Olympics History: 1896ರಿಂದ 2020ರವರೆಗಿನ ಒಲಿಂಪಿಕ್ಸ್ ಹಾದಿ
Team Udayavani, Jul 20, 2024, 6:58 AM IST
ಜು.26ರಂದು ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್ ಆರಂಭವಾಗಲಿದೆ. ಈ ಹಿಂದೆ ಆಯೋಜನೆಯಾಗಿದ್ದ 32 ಒಲಿಂಪಿಕ್ಸ್ ಗಳ ಪೈಕಿ 3 ವಿಶ್ವಯುದ್ಧದಿಂದ ರದ್ದಾಗಿವೆ. 1896ರ ಅಥೆನ್ಸ್ ಒಲಿಂಪಿಕ್ಸ್ ಸೇರಿ 2020ರ (ನಡೆದಿದ್ದು 2021) ಟೋಕಿಯೊ ಒಲಿಂಪಿಕ್ಸ್ ವರೆಗೆ ಒಟ್ಟು 29 ಒಲಿಂಪಿಕ್ಸ್‌ಗಳು ರೋಮಾಂಚಕವಾಗಿ ನಡೆದಿವೆ. ಪ್ರತೀ ಕೂಟದ ಚುಟುಕು ವಿವರ ಇಲ್ಲಿದೆ.
1896: ಅಥೆನ್ಸ್
ಆಧುನಿಕ ಯುಗದ ಮೊದಲ ಒಲಿಂಪಿಕ್ಸ್ 1896ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ಜರುಗಿತು. ಫ್ರೆಂಚ್ ಅರಿಸ್ಟೊಕ್ರಾಟ್ ಆಗಿದ್ದ ಪಿಯರೆ ಡಿ ಕುಬರ್ಟಿನ್ ಇದರ ರೂವಾರಿ. ಪಾಲ್ಗೊಂಡಿದ್ದು 14 ದೇಶಗಳ 241 ಸ್ಪರ್ಧಿಗಳು ಮಾತ್ರ. 11 ಚಿನ್ನ, 7 ಬೆಳ್ಳಿ, 2 ಕಂಚು ಸೇರಿ 20 ಪದಕ ಗೆದ್ದ ಅಮೆರಿಕ ಅಗ್ರಸ್ಥಾನಿ.
*ಭಾರತ ಭಾಗವಹಿಸಿರಲಿಲ್ಲ.
1900: ಪ್ಯಾರಿಸ್
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ದ್ವಿತೀಯ ಒಲಿಂಪಿಯಾಡ್ ನಡೆಯಿತು. 19 ವಿವಿಧ ಕ್ರೀಡೆಗಳಲ್ಲಿ 1,226 ಕ್ರೀಡಾಪಟುಗಳು ಸ್ಪರ್ಧಿಸಿದರು. ಮೊದಲ ಬಾರಿಗೆ ವನಿತೆಯರೂ ಸ್ಪರ್ಧೆಗೆ ಇಳಿದರು. 27 ಚಿನ್ನ, 39 ಬೆಳ್ಳಿ, 37 ಕಂಚು ಸೇರಿ 103 ಪದಕ ಗೆದ್ದ ಫ್ರಾನ್ಸ್ ಅಗ್ರಸ್ಥಾನಿ.
*ಭಾರತದ ಸಾಧನೆ: ನಾರ್ಮನ್ ಪ್ರಿಚರ್ಡ್‌ಗೆ 2 ಬೆಳ್ಳಿ
1904: ಸೇಂಟ್ ಲೂಯಿಸ್
ಇದು ಯೂರೋಪ್‌ನಾಚೆಯ ಮೊದಲ ಒಲಿಂಪಿಕ್ಸ್, 3ನೇ ಒಲಿಂಪಿಯಾಡ್. ರಷ್ಯಾ-ಜಪಾನ್ ಯುದ್ಧಭೀತಿಯ ಕಾರಣ ಅಮೆರಿಕದಾಚೆಯ ಬಹುತೇಕ ಕ್ರೀಡಾಪಟುಗಳಿಗೆ ಸೇಂಟ್ ಲೂಯಿಸ್ ತಲುಪಲಾಗಲಿಲ್ಲ.76 ಚಿನ್ನ, 78 ಬೆಳ್ಳಿ, 77 ಕಂಚು ಸೇರಿ 231 ಪದಕ ಗೆದ್ದ ಅಮೆರಿಕ ಅಗ್ರಸ್ಥಾನಿ.
* ಭಾರತ ಭಾಗವಹಿಸಿರಲಿಲ್ಲ.
1908: ಲಂಡನ್
ಅಧಿಕೃತವಾಗಿ ಇದು 4ನೇ ಒಲಿಂಪಿಯಾಡ್. ರೋಮ್‌ನಲ್ಲಿ ನಡೆಯಬೇಕಿತ್ತು. ಆದರೆ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಲಂಡನ್ ಪಾಲಾಯಿತು. ಇದು ಅತ್ಯಧಿಕ 187 ದಿನಗಳ ಕಾಲ ನಡೆದಿತ್ತು. ಗ್ರೇಟ್ ಬ್ರಿಟನ್, 56 ಚಿನ್ನ, 51 ಬೆಳ್ಳಿ, 39 ಕಂಚು ಸೇರಿ 146 ಪದಕ ಗೆದ್ದಿತ್ತು.
* ಭಾರತ ಭಾಗವಹಿಸಿರಲಿಲ್ಲ.
