ಕರಾವಳಿಯ ಸಮಗ್ರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ
ಉದಯವಾಣಿ ಫೋನ್-ಇನ್ ಸಂವಾದದಲ್ಲಿ ಕರಾವಳಿಯ ಮೂವರು ಉಸ್ತುವಾರಿ ಸಚಿವರು ಭಾಗಿ
Team Udayavani, May 1, 2022, 6:25 AM IST
ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ ಧಾರ್ಮಿಕ ಪ್ರವಾಸೋದ್ಯಮ (ಟೆಂಪಲ್ ಟೂರಿಸಂ)ವನ್ನು ಅಭಿವೃದ್ಧಿಪಡಿಸಲು ಈಗಾಗಲೇ ಮುಖ್ಯ ಮಂತ್ರಿಯವರೊಂದಿಗೆ ಚರ್ಚೆ ನಡೆಸಿದ್ದೇವೆ. ಐತಿಹಾಸಿಕ ಧಾರ್ಮಿಕ ಕೇಂದ್ರಗಳನ್ನು ಮುಖ್ಯವಾಗಿ ಇರಿಸಿಕೊಂಡು ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕರ್ನಾಟಕ ಕರಾವಳಿ ಜಿಲ್ಲೆಗಳ ಮೂವರು ಉಸ್ತುವಾರಿ ಸಚಿವರು ತಿಳಿಸಿದರು.
ಉದಯವಾಣಿ ಕಚೇರಿಯಲ್ಲಿ “ಕರಾವಳಿಯ ಅಭಿವೃದ್ಧಿ ಆದ್ಯತೆಗಳು’ ಎಂಬ ಕುರಿತು ಶನಿವಾರ ಹಮ್ಮಿಕೊಂಡಿದ್ದ ಫೋನ್-ಇನ್ ಮತ್ತು ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ, ಕರಾವಳಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.
ಧಾರ್ಮಿಕ ಪ್ರವಾಸೋದ್ಯಮ
ಧಾರ್ಮಿಕ ಪ್ರವಾಸೋದ್ಯಮ (ಟೆಂಪಲ್ ಟೂರಿಸಂ) ಪರಿಕಲ್ಪನೆಯನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದೇವಸ್ಥಾನಗಳಿಗೆ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಂದ ಹೆಚ್ಚು ಹೆಚ್ಚು ಭಕ್ತರು ಮತ್ತು ಪ್ರವಾಸಿಗರು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇವಸ್ಥಾನಗಳ ಅಭಿವೃದ್ಧಿಯ ಜತೆಗೆ ಪ್ರವಾ ಸೋದ್ಯಮ ಅಭಿವೃದ್ಧಿ ಮಾಡಲು ಬೇಕಾದ ಮೂಲ ಸೌಕರ್ಯ, ರಸ್ತೆಗಳ ಅಭಿವೃದ್ಧಿ, ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆ -ಹೀಗೆ ಎಲ್ಲ ವನ್ನೂ ಕಲ್ಪಿಸಲಾಗುವುದು. ಕೊಲ್ಲೂರಿನಿಂದ ಸುಬ್ರಹ್ಮಣ್ಯದ ವರೆಗಿನ ಐತಿಹಾಸಿಕ ದೇವಸ್ಥಾನ ಗಳನ್ನು ಟೆಂಪಲ್ ಟೂರಿಸಂ ಒಳಗೆ ತರಲು ಯೋಚನೆ ಮಾಡುತ್ತಿದ್ದೇವೆ ಎಂದು ಸುನಿಲ್ ಕುಮಾರ್ ಹೇಳಿದರು.
ಸಿಆರ್‌ಝಡ್ ಮಿತಿ ಇಳಿಕೆ ನಿರೀಕ್ಷೆ
ಗೋವಾ ಮತ್ತು ಕೇರಳದಲ್ಲಿ ಸಿಆರ್‌ಝಡ್ ನಿಯಮದ ಹೊರತಾಗಿಯೂ ಪ್ರವಾಸೋದ್ಯಮ ಅಭಿವೃದ್ಧಿ ಯಾಗುತ್ತಿದೆ. ನಮ್ಮಲ್ಲಿ ಬೀಚ್ ಅಭಿವೃದ್ಧಿ ಸಹಿತ ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ಕೆ ಸಿಆರ್‌ಝಡ್ ನಿಯಮ ಅಡ್ಡಿಬರುತ್ತಿದೆ. ಹೀಗಾಗಿ ಸಿಆರ್‌ಝಡ್ ಮಿತಿಯನ್ನು 50 ಮೀಟರ್‌ಗೆ ಇಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರದಿಂದ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಮಿತಿ ಸಡಿಲಿಕೆಯಾದರೆ ಪ್ರವಾಸೋದ್ಯಮದ ಜತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ಆಗಲಿದೆ ಎಂದರು.
