ಪೇಜಾವರ ವಿಶೇಷ: ನಕ್ಸಲ್ ಪೀಡಿತ ಗುಡ್ಡಗಾಡು ಜನರಿಗೆ ಬದುಕು ಕಟ್ಟಿಕೊಟ್ಟ ಸಂತ
Team Udayavani, Dec 29, 2019, 10:54 AM IST
ಈ ಸಹಸ್ರಮಾನದ ಆರಂಭದ (2000) ಕಾಲ. ಆಗ ಉಡುಪಿ ಶ್ರೀಕೃಷ್ಣಮಠದಲ್ಲಿ ಪೇಜಾವರ ಶ್ರೀಗಳ ನಾಲ್ಕನೆಯ ಪರ್ಯಾಯದ ಅವಧಿ. ಇತ್ತ ಕಡೆ ಚತುರ್ಥ ಪರ್ಯಾಯ ಸಂಭ್ರಮ, ಅತ್ತ ಪ್ರಶಾಂತ ತಾಣವಾಗಿದ್ದ ಮಲೆನಾಡು ಪಶ್ಚಿಮ ಘಟ್ಟ ಪ್ರದೇಶದ ಕಾಡು ಜನರಲ್ಲಿ ಅಭದ್ರತೆ, ಸರಕಾರದ ದ್ವಂದ್ವ ನಿಲುವು, ಚಳವಳಿ, ಅನಪೇಕ್ಷಿತ ಘಟನೆ, ಹಿಂಸೆ- ಪ್ರತಿಹಿಂಸೆ ಮೂಡಿದ್ದವು. ಅವರಷ್ಟಕ್ಕೆ ಅವರು ಬದುಕಿಕೊಂಡಿದ್ದ ಕಾಡಿನ ಗಿರಿಜನರು ಸರಕಾರದ ವಿರುದ್ಧ ಬಹಿರಂಗವಾಗಿ ಚಳವಳಿ ನಡೆಸಿದರು. ಇದೇ ವೇಳೆ ನಕ್ಸಲ್ ಚಳವಳಿಗೂ ಕಂಡುಬಂದವು. ಕಾಡಿನ ಜನರನ್ನು ಬೇರೆ ಬೇರೆ “ಇಸಂ’ಗಳ ಮೂಲಕ ಸರಕಾರ, ಪ್ರಜಾಪ್ರಭುತ್ವ, ಸ್ಥಳೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ, ಒಂದು ಜನಾಂಗದ ವಿರುದ್ಧ ಇನ್ನೊಂದು ಜನಾಂಗವನ್ನು ಎತ್ತಿಕಟ್ಟುವ ಕೆಲಸ ವ್ಯವಸ್ಥಿತವಾಗಿ ನಡೆದವು.
ಪೇಜಾವರ ಶ್ರೀಗಳವರು ವಿಶ್ವಾಸಾರ್ಹ ವ್ಯಕ್ತಿಗಳನ್ನು ನಿಯೋಜಿಸಿ ಜನರ ನಿಜವಾದ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಸೂಚಿಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಸರಕಾರದ ತಪ್ಪು ನಿರ್ಧಾರದಿಂದ ಗಿರಿಜನರಲ್ಲಿ ಅಭದ್ರತೆ, ಅತಂತ್ರ ಭಾವನೆ ಮೂಡಿರುವ ಬಗ್ಗೆ ವರದಿಗಳು ಬೆಳಕು ಚೆಲ್ಲಿದವು. ಕಾಡಿನ ಜನರಿಗೆ ಮುಖ್ಯವಾಗಿ ಬೇಕಾದದ್ದು ಜೀವನದಲ್ಲಿ ಭದ್ರತೆ. ಅವರ ಜೊತೆ ಭಾವನಾತ್ಮಕವಾಗಿ ನಿಲ್ಲಬೇಕು. ಶಿಕ್ಷಣ, ರಸ್ತೆ, ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಒಟ್ಟಿನಲ್ಲಿ ಅವರು ಅತಂತ್ರರಲ್ಲ, ಅವರ ಜೊತೆ ನಾವಿದ್ದೇವೆ ಎಂಬ ಮನೋಸ್ಥೈರ್ಯ ಮೂಡಬೇಕು. ಇದನ್ನೇ ಕಳೆದ ಒಂದೆರಡು ದಶಕಗಳಿಂದ ಪೇಜಾವರ ಶ್ರೀಗಳು ನಡೆಸುತ್ತಿದ್ದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದ.ಕ. ಜಿಲ್ಲೆಗಳ 80 ಗ್ರಾ.ಪಂ.ಗಳು ಬರುತ್ತವೆ. ಇದುವರೆಗೆ ಶ್ರೀಗಳು ತಮ್ಮ ಕಾರ್ಯತಂಡದ ಮೂಲಕ ನೂರಾರು ಮನೆಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಪೂರೈಕೆ, ಮನೆ ನಿರ್ಮಾಣ, ಪರಿಕರ ಪೂರೈಕೆ, ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆ, ಹತ್ತಾರು ದೈವಸ್ಥಾನಗಳ ಅಭಿವೃದ್ಧಿ, ಕೃಷಿ ಮಾಡುವ ಆಸಕ್ತ ಗಿರಿಜನರಿಗೆ ಕೃಷಿಭೂಮಿ ಒದಗಣೆ, ಪರಂಪರಾಗತ ಕಲಾವಿದರಿಗೆ ಜನಪದ ಪರಿಕರಗಳ ಸರಬರಾಜು ಇತ್ಯಾದಿ ಕೆಲಸಗಳನ್ನು ಮಾಡಿದರು. ಮೃತ ಹೊಂದಿದ 12ನೆಯ ದಿನ ನಡೆಸುವ ಅಪರ ಸಂಸ್ಕಾರಕ್ಕೂ ಪೇಜಾವರ ಮಠ ಪ್ರಾಯೋಜಿತ ನಾಗರಿಕ ಸಮಿತಿ ಕಾರ್ಯಕರ್ತರು ಬೆಂಗಾವಲಾಗಿ ನಿಂತ ಉದಾಹರಣೆಗಳೂ ಇವೆ.