1912: ಸ್ಟಾಕ್‌ಹೋಮ್
28 ರಾಷ್ಟ್ರಗಳ 2,408 ಸ್ಪರ್ಧಿಗಳು ಪಾಲ್ಗೊಂಡರು. ಇದರಲ್ಲಿ 48 ಮಹಿಳೆಯರೂ ಇದ್ದರು..ಆ್ಯತ್ಲೆಟಿಕ್ಸ್‌ನಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಟೈಮಿಂಗ್ ಬಳಸಲಾಯಿತು. 26 ಚಿನ್ನ, 19 ಬೆಳ್ಳಿ, 19 ಕಂಚು ಸೇರಿ 64 ಪದಕ ಗೆದ್ದು ಅಮೆರಿಕ ಮಿಂಚಿತ್ತು.
* ಈ ಆವೃತ್ತಿಯಲ್ಲಿ ಭಾರತ ಭಾಗವಹಿಸಿರಲಿಲ್ಲ.
1920: ಅಂಟ್ವೆಪ್
1916ರ ಬರ್ಲಿನ್ ಒಲಿಂಪಿಕ್ಸ್ ಮೊದಲ ವಿಶ್ವಯುದ್ಧದ ಕಾರಣ ನಡೆಯಲಿಲ್ಲ. ವಿವಿಧ ರೀತಿಯಲ್ಲಿ ಯುದ್ಧ ಸಂಬಂಧ ಇರಿಸಿಕೊಂಡಿದ್ದ ಹಂಗೇರಿ, ಜರ್ಮನಿ, ದೇಶಗಳನ್ನು ನಿಷೇಧಿಸಲಾಯಿತು. 41 ಚಿನ್ನ, 27 ಬೆಳ್ಳಿ, 27 ಕಂಚು ಸೇರಿ 95 ಪದಕ ಗೆದ್ದ ಅಮೆರಿಕ ಅಗ್ರ ಸ್ಥಾನಿ.
* ಭಾರತದ ಸ್ಪರ್ಧಿಗಳು-5, ಪದಕವಿಲ್ಲ.
1924: ಪ್ಯಾರಿಸ್
4 ದೇಶಗಳು ಪಾಲ್ಗೊಂಡವು. ಜರ್ಮನಿಗೆ ಆಹ್ವಾನ ಇರಲಿಲ್ಲ. ಈಕ್ವಡಾರ್, ಐರ್ಲೆಂಡ್, ಲಿಥುವೇನಿಯ, ಉರುಗ್ವೆ ಮೊದಲ ಸಲ ಪಾಲ್ಗೊಂಡಿತ್ತು. 45 ಚಿನ್ನ, 27 ಬೆಳ್ಳಿ, 27 ಕಂಚು ಸೇರಿ ಅಮೆರಿಕ 99 ಪದಕ ಗೆದ್ದಿತ್ತು.
*ಈ ಕೂಟದಲ್ಲಿ ಭಾರತದಿಂದ 7 ಸ್ಪರ್ಧಿಗಳು ಭಾಗ ವಹಿಸಿದ್ದರೂ ಕೂಡ ಪದಕ ಲಭಿಸಿರಲಿಲ್ಲ.
1928: ಆಮ್‌ಸ್ಟರ್ಡಮ್
ಅಗ್ರಸ್ಥಾನ: ಅಮೆರಿಕ-56 ಪದಕ 22 ಚಿನ್ನ, 18 ಬೆಳ್ಳಿ, 16 ಕಂಚು
ವನಿತಾ ಆ್ಯತ್ಲೆಟಿಕ್ಸ್ ಮತ್ತು ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳನ್ನು ಮೊದಲ ಸಲ ಆಯೋಜಿಸಲಾಯಿತು. ವನಿತಾ ವಿಭಾಗದ ಒಟ್ಟು 5 ಸ್ಪರ್ಧೆಗಳಿದ್ದವು. ಆದರೆ ಸ್ಪರ್ಧೆಯ ಸಂಖ್ಯೆ ಕಡಿಮೆಯಾಯಿತೆಂದು ಬ್ರಿಟನ್ ವನಿತೆಯರು ಕೂಟವನ್ನು ಬಹಿಷ್ಕರಿಸಿದರು.
* ಭಾರತಕ್ಕೆ ಮೊದಲ ಹಾಕಿ ಚಿನ್ನ: ಭಾರತೀಯ ಹಾಕಿಯ ಚಿನ್ನದ ಬೇಟೆ ಈ ಕೂಟದಿಂದ ಆರಂಭಗೊಂಡಿತು. ಫೈನಲ್‌ನಲ್ಲಿ ಹಾಲೆಂಡ್ ವಿರುದ್ಧ 3-0 ಜಯ ಸಾಧಿಸಿತು.
1932: ಲಾಸ್ ಏಂಜಲೀಸ್
ಅಗ್ರಸ್ಥಾನ: ಅಮೆರಿಕ-110 ಪದಕ 44 ಚಿನ್ನ, 36 ಬೆಳ್ಳಿ, 30 ಕಂಚು
37 ದೇಶಗಳ ಈ ಕ್ರೀಡಾಕೂಟದಲ್ಲಿ ಸ್ವತಃ ಅಮೆರಿಕ ಅಧ್ಯಕ್ಷ ಹರ್ಬರ್ಟ್ ಹೂವರ್ ಅವರೇ ಪಾಲ್ಗೊಳ್ಳಲಿಲ್ಲ. ಹೀಗಾಗಿ ಉಪಾಧ್ಯಕ್ಷ ಚಾರ್ಲ್ಸ್ ಕರ್ಟಿಸ್ ಉದ್ಘಾಟಿಸಿದರು. ಮೊದಲ ಸಲ “ಒಲಿಂಪಿಕ್ ವಿಲೇಜ್’ ನಿರ್ಮಾಣಗೊಂಡಿತು. ವಿಕ್ಟರಿ ಪೋಡಿಯಂ ಕೂಡ ಇಲ್ಲಿಯೇ ಕಾಣಿಸಿಕೊಂಡಿತು.