ವಿಶೇಷ ತಂಡ ರಚನೆ
ಅಡಿಕೆ ಕೊಳೆ ರೋಗ ಪರಿಹಾರವಾಗಿ ಕಳೆದ ವರ್ಷ 21 ಕೋ.ರೂ. ಅನುದಾನ ನೀಡಲಾಗಿದೆ. ಪ್ರತೀ ವರ್ಷ ಅನುದಾನ ನೀಡುವುದು ಕಷ್ಟ. ಹೀಗಾಗಿ ಕೃಷಿಕರು ಮತ್ತು ಕೃಷಿ ಇಲಾಖೆ ಒಟ್ಟಾಗಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ಜತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದಕ್ಕಾಗಿ ಉನ್ನತ ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರತೀ ವರ್ಷ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ತಳಿ ಬದಲಾವಣೆ ಮಾಡಬೇಕು ಅಥವಾ ಪರ್ಯಾಯ ಮಾರ್ಗ ಹುಡುಕಬೇಕು. ಇದಕ್ಕಾಗಿ ವಿಶೇಷ ತಂಡ ಅಧ್ಯಯನ ಮಾಡಲಿದೆ ಎಂದು ತಿಳಿಸಿದರು. ಮತ್ತಷ್ಟು ಪ್ರಶ್ನೆಗಳಿಗೆ ಆಯಾ ಸಚಿವರು ನೀಡಿದ ಉತ್ತರ ಇಂತಿದೆ.
ಪ್ರಸ್ತಾವನೆ ಸಲ್ಲಿಸಲಿದ್ದೇವೆ
ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ತೆಂಗು ಬೆಳೆ ಗಾರರ ಅನುಕೂಲಕ್ಕಾಗಿ ಬೆಂಬಲ ಬೆಲೆಯಡಿ ತೆಂಗನ್ನು ತರುವ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಹಿಂದೆ ಯಾವ ವಿಧಾನದಲ್ಲಿ ಖರೀದಿ ಮಾಡಲಾಗುತ್ತಿತ್ತು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಏರ್ ಸ್ಟ್ರಿಪ್
ಉಡುಪಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಇಲ್ಲ. ಬದಲಾಗಿ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ತಂಗುದಾಣ (ಏರ್ ಸ್ಟ್ರಿಪ್) ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಪ್ರತೀ ಜಿಲ್ಲೆಯಲ್ಲೂ ವಿಮಾನ ನಿಲ್ದಾಣ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರಕಾರದ ನಿಯಮವನ್ನು ಪಾಲನೆ ಮಾಡಬೇಕಾಗುತ್ತದೆ.
ಚಾರ್ಮಾಡಿ- ಶಿರಾಡಿ ರಸ್ತೆ
ಚಾರ್ಮಾಡಿ, ಶಿರಾಡಿ ರಸ್ತೆ ಅಗಲಗೊಳಿಸುವ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಈಗಾಗಲೇ ಮಾತುಕತೆ ನಡೆಸ ಲಾಗಿದೆ. ಈ ಬಗ್ಗೆ ಸಿಎಂ ಜತೆಗೆ ಮಾತುಕತೆ ನಡೆಸಿ, ಕೇಂದ್ರ ಪರಿಸರ ಇಲಾಖೆಯಿಂದ ಯಾವ ರೀತಿಯಲ್ಲಿ ಅನುಮತಿ ಪಡೆಯಬಹುದು ಎಂಬು ದನ್ನು ಚರ್ಚಿಸಲಿದ್ದೇವೆ.
ಕನ್ನಡ-ಸಂಸ್ಕೃತಿ ಇಲಾಖೆ ಕುರಿತ ಪ್ರಶ್ನೆಗೆ ಸುನಿಲ್ ಕುಮಾರ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗು ತ್ತಿದೆ. ಕಾರ್ಯಕ್ರಮ ನಡೆಸುವ ಮುನ್ನ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳ ಅನುಮೋದನೆಯನ್ನು ಪಡೆಯಬೇಕು ಎಂದು ಕಾನೂನು ತರಲಾಗಿದೆ. ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಸಮಗ್ರ ಅಭಿವೃದ್ಧಿಯತ್ತ ನಮ್ಮ ಆಲೋಚನೆ ಇದೆ ಎಂದರು.
