ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ಆನ್‌ಲೈನ್ ಸ್ಪರ್ಶ: ಕ್ರೀಡಾ ಇತಿಹಾಸದಲ್ಲೇ ಮೊದಲು
ಸಮಾರಂಭ ನಡೆಸಿಕೊಟ್ಟ ರಾಷ್ಟ್ರಪತಿ, ಸಾಯ್ ಕೇಂದ್ರಗಳಲ್ಲಿ ನೆರೆದ ಪ್ರಶಸ್ತಿ ಪುರಸ್ಕೃತರು
Team Udayavani, Aug 29, 2020, 4:51 PM IST
ಹೊಸದಿಲ್ಲಿ: ರಾಷ್ಟ್ರೀಯ ಕ್ರೀಡಾ ದಿನವಾದ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಕ್ರೀಡಾ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 44 ವರ್ಷಗಳ ಕ್ರೀಡಾ ಪ್ರಶಸ್ತಿ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಮಾರಂಭ ಆನ್‌ಲೈನ್ ಮೂಲಕ ನಡೆದದ್ದು ವಿಶೇಷ. ರಾಷ್ಟ್ರಪತಿಯವರು “ರಾಷ್ಟ್ರಪತಿ ಭವನ’ದ ದರ್ಬಾರ್ ಹಾಲ್‌ನಲ್ಲಿ ಉಪಸ್ಥಿತರಿದ್ದು ಸಮಾರಂಭಕ್ಕೆ ಚಾಲನೆ ನೀಡಿದರೆ, ಪ್ರಶಸ್ತಿ ಪುರಸ್ಕೃತರು ದೇಶದ 11 ಸಾಯ್ ಕೇಂದ್ರಗಳಲ್ಲಿ ನೆರೆದು ಗೌರವವನ್ನು ಸ್ವೀಕರಿಸಿದರು.
ಆ. 29 ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವಾಗಿದ್ದು, ವರ್ಷಂಪ್ರತಿ “ಕ್ರೀಡಾದಿನ’ವನ್ನು ಆಚರಿಸುವ ಮೂಲಕ ಈ ಮಹಾನ್ ಕ್ರೀಡಾಚೇತನಕ್ಕೆ ಗೌರವ ಸಲ್ಲಿಸಲಾಗುತ್ತಿದೆ.
ಪಂಚ ಕ್ರೀಡಾರತ್ನಗಳು
5 ಮಂದಿ “ರಾಜೀವ್ ಗಾಂಧಿ ಖೇಲ್‌ರತ್ನ’ ಪುರಸ್ಕೃತರು, 27 ಮಂದಿ ಅರ್ಜುನ ಪುರಸ್ಕೃತರ ಸಹಿತ ಒಟ್ಟು 74 ಕ್ರೀಡಾಪಟುಗಳು ಈ ವರ್ಷದ ಪ್ರಶಸ್ತಿಗೆ ಪಾತ್ರರಾಗಿದ್ದರು. ಶನಿವಾರದ “ವರ್ಚುವಲ್ ಸಮಾರಂಭ’ದಲ್ಲಿ 60 ಮಂದಿ ಪಾಲ್ಗೊಂಡಿದ್ದರು.
ಖೇಲ್‌ರತ್ನಕ್ಕೆ ಪಾತ್ರರಾದ ಕ್ರಿಕೆಟಿಗ ರೋಹಿತ್ ಶರ್ಮ, ಅರ್ಜುನ ಪ್ರಶಸ್ತಿ ವಿಜೇತ ಇಶಾಂತ್ ಶರ್ಮ ಐಪಿಎಲ್‌ಗಾಗಿ ಯುಎಇಗೆ ತೆರಳಿದ್ದರಿಂದ ಸಮಾರಂಭವನ್ನು ತಪ್ಪಿಸಿಕೊಂಡರು. ಹಾಗೆಯೇ ಖೇಲ್‌ರತ್ನ ಪುರಸ್ಕೃತ ಮತ್ತೋರ್ವ ಆಟಗಾರ್ತಿ, ಕುಸ್ತಿಪಟು ವಿನೇಶ್ ಪೋಗಟ್ ಮತ್ತು ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಶಟ್ಲರ್ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಕೊರೊನಾ ಸೋಂಕಿನಿಂದ ಸಮಾರಂಭದಿಂದ ದೂರ ಉಳಿದರು.