* ಹಾಕಿ ಚಿನ್ನ ಉಳಿಸಿಕೊಂಡ ಭಾರತ: ಆತಿಥೇಯ ಅಮೆರಿಕವನ್ನು 24-1 ಗೋಲುಗಳಿಂದ ಮಣಿಸಿದ ಭಾರತ ಹಾಕಿ ಚಿನ್ನವನ್ನು ಉಳಿಸಿಕೊಂಡಿತು. ಒಟ್ಟು 19 ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದರು.
* 1936: ಬರ್ಲಿನ್
ಅಗ್ರಸ್ಥಾನ: ಜರ್ಮನಿ-101 ಪದಕ 38 ಚಿನ್ನ, 31 ಬೆಳ್ಳಿ, 32 ಕಂಚು
ಇದು ಅಡಾಲ್ಫ್ ಹಿಟ್ಲರ್ ಮುಂದಾಳುತನದ ಒಲಿಂಪಿಕ್ಸ್. ಒಂದು ಲಕ್ಷ ವೀಕ್ಷಕರ ಸಾಮರ್ಥ್ಯವುಳ್ಳ ಟ್ರಾÂಕ್ ಆ್ಯಂಡ್ ಫೀಲ್ಡ್ ಸ್ಟೇಡಿಯಂ ನಿರ್ಮಿಸಿದ ಹಿರಿಮೆ ಇವರದಾಗಿತ್ತು. 41 ದೇಶಗಳಲ್ಲಿ ರೇಡಿಯೋ ಮೂಲಕ ಪ್ರಸಾರಗೊಂಡಿತು. “ಒಲಿಂಪಿಯಾ’ ಹೆಸರಿನ ಸಾಕ್ಷéಚಿತ್ರವನ್ನೂ ನಿರ್ಮಿಸಲಾಯಿತು.
* ಹಾಕಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಚಿನ್ನ: ಆತಿಥೇಯ ಜರ್ಮನಿಯನ್ನು 8-1 ಗೋಲುಗಳಿಂದ ಮಣಿಸಿದ ಭಾರತ ಹಾಕಿಯಲ್ಲಿ ಬಂಗಾರದ ಹ್ಯಾಟ್ರಿಕ್ ಸಾಧಿಸಿತು. ಧ್ಯಾನ್‌ಚಂದ್ ಹೀರೋ ಆಗಿದ್ದರು.
* 1948: ಲಂಡನ್
ಅಗ್ರಸ್ಥಾನ: ಅಮೆರಿಕ-84 ಪದಕ 38 ಚಿನ್ನ, 27 ಬೆಳ್ಳಿ, 19 ಕಂಚು
ದ್ವಿತೀಯ ವಿಶ್ವಯುದ್ಧದ ಕಾರಣ ಸತತ 2 ಕ್ರೀಡಾಕೂಟಗಳು ರದ್ದುಗೊಂಡವು. ಹೀಗಾಗಿ “ಶಾಂತಿ ರಿಲೇ’ ನಾನಾ ದೇಶಗಳನ್ನು ಸಂಚರಿಸುವ ಮೂಲಕ ಒಲಿಂಪಿಕ್ಸ್‌ಗೆ ಮರು ಚಾಲನೆ ನೀಡಲಾಯಿತು. ಬಿಬಿಸಿ ಟೆಲಿವಿಷನ್ ಮೂಲಕ ನೇರ ಪ್ರಸಾರ ಬಿತ್ತರಗೊಂಡಿತು.
* ಭಾರತಕ್ಕೆ “ಮೊದಲ’ ಪದಕ: ಸ್ವತಂತ್ರಗೊಂಡ ಬಳಿಕ ಭಾರತ ಮೊದಲ ಒಲಿಂಪಿಕ್ಸ್ ಪದಕ ಜಯಿಸಿತು. ಇದು ಹಾಕಿಯಲ್ಲಿ ಲಭಿಸಿದ ಚಿನ್ನವಾಗಿತ್ತು.
1952: ಹೆಲ್ಸಿಂಕಿ
ಅಗ್ರಸ್ಥಾನ: ಅಮೆರಿಕ-76 ಪದಕ 40 ಚಿನ್ನ, 19 ಬೆಳ್ಳಿ, 17 ಕಂಚು
ಇಸ್ರೇಲ್, ಇಂಡೋನೇಷ್ಯಾ ಒಲಿಂಪಿಕ್ಸ್ ಪದಾರ್ಪಣೆ ಮಾಡಿದವು. ಹಾಗೆಯೇ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ ಕೂಡ (ಪಿಆರ್‌ಸಿ), ಸೋವಿಯತ್ ಯೂನಿಯನ್ ಕೂಡ ಮೊದಲ ಒಲಿಂಪಿಕ್ಸ್ ಕಂಡವು.
* ಭಾರತಕ್ಕೆ 2 ಪದಕ: ಭಾರತ ಹಾಕಿ ಪ್ರಭುತ್ವ ಮುಂದುವರಿಸಿ ಸತತ 5ನೇ ಚಿನ್ನದ ಪದಕ ಜಯಿಸಿತು. ಫೈನಲ್‌ನಲ್ಲಿ ನೆದರ್ಲೆಂಡ್ಸ್‌ಗೆ 6-1 ಅಂತರದ ಸೋಲುಣಿಸಿತು. ಜತೆಗೆ ಮೊದಲ ಸಲ ವೈಯಕ್ತಿಕ ಪದಕವೊಂದನ್ನು ಜಯಿಸಿತು. ಪುರುಷರ ಕುಸ್ತಿ ಸ್ಪರ್ಧೆಯಲ್ಲಿ ಕೆ.ಡಿ. ಜಾಧವ್ ಕಂಚಿನ ಪದಕ ಗೆದ್ದು ಸಂಭ್ರಮಿಸಿದರು.