ವಸತಿ ಸಂಕೀರ್ಣ
ರಾಜ್ಯದ ಐದು ಶೈಕ್ಷಣಿಕ ಹಬ್‌ಗಳಲ್ಲಿ ತಲಾ 1 ಸಾವಿರ ವಿದ್ಯಾರ್ಥಿಗಳ ವಸತಿಗೆ ಅನುಕೂಲವಾಗುವಂತೆ ದೀನ ದಯಾಳ್ ವಸತಿ ಸಂಕೀರ್ಣ ರಚನೆ ಮಾಡಲಿದ್ದೇವೆ. ಹೊಸ ವಸತಿ ಶಾಲೆಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉದಯವಾಣಿ ಕಚೇರಿಗೆ ಆಗಮಿಸಿದ ಸಚಿವರಾದ ವಿ. ಸುನಿಲ್ ಕುಮಾರ್, ಎಸ್. ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಸಿಇಒ ಮತ್ತು ಎಂಡಿ ವಿನೋದ ಕುಮಾರ್ ಹಾಗೂ ಮಣಿಪಾಲ್ ಎನರ್ಜಿ ಆ್ಯಂಡ್ ಇನ್‌ಫ್ರಾಟೆಕ್‌ಲಿ.ನ ಸಿಇಒ ಮತ್ತು ಎಂಡಿ ಸಾಗರ್ ಮುಖೋಪಾಧ್ಯಾಯ ಅವರು ಹೂ ಗುತ್ಛ ನೀಡಿ ಸ್ವಾಗತಿಸಿದರು. ಬಳಿಕ ಫೋನ್ -ಇನ್ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಉದಯವಾಣಿ ಬಳಗದ ವತಿಯಿಂದ ಸಚಿವತ್ರಯರನ್ನು ಆತ್ಮೀಯವಾಗಿ ಗೌರವಿಸಲಾಯಿತು.
1. ಪ್ರತ್ಯೇಕ ಮರಳು ನೀತಿ ಬೇಡಿಕೆಯಿದೆ
ಕರಾವಳಿಗಾಗಿ ಪ್ರತ್ಯೇಕ ಮರಳು ನೀತಿ ರೂಪಿಸಬೇಕು ಎನ್ನುವ ಒತ್ತಡ ನಿರಂತರವಾಗಿದೆ.
ಕರಾವಳಿಯಲ್ಲಿ ಮರಳು ಸಂಗ್ರಹಣೆಯ ವಿಧಾನವೇ ಬೇರೆ ಇರುವುದರಿಂದ ಈಗಾಗಲೇ ಇರುವ ಕಾನೂನು ತೊಡಕುಗಳನ್ನು ಕಡಿಮೆ ಮಾಡಿದ್ದೇವೆ. ಎರಡು ಜಿಲ್ಲೆಗಳಿಗೆ ಪ್ರತ್ಯೇಕ ನೀತಿಯ ಬೇಡಿಕೆ ಇದ್ದೇ ಇರುತ್ತದೆ. ಜನರಿಗೆ ಕಡಿಮೆ ದರದಲ್ಲಿ ಮರಳು ಒದಗಿಸಲು ಬೇಕಾದ ಎಲ್ಲ ಕ್ರಮ ತೆಗೆದುಕೊಳ್ಳಲಿದ್ದೇವೆ. ಹೊರ ರಾಜ್ಯಗಳಿಗೆ ಮರಳು ಹೋಗುವುದು ನಿಂತಿದೆ. ಅಕ್ರಮ ಮರಳುಗಾರಿಕೆಗೂ ಕಡಿವಾಣ ಹಾಕಲಾಗಿದೆ.