ಉಳಿದ ಮೂವರು “ಖೇಲ್‌ರತ್ನ’ಗಳಾದ ಮಣಿಕಾ ಬಾತ್ರಾ ಪುಣೆಯಲ್ಲಿ, ರಾಣಿ ರಾಮ್‌ಪಾಲ್ ಮತ್ತು ಮರಿಯಪ್ಪನ್ ತಂಗವೇಲು ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಆಗಮಿಸಿ ತಮ್ಮ ಬದುಕಿನ ಸ್ಮರಣೀಯ ಗಳಿಗೆಯನ್ನು ಕಣ್ತುಂಬಿಸಿಕೊಂಡರು. ಇದು ಕೋವಿಡ್ ಕಾಲದಲ್ಲಿ ರಾಷ್ಟ್ರಪತಿಯವರು ಪಾಲ್ಗೊಂಡ ಮೊದಲ ಸಮಾರಂಭವಾಗಿತ್ತು.
ರಾಷ್ಟ್ರಪತಿಗಳ ಅಭಿನಂದನೆ
ಪ್ರಶಸ್ತಿಗೆ ಪಾತ್ರರಾದ ಎಲ್ಲ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿನಂದನೆ ಸಲ್ಲಿಸಿದರು. “ಪ್ರಶಸ್ತಿ ಪುರಸ್ಕೃತ ಎಲ್ಲ ಕ್ರೀಡಾಳುಗಳಿಗೆ ನನ್ನ ಹೃತೂ³ರ್ವಕ ಅಭಿನಂದನೆಗಳು. ನಿಮ್ಮೆಲ್ಲರ ಅವಿಸ್ಮರಣೀಯ ಸಾಧನೆಯು ಭಾರತೀಯರ ಪಾಲಿಗೆ ಸಾಮೂಹಿಕ ಯಶಸ್ಸನ್ನು ತಂದುಕೊಟ್ಟಿದೆ. ನಿಮ್ಮೆಲ್ಲರ ಈ ಸಾಧನೆಯಿಂದ ಭಾರತ ವಿಶ್ವದ ಕ್ರೀಡಾಶಕ್ತಿಯಾಗಿ ಮೂಡಿಬರುವ ವಿಶ್ವಾಸ ನನಗಿದೆ. 2028ರ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗಳಿಕೆಯಲ್ಲಿ ಟಾಪ್-10 ಯಾದಿಯಲ್ಲಿ ಕಾಣಿಸಿಕೊಳ್ಳುವುದು ನಮ್ಮೆಲ್ಲರ ಗುರಿ. ನಾವು ಖಂಡಿತ ಇದನ್ನು ಸಾಧಿಸಲಿದ್ದೇವೆ’ ಎಂದು ರಾಷ್ಟ್ರಪತಿಯವರು ವಿಶ್ವಾಸ ವ್ಯಕ್ತಪಡಿಸಿದರು.