1956: ಮೆಲ್ಬರ್ನ್
ಅಗ್ರಸ್ಥಾನ: ಸೋವಿಯತ್ ಯೂನಿಯನ್-98ಪದಕ 37 ಚಿನ್ನ, 29 ಬೆಳ್ಳಿ, 32 ಕಂಚು
ಮೊದಲ ಸಲ ಯೂರೋಪ್ ಮತ್ತು ಉತ್ತರ ಅಮೆರಿಕದಾಚೆ ನಡೆದ ಒಲಿಂಪಿಕ್ಸ್. ವಿಭಜಿತ ಜರ್ಮನಿಯ ಸ್ಪರ್ಧಿಗಳು ಒಂದಾಗಿ ಭಾಗವಹಿಸಿ ಒಗ್ಗಟ್ಟನ್ನು ಸಾರಿದರು. ಆದರೆ 9 ದೇಶಗಳು ವಿವಿಧ ಕಾರಣಗಳಿಗೋಸ್ಕರ ಕೂಟವನ್ನು ಬಹಿಷ್ಕರಿಸಿದವು.
* ಹಾಕಿಯಲ್ಲಿ ಭಾರತ ಡಬಲ್ ಹ್ಯಾಟ್ರಿಕ್: ಭಾರತದ ಹಾಕಿ ಪ್ರಭುತ್ವ ಮುಂದುವರಿಯಿತು. ಸತತ 6ನೇ ಚಿನ್ನ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸಿತು. ಫೈನಲ್‌ನಲ್ಲಿ ಪಾಕಿಸ್ಥಾನವನ್ನು 1-0 ಅಂತರದಿಂದ ಮಣಿಸಿತು.
1960: ರೋಮ್
ಅಗ್ರಸ್ಥಾನ: ಸೋವಿಯತ್ ಯೂನಿಯನ್-103 ಪದಕ 43 ಚಿನ್ನ, 29 ಬೆಳ್ಳಿ, 31 ಕಂಚು
ರೋಮ್‌ನಲ್ಲಿ ನಡೆದ ಈ ಒಲಿಂಪಿಕ್ಸ್ ವೇಳೆ ಮೊದಲ ಸಲ ಪ್ಯಾರಾಲಿಂಪಿಕ್ಸ್ ಗೇಮ್ಸ್ ಕೂಡ ನಡೆಯಿತು. ಡೆನ್ಮಾರ್ಕ್‌ನ ಸೈಕ್ಲಿಸ್ಟ್ ಬಿಸಿಲ ಜಳದಿಂದ ಕುಸಿದು ಬಿದ್ದು ಸಾವನ್ನಪ್ಪಿದ ದುರಂತಕ್ಕೆ ಈ ಕ್ರೀಡಾಕೂಟ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ, ಸಿಂಗಾಪುರ ಮೊದಲ ಸಲ ಸ್ಪರ್ಧಿಸಿದವು.
* ಭಾರತಕ್ಕೆ ಹಾಕಿ ಬೆಳ್ಳಿ: ಭಾರತದ ಹಾಕಿ ಪ್ರಭುತ್ವ ಸತತ 6 ಚಿನ್ನದ ಪದಕಗಳ ಬಳಿಕ ಕೊನೆಗೊಂಡಿತು. ಪಾಕಿಸ್ಥಾನ ವಿರುದ್ಧ ಏಕೈಕ ಗೋಲಿನಿಂದ ಸೋತು ಬೆಳ್ಳಿಗೆ ಸಮಾಧಾನಪಟ್ಟಿತು.
1964: ಟೋಕಿಯೋ
ಅಗ್ರಸ್ಥಾನ: ಅಮೆರಿಕ-90 ಪದಕ 36 ಚಿನ್ನ, 26 ಬೆಳ್ಳಿ, 28 ಕಂಚು
ಏಷ್ಯಾದಲ್ಲಿ ನಡೆದ ಮೊದಲ ಒಲಿಂಪಿಕ್ಸ್. ವರ್ಣಬೇಧ ನೀತಿಯ ಕಾರಣ ದಕ್ಷಿಣ ಆಫ್ರಿಕಾವನ್ನು ಬಹಿಷ್ಕರಿಸಲಾಯಿತು. ಯೂಜಿ ಕೊಸೆಕಿ ಬರೆದ ಥೀಮ್ ಸಾಂಗ್ ಬಹಳ ಜನಪ್ರಿಯಗೊಂಡಿತು.
* ಭಾರತಕ್ಕೆ ಮತ್ತೆ ಹಾಕಿ ಚಿನ್ನ: ಭಾರತ-ಪಾಕಿಸ್ಥಾನ ಸತತ 3ನೇ ಸಲ ಫೈನಲ್‌ನಲ್ಲಿ ಎದುರಾದವು. 1-0 ಅಂತರದಿಂದ ಮೇಲುಗೈ ಸಾಧಿಸಿದ ಭಾರತ ಮರಳಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು. ನಾಯಕ ಪ್ರೀತಿಪಾಲ್ ಸಿಂಗ್ ಸರ್ವಾಧಿಕ 10 ಗೋಲು ಹೊಡೆದರು.