2. ಹೆಚ್ಚುವರಿ ದರ ಹೊಂದಾಣಿಕೆ
ಸ್ಥಳೀಯ ಕುಚ್ಚಲು ಅಕ್ಕಿಯನ್ನು ಪಡಿತರ ವ್ಯವಸ್ಥೆಯಡಿ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಹೀಗಾಗಿ ಪ್ರತೀ ತಿಂಗಳು ಉಭಯ ಜಿಲ್ಲೆಗಳಿಗೆ ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ. ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಅಗತ್ಯವಿದೆ. ಇದಕ್ಕೆ 17-18 ಲಕ್ಷ ಕ್ವಿಂಟಾಲ್ ಭತ್ತ ಬೇಕು. ಬೆಂಬಲ ಬೆಲೆಯಡಿ ಖರೀದಿ ದರಕ್ಕೂ ಮಾರುಕಟ್ಟೆ ದರಕ್ಕೂ ವ್ಯತ್ಯಾಸವಿದೆ. ಈ ವ್ಯತ್ಯಾಸದ ಮೊತ್ತವನ್ನು ರಾಜ್ಯ ಸರಕಾರದಿಂದ ಭರಿಸಬಹುದೇ ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಕುಚ್ಚಲು ಅಕ್ಕಿ ನೀಡಲು ಪ್ರಯತ್ನಿಸುತ್ತೇವೆ.
3. ಸ್ಥಳೀಯರಿಗೆ ಉದ್ಯೋಗ
ಎಸ್‌ಇಝಡ್ ಕೇಂದ್ರ ನಮ್ಮಲ್ಲಿದೆ. ಎಂಆರ್‌ಪಿಎಲ್ ಸಹಿತ ಎಲ್ಲ ಕಡೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕೆಲವು ಕಡೆ ಲೋಪವಾಗಿರಬಹುದು. ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಜತೆ ಮಾತುಕತೆ ನಡೆಸಿದ್ದೇವೆ. ಸ್ಥಳೀಯರಿಗೆ ಉದ್ಯೋಗ ನೀಡಲು ನಾವು ಬದ್ಧವಾಗಿದ್ದೇವೆ. ಕರಾವಳಿಗೆ ಐಟಿ ಕಂಪೆನಿಗಳನ್ನು ಕರೆತರುವ ನಿಟ್ಟಿನಲ್ಲೂ ಕ್ರಮ ಆಗುತ್ತಿದೆ. ಕರಾವಳಿಯ ಪ್ರತಿಭೆಯನ್ನು ಇಲ್ಲಿಯೇ ಉಳಿಸಿಕೊಳ್ಳಲು ವಿವಿಧ ಕಾರ್ಯಯೊಜನೆ ರೂಪಿಸುತ್ತಿದ್ದೇವೆ.
4. ಎಲ್ಲ ಮನೆಗಳಿಗೂ ವಿದ್ಯುತ್
ರಾಜ್ಯದ ವಿದ್ಯುತ್ ರಹಿತರ ಮನೆಯ ಪಟ್ಟಿಯನ್ನು ನೀಡುವಂತೆ ಎಲ್ಲ ತಾಲೂಕು ಗಳಿಗೂ ಸೂಚಿಸಲಾಗಿದೆ. ಅವರು ಗ್ರಾ.ಪಂ.ಗಳಿಂದ ಮಾಹಿತಿ ಪಡೆದು, ಇಲಾಖೆಗೆ ಸಲ್ಲಿಸುತ್ತಿದ್ದಂತೆ ಆದ್ಯತೆ ಮೇರೆಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಆಗಲಿದೆ. ವಿದ್ಯುತ್ ರಹಿತ ಮನೆಗಳ ಗುರುತಿಸುವಿಕೆ ಎಷ್ಟು ಬೇಗ ಆಗಲಿದೆಯೋ ಅಷ್ಟೇ ವೇಗದಲ್ಲಿ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆ ನಡೆಯಲಿದೆ.
ತಾಸಿನೊಳಗೆ ಸಮಸ್ಯೆ ಇತ್ಯರ್ಥ!
ವಾಣಿಜ್ಯ ಉಪಯೋಗಕ್ಕಾಗಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದರೂ ಸಂಪರ್ಕ ಸಿಕ್ಕಿಲ್ಲ ಎಂದು ಸುಳ್ಯ ನಿವಾಸಿ ಅನಿಲ್ ಕುಮಾರ್ ಅವರು ಕರೆ ಮಾಡಿ ತಿಳಿಸಿದ್ದರು. ಕೂಡಲೇ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡ ಸಚಿವ ಸುನಿಲ್ ಕುಮಾರ್ ಅವರು ಕಾರ್ಯಕ್ರಮ ಮುಗಿದ ಒಂದು ತಾಸಿನೊಳಗೆ ಆ ಸಮಸ್ಯೆಯನ್ನು ಬಗೆಹರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.