ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷರೂ. ಬಾಂಡ್
ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಲಕ್ಷರೂ.ಬಾಂಡ್ ;ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಬೇಕಿಲ್ಲ!
Team Udayavani, Jan 8, 2020, 9:36 PM IST
ಬೆಂಗಳೂರು: ಸಾಮಾನ್ಯ ಹೆರಿಗೆ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮೀ ಯೋಜನೆ ವಿಸ್ತರಿಸಲು ಪಾಲಿಕೆ ಮುಂದಾಗಿದೆ. ಇದಕ್ಕೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ಗಳ ಮಾನದಂಡವೂ ಇಲ್ಲ ಎನ್ನುವುದು ಮತ್ತೂಂದು ವಿಶೇಷ!.
ಪಾಲಿಕೆಯ 6ರೆಫರಲ್ ಹಾಗೂ 26ಪಾಲಿಕೆ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷ ರೂ. ಬಾಂಡ್ ವಿತರಿಸುವ ಯೋಜನೆಗೆ ನಿಯಮ ರೂಪಿಸಲು ಪಾಲಿಕೆ ಮುಂದಾಗಿದೆ. ಮುಂದಿನ ಕೌನ್ಸಿಲ್ ಸಭೆಯಲ್ಲಿ ನಿಯಮಗಳಿಗೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಪಾಲಿಕೆಯ 6ರೆಫರಲ್ ಹಾಗೂ 26ಪಾಲಿಕೆ ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಮೂಲಕ ಜನಿಸುವ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಸೌಲಭ್ಯ ಸಿಗಲಿದೆ. ಕಳೆದ ವರ್ಷ ಪರಿಚಯಿಸಲಾಗಿದ್ದ ಪಿಂಕ್‌ಬೇಬಿ ಯೋಜನೆಯಡಿ ಪಾಲಿಕೆಯ ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷರೂ. ಬಾಂಡ್ ನೀಡಲಾಗುತ್ತಿತ್ತು. ಈಗ ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ತಲಾ ಒಂದು ಲಕ್ಷರೂ. ನೀಡಲು 60 ಕೋಟಿ ರೂ. ಮೀಸಲಿರಿಸಲಾಗಿದೆ.
ಬಾಂಡ್ ಮೊತ್ತವನ್ನು ಹೆಣ್ಣು ಮಗುವಿಗೆ 15 ವರ್ಷದವರೆಗೆ ವಿಸ್ತರಿಸಲಾಗಿದ್ದು, ಮಗುವಿಗೆ 15 ವರ್ಷ ಪೂರ್ಣಗೊಂಡ ನಂತರ ಈ ಹಣ ಸಿಗಲಿದೆ. ಪಾಲಿಕೆಯ ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ. ಎರಡನೇ ಬಾರಿ ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದರೆ, ವಿಶೇಷ ಪ್ರಕರಣ ಎಂದು ಪರಿಗಣಿಸಿ ಆ ಹೆಣ್ಣು ಮಗುವಿಗೂ ಮಹಾಲಕ್ಷ್ಮೀ ಯೋಜನೆ ವಿಸ್ತರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ತಿಳಿಸಿದ್ದಾರೆ.
ಯೋಜನೆ ಫಲಾನುಭವಿಗಳಾಗಲು ನಿಬಂಧನೆಗಳು: ದೇಶದ ಯಾವುದೇ ರಾಜ್ಯದವರಾಗಿದ್ದರೂ ಈ ಸೌಲಭ್ಯ ಸಿಗಲಿದೆ. ಸಹಜ ಹೆರಿಗೆ ಆಗಿದ್ದರೆ ಪಾಲಿಕೆಯ ಆಸ್ಪತ್ರೆಯಲ್ಲಿ ಎರಡು ದಿನ ಹಾಗೂ ಶಸ್ತ್ರಚಿಕಿತ್ಸೆ ಆಗಿದ್ದಲ್ಲಿ ಏಳು ದಿನಗಳ ಕಾಲ ವೈದ್ಯರಿಂದ ದೃಢೀಕರಣ ಪತ್ರ ಪಡೆದುಕೊಳ್ಳಬೇಕು. ಸೌಲಭ್ಯ ಪಡೆಯಲು ಮಗುವಿನ ಜನನ ಪತ್ರ, ತಾಯಿ ಕಾರ್ಡ್, ಆಧಾರ್‌ಕಾರ್ಡ್, ಗುರುತಿನ ಚೀಟಿ ಹಾಗೂ ಮಗುವಿನ ಆಧಾರ್‌ಕಾರ್ಡ್ ವಿವರ ನೀಡುವುದು ಕಡ್ಡಾಯವಾಗಿದೆ.
ಮಗುವಿಗೆ ಮೂರು ವರ್ಷ ತುಂಬುತ್ತಿದ್ದಂತೆ ಕಡ್ಡಾಯವಾಗಿ ಅಂಗನವಾಡಿ ಅಥವಾ ಶಾಲೆಗೆ ಸೇರಿಸಬೇಕು. ಮಹಾಲಕ್ಷ್ಮೀ ಯೋಜನೆಯು ಈ ವರ್ಷದ ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯನ್ನು ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದಾಯ ಮತ್ತು ಪ್ರಾದೇಶಿಕತೆ ಈ ಯೋಜನೆಗೆ ಅನ್ವಯಿಸುವುದಿಲ್ಲ: ಪಾಲಿಕೆಯ ಮಹಾಲಕ್ಷ್ಮೀ ಯೋಜನೆ ಪೋಷಕರ ಆರ್ಥಿಕತೆ ಪರಿಗಣಿಸುವುದಿಲ್ಲ. ಪಾಲಿಕೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದರೆ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.