Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ವೈಕುಂಠ ಏಕಾದಶಿಯಂದು ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡಲಿದ್ದು...
Team Udayavani, Jan 9, 2025, 3:44 PM IST
ತಿರುಪತಿ ತಿರುಮಲ ದೇವಾಲಯದಲ್ಲಿ ಬುಧವಾರ (ಜ.08) ರಾತ್ರಿ ವೈಕುಂಠ ಏಕಾದಶಿ ವಿಶೇಷ ದರ್ಶನದ ಟಿಕೆಟ್ ಗಳ ವಿತರಣೆಗಾಗಿ ತೆರೆಯಲಾಗಿದ್ದ ಕೌಂಟರ್ ಗಳಲ್ಲಿ ನೂಕುನುಗ್ಗಲು ಸಂಭವಿಸಿ ನಡೆದ ದುರಂತದಲ್ಲಿ ಮಹಿಳೆಯರು ಸೇರಿದಂತೆ ಆರು ಭಕ್ತರು ಸಾವ*ನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಭಕ್ತರ ಸಮೂಹದಿಂದ ತುಂಬಿ ತುಳುಕುತ್ತಿದ್ದ ಕೌಂಟರ್ ಗಳಲ್ಲಿ ಈ ದುರಂತ ಸಂಭವಿಸಲು ಕಾರಣವೇನು? ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಏನು ಎಂಬ ವಿವರಣೆ ಇಲ್ಲಿದೆ…
ಬೆಳಗ್ಗೆಯಿಂದ ಕಾದು ನಿಂತಿದ್ದ ಭಕ್ತರ ದಂಡು:
ವೈಕುಂಠ ಏಕಾದಶಿ ವಿಶೇಷ ದರ್ಶನದ ಟಿಕೆಟ್ ಗಾಗಿ ಭಕ್ತರು ಬುಧವಾರ ಬೆಳಗ್ಗೆಯಿಂದಲೇ ಕಾದು ನಿಂತಿದ್ದರು. ಸಂಜೆಯಾಗುತ್ತಲೇ ಭಕ್ತರ ಸಂಖ್ಯೆ ಮಿತಿಮೀರಿತ್ತು. ಅಷ್ಟೇ ಅಲ್ಲ ನೂಕುನುಗ್ಗಲನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಪರಿಣಾಮ ಎರಡು ಕೌಂಟರ್ ಗಳಲ್ಲಿ ಕಾಲ್ತುಳಿತ ಸಂಭವಿಸಿತ್ತು.
ಜನವರಿ 10ರ ವೈಕುಂಠ ಏಕಾದಶಿ ದರ್ಶನಕ್ಕಾಗಿ 1.2 ಲಕ್ಷ ಟೋಕನ್ ಗಳನ್ನು ವಿತರಿಸುವುದಾಗಿ ಟಿಟಿಡಿ ಘೋಷಿಸಿತ್ತು. ಇದಕ್ಕಾಗಿ 9 ಕೇಂದ್ರಗಳಲ್ಲಿ 94 ಕೌಂಟರ್ ಗಳನ್ನು ತೆರೆದು, ಟೋಕನ್ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಏಕಾಏಕಿ ಭಕ್ತರ ಸಂಖ್ಯೆ ಹೆಚ್ಚಳವಾಗಿರುವುದು ಈ ದುರಂತ ಸಂಭವಿಸಲು ಕಾರಣವಾಗಿದೆ ಎಂದು ವರದಿ ವಿವರಿಸಿದೆ.