ಪೇಜಾವರ ಶ್ರೀಗಳ ದೂರಗಾಮಿ ಯೋಜನೆಯ ಫಲಿತಾಂಶ ಮತ್ತು ಅವರ ಗ್ರಾಮ ಗ್ರಾಮಗಳಲ್ಲಿ ನಡೆಸಿದ ಸಂಚಾರದ ಪರಿಣಾಮವೆಂದರೆ ಗಿರಿಜನರಿಗೆ ತಾವು ಅಸಹಾಯಕರಲ್ಲ, ಅತಂತ್ರರಲ್ಲ ಎಂಬ ಭಾವನೆ ಒಂದಿಷ್ಟು ಮೂಡಿವೆ. ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ, ವಿವಿಧ ಸ್ತರಗಳ ಜನಪ್ರತಿನಿಧಿಗಳಲ್ಲಿ ತಾವೂ ಈ ಸಮುದಾಯಕ್ಕಾಗಿ ಏನಾದರೂ ಒಂದಿಷ್ಟು ಧನಾತ್ಮಕ ಕೆಲಸ ಮಾಡಬೇಕೆಂಬ ಇರಾದೆ ಮೂಡಿದೆ. ಗಿರಿಜನರಿಗೆ ಪ್ರಜಾಪ್ರಭುತ್ವ, ಸರಕಾರದ ಮೇಲೆ ವಿಶ್ವಾಸ ಬರುತ್ತಿದೆ. ಪೊಲೀಸ್ ಇಲಾಖೆ ಜನಪರವಾಗಿ ಜನರಿಗೆ ಹತ್ತಿರವಾಗುತ್ತಿದೆ. ಅನಗತ್ಯ ಹಿಂಸೆ, ಗೊಂದಲ, ರಕ್ತಪಾತದ ಭಯ ದೂರವಾಗುತ್ತಿದೆ ಎನ್ನುತ್ತಾರೆ ಮಲೆನಾಡು ಪ್ರದೇಶದ ನಾಗರಿಕ ಸಮಿತಿ ಪದಾಧಿಕಾರಿಗಳು.
ನದಿ ಝರಿಯಲ್ಲಿ ಸ್ನಾನ, ಪಕ್ಕದಲ್ಲಿ ಪೂಜೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸರಹದ್ದು ಗ್ರಾಮವಾದ (ಮೂಡಿಗೆರೆ ತಾಲೂಕಿನ ಗಡಿ) ಮುಂಡಗಾರು ಗಿರಿಜನ ಗ್ರಾಮ (ಉಡ್ತಾಳ್-ಮುಂಡಗಾರ್). ಮಂಗಳೂರು-ಶೋಲಾಪುರ ರಾ.ಹೆ. ಶೃಂಗೇರಿ ತಾಲೂಕಿನ ಮಾತೊಳ್ಳಿಯಿಂದ ಈ ಗ್ರಾಮಕ್ಕೆ 13 ಕಿ.ಮೀ. ಎನ್ನುತ್ತಾರೆ. ಇದನ್ನು ಕ್ರಮಿಸುವುದು ಮಾತ್ರ ಬಲು ಕಷ್ಟ. ಇಂತಹ ಊರುಗಳ ಕಾಡಿನ ಗಿರಿಜನರಿಗೆ ನಾಡಿನ ಕ್ರಿಯಾಶೀಲ ಸಂತ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಾವೂ ನಿಮ್ಮ ಜೊತೆ ಇದ್ದೇವೆ ಎಂಬ ಭರವಸೆ ಮಾತುಗಳನ್ನಾಡಿದ್ದು ಮಾತ್ರವಲ್ಲ ಕಳೆದ ಒಂದೆರಡು ದಶಕಗಳಿಂದ ನಕ್ಸಲ್ ಪೀಡಿತ ಗ್ರಾಮಗಳನ್ನು ಆಯ್ದು ಅಲ್ಲಿಗೆ ನೆರವು ನೀಡುವ ಯೋಜನೆ ನಡೆಸಿ ಭರವಸೆ ಮಾತುಗಳನ್ನು ಅನುಷ್ಠಾನಕ್ಕೆ ತಂದರು..