1968: ಮೆಕ್ಸಿಕೊ
ಅಗ್ರಸ್ಥಾನ: ಅಮೆರಿಕ-107 ಪದಕ 45 ಚಿನ್ನ, 28 ಬೆಳ್ಳಿ, 34 ಕಂಚು
ಪ್ರಥಮ ಬಾರಿಗೆ ಲ್ಯಾಟಿನ್ ಅಮೆರಿಕದಲ್ಲಿ ನಡೆದ ಕ್ರೀಡಾ ಜಾತ್ರೆ. ಆತಿಥ್ಯದ ರೇಸ್‌ನಲ್ಲಿ ಮೆಕ್ಸಿಕೊ ಯುಎಸ್‌ಎಯ ಡೆಟ್ರಾಯಿಟ್‌ನ್ನು ಹಿಂದಿಕ್ಕಿತು. ಕ್ರಿಸ್ಟೋಫರ್ ಕೊಲಂಬಸ್ ಹುಡುಕಿದ ನೂತನ ಜಗತ್ತಿನ ಮೂಲಕ ಒಲಿಂಪಿಕ್ಸ್ ರಿಲೇ ಸಾಗಿತು. ಪೂರ್ವ-ಪಶ್ಚಿಮ ಜರ್ಮನಿ ತಂಡಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು.
* ಭಾರತಕ್ಕೆ ಕಂಚಿನ ಸಮಾಧಾನ: ಹಾಕಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾದ ಭಾರತ, ಬಳಿಕ ಜರ್ಮನಿಯನ್ನು 2-1ರಿಂದ ಮಣಿಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿತು.
1972: ಮ್ಯೂನಿಕ್
ಅಗ್ರಸ್ಥಾನ: ಸೋವಿಯತ್ ಯೂನಿಯನ್-99 ಪದಕ 50 ಚಿನ್ನ, 27 ಬೆಳ್ಳಿ, 22 ಕಂಚು
ಜರ್ಮನಿಯಲ್ಲಿ ನಡೆದ 2ನೇ ಒಲಿಂಪಿಕ್ಸ್. ರಕ್ತಸಿಕ್ತ ಒಲಿಂಪಿಕ್ಸ್ ಕೂಡ ಹೌದು. ಒಲಿಂಪಿಕ್ಸ್ ಗ್ರಾಮಕ್ಕೆ ದಾಳಿಯಿರಿಸಿದ ಪ್ಯಾಲೇಸ್ತಿನ್‌ನ “ಬ್ಲ್ಯಾಕ್ ಸೆಪ್ಟಂಬರ್’ ತಂಡ ಇಸ್ರೇಲ್‌ನ ಇಬ್ಬರು ಕ್ರೀಡಾಪಟುಗಳು ಸೇರಿದಂತೆ ಇತರ 9 ಮಂದಿಯನ್ನು ಕಗ್ಗೊಲೆ ಮಾಡಿತು.
* ಭಾರತಕ್ಕೆ ಮತ್ತೆ ಕಂಚು: ತೃತೀಯ ಸ್ಥಾನದ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್ ವಿರುದ್ಧ 2-1 ಜಯ ಸಾಧಿಸಿದ ಭಾರತ, ಮತ್ತೆ ಹಾಕಿಯಲ್ಲಿ ಕಂಚಿಗೆ ತೃಪ್ತಿಪಟ್ಟಿತು.
* 1976: ಮಾಂಟ್ರಿಯಲ್
ಅಗ್ರಸ್ಥಾನ: ಸೋವಿಯತ್ ಯೂನಿಯನ್-125 ಪದಕ 49 ಚಿನ್ನ, 41 ಬೆಳ್ಳಿ, 35 ಕಂಚು
ಇದೊಂದು ವಿವಾದಾತ್ಮಕ ಒಲಿಂಪಿಕ್ಸ್. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಗೈದ ನ್ಯೂಜಿಲ್ಯಾಂಡ್‌ನ ರಗಿº ತಂಡವನ್ನು ಐಒಸಿ ನಿಷೇಧಿಸಲಿಲ್ಲ ಎಂಬ ಕಾರಣಕ್ಕೆ 29 ದೇಶಗಳು ಈ ಒಲಿಂಪಿಕ್ಸ್ ಕೂಟವನ್ನು ಬಹಿಷ್ಕರಿಸಿದವು. ಇದರಲ್ಲಿ ಬಹುತೇಕ ಆಫ್ರಿಕಾ ತಂಡಗಳೇ ಸೇರಿದ್ದವು.
* ಭಾರತ ಬರಿಗೈ: ಹಾಕಿಯಲ್ಲಿ ಸಾರ್ವಭೌಮತ್ವವನ್ನು ತೋರುತ್ತ ಬಂದ ಭಾರತ ಇಲ್ಲಿ ಯಾವುದೇ ಪದಕ ಗೆಲ್ಲಲಿಲ್ಲ.
* 1980: ಮಾಸ್ಕೊ
ಅಗ್ರಸ್ಥಾನ: ಸೋವಿಯತ್ ಯೂನಿಯನ್-195 ಪದಕ 80 ಚಿನ್ನ, 69 ಬೆಳ್ಳಿ, 46 ಕಂಚು
ಸೋವಿಯತ್ ಯೂನಿಯನ್‌ನಲ್ಲಿ ನಡೆದ ಮೊದಲ ಒಲಿಂಪಿಕ್ಸ್. ಸೋವಿಯತ್-ಅಫ್ಘಾನ್ ಕದನದ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ 66 ದೇಶಗಳು ಮಾಸ್ಕೊಗೆ ಕಾಲಿಡಲಿಲ್ಲ. ಆದರೂ 80 ದೇಶಗಳ ಉಪಸ್ಥಿತಿ ಇತ್ತು.
