ಪಿಎಫ್‌ಐ ಕಾರ್ಯಕರ್ತರಿಂದ ಸೋಂಕಿತನ ಅಂತ್ಯಕ್ರಿಯೆ!
Team Udayavani, Jul 12, 2020, 6:59 PM IST
ಚಾಮರಾಜನಗರ: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಮೃತನ ಬಂಧುಗಳೇ ಹಿಂಜರಿಯುತ್ತಿರುವ ಸನ್ನಿವೇಶ ಹಲವೆಡೆ ಇದೆ. ಹೀಗಿರುವಾಗ, ನಗರದಲ್ಲಿ ಪಿಎಫ್‌ಐ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸೋಂಕಿತ ಮೃತನ ಶರೀರದ ಅಂತ್ಯಕ್ರಿಯೆ ನಡೆಸಿದರು.
ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಕೊಳ್ಳೇಗಾಲ ತಾಲೂಕು ಕೊಂಗರಹಳ್ಳಿ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಶನಿವಾರ ತಡ ರಾತ್ರಿ ಗೌರವಯುತವಾಗಿ ನೆರವೇರಿಸಲಾಯಿತು.
ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವದ ಅಂತ್ಯಕ್ರಿಯೆಯನ್ನು ಕೆಲವೆಡೆ ಗೌರವಯುತವಾಗಿ ನಡೆಸದ ಹಿನ್ನೆಲೆಯಲ್ಲಿ ಚರ್ಚೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಯಾರಾದರೂ ಮೃತಪಟ್ಟರೆ ಅಂಥವರ ಅಂತ್ಯಕ್ರಿಯೆಯನ್ನು ನಡೆಸುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರು. ಕೋವಿಡ್ ಮೃತದೇಹದ ಅಂತ್ಯಕ್ರಿಯೆ ನಡೆಸಬೇಕಾದ ಮಾರ್ಗಸೂಚಿಯ ಪ್ರಕಾರ ಅವರಿಗೆ ತರಬೇತಿ ಸಹ ನೀಡಲಾಗಿತ್ತು.
ಶನಿವಾರ ಕೊಂಗರಹಳ್ಳಿಯ 58 ವರ್ಷದ ವ್ಯಕ್ತಿ ಕೋವಿಡ್‌ನಿಂದ ಮೃತರಾದ ಹಿನ್ನೆಲೆಯಲ್ಲಿ, ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮದಲ್ಲಿ ನಡೆಸಲು ಗ್ರಾಮದ ಮುಖಂಡರು ಒಪ್ಪಲಿಲ್ಲ. ಸರ್ಕಾರದಿಂದಲೇ ಅಂತ್ಯಕ್ರಿಯೆ ನಡೆಸಲಾಗುವುದು, ಸ್ಥಳಾವಕಾಶ ನೀಡುವಂತೆ ತಹಶೀಲ್ದಾರ್ ಕೋರಿದರೂ, ಗ್ರಾಮದಲ್ಲಿ ಒಪ್ಪಲಿಲ್ಲ.
ನಗರದ ವೈದ್ಯಕೀಯ ಕಾಲೇಜು ಪ್ರದೇಶದ 2 ಎಕರೆ ಭೂಮಿಯನ್ನು ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆಂದೇ ಜಿಲ್ಲಾಡಳಿತ ಮೀಸಲಿಟ್ಟಿದೆ. ಹೀಗಾಗಿ ಅಲ್ಲಿಯೇ ಶನಿವಾರ ತಡರಾತ್ರಿ 11.30ರಲ್ಲಿ ಪಿಎಫ್‌ಐನ 6-7 ಮಂದಿ ಕಾರ್ಯಕರ್ತರು ಅಂತ್ಯಕ್ರಿಯೆ ನಡೆಸಿದರು. ಪಿಪಿಇ ಕಿಟ್ ಧರಿಸಿ, ಹಳ್ಳಕ್ಕೆ ರಾಸಾಯನಿಕ ಸಿಂಪಡಿಸಿ, ಆ ಹಳ್ಳಕ್ಕೆ ಶವವನ್ನು ಹಗ್ಗಕಟ್ಟಿ ಇಳಿಬಿಟ್ಟು, ನಂತರವೂ ರಾಸಾಯನಿಕ ಸಿಂಪಡಣೆ ಮಾಡಿ, ನಂತರ ಮಣ್ಣು ಮುಚ್ಚಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ಈ ಕಾರ್ಯಕ್ಕೆ ನಿಯೋಜಿತಗೊಂಡಿರುವ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.
ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರವನ್ನು ನಗರದ ಹೊರ ವಲಯದ ಸರಕಾರಿ ಭೂಮಿಯಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಪಿಎಫ್‌ಐ ಕಾರ್ಯಕರ್ತರ ನೆರವಿನಿಂದ ನಡೆಸಲಾಯಿತು.
– ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್, ಚಾ.ನಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.