಗುವ ಪಥದ ಬಗ್ಗೆ ವಿವರಣೆ, ಆಕಾಂಕ್ಷೆಗಳೇನು, ನಿಮ್ಮಲ್ಲಿರುವ ಕೌಶಲಗಳೇನು, ಅದರಿಂದ ಅವರ ಸಂಸ್ಥೆಗೇನು ಲಾಭ ಎಂದು ವಿವರ ನೀಡಿದರೂ, ಆ ಉತ್ತರದ ಹಿಂದೆ ನಿಮಗೆ ಸಿಗುವ ಭಡ್ತಿ ಹಾಗೂ ಸಂಬಳದ ಲೆಕ್ಕಾಚಾರ ನಿಮ್ಮಲ್ಲಿ ಖಂಡಿತವಾಗಿಯೂ ಇದ್ದೆ ಇರುತ್ತದೆ.
ಅದೇನೇ ಲೆಕ್ಕಾಚಾರವಿದ್ದರೂ ಮುಂದಿನ ಐದು ವರುಷದಲ್ಲಿ ನಿಮ್ಮನ್ನು ಒಂದು ಸ್ಥಾನದಲ್ಲಿ ನೋಡಿಕೊಳ್ಳಬೇಕಾದರೆ ಇಂದಿನಿಂದ ನೀವೇನು ತಯಾರಿ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರ ಇರದಿದ್ದರೇ ಕಂಡ ಕನಸು ನನಸಾಗುವ ದಿನ ಮತ್ತಷ್ಟು ಮುಂದೆ ಹೋಗಿರುತ್ತದೆ. ಆ ಐದು ವರುಷ ಕಳೆದರೂ ನಿಮ್ಮ ಗುರಿ ನೀವು ತಲುಪುವಲ್ಲಿ ವಿಫಲರಾಗಿರುತ್ತೀರಿ. ಹೊಸ ವರುಷದಲ್ಲಿ ನಿಮ್ಮ ಗುರಿಯನ್ನು ಮುಟ್ಟಲೂ ನಿಮ್ಮಲ್ಲಿರುವ ಕೌಶಲ ವರ್ಧನೆಗೆ ಸಹಾಯ ಆಗುವ ಸಂಕಲ್ಪ ಮಾಡಿಕೊಳ್ಳುವುದು ಉತ್ತಮ.
ಸಂಬಂಧಗಳಲ್ಲಿ ಎಂದಿಗೂ ಯಾವುದೇ ಲೆಕ್ಕಾಚಾರ ನುಸುಳದಿರದಂತೆ ನೋಡಿಕೊಳ್ಳುವುದು ಲೇಸು. ಪ್ರೀತಿ, ಮಮತೆ, ಒಲವು, ಪ್ರೋತ್ಸಾಹ, ಬೆಂಬಲ ಇವುಗಳಿಗೆಲ್ಲ ಲೆಕ್ಕಾಚಾರ ಇಟ್ಟುಕೊಂಡರೆ ಅದು ಖಂಡಿತ ಲೆಕ್ಕಾಚಾರದ ಬದುಕಾಗಿಬಿಡುತ್ತದೆ. ಪ್ರತೀ ತಿಂಗಳ ಉಳಿತಾಯಕ್ಕೆ , ಕೊಂಡು ಕೊಳ್ಳುವಿಕೆಗೆ, ಸಾಧನೆಗೆ ಒಂದು ಸಣ್ಣ ಲೆಕ್ಕಾಚಾರ ಖಂಡಿತವಾಗಿಯೂ ಬೇಕು. ಅದರಲ್ಲೂ ಉಳಿತಾಯ ಹಾಗೂ ಕೊಂಡುಕೊಳ್ಳುವಿಕೆಗಂತೂ ಖಂಡಿತವಾಗಿಯೂ ಬೇಕೇ ಬೇಕು. ಇಲ್ಲದಿದ್ದದ್ರೆ ಹಾಸಿಕೊಂಡ ಹಾಸಿಗೆಯಲ್ಲಿಯೇ ನಿಮ್ಮ ಕಾಲಿದೆಯೋ ಅಥವಾ ಹಾಸಿಗೆ ದಾಟಿ ಕಾಲು ಚಾಚಿದ್ದಿರೋ ಎಂಬದು ತಿಳಿಯದೆ ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಗೊತ್ತಿದ್ದೂ ಮಾಡಿಕೊಂಡೋ ಅಥವಾ ಗೊತ್ತಿಲ್ಲದೇ ಮಾಡಿಕೊಂಡಿದ್ದ ಲೆಕ್ಕಾಚಾರದಲ್ಲಿ ವರುಷವೊಂದು ಕಳೆದು ಮತ್ತೂಂದು ಹೊಸ ವರುಷ ನಮ್ಮ ಮುಂದೆ ಬರುತ್ತಿದೆ. ಹಳೆಯ ಲೆಕ್ಕಾಚಾರವನ್ನು ಚುಕ್ತಾ ಮಾಡಿ ಹೊಸದೊಂದು ಲೆಕ್ಕಾಚಾರದಲ್ಲಿ ಹೊಸವರುಷವನ್ನು ಬರ ಮಾಡಿಕೊಳ್ಳಿ. ಆದರೆ ಮತ್ತೆ ಹಾಕಿಕೊಂಡ ಲೆಕ್ಕಾಚಾರ ತಪ್ಪದಂತೆ ನೋಡಿಕೊಳ್ಳುವುದು ಕೂಡ ನಿಮ್ಮ ಕೈಯಲ್ಲೇ ಇದೆ.
ಖಂಡಿತವಾಗಿಯೂ ಬದುಕಿನಲ್ಲಿ ಲೆಕ್ಕಾಚಾರ ಇರಲೇಬೇಕು, ಆದರೆ ಲೆಕ್ಕಾಚಾರದ ಬದುಕಾಗದಿರಲಿ ಎಂಬ ಮಾತಿನಂತೆ ನಮ್ಮ ಜೀವನ ಶೈಲಿಯನ್ನು ರೂಢಿಸಿಕೊಂಡರೆ ಬಹಳ ಉತ್ತಮ ಎಂದು ಹೇಳುತ್ತಾ ಪ್ರತಿಯೊಬ್ಬರಿಗೂ ಹೊಸ ವರುಷದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.
ಹೊಸ ವರುಷಕ್ಕೊಂದು ಪಕ್ಕಾ ಲೆಕ್ಕಾಚಾರವಿರಲಿ.
*ಶ್ರೀನಾಥ್ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.