* ಮತ್ತೆ ಹಾಕಿ ಬಂಗಾರ: ಭಾರತ ಮತ್ತೆ ಹಾಕಿಯಲ್ಲಿ ಚಿನ್ನದ ಪದಕ ಜಯಿಸಿತು. ಸ್ಪೇನ್‌ಗೆ 4-3 ಗೋಲುಗಳ ಸೋಲುಣಿಸಿತು. ಸದ್ಯದ ಮಟ್ಟಿಗೆ ಭಾರತಕ್ಕೆ ಇದೇ ಕೊನೆಯ ಹಾಕಿ ಚಿನ್ನವಾಗಿದೆ.
* 1984: ಲಾಸ್ ಏಂಜಲೀಸ್
ಅಗ್ರಸ್ಥಾನ: ಅಮೆರಿಕ-174 ಪದಕ 83 ಚಿನ್ನ, 61 ಬೆಳ್ಳಿ, 30 ಕಂಚು
ಈ ಕೂಟವನ್ನು ರಷ್ಯಾ ಸೇರಿದಂತೆ 14 ದೇಶಗಳು ಬಹಿಷ್ಕರಿಸಿದವು. 140 ದೇಶಗಳು ಸ್ಪರ್ಧೆಗೆ ಇಳಿದವು. ಆತಿಥೇಯ ಅಮೆರಿಕ ತನ್ನ ಪ್ರಭುತ್ವ ಸ್ಥಾಪಿಸಿತು. ಮೊದಲ ಬಾರಿಗೆ ಎಲ್ಲ ದೇಶಗಳ ಕ್ರೀಡಾಪಟುಗಳು ಒಂದೇ ಒಲಿಂಪಿಕ್ ಗ್ರಾಮದಲ್ಲಿ ಉಳಿದರು.
* ಭಾರತಕ್ಕೆ ಪದಕವಿಲ್ಲ: ಇಲ್ಲಿ ಭಾರತದ 48 ಸ್ಪರ್ಧಿಗಳು ಭಾಗವಹಿಸಿದರು. ಯಾವುದೇ ಪದಕ ಗೆಲ್ಲಲಾಗಲಿಲ್ಲ.
* 1988: ಸಿಯೋಲ್
ಅಗ್ರಸ್ಥಾನ: ಸೋವಿಯತ್ ಯೂನಿಯನ್-132ಪದಕ 35 ಚಿನ್ನ, 31 ಬೆಳ್ಳಿ, 46 ಕಂಚು
ಟೋಕಿಯೋ ಬಳಿಕ ಏಷ್ಯಾದಲ್ಲಿ ನಡೆದ 2ನೇ ಒಲಿಂಪಿಕ್ಸ್. ವನಿತಾ ಹಾಯಿದೋಣಿ, ವನಿತಾ ಜೂಡೋ ಸ್ಪರ್ಧೆಯನ್ನು ಮೊದಲ ಸಲ ಪರಿಚಯಿಸಲಾಯಿತು. ಹಾಗೆಯೇ ಟೇಬಲ್ ಟೆನಿಸ್‌ಗೂ ಅವಕಾಶ ಲಭಿಸಿತು.
* ಭಾರತಕ್ಕೆ ನಿರಾಸೆ: ಭಾರತ 46 ಕ್ರೀಡಾಳುಗಳ ತಂಡವನ್ನು ಕಳುಹಿಸಿತು. ಯಾರಿಗೂ ಪದಕ ಒಲಿಯಲಿಲ್ಲ.
* 1992: ಬಾರ್ಸಿಲೋನಾ
ಅಗ್ರಸ್ಥಾನ: ಯುನಿಫೈಡ್ ಟೀಮ್-112 ಪದಕ 45 ಚಿನ್ನ, 38 ಬೆಳ್ಳಿ, 29 ಕಂಚು
ಮಾಜಿ ಸೋವಿಯತ್ ರಿಪಬ್ಲಿಕ್‌ನ 12 ತಂಡಗಳು ಒಟ್ಟಾಗಿ “ಯುನಿಫೈಡ್ ಟೀಮ್’ ಹೆಸರಲ್ಲಿ ಸ್ಪರ್ಧಿಸಿ ಅಗ್ರಸ್ಥಾನ ಅಲಂಕರಿಸಿದವು. ದಕ್ಷಿಣ ಆಫ್ರಿಕಾ ಮರಳಿ ಒಲಿಂಪಿಕ್ಸ್ ಪ್ರವೇಶ ಪಡೆಯಿತು.
* ಭಾರತಕ್ಕೆ ಮತ್ತೆ ನಿರಾಸೆ: ಈ ಕೂಟದಲ್ಲಿ ಭಾರತದ 52 ಸ್ಪರ್ಧಿಗಳ ತೆರಳಿದ್ದರು. ಎಲ್ಲರೂ ಬರಿಗೆಯಲ್ಲಿ ವಾಪಸಾದರು.
* 1996: ಅಟ್ಲಾಂಟಾ
ಅಗ್ರಸ್ಥಾನ: ಅಮೆರಿಕ-101 ಪದಕ44 ಚಿನ್ನ, 32 ಬೆಳ್ಳಿ, 25 ಕಂಚು
ಒಲಿಂಪಿಕ್ಸ್‌ನ ಶತಮಾನೋತ್ಸವ ಸಂಭ್ರಮ ಇದಾಗಿತ್ತು. 197 ರಾಷ್ಟ್ರಗಳ 10,320 ಕ್ರೀಡಾಳುಗಳು ಭಾಗವಹಿಸಿದರು. ಬೀಚ್ ವಾಲಿಬಾಲ್, ಮೌಂಟೇನ್ ಬೈಕಿಂಗ್, ಸಾಫ್ಟ್‌ಬಾಲ್ ಮೊದಲ ಸಲ ಪದಕ ಸ್ಪರ್ಧೆಯ ಸಾಲಲ್ಲಿ ಕಾಣಿಸಿಕೊಂಡಿತು.