“ಕೋವಿಡ್‌ನಿಂದ ಕ್ರೀಡಾಜಗತ್ತಿಗೆ ದೊಡ್ಡ ಮಟ್ಟದಲ್ಲೇ ಹಾನಿಯಾಗಿದೆ. ಒಲಿಂಪಿಕ್ಸ್ ಕೂಡ ಮುಂದೂಡಲ್ಪಟ್ಟಿದೆ. ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ನಮ್ಮ ದೇಶವೂ ಇದಕ್ಕೆ ಹೊರತಲ್ಲ. ಈ ಪರೀಕ್ಷೆಯಲ್ಲಿ ಕ್ರೀಡಾಪಟುಗಳು ಹೆಚ್ಚಿನ ಮಾನಸಿಕ ದೃಢತೆಯೊಂದಿಗೆ ತೇರ್ಗಡೆಯಾಗಿ ಬಂದು ಕ್ರೀಡಾ ಇತಿಹಾಸ ನಿರ್ಮಿಸುವರೆಂಬ ವಿಶ್ವಾಸ ನನ್ನದು’ ಎಂಬುದಾಗಿ ರಾಷ್ಟ್ರಪತಿ ಕೋವಿಂದ್ ಆಶಿಸಿದರು.
ಪ್ರಶಸ್ತಿ ಮೊತ್ತದಲ್ಲಿ ಏರಿಕೆ
ಕ್ರೀಡಾ ಪ್ರಶಸ್ತಿಗಳ ಮೊತ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾದದ್ದು ಈ ಸಲದ ವಿಶೇಷ. ಪರಮೋಚ್ಚ ಖೇಲ್‌ರತ್ನದ ಬಹುಮಾನ ಮೊತ್ತವನ್ನು 7.5 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅರ್ಜುನ ಪ್ರಶಸ್ತಿ ವಿಜೇತರಿಗೆ 10 ಲಕ್ಷ ರೂ. ಬದಲು 15 ಲಕ್ಷ ರೂ. ಕೈಸೇರಲಿದೆ. ಜೀವಮಾನ ಸಾಧನೆಯ ದ್ರೋಣಾಚಾರ್ಯ ಪ್ರಶಸ್ತಿ ಮೊತ್ತ 5 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಏರಿಕೆಯಾದರೆ, ಮಾಮೂಲು ದ್ರೋಣಾಚಾರ್ಯ ಪ್ರಶಸ್ತಿ ಮೊತ್ತ 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿದೆ. ಧ್ಯಾನ್‌ಚಂದ್ ಪ್ರಶಸ್ತಿಗೆ ಭಾಜನರಾದವರು 5 ಲಕ್ಷ ರೂ. ಬದಲು 10 ಲಕ್ಷ ರೂ. ಪಡೆಯಲಿದ್ದಾರೆ.
2008ರ ಬಳಿಕ ಇದೇ ಮೊದಲ ಸಲ ಕ್ರೀಡಾ ಪ್ರಶಸ್ತಿಗಳ ಬಹುಮಾನ ಮೊತ್ತದಲ್ಲಿ ಏರಿಕೆಯಾಗಿದೆ. ಇನ್ನು 10 ವರ್ಷಗಳಿಗೊಮ್ಮೆ ಈ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಪ್ರಮುಖರು
ಈ ವರ್ಷದ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಪ್ರಮುಖರೆಂದರೆ ಸ್ಪ್ರಿಂಟರ್ ದ್ಯುತಿ ಚಂದ್, ವನಿತಾ ಕ್ರಿಕೆಟರ್ ದೀಪ್ತಿ ಶರ್ಮ, ಗಾಲ್ಫರ್ ಅದಿತಿ ಅಶೋಕ್, ಹಾಕಿಪಟು ಆಕಾಶ್‌ದೀಪ್ ಸಿಂಗ್.
ದ್ರೋಣಾಚಾರ್ಯ ಜೀವಮಾನದ ಸಾಧನೆ ಪ್ರಶಸ್ತಿಗೆ 8 ತರಬೇತುದಾರರನ್ನು ಆರಿಸಲಾಗಿತ್ತು. ಧರ್ಮೇಂದ್ರ ತಿವಾರಿ (ಆರ್ಚರಿ), ನರೇಶ್ ಕುಮಾರ್ (ಟೆನಿಸ್), ಶಿವ ಸಿಂಗ್ (ಬಾಕ್ಸಿಂಗ್), ರೊಮೇಶ್ ಪಠಾನಿಯ (ಹಾಕಿ) ಇವರಲ್ಲಿ ಪ್ರಮುಖರು.