ಸಾಂಪ್ರದಾಯಿಕ ಮಠಗಳ ಸ್ವಾಮೀಜಿ ಮಧ್ಯಾಹ್ನದ ಪೂಜೆ ಮಾಡಬೇಕಾದರೆ ನಿಯಮಾನುಸಾರ ಒಂದೋ ಬಾವಿ ಅಥವಾ ಕೊಳವೆಬಾವಿ ಬೇಕು. ಅಂದರೆ ಭೂಮಿಯಿಂದ ನೇರವಾಗಿ ತೆಗೆದ ನೀರು ಪೂಜೆಗೆ ಬಳಸಲು ಅರ್ಹ. ಮುಂಡಗಾರು ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀಗಳು ವಾಸ್ತವ್ಯ ಮಾಡಿದ್ದ ಗಿರಿಜನ ಸಮುದಾಯದ ವೆಂಕಣ್ಣ ಗೌಡ್ಲು ಅವರಿಗೆ ನಿರ್ಮಿಸಿಕೊಟ್ಟ ಮನೆಯಲ್ಲಿ ಬಾವಿ, ಕೊಳವೆಬಾವಿ ಇರಲಿಲ್ಲ. ಹರಿಯುವ ತೊರೆ ಬೇಸಗೆಯಿಂದ ಬತ್ತಿ ಹೋಗಿತ್ತು. ಇದಕ್ಕೆ ಪರಿಹಾರವಾಗಿ ಶ್ರೀಪಾದರು ಆಯ್ದುಕೊಂಡದ್ದು ನದಿ ಝರಿಯ ಪಕ್ಕ. ನದಿ ನೀರಿನ ಸ್ನಾನ, ಸರೋವರದಲ್ಲಿ ಮುಳುಗುಹಾಕಿ ಸ್ನಾನ ಭಾರತೀಯ ಪರಂಪರೆಗೆ ಹೊಸತಲ್ಲವಾದರೂ ಈಗ ಬಹುತೇಕ ಎಲ್ಲರಿಗೂ ಈ ಸಂಸ್ಕೃತಿ ನೆನಪು ಹೋಗಿದೆ. ಮುಂಡಗಾರು ಗ್ರಾಮದಲ್ಲಿ ಹರಿಯುವ ನದಿ ನೀರಿನಲ್ಲಿ ಸ್ನಾನ ಮಾಡಿ ಪಕ್ಕದ ಜಾಗದಲ್ಲಿ ಬೆಳ್ಳಿಯ ಪೀಠ ಹಾಕಿ ಪಟ್ಟದ ದೇವರನ್ನು ಶ್ರೀಪಾದರು ಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಜತೆ ಪೂಜಿಸಿದರು. ಅಲ್ಲೇ ಅನ್ನ (ಉರುಳಿ) ತಯಾರಿ, ನೈವೇದ್ಯ ನಡೆಯಿತು. ಗಿರಿಜನರು ಸ್ವಾಮೀಜಿಯವರಿಗಾಗಿ ತಾವೇ ತಯಾರಿಸಿದ ಬೆತ್ತದ ಬುಟ್ಟಿಯಲ್ಲಿ ತಾಜಾ ಜೇನುತುಪ್ಪವನ್ನು ಸಮರ್ಪಿಸಿ ಧನ್ಯತೆ ಕಂಡರು.
ಎಂಡೇಂಜರ್ ಸ್ಪೀಸಿಸ್
ಪರಿಸರವಿಜ್ಞಾನದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ‘ಎಂಡೇಂಜರ್ ಸ್ಪೀಸಿಸ್’ ಎನ್ನುತ್ತಾರೆ. ‘ಟ್ಯಾಕ್ಸೋನೊಮಿಸ್ಟ್ಸ್’ (ವರ್ಗೀಕರಣಶಾಸ್ತ್ರಜ್ಞರು) ಕಡಿಮೆಯಾಗುತ್ತಿರುವಂತೆ ಸಾಮಾಜಿಕ ಕಳಕಳಿ ಇರುವ ಶ್ರೀಪೇಜಾವರ ಸ್ವಾಮೀಜಿಯಂತಹ ಅಪರೂಪದ ವರ್ಗ ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಇಂತಹ ಸಂತರ ಸಂತತಿ ಹೆಚ್ಚಿಗೆಯಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ ಕುಷ್ಟಗಿಯವರು ಮುಂಡಗಾರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.