* ಲಿಯಾಂಡರ್ ಪೇಸ್‌ಗೆ ಕಂಚು: 3 ಒಲಿಂಪಿಕ್ಸ್‌ಗಳ ಬರಗಾಲ ಲಿಯಾಂಡರ್ ಪೇಸ್ ಅವರ ಕಂಚಿನೊಂದಿಗೆ ನೀಗಿತು. ಸೆಮಿಫೈನಲ್‌ನಲ್ಲಿ ಅವರು ಆ್ಯಂಡ್ರೆ ಅಗಾಸ್ಸಿ ವಿರುದ್ಧ ಸೋತರು.
* 2000: ಸಿಡ್ನಿ
ಅಗ್ರಸ್ಥಾನ: ಅಮೆರಿಕ-93ಪದಕ 37 ಚಿನ್ನ, 24 ಬೆಳ್ಳಿ, 32 ಕಂಚು
ಅತ್ಯಧಿಕ 300 ಸ್ಪರ್ಧೆಗಳಿಗೆ ಸಾಕ್ಷಿಯಾದ ಒಲಿಂಪಿಕ್ಸ್. 199 ದೇಶಗಳು ಪಾಲ್ಗೊಂಡವು. ದಾಖಲೆಯ 80 ದೇಶಗಳು ಪದಕಪಟ್ಟಿಯನ್ನು ಅಲಂಕರಿಸಿದವು.
* ಕರ್ಣಂ ಮಲ್ಲೇಶ್ವರಿ ಮಹಾಸಾಧನೆ: ಭಾರತವೂ ಇಲ್ಲಿ ವಿಶೇಷ ಸಾಧನೆ ಮಾಡಿತು. ದೇಶದ ವನಿತೆಯೊಬ್ಬರು ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆದ್ದರು. ಈ ಸಾಧಕಿ ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ (54 ಕೆಜಿ ವಿಭಾಗ).
* 2004: ಅಥೆನ್ಸ್
ಅಗ್ರಸ್ಥಾನ: ಅಮೆರಿಕ-101 ಪದಕ36 ಚಿನ್ನ, 39 ಬೆಳ್ಳಿ, 26 ಕಂಚು
1896ರ ಆಧುನಿಕ ಒಲಿಂಪಿಕ್ಸ್ ಬಳಿಕ ಗ್ರೀಸ್‌ನಲ್ಲಿ ಏರ್ಪಟ್ಟ ಮೊದಲ ಒಲಿಂಪಿಕ್ಸ್. ವನಿತಾ ಕುಸ್ತಿ ಸ್ಫರ್ಧೆಗೆ ಮೊದಲ ಸಲ ಅವಕಾಶ ಸಿಕ್ಕಿತು. 1986ರ ಹಾದಿಯಲ್ಲೇ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಿದ್ದು ವಿಶೇಷ.
* ಭಾರತಕ್ಕೆ ಮೊದಲ ಶೂಟಿಂಗ್ ಪದಕ: ರಾಜ್ಯವರ್ಧನ್ ಸಿಂಗ್ ರಾಥೋರ್ ನೂತನ ಇತಿಹಾಸ ನಿರ್ಮಿಸಿದರು. ಬೆಳ್ಳಿ ಗೆದ್ದು ಭಾರತಕ್ಕೆ ಮೊದಲ ಶೂಟಿಂಗ್ ಪದಕ ಅರ್ಪಿಸಿದರು. ಡಬಲ್ ಟ್ರಾಂಪ್ ಶೂಟಿಂಗ್‌ನಲ್ಲಿ ಈ ಪದಕ ಒಲಿಯಿತು.
* 2008: ಬೀಜಿಂಗ್
ಅಗ್ರಸ್ಥಾನ: ಚೀನಾ-100 ಪದಕ48 ಚಿನ್ನ, 22 ಬೆಳ್ಳಿ, 30 ಕಂಚು
ಚೀನಾದಲ್ಲಿ ನಡೆದ ಮೊದಲ ಒಲಿಂಪಿಕ್ಸ. 204 ದೇಶಗಳ 10,699 ಕ್ರೀಡಾಳುಗಳು ಭಾಗವಹಿಸಿದರು. 87 ದೇಶಗಳಿಗೆ ಪದಕ ಲಭಿಸಿತು. ಆತಿಥೇಯ ಚೀನಾವೇ ಮೇಲುಗೈ ಸಾಧಿಸಿತು.
* ಅಭಿನವ್ ಅಸಾಮಾನ್ಯ ಸಾಧನೆ: ಭಾರತವಿಲ್ಲಿ 2 ಪದಕ ಗೆದ್ದಿತು. ಅಭಿನವ್ ಬಿಂದ್ರಾ 10 ಮೀ. ಏರ್ ರೈಫಲ್ ಶೂಟಿಂಗ್‌ನಲ್ಲಿ ಬಂಗಾರಕ್ಕೆ ಗುರಿ ಇರಿಸಿದರು. ಇದು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಒಲಿದ ಮೊದಲ ಸ್ವರ್ಣ. ಹಾಗೆಯೇ ವಿಜೇಂದರ್ ಸಿಂಗ್ ಬಾಕ್ಸಿಂಗ್‌ನಲ್ಲಿ ಮೊದಲ ಪದಕ ತಂದಿತ್ತರು. ಅವರು ಮಿಡ್ಲ್ವೇಟ್ ವಿಭಾಗದಲ್ಲಿ ಕಂಚು ಹೆದ್ದರು.