ಜೀವಮಾನ ಸಾಧನೆಗಾಗಿ ನೀಡಲಾಗುವ ಧ್ಯಾನ್‌ಚಂದ್ ಪ್ರಶಸ್ತಿಗೆ ಈ ವರ್ಷ 15 ಮಂದಿ ಭಾಜನರಾದದ್ದು ವಿಶೇಷ. ಪ್ರಮುಖರೆಂದರೆ ಸುಕ್ವಿಂದರ್ ಸಿಂಗ್ ಸಂಧು (ಫುಟ್‌ಬಾಲ್), ತೃಪ್ತಿ ಮುರ್ಗುಂಡೆ (ಬ್ಯಾಡ್ಮಿಂಟನ್) ಮತ್ತು ನಂದನ್ ಬಾಲ್ (ಟೆನಿಸ್).
ಸಾಯ್ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲಾಯಿತು.
ಪ್ರಶಸ್ತಿ ಸ್ವೀಕರಿಸುವ ಮೊದಲೇ ರೈ ವಿಧಿವಶ
ಮೊದಲೇ ಕೊರೊನಾದಿಂದ ಕಳೆಗುಂದಿದ್ದ ಕ್ರೀಡಾದಿನಕ್ಕೆ ಶುಕ್ರವಾರ ರಾತ್ರಿ ಅನಿರೀಕ್ಷಿತ ಆಘಾತವೊಂದು ಬಂದೆರಗಿತು. ದ್ರೋಣಾಚಾರ್ಯ ಪ್ರಶಸ್ತಿಯನ್ನು ಎತ್ತಿಹಿಡಿದು ಸಂಭ್ರಮಿಸಬೇಕಿದ್ದ ಕರ್ನಾಟಕದ ಆ್ಯತ್ಲೆಟಿಕ್ಸ್ ತರಬೇತುದಾರ ಪುರುಷೋತ್ತಮ ರೈ (79) ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತ ಹೊಂದಿದ ಪರಿಣಾಮ ಸಮಾರಂಭಕ್ಕೆ ಸೂತಕದ ಛಾಯೆ ಆವರಿಸಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೂತ್ರಬೆಟ್ಟಿನವರಾದ ಪುರುಷೋತ್ತಮ ರೈ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ನಿವೃತ್ತರಾಗಿದ್ದರು. ಬಹಳ ವಿಳಂಬವಾಗಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಒಲಿದು ಬಂದಿತ್ತು. ಆದರೆ ವಿಧಿಯ ಆಟವೇ ಬೇರೆ ಇತ್ತು!
ಪಿಪಿಇ ಕಿಟ್‌ನಲ್ಲಿ ಕ್ರೀಡಾಪಟುಗಳು!
ಸಾಯ್ ಕೇಂದ್ರಕ್ಕೆ ಆಗಮಿಸಿದ ಪ್ರಶಸ್ತಿ ಪುರಸ್ಕೃತ ಅನೇಕ ಕ್ರೀಡಾಪಟುಗಳು ಪಿಪಿಎ ಕಿಟ್ ಧರಿಸಿ ಬಂದದ್ದು ವಿಶೇಷವಾಗಿತ್ತು. ಇವರಲ್ಲಿ ಖೇಲ್‌ರತ್ನ ವಿಜೇತೆ ಹಾಕಿ ನಾಯಕಿ ರಾಣಿ ರಾಮ್‌ಪಾಲ್ ಸೀರೆಯ ಮೇಲೆ ಪಿಪಿಇ ಕಿಟ್ ಧರಿಸಿ ಬೆಂಗಳೂರು ಸಾಯ್ ಕಚೇರಿಯಲ್ಲಿ ಎಲ್ಲರ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.