ಕಾಲ್ತುಳಿತದಲ್ಲಿ ತಮಿಳುನಾಡಿನ ಸೇಲಂನ ಮಲ್ಲಿಕಾ ಎಂಬ ಭಕ್ತೆ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದರು. ಮೂವರು ಭಕ್ತರು ರುಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಸಾವ*ನ್ನಪ್ಪಿದ್ದರು. ಇನ್ನುಳಿದ ಇಬ್ಬರು ಭಕ್ತರು ಎಸ್ ವಿಐಎಂಎಸ್ ನಲ್ಲಿ ಕೊನೆಯುಸಿರೆಳೆದಿದ್ದರು. ಕೆಲವು ಭಕ್ತರ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಈ ಕಾಲ್ತುಳಿತ ದುರಂತಕ್ಕೆ ಭಕ್ತ ಸಮೂಹದ ಕಳಪೆ ನಿಯಂತ್ರಣವೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಒಂದು ವೇಳೆ ಕೋವಿಡ್ ಕಾಲದ ನಂತರದ ಟೋಕನ್ ವ್ಯವಸ್ಥೆಯನ್ನು ಅನುಸರಿಸಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಅಲ್ಲದೇ ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆಯೂ ಇರಲಿಲ್ಲವಾಗಿತ್ತು ಎಂದು ಮತ್ತೊಬ್ಬ ಭಕ್ತರು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗೇಟ್ ಗಳನ್ನು ತೆರೆದ ಸಂದರ್ಭದಲ್ಲಿ ಕೇವಲ ನಾಲ್ಕು ಮಂದಿ ಪೊಲೀಸರು ಮಾತ್ರ ಇದ್ದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬೆಳಗ್ಗೆಯಿಂದಲೇ ಕಾಯುತ್ತಿದ್ದ ಭಕ್ತರು ನುಗ್ಗಿದ ಪರಿಣಾಮ ನೂಕುನುಗ್ಗಲು ಸಂಭವಿಸಿತ್ತು ಎಂದು ಮತ್ತೊಬ್ಬ ಭಕ್ತರು ತಿಳಿಸಿದ್ದಾರೆ.
ತಿರುಪತಿ ತಿರುಮಲ ದೇವಾಲಯ ಜಗತ್ತಿನ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ದೇವರ ದರ್ಶನದ ಟಿಕೆಟ್, ದೇಣಿಗೆ ಹಾಗೂ ಇತರ ಮೂಲಗಳಿಂದ ಬೃಹತ್ ಪ್ರಮಾಣದ ಆದಾಯವನ್ನು ಹೊಂದಿದೆ. 2024ರಲ್ಲಿ ತಿರುಪತಿಗೆ 2.55 ಕೋಟಿಗಿಂತಲೂ ಅಧಿಕ ಭಕ್ತರು ಭೇಟಿ ನೀಡಿದ್ದರು. ಇದರಿಂದ 1,365 ಕೋಟಿ ರೂಪಾಯಿ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು ಎಂದು ವರದಿ ವಿವರಿಸಿದೆ.
ವೈಕುಂಠ ದ್ವಾರ ದರ್ಶನವು ಅತ್ಯಂತ ಪವಿತ್ರವಾದ ಕಾರ್ಯಕ್ರಮವಾಗಿದೆ. ಕಾಕತಾಳೀಯ ಎಂಬಂತೆ ಈ ಬಾರಿಯ ವೈಕುಂಠ ಏಕಾದಶಿ ಹಬ್ಬವೂ ಬಂದಿದ್ದು, ಈ ಸಂದರ್ಭದಲ್ಲಿ ಪವಿತ್ರ ವೈಕುಂಠ ದ್ವಾರದ ದರ್ಶನ ಪಡೆಯುವುದು ಸ್ವರ್ಗಕ್ಕೆ ಸಮನಾದದ್ದು ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ವೈಕುಂಠ ಏಕಾದಶಿಯಂದು ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡಲಿದ್ದು, ಆಯ್ದ ದಿನದಲ್ಲಿ 2-3 ಲಕ್ಷ ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಆದರೆ ಕಾಲ್ತುಳಿತ ಘಟನೆಯಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸುವುದರಿಂದ ಜನಸಂದಣಿಯನ್ನು ನಿಯಂತ್ರಿಸಲು ಬೇಕಾದ ತುರ್ತು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.