ಶಾಲೆಗೆ ಕಳುಹಿಸಲು ಪೋಷಕರೇ ಸಿದ್ಧರಿಲ್ಲ !
ಇನ್ನೂ 1ತಿಂಗಳು ಕಾದು ನೋಡುವ ಯತ್ನ
Team Udayavani, May 14, 2020, 6:00 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಈಗ ಶಾಲಾ- ಕಾಲೇಜುಗಳು ಆರಂಭವಾದರೆ ಮಕ್ಕಳನ್ನು ಕಳುಹಿಸಲು ಪೋಷಕರೇ ಸಿದ್ಧರಿಲ್ಲ. -ಹೀಗೆನ್ನುತ್ತಿದೆ ಒಂದು ಸಮೀಕ್ಷೆ.
ಕೋವಿಡ್- 19ದಿಂದ ದೀರ್ಘ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯ ವಾರದಿಂದಲೇ ಶಾಲೆ- ಕಾಲೇಜುಗಳು ಸ್ಥಗಿತ ವಾಗಿವೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಲಕ್ಷಣ ಇಲ್ಲ. ಒಂದು ವೇಳೆ ಶಾಲೆ, ಕಾಲೇಜು, ಮಾಲ್, ಚಿತ್ರಮಂದಿರ, ಪಾರ್ಕ್‌ಗಳನ್ನು ಕೂಡಲೇ ಪುನರಾರಂಭಿಸಿದರೆ, ಪೋಷಕರ ಸ್ಪಂದನೆ ಹೇಗಿರುತ್ತದೆ? ಶೀಘ್ರವೇ ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರಾ? ಕೋವಿಡ್- 19 ಭೀತಿ ಎಷ್ಟು ಕಾಡುತ್ತಿದೆ? ಎಂಬ ಬಗ್ಗೆ ಪೋಷಕರ ವೇದಿಕೆಯೊಂದು ಸಮೀಕ್ಷೆ ನಡೆಸಿದೆ. ಬಹುತೇಕ ಪೋಷಕರು ಶೀಘ್ರವೇ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಶಾಲೆ ತೆರೆದರೆ
ಈಗಲೇ ಶಾಲೆಗಳನ್ನು ಆರಂಭಿಸಿದರೆ ಶೇ. 92ರಷ್ಟು ಪೋಷಕರಿಗೆ ಮಕ್ಕಳನ್ನು ಕಳುಹಿಸುವುದು ಇಷ್ಟವಿಲ್ಲ. ಶೇ. 56ರಷ್ಟು ಪೋಷಕರು ಕನಿಷ್ಠ ಒಂದು ತಿಂಗಳು ಕಾದು ನೋಡಲು ಬಯಸಿದ್ದಾರೆ. ಶೇ. 8ರಷ್ಟು ಮಂದಿ ಮಾತ್ರ ಕಳುಹಿಸಲು ಸಮ್ಮತಿಸಿದ್ದಾರೆ.
ಪಾರ್ಟಿ, ಮಾಲ್, ಸಿನೆಮಾ
ಶೇ. 52ರಷ್ಟು ಪೋಷಕರಿಗೆ ಮಕ್ಕಳನ್ನು ಬರ್ತ್‌ಡೇ ಪಾರ್ಟಿಗೆ ಕಳುಹಿಸಲು ಮನಸ್ಸಿಲ್ಲ. ಶಾಪಿಂಗ್ ಮಾಲ್, ಚಿತ್ರ ಮಂದಿರಕ್ಕೂ ಕಳಿಸುವುದಿಲ್ಲ ಎಂದಿದ್ದಾರೆ.
ಆಟೋಟ
ಬಹುತೇಕ ಪೋಷಕರಿಗೆ ತಮ್ಮ ಮಕ್ಕಳನ್ನು ಸ್ನೇಹಿತರ ಜತೆ ಆಟವಾಡಲು ಕಳುಹಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಶೇ. 50ರಷ್ಟು ಮಂದಿ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲು ಬಯಸಿದ್ದಾರೆ. ಶೇ. 35ರಷ್ಟು ಪೋಷಕರು ಮಾತ್ರ ಮಕ್ಕಳನ್ನು ಸ್ನೇಹಿತರೊಂದಿಗೆ ಆಟವಾಡಲು ಪಾರ್ಕ್‌ಗೆ ಕಳುಹಿಸಲು ಬಯಸಿದ್ದಾರೆ. ಆದರೆ ಸಾಮಾಜಿಕ ಅಂತರ ಇರಬೇಕು ಎಂಬ ಷರತ್ತು ಇದೆ. ವೈಯಕ್ತಿಕ ಕ್ರೀಡೆಗಳು ಇನ್ನೂ ಆರು ತಿಂಗಳು ಬೇಡ ಎಂಬುದು ಶೇ. 45 ಪೋಷಕರ ಅಭಿಮತವಾಗಿದೆ. ಶೇ. 25ರಷ್ಟು ಮಂದಿ ಇದಕ್ಕೆ ಒಲವು ತೋರಿದ್ದಾರೆ. ಕುಟುಂಬದೊಂದಿಗೆ ಪ್ರವಾಸ ತೆರಳುವುದು ಅಸುರಕ್ಷಿತ ಎಂದು ಶೇ. 57ರಷ್ಟು ಪೋಷಕರು ತಿಳಿಸಿದ್ದಾರೆ.
ಶೇ. 1ರಷ್ಟು ಮಂದಿ ಮಾತ್ರ ಹಾಲಿಡೇ ಎಂಜಾಯ್ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಪೋಷಕರ ವೇದಿಕೆಯು ಬೆಂಗಳೂರು, ಮುಂಬಯಿ, ದಿಲ್ಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶಾದ್ಯಂತ 12 ಸಾವಿರ ಪೋಷಕರಿಂದ ಪ್ರತಿಕ್ರಿಯೆ ಪಡೆದು ವರದಿ ತಯಾರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.