* 2012: ಲಂಡನ್
ಅಗ್ರಸ್ಥಾನ: ಅಮೆರಿಕ-104 ಪದಕ 48 ಚಿನ್ನ, 26 ಬೆಳ್ಳಿ, 30 ಕಂಚು
ಒಲಿಂಪಿಕ್ಸ್ ಕೂಟವನ್ನು ಅತ್ಯಧಿಕ 3 ಸಲ ಆಯೋಜಿಸಿದ ಹೆಗ್ಗಳಿಕೆ ಲಂಡನ್‌ನದ್ದಾಯಿತು. 204 ದೇಶಗಳ ಜತೆಗೆ 2 ಐಒಎ ತಂಡಗಳು ಭಾಗವಹಿಸಿದವು. ಒಟ್ಟು 10,518 ಕ್ರೀಡಾಪಟುಗಳ ಮಹಾಸಂಗಮ ಇದಾಗಿತ್ತು.
* ಭಾರತಕ್ಕೆ 6 ಪದಕ: ಭಾರತವಿಲ್ಲಿ ಅಸಾಮಾನ್ಯ ಸಾಧನೆಯೊಂದಿಗೆ 6 ಪದಕ ಗೆದ್ದಿತು. ಶೂಟಿಂಗ್‌ನಲ್ಲಿ ವಿಜಯ್ ಕುಮಾರ್ ಬೆಳ್ಳಿ, ಗಗನ್ ನಾರಂಗ್ ಕಂಚು; ಕುಸ್ತಿಯಲ್ಲಿ ಸುಶೀಲ್ ಕುಮಾರ್ ಬೆಳ್ಳಿ, ಯೋಗೇಶ್ವರ್ ದತ್ ಕಂಚು; ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಕಂಚು, ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಕಂಚು ಗೆದ್ದರು.
* 2016: ರಿಯೋ ಡಿ ಜನೈರೊ
ಅಗ್ರಸ್ಥಾನ: ಅಮೆರಿಕ-121 ಪದಕ46 ಚಿನ್ನ, 37 ಬೆಳ್ಳಿ, 38 ಕಂಚು
ಕೊಸೊವೊ, ಸೌತ್ ಸುಡಾನ್ ಜತೆಗೆ ರೆಪ್ಯುಜಿ ಒಲಿಂಪಿಕ್ ತಂಡಗಳು ಪಾಲ್ಗೊಂಡ ಮೊದಲ ಕ್ರೀಡಾಕೂಟ ಇದಾಗಿತ್ತು. ಒಟ್ಟು 207 ದೇಶಗಳ 11, 238 ಕ್ರೀಡಾಳುಗಳು ಅದೃಷ್ಟ ಪರೀಕ್ಷೆಗೆ ಇಳಿದರು.
* ಭಾರತದ ವನಿತೆಯರ ಸಾಧನೆ: ಇಲ್ಲಿ ಭಾರತಕ್ಕೆ 2 ಪದಕಗಳು ಒಲಿದವು. ಎರಡನ್ನೂ ವನಿತೆಯರೇ ಗೆದ್ದದ್ದು ವಿಶೇಷ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಬೆಳ್ಳಿ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿಗೆ ಕೊರಳೊಡ್ಡಿದರು.
* 2020: ಟೋಕಿಯೋ
ಅಗ್ರಸ್ಥಾನ: ಅಮೆರಿಕ-113 ಪದಕ
49 ಚಿನ್ನ, 41 ಬೆಳ್ಳಿ, 33 ಕಂಚು
ಕೋವಿಡ್ ಕಾರಣದಿಂದ ನಡೆಯುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಇದ್ದ ಈ ಒಲಿಂಪಿಕ್ಸ್ ಕೊನೆಗೂ ಒಂದು ವರ್ಷ ವಿಳಂಬವಾಗಿ ಏರ್ಪಟ್ಟಿತು. ಇತಿಹಾಸದಲ್ಲಿ ಮುಂದೂಡಲ್ಪಟ್ಟ ಮೊದಲ ಒಲಿಂಪಿಕ್ಸ್ ಇದಾಗಿತ್ತು.
* ಭಾರತದ 7 ಪದಕಗಳ ದಾಖಲೆ: ಒಲಿಂಪಿಕ್ಸ್‌ನಲ್ಲಿ ಅತ್ಯಧಿಕ 7 ಪದಕ ಗೆದ್ದ ದಾಖಲೆ ಭಾರತದ್ದಾಯಿತು. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಬಂಗಾರ ಎಲ್ಲಕ್ಕಿಂತ ಮಿಗಿಲಾದ ಸಾಧನೆಯಾಗಿತ್ತು. ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಲವಿÉನಾ ಬೊರ್ಗೊಹೇನ್ ಕಂಚು, ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ, ಬಜರಂಗ್ ಪೂನಿಯ ಕಂಚು, ಪುರುಷರ ಹಾಕಿಯಲ್ಲಿ ಕಂಚು, ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಕಂಚು ಗೆದ್ದರು.
ಯುದ್ಧ ಕಾರಣ 3 ಒಲಿಂಪಿಕ್ಸ್ ರದ್ದು
ಮೊದಲ ಹಾಗೂ ಎರಡನೇ ಮಹಾಯುದ್ಧಗಳ ಕರಿನೆರಳು ಒಲಿಂಪಿಕ್ಸ್ ಮೇಲೂ ಬಿತ್ತು. ಇದರ ಪರಿಣಾಮ, 3 ಒಲಿಂಪಿಕ್ಸ್ ಕೂಟಗಳು ರದ್ದುಗೊಂಡವು. 1916ರ ಬರ್ಲಿನ್, 1940ರ ಟೋಕಿಯೊ ಹಾಗೂ 1944ರ ಲಂಡನ್ ಕೂಟಗಳು ನಡೆಯಲಿಲ್ಲ.
– ಮಾಹಿತಿ: ಎಚ್.ಪ್ರೇಮಾನಂದ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.